ಬ್ರೇಕಿಂಗ್ ನ್ಯೂಸ್
21-11-26 10:29 pm HK News Desk ಕರಾವಳಿ
ಮಂಗಳೂರು, ನ.21: ಅತ್ತ ಬ್ರಿಟಿಷರ ದಬ್ಬಾಳಿಕೆ, ಇತ್ತ ಮೇಲ್ಜಾತಿಯವರ ಪಾಳೆಗಾರಿಕೆ. ಇವರ ನಡುವೆ ಕರಾವಳಿಯ ಮೂಲ ಜನಾಂಗ ಎನಿಸಿರುವ ಕೊರಗ ಇನ್ನಿತರ ತಳವರ್ಗದ ಜನರಿಗೆ ಸಮಾಜದಲ್ಲಿ ಸ್ಥಾನವೇ ಇರಲಿಲ್ಲ. ಇಂತಹ ಹೊತ್ತಿನಲ್ಲಿ ಇವರ ಪಾಲಿಗೆ ದೇವರಾಗಿ ಬಂದಿದ್ದೇ ಕುದ್ಮುಲ್ ರಂಗರಾಯರು. ಮೇಲ್ವರ್ಗ ಸಾರಸ್ವತ ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿದರೂ, ಮನುಷ್ಯರನ್ನು ಮನುಷ್ಯರಾಗಿ ಕಾಣದ ಜಾತಿಯೇ ತನಗೆ ಬೇಡವೆಂದು ತಳ ಸಮುದಾಯದ ಜನರಿಗಾಗಿ ತನ್ನ ಜೀವನ ಮುಡುಪಾಗಿಟ್ಟವರು ಕುದ್ಮುಲ್.
ದೇಶದ ಸ್ವಾತಂತ್ರ್ಯಕ್ಕಾಗಿ ಚಳವಳಿ ನಡೆಸಿದ ಮಹಾತ್ಮ ಗಾಂಧೀಜಿಯವರಿಗೂ ಅಸ್ಪೃಶ್ಯತೆ ನಿವಾರಣೆ ವಿಚಾರದಲ್ಲಿ ಪ್ರೇರಣೆಯಾದವರು ಕುದ್ಮುಲ್ ರಂಗ ರಾವ್ ಎಂದರೆ ಮಾಧ್ಯಮದ ಸೋಕಿಲ್ಲದ ಆ ಹೊತ್ತಿನಲ್ಲಿ ಅವರಿಟ್ಟ ಕ್ರಾಂತಿಕಾರಿ ಹೆಜ್ಜೆ ಗುರುತುಗಳು ಹೇಗಿದ್ದವು ಅನ್ನುವುದು ಅಚ್ಚರಿ ಮೂಡಿಸುತ್ತವೆ. ಇಂಥ ಮಹಾತ್ಮನ ಬಗ್ಗೆ ತುಳು ಅಕಾಡೆಮಿ ವತಿಯಿಂದ ‘ಮಹಾತ್ಮೆ ಕುದ್ಮುಲ್’ ಎನ್ನುವ ನಾಟಕವನ್ನು ರಚಿಸಲಾಗಿದ್ದು, ಮೊದಲ ಬಾರಿಗೆ ಮಂಗಳೂರಿನ ತುಳು ಭವನದಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು. ರಂಗರಾಯರ ಹುಟ್ಟಿನಿಂದ ತೊಡಗಿ ಸಮಾಜ ಸುಧಾರಣೆಗಾಗಿ ಅವರಿಟ್ಟ ಪ್ರತಿ ಹೆಜ್ಜೆಯಲ್ಲೂ ಎದುರಾಗಿದ್ದ ತೊಡಕುಗಳು, ಅದನ್ನು ಎದುರಿಸಿದ್ದ ಬಗೆಯನ್ನು ನಾಟಕದಲ್ಲಿ ಅಮೋಘ ರೀತಿಯಲ್ಲಿ ಚಿತ್ರಿಸಲಾಗಿದೆ.





