ಹಿರಿಯೂರು ಅಭ್ಯರ್ಥಿ ; ನಾವು ಕುಮಾರಸ್ವಾಮಿ ಜೊತೆ ಮಾತಾಡ್ತೀವಿ, ಕೇಂದ್ರ ನಾಯಕರ ನಿರ್ಧಾರಕ್ಕೆ ಬದ್ಧ ; ನಿಲುವು ಸಡಿಲಿಸಿದ ಅಶೋಕ್

19-11-26 12:32 pm       HK News Staffer   ಕರ್ನಾಟಕ

ಹಿರಿಯೂರು ಉಪ ಚುನಾವಣೆ ಅಭ್ಯರ್ಥಿ ವಿಚಾರದಲ್ಲಿ ನಾವು ಜಗಳ ಮಾಡಿಕೊಳ್ಳಲು ಹೋಗಲ್ಲ. ಸ್ಥಳೀಯ ಅಂಕಿ ಅಂಶ ಪ್ರಕಾರ ಕೋರ್ ಕಮಿಟಿ ಸಭೆಯಲ್ಲೂ ಹಿರಿಯೂರಿನಲ್ಲಿ ನಾವು ಸ್ಪರ್ಧೆ ಮಾಡಬೇಕು ಅನ್ನೋ ಒಲವು ಬಂದಿದೆ. ಜೆಡಿಎಸ್ ನಮ್ಮದೇ ಬಳಗ ಆಗಿರುವುದರಿಂದ ಅಭ್ಯರ್ಥಿ ಬಗ್ಗೆ ಕುಮಾರಸ್ವಾಮಿ ಅವರ ಜೊತೆ ಮಾತನಾಡುತ್ತೇವೆ. ನಮ್ಮ ಕೇಂದ್ರ ನಾಯಕರು ಏನು ಹೇಳುತ್ತಾರೋ ಅದನ್ನು ಕೇಳುತ್ತೇವೆ ಎಂದು ವಿಪಕ್ಷ ನಾಯಕ ಆರ್.‌ಅಶೋಕ್ ಹೇಳಿದ್ದಾರೆ.

ಮಂಗಳೂರು, ನ.19: ಹಿರಿಯೂರು ಉಪ ಚುನಾವಣೆ ಅಭ್ಯರ್ಥಿ ವಿಚಾರದಲ್ಲಿ ನಾವು ಜಗಳ ಮಾಡಿಕೊಳ್ಳಲು ಹೋಗಲ್ಲ. ಸ್ಥಳೀಯ ಅಂಕಿ ಅಂಶ ಪ್ರಕಾರ ಕೋರ್ ಕಮಿಟಿ ಸಭೆಯಲ್ಲೂ ಹಿರಿಯೂರಿನಲ್ಲಿ ನಾವು ಸ್ಪರ್ಧೆ ಮಾಡಬೇಕು ಅನ್ನೋ ಒಲವು ಬಂದಿದೆ. ಜೆಡಿಎಸ್ ನಮ್ಮದೇ ಬಳಗ ಆಗಿರುವುದರಿಂದ ಅಭ್ಯರ್ಥಿ ಬಗ್ಗೆ ಕುಮಾರಸ್ವಾಮಿ ಅವರ ಜೊತೆ ಮಾತನಾಡುತ್ತೇವೆ. ನಮ್ಮ ಕೇಂದ್ರ ನಾಯಕರು ಏನು ಹೇಳುತ್ತಾರೋ ಅದನ್ನು ಕೇಳುತ್ತೇವೆ ಎಂದು ವಿಪಕ್ಷ ನಾಯಕ ಆರ್.‌ಅಶೋಕ್ ಹೇಳಿದ್ದಾರೆ. 

ಮಂಗಳೂರು ಉತ್ತರ ಕ್ಷೇತ್ರ ಬಿಜೆಪಿ ವತಿಯಿಂದ ಏರ್ಪಡಿಸಿರುವ ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಶೋಕ್, ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು. ಹಿರಿಯೂರಿನಲ್ಲಿ ಬಿಜೆಪಿ ಒಂದು ಬಾರಿ ಗೆದ್ದಿದೆ, ಮತ್ತೊಮ್ಮೆ ಎರಡನೇ ಸ್ಥಾನ ಬಂದಿದೆ. ಹಾಗಾಗಿ ನ್ಯಾಯಯುತವಾಗಿ ನಾವು ನಮ್ಮ ಬೇಡಿಕೆ ಇಡ್ತೇವೆ. ಹಾಗಂತ, ನಾವು ಯಾವುದೇ ಜಗಳ ಮಾಡಲು ಹೋಗಲ್ಲ. ಜೆಡಿಎಸ್ ನಮ್ಮದೇ ಎನ್ ಡಿಎ‌ ಬಳಗ, ಹಾಗಾಗಿ ನಾನು ಕುಮಾರಸ್ವಾಮಿ ಅವರ ಜೊತೆ ಮಾತನಾಡಿ ನಿರ್ಧಾರಕ್ಕೆ ಬರುತ್ತೇವೆ. ನಮ್ಮ ರಾಷ್ಟ್ರೀಯ ನಾಯಕರು ಸ್ಥಾನ ಜೆಡಿಎಸ್ ಗೆ ಬಿಟ್ಟು ಕೊಡಿ ಅಂದ್ರೆ ಬಿಡ್ತೇವೆ. ಬಿಜೆಪಿ ಸ್ಪರ್ಧೆ ಅಂದ್ರೆ ಜೆಡಿಎಸ್ ಜೊತೆ ಸೇರಿಸಿಕೊಂಡು ಗೆಲ್ತೇವೆ. ಯಾವುದೇ ಜಗಳ ಇಲ್ಲ, ಪಕ್ಷದ ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ಬದ್ದ ಎಂದು ಹೇಳಿದರು. 

