ಆಶಾ ಕಾರ್ಯಕರ್ತರಿಗೆ ಅಧಿವೇಶನ ವರೆಗೆ ಕಾಯಿರಿ ಅಂತ ಸಿಎಂ ಹೇಳಿದ್ದಾರೆ, ಈಗಲೇ ಮಾಡಬೇಕು ಅಂದ್ರೆ ಹೇಗಾಗುತ್ತೆ? ಅವರು ಕೇಂದ್ರ ವ್ಯಾಪ್ತಿಗೆ ಬರ್ತಾರೆ, ಇಲ್ಲಾಂದ್ರೆ ಎಸ್ಮಾ ಹಾಕ್ತಿದ್ವಿ..! ಖಾದರ್ ಟಾಂಗ್

23-11-26 04:52 pm       HK News Staffer   ಕರಾವಳಿ

ಆಶಾ ಕಾರ್ಯಕರ್ತರು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತಿದ್ದು ಈಗ ಹೆಚ್ಚುವರಿ ಕೂಲಿಗಾಗಿ ಧರಣಿ ನಡೆಸುತ್ತಿದ್ದಾರೆ. ಒಮ್ಮೆಲೇ 15,000 ರೂಪಾಯಿ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಮುಖ್ಯಮಂತ್ರಿಗಳು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗಿಟ್ಟು ಏರಿಕೆ ಮಾಡುತ್ತೇವೆ, ಸಮಯ ಕೊಡುವಂತೆ ಕೇಳಿದ್ದಾರೆ. ಆದರೆ ಈಗಲೇ ಮಾಡಬೇಕು ಅಂದ್ರೆ ಆಗುತ್ತಾ..? ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಪ್ರಶ್ನಿಸಿದ್ದಾರೆ.

ಮಂಗಳೂರು, ನ.23: ಆಶಾ ಕಾರ್ಯಕರ್ತರು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತಿದ್ದು ಈಗ ಹೆಚ್ಚುವರಿ ಕೂಲಿಗಾಗಿ ಧರಣಿ ನಡೆಸುತ್ತಿದ್ದಾರೆ. ಒಮ್ಮೆಲೇ 15,000 ರೂಪಾಯಿ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಮುಖ್ಯಮಂತ್ರಿಗಳು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗಿಟ್ಟು ಏರಿಕೆ ಮಾಡುತ್ತೇವೆ, ಸಮಯ ಕೊಡುವಂತೆ ಕೇಳಿದ್ದಾರೆ. ಆದರೆ ಈಗಲೇ ಮಾಡಬೇಕು ಅಂದ್ರೆ ಆಗುತ್ತಾ..? ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಪ್ರಶ್ನಿಸಿದ್ದಾರೆ. 

ಆಶಾ ಕಾರ್ಯಕರ್ತರು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದಾದರೂ ಅವರು ಕಾಳಜಿ ವಹಿಸುತ್ತಿಲ್ಲ.‌ ರಾಜ್ಯ ಸರ್ಕಾರಕ್ಕೆ ಅವರ ಬಗ್ಗೆ ಕಾಳಜಿ ಇದೆ.‌ 8000 ಕೂಲಿ ಇದ್ದುದನ್ನು 15000 ಮಾಡಬೇಕು ಅಂತ ಬೇಡಿಕೆ ಇಟ್ಟಿದ್ದಾರೆ.‌ ಮುಖ್ಯಮಂತ್ರಿಗಳು ಗೃಹಪ್ರವೇಶ ಕಾರ್ಯಕ್ರಮ ಇದ್ದರೂ ಆಶಾ ಕಾರ್ಯಕರ್ತರ ಜೊತೆ ಚರ್ಚೆ ಮಾಡಿದ್ದಾರೆ.‌ ಚರ್ಚೆಯಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ.‌ ಸಂಭಾವನೆ ಹೆಚ್ಚಳ ಮಾಡಿಯೇ ಮಾಡುತ್ತೇನೆ ಅಂತಾ ಹೇಳಿದ್ದಾರೆ. ಯಾವ ರೀತಿ ಮಾಡಬೇಕೆಂದು ಆರ್ಥಿಕ ಇಲಾಖೆಯ ಜೊತೆ ಚರ್ಚೆ ಮಾಡಿ ನಿರ್ಧರಿಸುವುದಾಗಿ ಹೇಳಿದ್ದಾರೆ.‌

ಮುಖ್ಯಮಂತ್ರಿ ಮೇಲೆ ಭರವಸೆ ಇಟ್ಟು ಕೆಲಸಕ್ಕೆ ಹಾಜರಾಗಿ ಜನರ ಸೇವೆಯನ್ನು ಮಾಡಬೇಕು.‌ ಮುಖ್ಯಮಂತ್ರಿಗಳ ಮೇಲೆ, ಅವರ ಮಾತಿನ ಮೇಲೆ ನಂಬಿಕೆ ಇಲ್ವಾ?ಸರ್ಕಾರದ ಅಧೀನದಲ್ಲಿ ಹೇಗೆ ಮಾಡೋಕೆ ಆಗುತ್ತದೆ ಅಂತಾ ಚರ್ಚಿಸೋಕೆ ಸಮಯ ಬೇಕು. ಎಲ್ಲರ ಜೊತೆ ಚರ್ಚೆ ಮಾಡಿ ಒಂದು ನಿರ್ಧಾರ ಮಾಡೋಕೆ ಸರ್ಕಾರ ತೀರ್ಮಾನಿಸಿದೆ. ಈಗಲೇ ಮಾಡಬೇಕು ಅ‌ಂದ್ರೆ ಹೇಗಾಗುತ್ತೆ. ಬೇರೆ ನೌಕರರು ಕೆಲಸವನ್ನು ಮಾಡುತ್ತಿಲ್ವಾ? ಅಕ್ಷರ ದಾಸೋಹದವರು 4000, ಟೀಚರ್ಸ್ 12000 ಕ್ಕೆ ದುಡಿಯುತ್ತಿದ್ದಾರೆ.‌ ಚರ್ಚೆ ಮಾಡಿಕೊಂಡು ತೀರ್ಮಾನ ತೆಗೆದುಕೊಳ್ಳೋಕೆ ಸಮಯ ಕೊಡಬೇಕು.‌