ಕೇರಳದ ಕಾಸರಗೋಡು ಜಿಲ್ಲೆಯ ಬೋವಿಕ್ಕಾನ ಬಳಿಯ ಕುದ್ಮುಲ್ ಎಂಬ ಹಳ್ಳಿಯಲ್ಲಿ ಹುಟ್ಟಿ ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದಿದ್ದ ರಂಗ ರಾಯರಿಗೆ ತಮ್ಮ ಮನೆ ಪರಿಸರದಲ್ಲಿ ಆಚರಿಸುತ್ತಿದ್ದ ಅಸ್ಪೃಶ್ಯತೆ, ತಳವರ್ಗದ ಜನರನ್ನು ತೀರಾ ಅಸಹ್ಯವಾಗಿ ನೋಡುತ್ತಿದ್ದುದೇ ಬಾಲಕನಾಗಿದ್ದಾಗಲೇ ತಳವರ್ಗದ ಜನರ ಬಗ್ಗೆ ಮನ ಮಿಡಿಯುವಂತೆ ಮಾಡಿತ್ತು. ಅವರೂ ತಮ್ಮಂತೆ ಮನುಷ್ಯರಲ್ಲವೇ, ಅವರನ್ನು ಯಾಕೆ ಸಮಾಜದಿಂದ ಹೊರಗಿಡಬೇಕು ಎಂದು ಪ್ರಶ್ನಿಸಿಕೊಳ್ಳುತ್ತಿದ್ದ ಅವರಿಗೆ, ಮಗನನ್ನು ಹಾವು ಕಚ್ಚಿತೆಂದು ಮದ್ದಿಗೆ ಕರೆತಂದಿದ್ದ ತಾಯಿ ಒಬ್ಬಳನ್ನು ಮೇಲ್ವರ್ಗದ ವೈದ್ಯನೊಬ್ಬ ‘ನಿನ್ನಂಥವರಿಗೆ ಔಷಧಿ ನೀಡಲ್ಲ, ನಾವು ಮೇಲ್ವರ್ಗಕ್ಕೆ ಮಾತ್ರ ಔಷಧಿ ನೀಡುವವರು, ನಿನ್ನ ಮಗ ಸಾಯಲಿ, ನನಗೇನು..’ ಎನ್ನುವ ತಾತ್ಸಾರದಿಂದ ಹೊರಕ್ಕಟ್ಟುವ ಸ್ಥಿತಿ ನೋಡಿ ಮನಸ್ಸು ಕರಗಿಸಿತ್ತು.
ಮೇಲ್ವರ್ಗದ ಮನೆಗಳ ಮೂಲೆಯಲ್ಲಿ ಅವರು ಹೇಳುವ ಕೆಲಸಗಳನ್ನು ಮಾಡಿಕೊಂಡಿರಬೇಕಿದ್ದ ಈ ಜನಗಳಿಗೆ ಕೂಲಿ ಕೇಳುವುದು ಬಿಡಿ ಗಟ್ಟಿ ದನಿಯಲ್ಲಿ ಮಾತಾಡುವಂತೆಯೂ ಇರಲಿಲ್ಲ. ತಿನ್ನಲು ಕೊಡುವುದೇ ಅವರ ಭಿಕ್ಷೆಯಾಗಿತ್ತು. ಮನೆ, ಗುಡಿ, ಗೋಪುರದ ಬಳಿಗೆ ಸುಳಿದರೂ ಛಡಿಯೇಟು ನೀಡುವ ಪದ್ಧತಿ ಇತ್ತು. ಈ ಜನಗಳು ಹಾಗೆಯೇ ಇರಬೇಕು, ಯಾವತ್ತೂ ಮೇಲೆ ಬರಲೇಬಾರದು ಅನ್ನುವುದು ಮೇಲ್ವರ್ಗದ ಜನರ ಭಾವನೆಯಾಗಿತ್ತು. ಅದುವೇ ಸಮಾಜದ ಕಟ್ಟುಪಾಡು ಎನ್ನುವ ದಿನಗಳಾಗಿದ್ದವು. ಇಂಥ ಸಂದರ್ಭದಲ್ಲಿ ತಳವರ್ಗದ ಜನರನ್ನು ತನ್ನ ಮನೆಗೆ ಕರೆಸಿಕೊಂಡು ಆದರಿಸಿದ್ದಲ್ಲದೆ, ಅವರ ಮಕ್ಕಳಿಗೂ ಶಿಕ್ಷಣ ಕೊಡಬೇಕು, ಶಿಕ್ಷಣದಿಂದಷ್ಟೇ ಅವರನ್ನು ಮೇಲೆತ್ತಲು ಸಾಧ್ಯವೆಂದು ರಂಗ ರಾವ್ ಮುಂದಡಿ ಇಟ್ಟರು. ಸಮಾಜದಲ್ಲಿ ತೀವ್ರ ವಿರೋಧ ಬಂದರೂ, ಉಳ್ಳಾಲದ ರಘುನಾಥಯ್ಯ ಮತ್ತು ರಾಮಚಂದ್ರ ರಾಯರು ಸಹಕಾರ ಕೊಟ್ಟರು.
