Baglur Manchapanahalli Murder: ಗುಜರಿ ವ್ಯಾಪಾರದಲ್ಲಿ ವೈಷಮ್ಯ ; ಮಂಚಪ್ಪನಹಳ್ಳಿ ಬಳಿ ಸ್ಕ್ರಾಪ್ ಉದ್ಯಮಿಯನ್ನು ಗುಂಡಿಕ್ಕಿ ಕೊಂದ ಸ್ನೇಹಿತರು, ಬಾಗಲೂರು ಪೊಲೀಸರ ಬಲೆಗೆ ಬಿದ್ದ ಹಂತಕರು !

19-11-26 03:20 pm       HK News Staffer   ಕ್ರೈಂ

ಬಾಗಲೂರು ಸಮೀಪದ ಮಂಚಪ್ಪನಹಳ್ಳಿ ಗ್ರಾಮದ ಲೇಔಟ್ ಬಳಿ ಸ್ಕ್ರಾಪ್ ಉದ್ಯಮಿ ಇಮ್ರಾನ್ ಪಾಷ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣವನ್ನು ಭೇದಿಸಿರುವ ಬಾಗಲೂರು ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹಣಕಾಸಿನ ವ್ಯವಹಾರ ಹಾಗೂ ಗುಜರಿ ವ್ಯಾಪಾರದ ವಿಚಾರದಲ್ಲಿ ಉಂಟಾಗಿದ್ದ ವೈಷಮ್ಯವೇ ಕೊಲೆಗೆ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್‌ನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು, ನ 19: ಬಾಗಲೂರು ಸಮೀಪದ ಮಂಚಪ್ಪನಹಳ್ಳಿ ಗ್ರಾಮದ ಲೇಔಟ್ ಬಳಿ ಸ್ಕ್ರಾಪ್ ಉದ್ಯಮಿ ಇಮ್ರಾನ್ ಪಾಷ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣವನ್ನು ಭೇದಿಸಿರುವ ಬಾಗಲೂರು ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹಣಕಾಸಿನ ವ್ಯವಹಾರ ಹಾಗೂ ಗುಜರಿ ವ್ಯಾಪಾರದ ವಿಚಾರದಲ್ಲಿ ಉಂಟಾಗಿದ್ದ ವೈಷಮ್ಯವೇ ಕೊಲೆಗೆ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್‌ನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯನಗರದ ನಿವಾಸಿ ನವೀದ್ ಬೇಗ್ ಹಾಗೂ ಕೆ.ಪಿ.ಅಗ್ರಹಾರದ ಮುಬಾರಕ್ ಬಂಧಿತರು. ಇವರಿಂದ ಕೃತ್ಯಕ್ಕೆ ಬಳಸಿದ್ದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.

ಬನ್ನೇರುಘಟ್ಟದ ಇಮ್ರಾನ್ ಪಾಷ ಮತ್ತು ಆರೋಪಿ ನವೀದ್ ಬೇಗ್ ನಡುವೆ ಕೆಲ ವರ್ಷಗಳಿಂದ ಗುಜರಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಣಕಾಸಿನ ವಹಿವಾಟು ನಡೆಯುತ್ತಿತ್ತು. ನವೀದ್ ಸುಮಾರು 2 ಕೋಟಿ ರೂ. ಹಣವನ್ನು ಇಮ್ರಾನ್‌ಗೆ ನೀಡಿದ್ದ. ಆದರೆ, ಇಮ್ರಾನ್ ಹಣ ವಾಪಸ್ ನೀಡಿರಲಿಲ್ಲ ಎನ್ನಲಾಗಿದೆ. ​ಇದರ ನಡುವೆ ಬನ್ನೇರುಘಟ್ಟದಿಂದ ಬಂದು ಬ್ಯಾಟರಾಯನಪುರ ಹಾಗೂ ಮೈಸೂರು ರಸ್ತೆ ಭಾಗದಲ್ಲಿ ಇಮ್ರಾನ್ ತಮ್ಮ ಗುಜರಿ ವ್ಯಾಪಾರ ವಿಸ್ತರಿಸಿದ್ದರು. "ಈ ಭಾಗ ನನ್ನ ನಿಯಂತ್ರಣದಲ್ಲಿದೆ, ಇಲ್ಲಿಗೆ ಬಂದು ವ್ಯಾಪಾರ ಮಾಡಬೇಡ" ಎಂದು ನವೀದ್ ಎಚ್ಚರಿಕೆ ನೀಡಿದ್ದನು. ಆದರೂ, ಇಮ್ರಾನ್ ಅದನ್ನು ಲೆಕ್ಕಿಸದೆ ವ್ಯವಹಾರ ಮುಂದುವರಿಸಿದ್ದರಿಂದ ಇಬ್ಬರ ನಡುವೆ ವೈಷಮ್ಯ ತಾರಕಕ್ಕೇರಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕೊಟ್ಟ ಹಣ ವಾಪಸ್ ಬಾರದಿರುವುದು ಮತ್ತು ತನ್ನ ಏರಿಯಾದಲ್ಲಿ ವ್ಯವಹಾರಕ್ಕೆ ಇಳಿದಿದ್ದರಿಂದ ಕುಪಿತಗೊಂಡ ನವೀದ್, ಸಹಚರ ಮುಬಾರಕ್ ಜೊತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದ. ಮೂರು ದಿನಗಳ ಹಿಂದೆ ಮಾತುಕತೆ ನಡೆಸುವ ನೆಪದಲ್ಲಿ ಇಮ್ರಾನ್‌ಗೆ ಕರೆ ಮಾಡಿ ಕರೆಸಿಕೊಂಡಿದ್ದ ಆರೋಪಿಗಳು, ಬಾಗಲೂರಿನ ಮಂಚಪ್ಪನಹಳ್ಳಿ ಬಳಿ ಸುಮಾರು ಎರಡು ಗಂಟೆಗಳ ಕಾಲ ಸುತ್ತಾಡಿ ಜನಸಂಚಾರವಿಲ್ಲದ ನಿರ್ಜನ ಪ್ರದೇಶವನ್ನು ಗುರುತಿಸಿದ್ದರು. ಬಳಿಕ ಇಮ್ರಾನ್ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಈಶಾನ್ಯ ವಿಭಾಗದ ಡಿಸಿಪಿ ಮಿಥುನ್ ಕುಮಾರ್ ನೇತೃತ್ವದ ಪೊಲೀಸರ ತಂಡ, ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರನ್ನು ವಶಕ್ಕೆ ಪಡೆದಿರುವ ಪೊಲೀಸರು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಹತ್ಯೆ ಮಾಡಿರುವುದು ಕಂಡುಬಂದಿದೆ. ಪರವಾನಗಿ ಪಡೆದ ಪಿಸ್ತೂಲ್​ನಿಂದ ಮೃತನ ಮೇಲೆ ಮೂರು ಬಾರಿ ಗುಂಡು ಹಾರಿಸಲಾಗಿದೆ‌‌. ಆರೋಪಿಗಳು ಸಂಚು ರೂಪಿಸಿ ಬೈಕ್ ಬಂದು ಹತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.