ನಮಗೆ ಅವರ ಬಗ್ಗೆ ಕಾಳಜಿ, ಸಹಾನುಭೂತಿ ಇದೆ.‌ ಅವರಿಗೆ ಕೊಟ್ಟ ಮಾತು ಉಳಿಸೋಕೆ, ಅದರ ಬಗ್ಗೆ ಚರ್ಚೆ ಮಾಡೋಕೆ ಸಮಯ ಬೇಕು.‌ ಬಾಯಿಮಾತಿಗೆ ಹೇಳಿ ಮತ್ತೆ ಕೊಡೋಕೆ ಆಗದಿದ್ದರೆ ಕೊಟ್ಟಿಲ್ಲ ಅಂತ ಹೇಳುತ್ತಾರೆ. ನಾವು ಮನವಿ ಮಾಡುತ್ತಿದ್ದೇವೆ, ಸರ್ಕಾರ ಮತ್ತು ಮುಖ್ಯಮಂತ್ರಿಗಳ ಮೇಲೆ ವಿಶ್ವಾಸವಿಡಿ. ಆರ್ಥಿಕ ಇಲಾಖೆ ಮತ್ತಿತರ ಇಲಾಖೆಯ ಜೊತೆ ಚರ್ಚೆ ಮಾಡೋಕೆ ಸಮಯ ಕೊಡಿ. ಹೇಗೆ ಮಾಡಬೇಕು, ಎಷ್ಟು ಮಾಡಬೇಕು ಅನ್ನೋದರ ಬಗ್ಗೆ ನಿರ್ಧರಿಸಲು ಸಮಯ ಕೊಡಿ‌. ವಿಧಾನಸಭೆ ಅಧಿವೇಶನ ಮುಗಿಯುವ ಮುನ್ನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅವರ ಮಾತಿನ ಮೇಲೆ ವಿಶ್ವಾಸ ಇಡಬೇಕು ಎಂದು ಸಚಿವ ಯುಟಿ ಖಾದರ್ ಹೇಳಿದ್ದಾರೆ. 

ಸಿಎಂ ವಿದೇಶ ಪ್ರವಾಸದ ಬಗ್ಗೆ ವಿಜಯೇಂದ್ರ ಟೀಕಿಸಿರುವ ವಿಚಾರದಲ್ಲಿ ಪ್ರಶ್ನೆಗೆ, ಬಿಜೆಪಿ ಸರ್ಕಾದ ಅಧಿಕಾರಕ್ಕೆ ಇರುವಾಗ ರೈತರ ಮೇಲೆ ಗುಂಡು ಹಾಕಿದ್ರು. ಇವರು ಪರಿಹಾರ ಎಷ್ಟು ಜಾಸ್ತಿ ಮಾಡಿದ್ದಾರೆ. ಕೇಂದ್ರದ ಅಧೀನಕ್ಕೆ ಆಶಾ ಕಾರ್ಯಕರ್ತರು ಬರುತ್ತಿದ್ದು ಇವರು ಯಾಕೆ ಕೇಂದ್ರಕ್ಕೆ ಒತ್ತಾಯ ಮಾಡುತ್ತಿಲ್ಲ? ಇವರು ಇವರ ಕೆಲಸ ಮಾಡೋದು ಬಿಟ್ಟು ಟೀಕೆ ಮಾಡುತ್ತಾರೆ. ಟೀಕೆ ಮಾಡೋದೇ ಇವರ ಕೆಲಸ ಅಂತ ಭಾವಿಸಿದ್ದಾರೆ. ಟೀಕೆ ಮಾಡೋದು ಮಾತ್ರ ಪ್ರತಿಪಕ್ಷದ ಕೆಲಸ ಅಲ್ಲ. ಆಶಾ ಕಾರ್ಯಕರ್ತರ ಪರವಾಗಿ ಆರೋಗ್ಯ ಸಚಿವನಾಗಿ ಕೇಳ್ತಾ ಇದ್ದೇನೆ. ವಿಜಯೇಂದ್ರ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೀಬೇಕು‌.‌ ಆದಷ್ಟು ಬೇಗ ಪ್ರೋತ್ಸಾಹ ಧನವನ್ನು ಘೋಷಣೆ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆಯಬೇಕು. ಆಶಾ ಕಾರ್ಯಕರ್ತರು ರಾಜ್ಯ ಸರ್ಕಾರದ ಅಧೀನದಲ್ಲಿ ಇದ್ದರೆ ಅವರ ಮೇಲೆ ಎಸ್ಮಾ ಜಾರಿ ಮಾಡಬಹುದಿತ್ತು.‌ ಅವರು ನೇರವಾಗಿ ಕೇಂದ್ರದ ಅಧೀನದಲ್ಲಿ ಬರ್ತಾರೆ ಎಂದು ಸಚಿವ ಯುಟಿ ಖಾದರ್ ಅಸಹಾಯಕತೆ ವ್ಯಕ್ತಪಡಿಸಿದರು.