ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ ; ಕತ್ತು ಹಿಸುಕಿ ಕೊಂದು ನದಿಗೆಸೆದ ಕ್ರೂರಿ, ಮಗನಿಗೆ ಸಾಥ್ ನೀಡಿದ ತಂದೆಗೂ ಜೈಲು !

21-11-26 12:41 pm       HK News Staffer   ಕ್ರೈಂ

ಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ಸ್ವಂತ ಉದ್ಯೋಗ ಆರಂಭಿಸಿದವರನ್ನು, ಗಂಡನಿಗೆ ಬೈಕ್ ಕೊಡಿಸಿದವರನ್ನು, ಗ್ರಂಥಾಲಯ ಸ್ಥಾಪಿಸಿದವರನ್ನು, ದೇವರ ರಥ ನಿರ್ಮಿಸಿದವರನ್ನು ನೋಡಿದ್ದೇವೆ. ಆದರೆ, ಅದೇ ಗೃಹಲಕ್ಷ್ಮೀ ಹಣಕ್ಕಾಗಿ ರಕ್ತಸಂಬಂಧವನ್ನೇ ಮರೆತು ಸ್ವಂತ ಅಜ್ಜಿಯನ್ನೇ ಮೊಮ್ಮಗ ಬರ್ಬರವಾಗಿ ಕೊಲೆ ಮಾಡಿರುವ ಅಮಾನವೀಯ ಘಟನೆ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಬೆಳಗಾವಿ, ನ 21: ಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ಸ್ವಂತ ಉದ್ಯೋಗ ಆರಂಭಿಸಿದವರನ್ನು, ಗಂಡನಿಗೆ ಬೈಕ್ ಕೊಡಿಸಿದವರನ್ನು, ಗ್ರಂಥಾಲಯ ಸ್ಥಾಪಿಸಿದವರನ್ನು, ದೇವರ ರಥ ನಿರ್ಮಿಸಿದವರನ್ನು ನೋಡಿದ್ದೇವೆ. ಆದರೆ, ಅದೇ ಗೃಹಲಕ್ಷ್ಮೀ ಹಣಕ್ಕಾಗಿ ರಕ್ತಸಂಬಂಧವನ್ನೇ ಮರೆತು ಸ್ವಂತ ಅಜ್ಜಿಯನ್ನೇ ಮೊಮ್ಮಗ ಬರ್ಬರವಾಗಿ ಕೊಲೆ ಮಾಡಿರುವ ಅಮಾನವೀಯ ಘಟನೆ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

78 ವರ್ಷದ ಹಮ್ಮವ್ವಾ ಬಾಲಪ್ಪ ಸನದಿ ಕೊಲೆಯಾದ ವೃದ್ಧೆ. ಕೊಲೆ ಆರೋಪದ ಮೇಲೆ ಅವರ ಮೊಮ್ಮಗ ಭೀಮಪ್ಪ ರಾಮಪ್ಪ ಸನದಿ (20) ಎಂಬಾತನನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ.