ಗ್ಯಾರಂಟಿ ವಿಚಾರದಲ್ಲಿ ಮಾತನಾಡಿದ ಅವರು, ಸರ್ಕಾರ ಗ್ಯಾರಂಟಿ ಘೋಷಿಸಿ ಜನರಿಂದ ಹಣ ವಸೂಲಿ ಮಾಡ್ತಾ ಇದೆ. ಒಂದೆಡೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸಮಸ್ಯೆಯಲ್ಲಿ ಇದ್ದಾರೆ. ಆಗ ಪ್ರಿಯಾಂಕ ಗಾಂಧಿ ಬಂದು 15 ಸಾವಿರ ಕೊಡ್ತೇವೆ ಅಂದ್ರು. ಆದರೆ‌ ಚುನಾವಣೆ ಮುಗಿದ ಬಳಿಕ ಪ್ರಿಯಾಂಕ ಗಾಂಧಿ ಪತ್ತೆಯೇ ಇಲ್ಲ. ಇದು ಕರುಣೆ ಇಲ್ಲದ, ಮೋಸದ, ದ್ರೋಹದ ಕಾಂಗ್ರೆಸ್ ಸರ್ಕಾರ. ಈ ಸರ್ಕಾರಕ್ಕೆ ಕಣ್ಣು, ಹೃದಯ ಯಾವುದೂ ಇಲ್ಲ ಎಂದು ಟೀಕಿಸಿದರು. 

ಪುತ್ತೂರು ಈ ಬಾರಿ ಬಿಜೆಪಿ ಗೆಲ್ಲುತ್ತೆ, ನಮ್ಮ ಅಧ್ಯಕ್ಷರು, ಸಂಸದರು ಗೆಲ್ಲಿಸ್ತಾರೆ. ಹಿಂದಿನ ಚುನಾವಣೆಯಲ್ಲಿ ಪಕ್ಷದಲ್ಲಿ ಸಮನ್ವಯದ ಕೊರತೆ ಆಗಿತ್ತು. ಈ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಹಿನ್ನಡೆ ಆಗಿತ್ತು. ಆದರೆ ಮುಂದಿನ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಆ ಕುರಿತ ಪ್ರಶ್ನೆಗೆ ಅಶೋಕ್ ಉತ್ತರಿಸಿದರು. ಸ್ಟಿಂಗ್ ಮತ್ತು ಸಿಡಿ ಕೇಸ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅಶೋಕ್, ಸಿದ್ದರಾಮಯ್ಯ ಅವರ‌ನ್ನ ಸಿ.ಡಿ ಕೇಸ್ ನಲ್ಲಿ ಸಿಕ್ಕಾಕಿಸಿದ್ದೇ ಕಾಂಗ್ರೆಸ್. ಅದನ್ನ ಸ್ವತಃ ಅವರ‌ ಮಗನೇ ಹೇಳಿಕೊಂಡು ಬರ್ತಾ ಇದಾರೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಗೆಲ್ಲಲ್ಲ, ಮತ್ತೇ ಬಿಜೆಪಿ ಸರ್ಕಾರ ಬರುತ್ತೆ. ಸ್ಟಿಂಗ್ ಕೇಸ್ ನಲ್ಲಿ ಎಲ್ಲರಿಗೂ ಕ್ಲೀನ್ ಚಿಟ್ ಕೊಡ್ತಾರೆ. ತನಿಖೆಗೆ ಎಸ್ಐಟಿ ರಚನೆ ಮಾಡಿದ್ದೇ ಅದಕ್ಕೆ. ಯಾರು ಇದ್ದರೂ ಅವರಿಗೆ ಕ್ಲೀನ್ ಚಿಟ್ ಕೊಟ್ಟೇ ಕೊಡ್ರಾರೆ, ಎಸ್ಐಟಿ ಕೊಡುತ್ತೆ. 

ಈಗ ಸಿದ್ದರಾಮಯ್ಯ ಪಕ್ಷದಲ್ಲಿ ಮೂಲೆ ಗುಂಪಾಗಿದ್ದಾರೆ, ಅವರು ಊಟದಲ್ಲಿ ಕರಿಬೇವಿನ ಸೊಪ್ಪಿನ ಥರ ಅಗಿದಾರೆ. ಹಾಗಾಗಿ ಅವರು ಡಿಕೆಶಿಯನ್ನ ಸಿಎಂ ಸ್ಥಾನದಿಂದ ಇಳಿಸಲು ಸಿದ್ದರಾಮಯ್ಯ ಪ್ಲಾನ್ ಮಾಡ್ತಾ ಇದಾರೆ. ಹಾಗಾಗಿ ಇವರ ನಡುವಿನ ಗಲಾಟೆಯಿಂದಾಗಿ ‌ಕರ್ನಾಟಕಕ್ಕೆ ಮೂರನೇ ಮುಖ್ಯಮಂತ್ರಿ ಬರಲೂ ಬಹುದು ಎಂದು ಹೇಳಿದರು.