ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಕಾರು ; 19 ವರ್ಷದ ಇಬ್ಬರು ಇಂಜಿನಿಯರ್ ವಿದ್ಯಾರ್ಥಿನಿಯರ ಸಾವು

18-11-26 12:46 pm       HK News Staffer   ಕ್ರೈಂ

ಪ್ರಾಜೆಕ್ಟ್ ಕೆಲಸಕ್ಕೆ ಎಂದು ಕುಣಿಗಲ್​ಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು, ಇಬ್ಬರು ಇಂಜಿನಿಯರ್ ವಿದ್ಯಾರ್ಥಿನಿಯರು ಸಾವನ್ನಪ್ಪಿರುವ ಘಟನೆ ನೆಲಮಂಗಲ ಬಳಿಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ಸಂಭವಿಸಿದೆ.

ಬೆಂಗಳೂರು, ನ 18: ಪ್ರಾಜೆಕ್ಟ್ ಕೆಲಸಕ್ಕೆ ಎಂದು ಕುಣಿಗಲ್​ಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು, ಇಬ್ಬರು ಇಂಜಿನಿಯರ್ ವಿದ್ಯಾರ್ಥಿನಿಯರು ಸಾವನ್ನಪ್ಪಿರುವ ಘಟನೆ ನೆಲಮಂಗಲ ಬಳಿಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ಸಂಭವಿಸಿದೆ.

ವೈಷ್ಣವಿ (19), ಗಾನವಿ (19) ಸ್ಥಳದಲ್ಲೇ ಸಾವನ್ನಪ್ಪಿದ ವಿದ್ಯಾರ್ಥಿನಿಯರು. ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ಬೆಂಗಳೂರು ದಕ್ಷಿಣ ಎಸ್​ಪಿ ರೋಹನ್ ಜಗದೀಶ್, ಇಂದು ಬೆಳಗ್ಗೆ 5:30 ಮತ್ತು 6:30 ನಡುವೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಯುವತಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿಗೆ ಸಂಬಂಧಿಸಿದ ಪ್ರಾಜೆಕ್ಟ್ ಸಂಬಂಧ ಬೆಂಗಳೂರಿನಿಂದ ಕುಣಿಗಲ್​ಗೆ ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಮೇಲ್ನೋಟಕ್ಕೆ ಅತಿವೇಗದ ಚಾಲನೆಯಿಂದ ಪೋರ್ಡ್ ಕಾರು ರಸ್ತೆ ಬದಿಗೆ ಬಂದು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದವರು ಗಾಯಗೊಂಡು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಎಸ್​ಪಿ ತಿಳಿಸಿದ್ದಾರೆ.

ಎರಡು ಕಾರಿನಲ್ಲಿ ವಿದ್ಯಾರ್ಥಿಗಳ ತಂಡ ಪ್ರಾಜೆಕ್ಟ್ ಕೆಲಸಕ್ಕೆಂದು ಹೋಗಿದ್ದು, ಒಂದು ಕಾರು ಮುಂದೆ ಪಾಸ್ ಆಗಿದ್ದು, ಹಿಂದೆ ಬರುತ್ತಿದ್ದ ಕಾರು ಅಪಘಾತಕ್ಕೆ ತುತ್ತಾಗಿದೆ. ರಸ್ತೆಯ ಮೇಲೆ ಕಾರಿನ ಚಕ್ರ ತಿರುವು ತೆಗೆದುಕೊಂಡಿರುವ ಗುರುತು ಇದ್ದು, ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ತಾಂತ್ರಿಕ ಅಂಶಗಳ ಆಧಾರ ಮೇಲೆ ಟೈರ್ ಬ್ಲಾಸ್ಟ್​ನಿಂದ ಅಪಘಾತವಾಗಿದೆಯೋ ಅಥವಾ ಅತಿವೇಗದ ಚಾಲನೆಯಿಂದ ಅಪಘಾತವಾಗಿದೆಯೋ ಎಂಬುದು ತಿಳಿಯಲಿದೆ ಎಸ್​ಪಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.