ರಾಜ್ಯದಲ್ಲಿ 30ಕ್ಕೂ ಹೆಚ್ಚು ಐಪಿಎಸ್ ವರ್ಗಾವಣೆ ; ಬೆಂಗಳೂರಿಗೆ ನೂತನ ಮುಖ್ಯ ಆಯುಕ್ತರಾಗಿ ಆರ್. ಹಿತೇಂದ್ರ ನೇಮಕ, ಐದು ವಲಯಗಳಿಗೆ ಕಮಿಷನರ್ ನಿಯೋಜನೆ, ಪಶ್ಚಿಮ ವಲಯ ಐಜಿಪಿಯಾಗಿ ಶಶಿಕುಮಾರ್

18-11-26 07:26 pm       HK News Staffer   ಕರ್ನಾಟಕ

ರಾಜ್ಯ ಸರ್ಕಾರ ಭಾರಿ ಪ್ರಮಾಣದಲ್ಲಿ ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ಆದೇಶ ಹೊರಡಿಸಿದೆ. 30ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ಆಡಳಿತ ಸುಧಾರಣೆ ನಿಟ್ಟಿನಲ್ಲಿ ಐದು ವಲಯಗಳನ್ನಾಗಿ ವಿಭಜಿಸಿ ಕಮಿಷನರ್ ನೇಮಕ ಮಾಡಲಾಗಿದೆ.

ಬೆಂಗಳೂರು, ನ.18: ರಾಜ್ಯ ಸರ್ಕಾರ ಭಾರಿ ಪ್ರಮಾಣದಲ್ಲಿ ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ಆದೇಶ ಹೊರಡಿಸಿದೆ. 30ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ಆಡಳಿತ ಸುಧಾರಣೆ ನಿಟ್ಟಿನಲ್ಲಿ ಐದು ವಲಯಗಳನ್ನಾಗಿ ವಿಭಜಿಸಿ ಕಮಿಷನರ್ ನೇಮಕ ಮಾಡಲಾಗಿದೆ. 

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಎಡಿಜಿಪಿ ಆಗಿ ವರ್ಗಾಯಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ ಎಡಿಜಿಪಿಯಾಗಿದ್ದ ಆರ್. ಹಿತೇಂದ್ರ ಅವರನ್ನು ಬೆಂಗಳೂರು ನಗರದ ಎಡಿಜಿಪಿ ಮತ್ತು ಮುಖ್ಯ ಪೊಲೀಸ್ ಆಯುಕ್ತರಾಗಿ ನೇಮಿಸಲಾಗಿದೆ. ಸಿಐಡಿ ಎಡಿಜಿಪಿಯಾಗಿದ್ದ ಬಿಜಯ್ ಕುಮಾರ್ ಸಿಂಗ್ ಅವರನ್ನು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆಗಿ ನೇಮಿಸಲಾಗಿದೆ.

ಬೆಂಗಳೂರಿಗೆ 5 ನೂತನ ವಲಯ ಆಯುಕ್ತರು 

ಅಡಳಿತ ಸುಧಾರಣೆ ದೃಷ್ಟಿಯಿಂದ ಹೊಸದಾಗಿ ಸೃಷ್ಟಿಸಲಾಗಿರುವ ಐದು ನೂತನ ಆಯುಕ್ತರ ಹುದ್ದೆಗಳಿಗೆ ಅಧಿಕಾರಿಗಳ ನೇಮಕ ಮಾಡಲಾಗಿದೆ. ಮಧ್ಯ ಬೆಂಗಳೂರು ವಿಭಾಗಕ್ಕೆ ಲಾಬು ರಾಮ್, ಪೂರ್ವ ವಲಯಕ್ಕೆ ಡಾ. ಪಿ.ಎಸ್. ಹರ್ಷ, ಪಶ್ಚಿಮ ಬೆಂಗಳೂರಿಗೆ ವಿಕಾಶ್ ಕುಮಾರ್ ವಿಕಾಶ್, ಉತ್ತರ ಬೆಂಗಳೂರು ವಲಯಕ್ಕೆ ಡಾ.ಎಂ.ಬಿ. ಬೋರಲಿಂಗಯ್ಯ, ದಕ್ಷಿಣ ಬೆಂಗಳೂರಿಗೆ ಸಿ. ವಂಶಿ ಕೃಷ್ಣಗೆ (ಹೆಚ್ಚುವರಿ ಪ್ರಭಾರ) ಹೊಣೆ ನೀಡಲಾಗಿದೆ. 