ಹಮ್ಮವ್ವಾ ಅವರು ನ.10ರಂದು ಪಾಶ್ಚಾಪುರ ಸಂತೆಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದು, ಬಳಿಕ ನಾಪತ್ತೆಯಾಗಿದ್ದರು. ನ.15ರಂದು ಜಿನರಾಳ ಗ್ರಾಮದ ಬಳಿಯ ಘಟಪ್ರಭಾ ನದಿ ಡ್ಯಾಂ ಹಿನ್ನೀರಿನಲ್ಲಿ ಎರಡು ಗೋಣಿ ಚೀಲಗಳಲ್ಲಿ ಕಲ್ಲುಗಳೊಂದಿಗೆ ಕಟ್ಟಿದ್ದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಈ ಕುರಿತು ಮೃತರ ಮಗಳು ನೀಡಿದ ದೂರಿನ ಮೇರೆಗೆ ಯಮಕನಮರಡಿ ಪೊಲೀಸರು ಕೊಲೆ ಹಾಗೂ ಸಾಕ್ಷ್ಯನಾಶ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಮೃತ ಅಜ್ಜಿ ಹಮ್ಮವ್ವಾಗೆ ಬರುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ತನಗೂ ಪಾಲು ನೀಡುವಂತೆ ಮೊಮ್ಮಗ ಭೀಮಪ್ಪ ಕಳೆದ ಮೂರೂವರೇ ವರ್ಷಗಳಿಂದ ಪೀಡಿಸುತ್ತಿದ್ದನು. ನ.10ರಂದು ಅಜ್ಜಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದ ಆತ, ಗವಿಸಿದ್ದೇಶ್ವರ ಗುಡ್ಡದ ಬಳಿ ಮತ್ತೆ ಹಣದ ವಿಚಾರವಾಗಿ ಜಗಳ ತೆಗೆದಿದ್ದಾನೆ. ಅಜ್ಜಿ ಹಣ ನೀಡಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಭೀಮಪ್ಪ, ಆಕೆಯನ್ನು ಕೆಳಕ್ಕೆ ನೂಕಿ ಕೈಯಿಂದ ಕತ್ತು ಹಿಸುಕಿದ್ದಾನೆ. ಬಳಿಕ ಹಗ್ಗದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಬಳಿಕ ಶವವನ್ನು ಗುಡ್ಡದಲ್ಲೇ ಬಿಟ್ಟು ಪಾಶ್ಚಾಪುರಕ್ಕೆ ತೆರಳಿ ಎರಡು ಗೋಣಿ ಚೀಲಗಳನ್ನು ತಂದಿದ್ದಾನೆ. ಅಜ್ಜಿಯ ಬಳಿಯಿದ್ದ ₹2,300 ನಗದು ಹಣವನ್ನು ತೆಗೆದುಕೊಂಡು, ಶವವನ್ನು ಗೋಣಿ ಚೀಲಗಳಲ್ಲಿ ತುಂಬಿದ್ದಾನೆ. ಬಳಿಕ ರಾತ್ರಿ ಬೈಕ್‌ನಲ್ಲಿ ಶವವನ್ನು ಸಾಗಿಸಿ ಜಿನರಾಳ ಬಳಿಯ ಡ್ಯಾಂ ಹಿನ್ನೀರಿಗೆ ತಲುಪಿದ್ದಾನೆ. ಅಜ್ಜಿಯ ಕೊರಳಲ್ಲಿದ್ದ ಎರಡು ಬಂಗಾರದ ಸರಗಳನ್ನು ಕಿತ್ತುಕೊಂಡು, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಗೋಣಿ ಚೀಲಗಳಿಗೆ ಎರಡು ದೊಡ್ಡ ಕಲ್ಲುಗಳನ್ನು ಕಟ್ಟಿ ನೀರಿಗೆ ಎಸೆದಿದ್ದಾನೆ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಧ್ಯಮಗಳಿಗೆ ವಿವರಿಸಿದರು.

ಮನೆಗೆ ಬಂದು ತನ್ನ ತಂದೆ ರಾಮಪ್ಪನಿಗೆ ಅಜ್ಜಿಯನ್ನು ಕೊಲೆ ಮಾಡಿದ್ದಾಗಿ ಆರೋಪಿ ಭೀಮಪ್ಪ ತಿಳಿಸಿದ್ದ. ಸ್ವಂತ ತಾಯಿಯನ್ನೇ ಕೊಲೆ ಮಾಡಿದ್ದರೂ ರಾಮಪ್ಪ ಕೊಲೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದ. ಹಾಗಾಗಿ, ರಾಮಪ್ಪನನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದೇವೆ. ಕೊಲೆ ಪ್ರಕರಣ ಭೇದಿಸಿದ್ದ ಯಮಕನಮರಡಿ ಪಿಐ ಜಾವೀದ್ ಎಫ್. ಮುಶಾಪುರಿ ನೇತೃತ್ವದ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಎಸ್ಪಿ ಕೆ.ರಾಮರಾಜನ್ ತಿಳಿಸಿದರು‌.