ಮಾಜಿ ಸಿಎಂ ಸ್ಟಾಲಿನ್ ಸೋಲಿಸಿದ್ದ ನಾಯಕನಿಗೆ ಭಾವಪೂರ್ಣ ವಿದಾಯ ; ಶವ ಮೆರವಣಿಗೆಯಲ್ಲಿ ಹೆಗಲು ಕೊಟ್ಟು 2.3 ಕಿಮೀ ನಡೆದ ಸಿಎಂ ವಿಜಯ್!

21-11-26 11:44 am       HK News Staffer   ದೇಶ - ವಿದೇಶ

ಇತ್ತೀಚೆಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಡಿಎಂಕೆ ನಾಯಕ, ಆಗಿನ ಸಿಎಂ ಸ್ಟಾಲಿನ್ ಅವರನ್ನು ಸೋಲಿಸಿ ಕೊಳತ್ತೂರು ಕ್ಷೇತ್ರದ ಶಾಸಕರಾಗಿದ್ದ ವಿ.ಎಸ್.ಬಾಬು ಅವರು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದು ಶುಕ್ರವಾರ ನಡೆದ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಭಾಗಿಯಾಗಿ ಪ್ರಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಚಪ್ಪಲಿ ಧರಿಸದೇ 2.3 ಕಿ.ಮೀ. ಉದ್ದಕ್ಕೆ ಬರಿಗಾಲಿನಲ್ಲಿ ನಡೆದು ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದರು.

ಚೆನ್ನೈ, ನ.21: ಇತ್ತೀಚೆಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಡಿಎಂಕೆ ನಾಯಕ, ಆಗಿನ ಸಿಎಂ ಸ್ಟಾಲಿನ್ ಅವರನ್ನು ಸೋಲಿಸಿ ಕೊಳತ್ತೂರು ಕ್ಷೇತ್ರದ ಶಾಸಕರಾಗಿದ್ದ ವಿ.ಎಸ್.ಬಾಬು ಅವರು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದು ಶುಕ್ರವಾರ ನಡೆದ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಭಾಗಿಯಾಗಿ ಪ್ರಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಚಪ್ಪಲಿ ಧರಿಸದೇ 2.3 ಕಿ.ಮೀ. ಉದ್ದಕ್ಕೆ ಬರಿಗಾಲಿನಲ್ಲಿ ನಡೆದು ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದರು.

2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ವಿ.ಎಸ್.ಬಾಬು ಚೆನ್ನೈನ ಕೊಳತ್ತೂರು ಕ್ಷೇತ್ರದಲ್ಲಿ ಸೋಲಿಸಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರು. ನಟ ವಿಜಯ್ ಪಕ್ಷದ 'ತಮಿಳಗ ವೆಟ್ರಿ ಕಳಗಂ' ಪಕ್ಷದಿಂದ ಸ್ಪರ್ಧಿಸಿದ್ದ ಬಾಬು ಡಿಎಂಕೆ, ಎಐಎಡಿಎಂಕೆ ಪಕ್ಷದಲ್ಲಿದ್ದು ಪ್ರಭಾವ ಬೆಳೆಸಿಕೊಂಡಿದ್ದರೂ, ಈ ಚುನಾವಣೆಯಲ್ಲಿ ಟಿವಿಕೆ ಪಕ್ಷದಲ್ಲಿ ಕಣಕ್ಕಿಳಿದು ಮುಖ್ಯಮಂತ್ರಿಯನ್ನೇ ಸೋಲಿಸಿ ಗಮನ ಸೆಳೆದಿದ್ದರು.‌ ದೀರ್ಘಕಾಲದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಶಾಸಕ ಬಾಬು ಹೃದಯಸ್ತಂಭನದಿಂದ ನ.19ರಂದು ನಿಧನರಾದರು.

ಸಿಎಂ ವಿಜಯ್ ಅವರು ಶುಕ್ರವಾರ ವಿ.ಎಸ್.ಬಾಬು ನಿವಾಸಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರಲ್ಲದೆ, ಬಾಬು ಅವರ ಪಾದಗಳನ್ನು ಮುಟ್ಟಿ ಅಂತಿಮ ನಮನ ಸಲ್ಲಿಸಿದರು. ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಸರಳ ನಡೆ ತೋರಿದ್ದಾರೆ.  ಈ ವೇಳೆ ತಮ್ಮ ಪಾದರಕ್ಷೆಗಳನ್ನ ತೆಗೆದು ನಡೆಯುವ ಮೂಲಕ ಭಾವನಾತ್ಮಕವಾಗಿ ಗಮನ ಸೆಳೆದರು. ಬರಿಗಾಲಿನಲ್ಲೇ 2.3 ಕಿಲೋ ಮೀಟರ್ ಉದ್ದಕ್ಕೆ ನಡೆದು ಸಾಗಿದರು. ಈ ವೇಳೆ, ಸರ್ಕಾರದ ಸಚಿವರು, ಟಿವಿಕೆ ಶಾಸಕರು, ಪಕ್ಷದ ಹಿರಿಯ ಕಾರ್ಯಕರ್ತರು ಸಾಥ್ ನೀಡಿದರು. 

ಶುಕ್ರವಾರ ಬೆಳಗ್ಗೆ ಪೆರಂಬೂರಿನ ಕ್ರೀಡಾ ಮೈದಾನದಲ್ಲಿ ಬಾಬು ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ದಿವಂಗತ ಶಾಸಕರ ಗೌರವಾರ್ಥವಾಗಿ ಆಡಳಿತಾರೂಢ ಟಿವಿಕೆ ತಮಿಳುನಾಡಿನಾದ್ಯಂತ ಏಳು ದಿನಗಳ ಶೋಕಾಚರಣೆ ಘೋಷಿಸಿದೆ. ಪಕ್ಷದ ಅಧಿಕೃತ ಕಾರ್ಯಕ್ರಮಗಳನ್ನು ರದ್ದು ಮಾಡಿದೆ. ಸೆಪ್ಟೆಂಬರ್ 9 ರಿಂದ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಶಾಸಕ ಬಾಬು ಅವರನ್ನು ಚೆನ್ನೈನ ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.