ಇತರೆ ಪ್ರಮುಖ ವರ್ಗಾವಣೆಗಳು 

ಬೆಂಗಳೂರು ಸಂಚಾರ ವಿಭಾಗದ ಆಯುಕ್ತರಾಗಿ ಹೇಮಂತ್ ಎಂ. ನಿಂಬಾಳ್ಕರ್ ಅವರನ್ನು ನೇಮಿಸಿದ್ದು ಇವರಿಗೆ ಆಂಟಿ ರೌಡಿ ಸ್ಕ್ವಾಡ್ ನ ಹೆಚ್ಚುವರಿ ಪ್ರಭಾರವನ್ನೂ ನೀಡಲಾಗಿದೆ. ಲೋಕಾಯುಕ್ತ ಎಡಿಜಿಪಿಯಾಗಿ ಎಸ್. ಮುರುಗನ್ ನೇಮಿಸಿದ್ದು ಈ ಹುದ್ದೆಯಲ್ಲಿದ್ದ ಮನೀಶ್ ಖರ್ಬಿಕರ್ ಅವರನ್ನು ಸಂವಹನ, ಲಾಜಿಸ್ಟಿಕ್ ಮತ್ತು ಆಧುನೀಕರಣ ವಿಭಾಗಕ್ಕೆ ವರ್ಗಾಯಿಸಲಾಗಿದೆ.

ಪಶ್ಚಿಮ ವಲಯ, ಮಂಗಳೂರು ವಿಭಾಗದ ಐಜಿಪಿ ಆಗಿ ಎನ್. ಶಶಿ ಕುಮಾರ್ ಅವರನ್ನು ನೇಮಿಸಲಾಗಿದೆ. ಕೆಎಸ್‌ಆರ್‌ಪಿ ಐಜಿಪಿ ಆಗಿ ಅನುಪಮ್ ಅಗರ್ವಾಲ್, ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿ ಕುಲದೀಪ್ ಕುಮಾರ್ ಆರ್. ಜೈನ್, ಮೈಸೂರು ದಕ್ಷಿಣ ವಲಯ ಡಿಐಜಿಪಿ ಹುದ್ದೆಗೆ ಎಂ. ಪುಟ್ಟಮಾದಯ್ಯ ನೇಮಕವಾಗಿದ್ದಾರೆ. 

ಇದೇ ವೇಳೆ, ಬೆಂಗಳೂರಿನ ವಿವಿಧ ವಿಭಾಗಗಳ ಡಿಸಿಪಿಗಳನ್ನೂ ವರ್ಗಾವಣೆ ಮಾಡಲಾಗಿದೆ. ಡಿಸಿಪಿ (ಸಂಚಾರ) ಪೂರ್ವ ಬೆಂಗಳೂರಿಗೆ ಡಾ. ಅನೂಪ್ ಎ. ಶೆಟ್ಟಿ, ಮಧ್ಯ ಬೆಂಗಳೂರು ಸಂಚಾರಕ್ಕೆ ಲೋಕೇಶ್ ಭರಮಪ್ಪ ಜಗಳಸರ್, ಪಶ್ಚಿಮ ಬೆಂಗಳೂರು ಸಂಚಾರಕ್ಕೆ ಪಿ.ವಿ. ಸ್ನೇಹ ಅವರನ್ನು ನೇಮಿಸಲಾಗಿದೆ.