ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ; ಮಾಜಿ ಮುಖ್ಯಸ್ಥ ಮುಹಮ್ಮದ್ ಯೂನಸ್ ಮನೆಗೆ ಬೆಂಕಿ, ಅವಾಮಿ ಲೀಗ್ ಕಾರ್ಯಕರ್ತರಿಂದ ಪ್ರತಿಭಟನೆ, 28 ಜಿಲ್ಲೆಗಳಲ್ಲಿ ಕಚ್ಚಾ ಬಾಂಬ್ ಸ್ಫೋಟ

19-11-26 07:30 pm       HK News Staffer   ದೇಶ - ವಿದೇಶ

ಬಾಂಗ್ಲಾದೇಶದಲ್ಲಿ ಮತ್ತೆ ರಾಜಕೀಯ ಹಿಂಸಾಚಾರ ಭುಗಿಲೆದ್ದಿದ್ದು, ಮಾಜಿ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರ ಪೂರ್ವಜರ ಮನೆಗೆ ಬೆಂಕಿ ಹಚ್ಚಲಾಗಿದೆ. ದೇಶಾದ್ಯಂತ ಶೇಖ್ ಹಸೀನಾ ಅವರ ಅವಾಮಿ ಲೀಗ್ ಕರೆ ನೀಡಿರುವ ಪ್ರತಿಭಟನೆ ಮತ್ತು ಸಂಬಂಧಿತ ಘರ್ಷಣೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಢಾಕಾದಲ್ಲಿ ಕಚ್ಚಾ ಬಾಂಬ್‌ಗಳು ಸ್ಫೋಟಗೊಂಡಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಢಾಕಾ, ನ.19: ಬಾಂಗ್ಲಾದೇಶದಲ್ಲಿ ಮತ್ತೆ ರಾಜಕೀಯ ಹಿಂಸಾಚಾರ ಭುಗಿಲೆದ್ದಿದ್ದು, ಮಾಜಿ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರ ಪೂರ್ವಜರ ಮನೆಗೆ ಬೆಂಕಿ ಹಚ್ಚಲಾಗಿದೆ. ದೇಶಾದ್ಯಂತ ಶೇಖ್ ಹಸೀನಾ ಅವರ ಅವಾಮಿ ಲೀಗ್ ಕರೆ ನೀಡಿರುವ ಪ್ರತಿಭಟನೆ ಮತ್ತು ಸಂಬಂಧಿತ ಘರ್ಷಣೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಢಾಕಾದಲ್ಲಿ ಕಚ್ಚಾ ಬಾಂಬ್‌ಗಳು ಸ್ಫೋಟಗೊಂಡಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಪೊಲೀಸರು ನಡೆಸಿದ 24 ಗಂಟೆಗಳ ಕಾರ್ಯಾಚರಣೆಯಲ್ಲಿ 565 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಮಾಜಿ ಶಿಕ್ಷಣ ಸಚಿವ ನೂರುಲ್ ಇಸ್ಲಾಂ ನಾಹಿದ್ ಕೂಡ ಸೇರಿದ್ದಾರೆ. ಬುಧವಾರ ಮಧ್ಯರಾತ್ರಿ ಅವರ ನಿವಾಸದಿಂದ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸ್ಥಳೀಯ ಸುದ್ದಿವಾಹಿನಿ ವರದಿ ಮಾಡಿದೆ. 

ಇದೇ ವೇಳೆ, ದೇಶದ ವಿವಿಧೆಡೆ ನಡೆದ ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಸಲಾಹುದ್ದೀನ್ ಅಹ್ಮದ್ ಎಚ್ಚರಿಸಿದ್ದಾರೆ. ಆಡಿಯೋ ಮತ್ತು ವಿಡಿಯೋ ಸಾಕ್ಷ್ಯಗಳ ಆಧಾರದ ಮೇಲೆ ಕೃತ್ಯ ಎಸಗಿದವರನ್ನು ಪತ್ತೆಹಚ್ಚುವುದಾಗಿ ತಿಳಿಸಿದ್ದಾರೆ.

ಚಿತ್ತಗಾಂಗ್‌ನ ಪಂಚ್ಲೈಶ್ ಪ್ರದೇಶದಲ್ಲಿರುವ ಮುಹಮ್ಮದ್ ಯೂನಸ್ ಅವರ ತಂದೆಯ ಮನೆಯನ್ನು ಅಪರಿಚಿತರು ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಇದರ ಬೆನ್ನಲ್ಲೇ ದೇಶದ ಹಲವು ಭಾಗಗಳಲ್ಲಿರುವ ಅವರ ಗ್ರಾಮೀಣ್ ಬ್ಯಾಂಕ್ ಶಾಖೆಗಳ ಮೇಲೂ ಬೆಂಕಿ ಹಚ್ಚುವ ಯತ್ನ ನಡೆದಿದೆ. ಈಶಾನ್ಯ ಭಾಗದ ಸಿಲ್ಹೆಟ್, ವಾಯವ್ಯ ಭಾಗದ ರಾಜ್‌ಶಾಹಿ ಹಾಗೂ ನೈಋತ್ಯ ಭಾಗದ ಬರಿಶಾಲ್ ಮತ್ತು ಫರೀದ್‌ಪುರದಲ್ಲಿ ಇಂತಹ ಕೃತ್ಯಗಳು ನಡೆದಿವೆ. 

28 ಜಿಲ್ಲೆಗಳಲ್ಲಿ ಹಿಂಸಾಚಾರ

ಕಳೆದ ಎರಡು ದಿನಗಳಲ್ಲಿ ಬಾಂಗ್ಲಾದೇಶದ 64 ಆಡಳಿತ ಜಿಲ್ಲೆಗಳ ಪೈಕಿ 28 ಜಿಲ್ಲೆಗಳಲ್ಲಿ ಕಚ್ಚಾ ಬಾಂಬ್‌ಗಳನ್ನು ಸ್ಫೋಟಿಸಲಾಗಿದೆ. ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ. ಪಶ್ಚಿಮ ನಾರೈಲ್ ಜಿಲ್ಲೆಯಲ್ಲಿ ನಡೆದ ಮೆರವಣಿಗೆಯೊಂದರ ಮೇಲೆ ಅವಾಮಿ ಲೀಗ್ ಕಾರ್ಯಕರ್ತರು ದಾಳಿ ನಡೆಸಿದ ಪರಿಣಾಮ ಆಡಳಿತಾರೂಢ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ)ಯ ಇಬ್ಬರು ಸ್ಥಳೀಯ ನಾಯಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.