ಸೌಜನ್ಯಾ ಪ್ರಕರಣ ; ಮೂವರು ತಜ್ಞ ವೈದ್ಯರ ಕಮಿಟಿ ರಚನೆ, ಫಾರೆನ್ಸಿಕ್ ಲ್ಯಾಪ್ಸ್ ಬಗ್ಗೆ ತನಿಖೆ ಸಾಧ್ಯತೆ, ಮೃತದೇಹ ಸಿಕ್ಕ ಪ್ರದೇಶಕ್ಕೆ ತಜ್ಞರ ಭೇಟಿ

17-11-26 06:42 pm       HK News Staffer   ಕರಾವಳಿ

ಸೌಜನ್ಯಾ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮುಖ್ಯಸ್ಥ ಚೇತನ್ ರಾಥೋಡ್ ಅವರು 14 ವರ್ಷಗಳ ಹಿಂದೆ ಪ್ರಕರಣದ ತನಿಖೆಯಲ್ಲಿ ಆಗಿರಬಹುದಾದ ಫಾರೆನ್ಸಿಕ್ ಲ್ಯಾಪ್ಸ್ ಗಳನ್ನು ಅಧ್ಯಯನ ಮಾಡುವುದಕ್ಕಾಗಿ ಮೂವರು ತಜ್ಞ ವೈದ್ಯರನ್ನು ಒಳಗೊಂಡ ಮೆಡಿಕಲ್ ಬೋರ್ಡ್ ರಚನೆ ಮಾಡಿದ್ದಾರೆ.

ಮಂಗಳೂರು, ನ.17: ಸೌಜನ್ಯಾ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮುಖ್ಯಸ್ಥ ಚೇತನ್ ರಾಥೋಡ್ ಅವರು 14 ವರ್ಷಗಳ ಹಿಂದೆ ಪ್ರಕರಣದ ತನಿಖೆಯಲ್ಲಿ ಆಗಿರಬಹುದಾದ ಫಾರೆನ್ಸಿಕ್ ಲ್ಯಾಪ್ಸ್ ಗಳನ್ನು ಅಧ್ಯಯನ ಮಾಡುವುದಕ್ಕಾಗಿ ಮೂವರು ತಜ್ಞ ವೈದ್ಯರನ್ನು ಒಳಗೊಂಡ ಮೆಡಿಕಲ್ ಬೋರ್ಡ್ ರಚನೆ ಮಾಡಿದ್ದಾರೆ.

ಬೆಂಗಳೂರಿನ ಒಬ್ಬರು, ಹಾವೇರಿ ಮತ್ತು ಬೆಳಗಾವಿಯ ಒಬ್ಬೊಬ್ಬರನ್ನು ಒಳಗೊಂಡ ತಂಡದಲ್ಲಿ ಇಬ್ಬರು ಪುರುಷರು ಮತ್ತು ಒಬ್ಬರು ಮಹಿಳಾ ವೈದ್ಯರಿದ್ದಾರೆ. ಇವರ ತಂಡವು 14 ವರ್ಷಗಳ ಹಿಂದೆ ಸೌಜನ್ಯಾ ಮೃತದೇಹ ದೊರೆತಿದ್ದ ಮಣ್ಣಸಂಕ ಪ್ರದೇಶಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದೆ. ಅಲ್ಲದೆ, ಸೌಜನ್ಯಾ ಪ್ರಕರಣ ಸಂಬಂಧಿಸಿ ಫಾರೆನ್ಸಿಕ್ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದ ಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸಲಿದೆ.

ಆನಂತರ, ಪ್ರಕರಣ ಸಂಬಂಧಿಸಿ ವೈದ್ಯರು ನೀಡಿದ್ದ ಹಳೆಯ ಸಾಕ್ಷ್ಯ ಮತ್ತು ದಾಖಲೆಗಳನ್ನು ಮುಂದಿಟ್ಟು ತನಿಖೆ ನಡೆಸಲಿದ್ದು, ಯಾವೆಲ್ಲ ಲ್ಯಾಪ್ಸ್ ಆಗಿದೆ ಎನ್ನುವ ಬಗ್ಗೆ ಮತ್ತು ಉದ್ದೇಶಪೂರ್ವಕ ಆಗಿರುವ ಪ್ರಮಾದಗಳೇ ಎನ್ನುವ ಬಗ್ಗೆಯೂ ವರದಿ ನೀಡಲಿದ್ದಾರೆ. ಈ ವರದಿ ಆಧರಿಸಿ ಎಸ್ಐಟಿ ಈ ಹಿಂದೆ ತನಿಖೆ ನಡೆಸಿದ್ದ ಅಧಿಕಾರಿಗಳನ್ನು ಮತ್ತೆ ಪ್ರಶ್ನೆ ಮಾಡುವ ಸಾಧ್ಯತೆ ಇದೆ. ಇದರಿಂದ ಪ್ರಕರಣದ ತನಿಖೆಯಲ್ಲಿ ಹೊಸ ಆಯಾಮ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಪ್ರಕರಣದ ತನಿಖೆಯಲ್ಲಿ ವೈದ್ಯರು ಉದ್ದೇಶಪೂರ್ವಕ ಸರಿಯಾದ ವರದಿ ನೀಡಿಲ್ಲ, ಸ್ಥಳದಿಂದ ಫಾರೆನ್ಸಿಕ್ ಸಾಕ್ಷ್ಯಗಳನ್ನು ಸಂಗ್ರಹ ಮಾಡಿಲ್ಲ ಎನ್ನುವ ಆರೋಪಗಳಿರುವುದರಿಂದ ಈಗಿನ ತನಿಖೆಯಲ್ಲಿ ಅದರ ಬಗ್ಗೆಯೂ ಪ್ರತ್ಯೇಕ ತನಿಖೆಗೆ ಎಸ್ಐಟಿ ಮುಂದಾಗಿದೆ.