ಇದರಂತೆ, ಮಂಗಳೂರಿನ ಚಿಲಿಂಬಿಯಲ್ಲಿ ಒಬ್ಬರು ಕ್ರೈಸ್ತರಿಂದ ಪಡೆದ ಬಾಡಿಗೆ ಕಟ್ಟಡದಲ್ಲಿ ಮೊದಲ ಬಾರಿಗೆ ಶಾಲೆ ಆರಂಭಿಸಿದರು. ತಳವರ್ಗದ ಮನೆಗಳಿಗೆ ತೆರಳಿ ಅವರನ್ನು ಮನವೊಲಿಸಿ ಮಕ್ಕಳನ್ನು ಕರೆತಂದು ತಾವೇ ಶಿಕ್ಷಕರಾಗಿ ಶಾಲೆ ನಡೆಸತೊಡಗಿದ್ದರು. ಆದರೆ ಮೇಲ್ವರ್ಗದ ಜನರು ಅಲ್ಲಿಗೆ ನೇರವಾಗಿ ಬಂದು ಇವರ ಶಾಲೆಗೆ ಬೆಂಕಿ ಕೊಟ್ಟರಲ್ಲದೆ, ಕೊರಗರ ಜೊತೆಗಿರುವ ಕಾರಣಕ್ಕೆ ನೀನು ನಮ್ಮ ಜಾತಿಯಲ್ಲೇ ಇರಬಾರದು, ನಮ್ಮ ಎದುರಲ್ಲಿ ಕಾಣಿಸಿಕೊಳ್ಳುವುದೂ ಆಗಬಾರದು ಎಂದು ರಂಗ ರಾಯರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದರು. ಆದರೆ ರಂಗ ರಾವ್ ಇದ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ.
ಬೆಂಕಿ ಕೊಡುವಂಥ ಕೃತ್ಯಗಳನ್ನು ಎದುರಿಸಲು ಕಾನೂನಿನ ರಕ್ಷಣೆ ಬೇಕು, ಇದಕ್ಕಾಗಿ ತಾನೇ ವಕೀಲ ವೃತ್ತಿ ಕಲಿಯಬೇಕೆಂದು ಪಣ ತೊಟ್ಟು ವಕೀಲಿಕೆಯನ್ನೂ ಕಲಿತರು. ಆನಂತರ, ಬ್ರಿಟಿಷ್ ಸರ್ಕಾರದಿಂದ ಕಾನೂನು ರಕ್ಷಣೆ ಪಡೆದು 1900ನೇ ಇಸವಿ ವೇಳೆಗೆ ಮಂಗಳೂರಿನ ಅತ್ತಾವರ, ಬಿಜೈ, ಕಾಪು, ಮೂಲ್ಕಿ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವಾರು ಕಡೆಗಳಲ್ಲಿ ಶಾಲೆಗಳನ್ನು ತೆರೆದರು. ಇವರ ಕ್ರಾಂತಿಕಾರಿ ನಡೆಗಳು ಇಡೀ ದೇಶದ ಗಮನ ಸೆಳೆಯಿತು. ಇದನ್ನು ತಿಳಿದ ಗಾಂಧೀಜಿಯವರು ಮಂಗಳೂರಿಗೆ ಬಂದು ರಂಗ ರಾಯರ ಕೆಲಸಕ್ಕೆ ಬೆನ್ನು ತಟ್ಟಿದರು.
