ಮಂಗಳೂರು ಏರ್ಪೋರ್ಟ್ ನಲ್ಲಿ ಪಾರ್ಕಿಂಗ್ ಶುಲ್ಕ ದುಬಾರಿ ; ಟ್ಯಾಕ್ಸಿ ಚಾಲಕರ ಬೃಹತ್ ಪ್ರತಿಭಟನೆ, ನ.24ರಂದು ಉಡುಪಿ, ದ.ಕ.ದಲ್ಲಿ ಟ್ಯಾಕ್ಸಿ ನಿಲ್ಲಿಸಿ ಮುಷ್ಕರಕ್ಕೆ ಕರೆ

21-11-26 10:59 pm       HK News Desk   ಕರಾವಳಿ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವಾಸಿ ಹಾಗೂ ವಾಣಿಜ್ಯ ವಾಹನಗಳಿಗೆ ಪಾರ್ಕಿಂಗ್ ಮತ್ತು ಪಿಕಪ್ ಶುಲ್ಕ ಹೆಚ್ಚಿಸಿರುವುದನ್ನು ವಿರೋಧಿಸಿ ಟ್ಯಾಕ್ಸಿ ಚಾಲಕರ ಸಂಘದ ವತಿಯಿಂದ ಕೆಂಜಾರಿನ ಏರ್ಪೋರ್ಟ್ ಪ್ರವೇಶ ದ್ವಾರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಮಂಗಳೂರು, ನ.2: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವಾಸಿ ಹಾಗೂ ವಾಣಿಜ್ಯ ವಾಹನಗಳಿಗೆ ಪಾರ್ಕಿಂಗ್ ಮತ್ತು ಪಿಕಪ್ ಶುಲ್ಕ ಹೆಚ್ಚಿಸಿರುವುದನ್ನು ವಿರೋಧಿಸಿ ಟ್ಯಾಕ್ಸಿ ಚಾಲಕರ ಸಂಘದ ವತಿಯಿಂದ ಕೆಂಜಾರಿನ ಏರ್ಪೋರ್ಟ್ ಪ್ರವೇಶ ದ್ವಾರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ನೂರಾರು ಟ್ಯಾಕ್ಸಿ ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. 

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಟ್ಯಾಕ್ಸಿ ಸಂಘಟನೆಗಳು ಜಂಟಿ ಹೋರಾಟ ನಡೆಸುತ್ತಿದ್ದು ಪ್ರವಾಸಿ ವಾಹನಗಳ ಪಾರ್ಕಿಂಗ್ ಶುಲ್ಕವನ್ನು ಶೇ.80ರಿಂದ 200ರಷ್ಟು ಹೆಚ್ಚಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ‌. ಈ ಹಿಂದೆ ₹100 ಇದ್ದ ಶುಲ್ಕವನ್ನು ₹180 ಹಾಗೂ ₹500ಕ್ಕೆ ಏರಿಸಿರುವುದಕ್ಕೆ ಟ್ಯಾಕ್ಸಿ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವಾಹನ ಪಾರ್ಕಿಂಗ್ ಮಾಡದಿದ್ದರೂ ಒಂದು ನಿಮಿಷದ ಉಚಿತ ಕಾಲಾವಕಾಶ ನೀಡದೆ ಶುಲ್ಕ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿದ್ದು ಖಾಸಗಿ ವಾಹನಗಳಿಗೆ 10 ನಿಮಿಷ ಉಚಿತ ಪಿಕಪ್ ಅವಕಾಶವಿದ್ದು ಪ್ರವಾಸಿ ವಾಹನಗಳಿಗೆ ಮಾತ್ರ ಏಕಿಲ್ಲ? ಎಂದು ಪ್ರಶ್ನೆ ಮಾಡಿದರು. ಅಲ್ಲದೆ, ಟ್ಯಾಕ್ಸಿ ಮತ್ತು ಆಟೋಗಳಿಗೆ ವಿಧಿಸಿರುವ ₹50 ಪ್ರವೇಶ ಶುಲ್ಕ ಹಿಂಪಡೆಯಬೇಕು. ಪಾರ್ಕಿಂಗ್ ಶುಲ್ಕವನ್ನು ಫಾಸ್ಟ್‌ ಟ್ಯಾಗ್ ಮೂಲಕ ಪಾವತಿಸುವ ವ್ಯವಸ್ಥೆ ಜಾರಿಗೆ ತರಬೇಕು. ಮ್ಯಾಕ್ಸಿ ಕ್ಯಾಬ್ ವಾಹನಗಳಿಗೆ ಹಿಂದಿನಂತೆ ₹200 ಶುಲ್ಕ ನಿಗದಿಪಡಿಸಬೇಕೆಂದು ಉಡುಪಿ ಜಿಲ್ಲಾ ಟ್ಯಾಕ್ಸಿ ಮಾಲಕರ ಸಂಘದ ಅಧ್ಯಕ್ಷ, ಮಾಜಿ ಅಧ್ಯಕ್ಷ ರಘುಪತಿ ಭಟ್ ಆಗ್ರಹಿಸಿದ್ದಾರೆ. 

ಖಾಸಗಿ ವಾಹನಗಳಿಗೆ ನೀಡುವ ರೀತಿಯಲ್ಲೇ ಮ್ಯಾಕ್ಸಿ ಕ್ಯಾಬ್ ವಾಹನಗಳಿಗೂ ಕನಿಷ್ಠ 10 ನಿಮಿಷಗಳ ಡ್ರಾಪ್ ಕಾಲಾವಕಾಶ ನೀಡುವಂತೆ ಒತ್ತಾಯಿಸಿದ್ದಾರೆ. ಪ್ರವಾಸಿ ವಾಹನಗಳ ಚಾಲಕ-ಮಾಲಕರಿಗೆ ನೀಡುತ್ತಿರುವ ಕಿರುಕುಳವನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. 

ಆನ್‌ಲೈನ್ ಟ್ಯಾಕ್ಸಿಗಳ ಸ್ಪರ್ಧೆಯ ನಡುವೆ ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ಶುಲ್ಕ ವಿಧಿಸುವುದರಿಂದ ಚಾಲಕರಿಗೆ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ಇದರಿಂದ ಇದನ್ನೇ ನಂಬಿಕೊಂಡ ಸ್ಥಳೀಯ ಟ್ಯಾಕ್ಸಿ ಚಾಲಕರ ಜೀವನೋಪಾಯಕ್ಕೆ ಧಕ್ಕೆಯಾಗುತ್ತಿದೆ ಎಂದು ಚಾಲಕರ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಮಾನ ಮನಸ್ಕ ಸಂಘಟನೆಗಳ ಬೆಂಬಲದೊಂದಿಗೆ ನವೆಂಬರ್ 24ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಟ್ಯಾಕ್ಸಿ ಬಂದ್‌ಗೆ ಕರೆ ನೀಡಲಾಗಿದೆ. 

ಜಿಲ್ಲಾಡಳಿತ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಕೂಡಲೇ ನಮ್ಮ ನೋವಿಗೆ ಸ್ಪಂದಿಸಬೇಕು, ಇಲ್ಲದಿದ್ದರೆ ಆರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿ ಮನ್ ಸಂಘದ ಅಧ್ಯಕ್ಷ ಆನಂದ್ ಕೆ., ಹರೀಶ್ ಕುಮಾರ್, ಪ್ರಮೋದ್ ಉಳ್ಳಾಲ್, ಭರತ್ ಕುಮಾರ್ ಮಂಗಳಾದೇವಿ, ಅನ್ಸಾರ್, ರಾಜೇಶ್, ಲೋಕೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.