ದೀಪಾವಳಿಗೆ ಪಟಾಕಿ ಸಿಡಿಸಿದ್ದಕ್ಕೆ ವಿದ್ಯಾರ್ಥಿಗಳ ಫ್ಲ್ಯಾಟ್‌ಗೆ ನುಗ್ಗಿ ಪೊಲೀಸರಿಂದ ಹಲ್ಲೆ ಆರೋಪ ; ಮಣಿಪಾಲ ಪೊಲೀಸರ ವಿರುದ್ಧ ಸಿಎಂಗೆ ದೂರು !

19-11-26 03:22 pm       HK News Staffer   ಕರಾವಳಿ

ದೀಪಾವಳಿ ವೇಳೆ ಪಟಾಕಿ ಸಿಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲ ಪೊಲೀಸರ ವಿರುದ್ಧ ಗಂಭೀರ ದೌರ್ಜನ್ಯದ ಆರೋಪ ಕೇಳಿಬಂದಿದೆ. ಖಾಸಗಿ ವಿದ್ಯಾಸಂಸ್ಥೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಫ್ಲ್ಯಾಟ್‌ಗೆ ನುಗ್ಗಿ ಹಲ್ಲೆ ನಡೆಸಿ, ಠಾಣೆಗೆ ಕರೆದೊಯ್ದು ಹಿಂಸೆ ನೀಡಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಉಡುಪಿ, ನ.19: ದೀಪಾವಳಿ ವೇಳೆ ಪಟಾಕಿ ಸಿಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲ ಪೊಲೀಸರ ವಿರುದ್ಧ ಗಂಭೀರ ದೌರ್ಜನ್ಯದ ಆರೋಪ ಕೇಳಿಬಂದಿದೆ. ಖಾಸಗಿ ವಿದ್ಯಾಸಂಸ್ಥೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಫ್ಲ್ಯಾಟ್‌ಗೆ ನುಗ್ಗಿ ಹಲ್ಲೆ ನಡೆಸಿ, ಠಾಣೆಗೆ ಕರೆದೊಯ್ದು ಹಿಂಸೆ ನೀಡಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ನವೆಂಬರ್ 10ರಂದು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಕೊಠಡಿಗಳಿಗೆ ನುಗ್ಗಿದ ಪೊಲೀಸರು ಹಲ್ಲೆ ನಡೆಸಿ, ಬೆಳಗ್ಗೆ 11ರಿಂದ ರಾತ್ರಿ 8ರವರೆಗೆ ಠಾಣೆಯಲ್ಲಿ ಕೂರಿಸಿದ್ದಾರೆ ಎನ್ನಲಾಗಿದೆ. ಈ ದೃಶ್ಯಗಳು ಅಪಾರ್ಟ್‌ಮೆಂಟ್‌ನ ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಸಿಎಂಗೆ ಇ-ಮೇಲ್ ಮೂಲಕ ದೂರು ನೀಡಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.

ಉಡುಪಿ ಎಸ್ಪಿ ಸ್ಪಷ್ಟನೆ:

ಪ್ರಕರಣದಲ್ಲಿ ಅನ್ವಯವಾಗುವ ಕಾನೂನು ಸೆಕ್ಷನ್‌ಗಳ ಪ್ರಕಾರ ನ್ಯಾಯಾಲಯದ ಅನುಮತಿ ಪಡೆದು ಎಫ್‌ಐಆರ್ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಗಳು, ವಿಡಿಯೋ ಹಾಗೂ ಸಾಕ್ಷಿಗಳ ಹೇಳಿಕೆ ಆಧರಿಸಿ ನೋಟಿಸ್ ನೀಡಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಪೊಲೀಸರ ಹಲ್ಲೆ ಆರೋಪದ ಕುರಿತು ತನಿಖೆ ನಡೆಸಲು ಉಡುಪಿ ಡಿವೈಎಸ್‌ಪಿಗೆ ವಹಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.