ರಂಗ ರಾವ್ ಅವರ ಸಮಾಜ ಸುಧಾರಣೆಯ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತಿದ್ದು ಅವರ ಧರ್ಮಪತ್ನಿ ರುಕ್ಮಿಣಿಯವರು. ಹಸಿವಿನಿಂದ ಬರುತ್ತಿದ್ದ ತಳವರ್ಗದ ಮಕ್ಕಳಿಗೆ ತನ್ನ ಮನೆಯ ಒಳಗಡೆ ಕರೆದು ಊಟ, ತಿಂಡಿಗಳನ್ನು ನೀಡುತ್ತ ಪತಿಯ ಕೆಲಸಕ್ಕೆ ಸಾಥ್ ನೀಡಿದ್ದರು. ಆದರೆ ದಂಪತಿಯ ಈ ರೀತಿಯ ನಡೆಗಳು ಮೇಲ್ವರ್ಗದಲ್ಲಿ ತೀವ್ರ ವಿರೋಧಾಭಾಸ ಸೃಷ್ಟಿಸಿದ್ದವು. ಅಂತರ್ಜಾತಿ ವಿವಾಹಗಳಿಗೂ ರಂಗ ರಾವ್ ಪ್ರೋತ್ಸಾಹ ನೀಡುತ್ತಿದ್ದರು. ಇದರಿಂದ ಜಾತಿಗಳ ನಡುವಿನ ಕಂದಕ, ತಾರತಮ್ಯ ನಿವಾರಣೆಯಾಗುತ್ತದೆ ಎಂದು ಜನರಿಗೆ ತಿಳಿ ಹೇಳುತ್ತಿದ್ದರು. ಇವರೇ ವಿದ್ಯೆ ಕಲಿಸಿ ಮೇಲೆ ಬಂದ ಯುವಕರನ್ನು ಬ್ರಿಟಿಷ್ ಸರ್ಕಾರದಲ್ಲಿ ಗುಮಾಸ್ತ ರೀತಿಯ ಕೆಲಸಗಳಿಗೆ ಸೇರಿಸಿದರೂ, ಅಲ್ಲಿ ಮೇಲ್ವರ್ಗದ ಜನರ ವಿರೋಧ ಎದುರಾಗಿತ್ತು. ಅವರು ಮುಟ್ಟಿದ ಪುಸ್ತಕ, ಹಾಳೆಗಳನ್ನು ನಾವು ಮುಟ್ಟುವುದು ಹೇಗೆ ಎಂದು ಅಧಿಕಾರಿ ಹುದ್ದೆಗಳಲ್ಲಿದ್ದವರು ಪ್ರಭಾವ ಬೀರಿ ತಳವರ್ಗದ ಯುವಕರನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದರು.
ಇಷ್ಟೆಲ್ಲ ಸುಧಾರಣಾ ಕೆಲಸಗಳಾದರೂ, ತಳವರ್ಗದ ಜನರಿಗೆ ಉಳಿಯಲು ಸ್ವಂತದ್ದೆನ್ನುವ ಸೂರಾಗಲೀ, ಭೂಮಿಯಾಗಲೀ ಇರಲಿಲ್ಲ. ಪಾಳೇಗಾರಿಕೆ ನಡೆಸುತ್ತಿದ್ದ ಭೂಮಾಲೀಕರ ಕೈಯಲ್ಲಿ ಭೂಮಿ ಇದ್ದರೆ, ಅವರಲ್ಲಿ ಜೀತದಾಳಾಗಿ ಬದುಕು ಸವೆಸಬೇಕಿತ್ತು. ತನಗೂ ಭೂಮಿ ಬೇಕೆಂದು ಕೇಳುವುದೇ ಅಪರಾಧವಾಗಿತ್ತು. ಇಂಥ ಹೊತ್ತಿನಲ್ಲಿ ರಂಗರಾಯರು ತನ್ನ ಸ್ನೇಹಿತ ಭೂಮಾಲೀಕರ ಮನವೊಲಿಸಿ, ಒಂದಷ್ಟು ಭೂಮಿಗಳನ್ನು ಪಡೆದು ತಳವರ್ಗದ ಜನರನ್ನು ಒಂದೆಡೆ ಸೇರಿಸಿ ಭೂಮಿ ಹಂಚಿಕೆ ಮಾಡಿದ್ದರು. ಮಂಗಳೂರಿನ ಬಿಜೈ ಕಾಪಿಕಾಡ್, ದಡ್ಡಲ್ ಕಾಡ್, ಉರ್ವಾ, ಅತ್ತಾವರ, ವಾಮಂಜೂರು ಹೀಗೆ ಅಲ್ಲಲ್ಲಿ ಎಸ್ಸಿ ಕಾಲನಿಗಳು ಆಗಿದ್ದರೆ ಅದು ಕುದ್ಮುಲ್ ರಂಗ ರಾಯರ ಕೃಪೆಯಾಗಿತ್ತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ತಳವರ್ಗದ ಪರಿಶಿಷ್ಟ ಜಾತಿಯವರ ನೂರಾರು ಕಾಲನಿ ನಿರ್ಮಾಣವಾಗಲು ಮಹಾತ್ಮ ಕುದ್ಮುಲರೇ ಕಾರಣವಾಗಿದ್ದರು.
