ತಲೆ ಕಡಿದು ಧ್ವನಿ ಅಡಗಿಸಬಹುದು, ನ್ಯಾಯದ ಧ್ವನಿಯನ್ನಲ್ಲ ! ಮಡಿಕೇರಿಯಲ್ಲಿ ಬಾಲಕಿಯ ಹತ್ಯೆಗೈದ ಆರೋಪಿಗೆ ಮರಣದಂಡನೆ, ಮದುವೆಗೆ ಒಪ್ಪದ ಕಾರಣಕ್ಕೆ ತಲೆ ಕಡಿದಿದ್ದ ಕಿರಾತಕ

23-11-26 11:59 am       HK News Staffer   ಕ್ರೈಂ

ಎರಡು ವರ್ಷಗಳ ಹಿಂದೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮದುವೆಗೆ ಒಪ್ಪಲಿಲ್ಲ ಎಂದು 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಶಿರಚ್ಛೇದಗೈದ ಪ್ರಕರಣದಲ್ಲಿ ಆರೋಪಿಗೆ ಮಡಿಕೇರಿಯ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

ಮಡಿಕೇರಿ, ನ.23: ಎರಡು ವರ್ಷಗಳ ಹಿಂದೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮದುವೆಗೆ ಒಪ್ಪಲಿಲ್ಲ ಎಂದು 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಶಿರಚ್ಛೇದಗೈದ ಪ್ರಕರಣದಲ್ಲಿ ಆರೋಪಿಗೆ ಮಡಿಕೇರಿಯ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

ಅಪರಾಧಿ ಎಂದು ಘೋಷಿಸಲ್ಪಟ್ಟ ಎಂ.ಪಿ. ಓಂಕಾರಪ್ಪ ಎಂಬಾತನಿಗೆ ಮರಣದಂಡನೆ ಹಾಗೂ 80 ಸಾವಿರ ರೂಪಾಯಿ ದಂಡ ವಿಧಿಸಿ ಮಡಿಕೇರಿಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಶನಿವಾರ (ನ. 21) ಪ್ರಕರಣದ ಅಂತಿಮ ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಜಿ. ಸುರೇಂದ್ರ, ಕೊಲೆ ಹಾಗೂ ಲೈಂಗಿಕ ದೌರ್ಜನ್ಯ ಆರೋಪಗಳು ಸಾಬೀತಾಗಿರುವುದನ್ನು ಎತ್ತಿಹಿಡಿದರು.

ತೀರ್ಪು ನೀಡುವ ವೇಳೆ, ಆರೋಪಿ ಬಾಲಕಿಯ ತಲೆ ಕಡಿಯುವ ಮೂಲಕ ಆಕೆಯ ಧ್ವನಿಯನ್ನು ಅಡಗಿಸಲು ಪ್ರಯತ್ನಿಸಿದ್ದಾನೆ, ಆದರೆ ನ್ಯಾಯದ ಧ್ವನಿಯನ್ನು ಹತ್ತಿಕ್ಕಲು ಅವನಿಂದ ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಷರಾ ಬರೆದಿದ್ದಾರೆ. ಯು.ಎಸ್. ಮೀನಾ ಎಂಬ 16 ವರ್ಷದ ಬಾಲಕಿಯನ್ನು 2024ರ ಮೇ 9ರಂದು ಹತ್ಯೆ ಮಾಡಲಾಗಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಬಾಲಕಿಯ ಫಲಿತಾಂಶ ಪ್ರಕಟವಾದ ಕೆಲವೇ ಸಮಯದಲ್ಲಿ ಕೊಲೆ ಘಟನೆ ನಡೆದಿತ್ತು.

ಹಮ್ಮಿಯಾಲ ಗ್ರಾಮದ ನಿವಾಸಿಯಾಗಿದ್ದ ಓಂಕಾರಪ್ಪ, ಮೀನಾಳನ್ನು ತನಗೆ ಮದುವೆ ಮಾಡಿಕೊಡುವಂತೆ ಆಕೆಯ ಪೋಷಕರ ಮೇಲೆ ಒತ್ತಡ ಹೇರುತ್ತಿದ್ದ. ಮೇ 9ರ ಸಂಜೆ ಇಬ್ಬರ ನಿಶ್ಚಿತಾರ್ಥವನ್ನೂ ನಡೆಸಲಾಗಿತ್ತು. ಬಾಲಕಿಯ ನಿಶ್ಚಿತಾರ್ಥದ ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಆಕೆಗೆ 18 ವರ್ಷ ತುಂಬುವ ವರೆಗೆ ಮದುವೆ ಮಾಡಬಾರದು ಎಂದು ಓಂಕಾರಪ್ಪ ಮತ್ತು ಮೀನಾಳ ಪೋಷಕರಿಗೆ ಸೂಚನೆ ನೀಡಿದ್ದರು.

ಅಧಿಕಾರಿಗಳು ಮದುವೆಗೆ ಅಡ್ಡಿಪಡಿಸಿದ್ದರಿಂದ ಆಕ್ರೋಶಗೊಂಡ ಓಂಕಾರಪ್ಪ, ಮೀನಾ ಮತ್ತು ಆಕೆಯ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಮೀನಾ ಮತ್ತು ಆಕೆಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಲು ಮನೆಯಿಂದ ಹೊರಟಾಗ ಅವರನ್ನು ಹಿಂಬಾಲಿಸಿ ಮಚ್ಚಿನಿಂದ ದಾಳಿ ನಡೆಸಿದ್ದ. ಮೀನಾಳ ಶಿರಚ್ಛೇದ ಮಾಡಿ, ಆಕೆಯ ತಲೆಯೊಂದಿಗೆ ಸ್ಥಳದಿಂದ ಪರಾರಿಯಾಗಿದ್ದ. ದಾಳಿಯಲ್ಲಿ ಮೀನಾಳ ತಾಯಿಗೂ ಗಂಭೀರ ಗಾಯಗಳಾಗಿದ್ದವು.