ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂವರು ಮಕ್ಕಳ ಸ್ಥಿತಿ ಗಂಭೀರ, ಲೀಕೇಜ್ ಇದ್ದ ಸಿಲಿಂಡರ್ ನಿರ್ಲಕ್ಷ್ಯ ಮಾಡಿದ್ದೇ ಮುಳುವು!

07-10-26 02:21 pm       HK News Staffer   ಕರಾವಳಿ

ನಾಯಂಡಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ಸಂಭವಿಸಿದ ಭೀಕರ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಹಾಗೂ ಮೂರು ವರ್ಷದ ಮಗು ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ ಒಂದೇ ಕುಟುಂಬದ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಮೂವರು ಮಕ್ಕಳು ಸೇರಿದಂತೆ ಉಳಿದ ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಬೆಂಗಳೂರು, ಅ.7: ನಾಯಂಡಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ಸಂಭವಿಸಿದ ಭೀಕರ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಹಾಗೂ ಮೂರು ವರ್ಷದ ಮಗು ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ ಒಂದೇ ಕುಟುಂಬದ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಮೂವರು ಮಕ್ಕಳು ಸೇರಿದಂತೆ ಉಳಿದ ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ರಾಯಚೂರು ಮೂಲದ ಕರಿಲಿಂಗಪ್ಪ ಅವರ ಕುಟುಂಬ ಕಳೆದ 25 ವರ್ಷಗಳಿಂದ ವಿನಾಯಕ ಲೇಔಟ್‌ನಲ್ಲಿ ವಾಸವಾಗಿತ್ತು. ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದ ಕರಿಲಿಂಗಪ್ಪ, ಪತ್ನಿ ಲಕ್ಷ್ಮಮ್ಮ ಹಾಗೂ ನಾಲ್ವರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ಮಂಗಳವಾರ ಬೆಳಗ್ಗೆ 6.20ರ ಸುಮಾರಿಗೆ ಕರಿಲಿಂಗಪ್ಪ ಪತ್ನಿ ಲಕ್ಷ್ಮಮ್ಮ ಅಡುಗೆ ಮಾಡಲು ಬಾಗಿಲು ತೆರೆದು ಸ್ಟೌವ್ ಹಚ್ಚಿದ ಕೂಡಲೇ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಕಳೆದ ಮೂರು ದಿನಗಳಿಂದ ಸಿಲಿಂಡರ್‌ನಲ್ಲಿ ಲೀಕೇಜ್ ಸಮಸ್ಯೆ ಇತ್ತು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಸ್ಫೋಟದ ತೀವ್ರತೆಗೆ ಕರಿಲಿಂಗಪ್ಪ, ಪತ್ನಿ ಲಕ್ಷ್ಮಮ್ಮ ಹಾಗೂ ನಾಲ್ವರು ಮಕ್ಕಳು ಗಂಭೀರ ಗಾಯಗೊಂಡಿದ್ದರು. ಕೂಡಲೇ ಎಲ್ಲರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳಿಗೆ ಆಸ್ಪತ್ರೆಯ ಬರ್ನಿಂಗ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮಮ್ಮ ಹಾಗೂ ಅವರ ಮೂರು ವರ್ಷದ ಅವಳಿ ಮಕ್ಕಳ ಪೈಕಿ ಒಂದು ಮಗು ಮೃತಪಟ್ಟಿದೆ. ಲಕ್ಷ್ಮಮ್ಮ ಅವರಿಗೆ ಸುಮಾರು ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದರೆ, ಕರಿಲಿಂಗಪ್ಪ ಅವರಿಗೆ ಶೇ.45ರಷ್ಟು ಸುಟ್ಟ ಗಾಯಗಳಾಗಿವೆ.

11 ವರ್ಷದ ಚೈತ್ರಾ, 9 ವರ್ಷದ ಬಸವ ಹಾಗೂ ಮತ್ತೊಂದು ಮೂರು ವರ್ಷದ ಮಗು ಗಂಭೀರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಘಟನೆಯಿಂದ ಕುಟುಂಬದಲ್ಲಿ ಆಘಾತದ ವಾತಾವರಣ ನಿರ್ಮಾಣವಾಗಿದೆ.