ಇಂಥ ಕುದ್ಮುಲ್ ರಂಗರಾಯರು ತನ್ನ ಜೀವನದ ಕೊನೆಗಾಲದಲ್ಲಿ ಆರ್ಯ ಸಮಾಜದ ಶ್ರದ್ಧಾನಂದ ಸರಸ್ವತಿಯವರ ಸಂಪರ್ಕಕ್ಕೆ ಬಂದು ಸನ್ಯಾಸ ದೀಕ್ಷೆ ಪಡೆದಿದ್ದರು. ಈಶ್ವರಾನಂದ ಸ್ವಾಮಿ ಎಂಬ ಹೆಸರಿನಲ್ಲಿ ರಾಯರು ಸ್ವಾಮೀಜಿಯಾಗಿದ್ದಾರೆಂಬುದನ್ನು ತಿಳಿದು ತಳವರ್ಗದ ಜನರು ಅವರನ್ನು ಕಾಣಲು ಸಾಲುಗಟ್ಟಿ ಬರತೊಡಗಿದರು. ಆಗಲೂ ಮೇಲ್ವರ್ಗದ ಜನರು ಅವರಿನ್ನು ಸ್ವಾಮೀಜಿ, ಮಡಿ ಮೈಲಿಗೆ ಅಂತ ಇರುತ್ತೆ. ನೀವೆಲ್ಲ ಹತ್ತಿರ ಹೋಗಬಾರದು ಎಂದು ತುಚ್ಛವಾಗಿ ಕಾಣುತ್ತಾರೆ. ಆದರೆ ತಮ್ಮನ್ನು ಬರುವುದು ಬೇಡ ಎಂದರೆ ನಾವು ಹೋಗಲ್ಲ, ಅವರೇ ನಮಗೆ ದೇವರು ಎನ್ನುತ್ತ ಜನರು ರಾಯರ ಬಳಿಗೆ ಬಂದರು. ಮಡಿ ಮೈಲಿಗೆ ಅನ್ನುವುದೇ ಮನುಷ್ಯ ವಿರೋಧಿ. ನೀವು ನಡೆದಾಡಿದಾಗ ಹಾರುವ ಧೂಳು ನನ್ನ ತಲೆಯಲ್ಲಿ ಕೂರಬೇಕು. ಆಗಷ್ಟೇ ಈ ಸಮಾಜ ಬದಲಾಗಲು ಸಾಧ್ಯ. ನಾನು ಸತ್ತರೆ ನನ್ನ ಹೆಣವನ್ನೂ ನೀವೇ ಹೊತ್ತು ಸಾಗಬೇಕು. ಬೇರೆ ಯಾರೂ ಹೊತ್ತು ಸಾಗುವಂತಿಲ್ಲ ಎಂದು ತಳವರ್ಗದ ಜನರನ್ನು ಹತ್ತಿರ ಕರೆದು ಹೇಳುತ್ತಾರೆ. ಇದಾಗಿ ಒಂದು ವರ್ಷದಲ್ಲಿ 1928ರ ವೇಳೆಗೆ ರಂಗ ರಾಯರು ತಮ್ಮ 69ನೇ ವಯಸ್ಸಿನಲ್ಲಿ ಹೃದಯ ಬೇನೆಗೆ ತುತ್ತಾಗಿ ನಿಧನರಾಗುತ್ತಾರೆ.
ಈ ದೇಶ ಕಂಡ ಅಪ್ರತಿಮ ಸಮಾಜ ಸುಧಾರಕ, ದಲಿತೋದ್ಧಾರಕ ಯಾರೆಂದರೆಕುದ್ಮುಲ್ ರಂಗರಾಯರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಇಂಥ ಮಹಾತ್ಮರನ್ನು ನೆನೆಯುವ, ಈಗಿನ ಜನರಿಗೂ ಅವರ ಕೆಲಸಗಳನ್ನು ತಲುಪಿಸುವ ಕಾರ್ಯವನ್ನು ಕರ್ನಾಟಕ ತುಳು ಅಕಾಡೆಮಿ ಈ ನಾಟಕದ ಮೂಲಕ ಮಾಡಿದೆ. ಜಗನ್ ಪವಾರ್ ಬೇಕಲ್ ಅವರು ಹೆಣೆದಿಟ್ಟ ನಾಟಕ ಕೃತಿಯನ್ನು ಯುವ ರಂಗ ನಿರ್ದೇಶಕ ವಿದ್ದು ಉಚ್ಚಿಲ್ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ಇವರ ಕೆಲಸಕ್ಕೆ ಸಾಥ್ ನೀಡಿತ್ತು. ಮರೆಗೆ ಸರಿದ ತುಳುವ ಸಾಧಕರನ್ನು ಪುಸ್ತಕದ ಮೂಲಕ ಬೆಳಕಿಗೆ ತಂದ ರೀತಿಯಲ್ಲೇ ತುಳು ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಅವರು, ತುಳುನಾಡಿನ ಅಪರೂಪದ ಮಾಣಿಕ್ಯ ಕುದ್ಮುಲ್ ರಂಗ ರಾಯರನ್ನು ನೆನವರಿಕೆ ಮಾಡಿಸಿದ್ದಾರೆ.
20-11-26 05:15 pm
HK News Staffer
2028ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ; ಮಾಜಿ ಸಿಎಂ...
20-11-26 12:04 pm
ಹಿರಿಯೂರು ಅಭ್ಯರ್ಥಿ ; ನಾವು ಕುಮಾರಸ್ವಾಮಿ ಜೊತೆ ಮಾತ...
19-11-26 12:32 pm
ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ ; ಕಾರು - ಬೊಲೆರೋ...
18-11-26 11:03 pm
ರಾಜ್ಯದಲ್ಲಿ 30ಕ್ಕೂ ಹೆಚ್ಚು ಐಪಿಎಸ್ ವರ್ಗಾವಣೆ ; ಬೆ...
18-11-26 07:26 pm
21-11-26 11:44 am
HK News Staffer
ಜಾಗತಿಕ ಜನಸಂಖ್ಯೆಯಲ್ಲಿ ಇಸ್ಲಾಂ ಪಾರಮ್ಯ ; 2035ಕ್ಕೆ...
20-11-26 12:58 pm
ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ; ಮಾಜಿ ಮುಖ್ಯಸ್...
19-11-26 07:30 pm
"ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್...
19-11-26 01:19 pm
ಸೌದಿಗೆ ನವೆಂಬರ್ 30ರ ವರೆಗೆ ವಿಮಾನ ಸೇವೆ ರದ್ದು ; ಇ...
18-11-26 11:28 pm
21-11-26 10:59 pm
HK News Desk
‘ಮಹಾತ್ಮೆ ಕುದ್ಮುಲ್’ ; ಸೂರಿಲ್ಲದ, ತುಂಡು ಭೂಮಿ ಇಲ್...
21-11-26 10:29 pm
ಅಪಹರಣ ಆಗಿಲ್ಲ, ವಿದ್ಯಾರ್ಥಿನಿ ತಪ್ಪುದಾರಿ ತುಳಿದಿದ್...
20-11-26 09:53 pm
ಮುಸ್ಲಿಂ ಯುವತಿ ಅಪಹರಣ ; ಕೇರಳದಲ್ಲಿ ಸಂಬಂಧಿಕರ ಮನೆಯ...
20-11-26 09:51 pm
ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲೇ ಮುಸ್ಲಿಂ ವಿದ್ಯ...
20-11-26 02:32 pm
21-11-26 04:41 pm
HK News Staffer
ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕ...
21-11-26 12:41 pm
'ಬಸವ ಮಂಟಪ' ಕೃತಿ ವಿವಾದ ಹಿನ್ನೆಲೆ ; ಲೇಖಕ ರವಿ ಹಂಜ...
21-11-26 12:33 pm
ಬಂಟ್ವಾಳ ; ಶಾಲೆಯಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ...
19-11-26 09:20 pm
Baglur Manchapanahalli Murder: ಗುಜರಿ ವ್ಯಾಪಾರದ...
19-11-26 03:20 pm