ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲೇ ಮುಸ್ಲಿಂ ವಿದ್ಯಾರ್ಥಿನಿ ಕಿಡ್ನಾಪ್ ; ಹಿಂದು ಯುವಕನ ಲವ್, ಸಂಬಂಧಿಕರಿಂದಲೇ ಕೃತ್ಯ, ತನಿಖೆಗೆ ಕಮಿಷನರ್ ಸೂಚನೆ

20-11-26 02:32 pm       HK News Staffer   ಕರಾವಳಿ

ನಗರ ಹೊರವಲಯದ ದೇರಳಕಟ್ಟೆ ಬಳಿಯ ಕಣಚೂರು ಮೆಡಿಕಲ್ ಕಾಲೇಜಿನ ಆವರಣದಿಂದ ವಿದ್ಯಾರ್ಥಿನಿ ಒಬ್ಬಳನ್ನು ಬಲವಂತವಾಗಿ ಅಪಹರಿಸಿದ ಘಟನೆ ನಡೆದಿದ್ದು ಇದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ಮಂಗಳೂರು, ನ.20: ನಗರ ಹೊರವಲಯದ ದೇರಳಕಟ್ಟೆ ಬಳಿಯ ಕಣಚೂರು ಮೆಡಿಕಲ್ ಕಾಲೇಜಿನ ಆವರಣದಿಂದ ವಿದ್ಯಾರ್ಥಿನಿ ಒಬ್ಬಳನ್ನು ಬಲವಂತವಾಗಿ ಅಪಹರಿಸಿದ ಘಟನೆ ನಡೆದಿದ್ದು ಇದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. 

ಕಣಚೂರು ಮೆಡಿಕಲ್ ಕಾಲೇಜಿನ ಆವರಣದಲ್ಲಿ ಗುರುವಾರ ಸಂಜೆ ಘಟನೆ ನಡೆದಿದ್ದು ಅದೇ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸಂಬಂಧಿಕರೇ ಕಾರಿನಲ್ಲಿ ಬಲವಂತದಿಂದ ಎತ್ತಾಕಿ ಅಪಹರಿಸಿ ಒಯ್ದಿದ್ದಾರೆ ಎನ್ನಲಾಗಿದೆ. ಹಿಂದು ಯುವಕನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಅಪಹರಿಸಿದ್ದಾರೆಂಬ ಶಂಕೆಯಿದೆ. 

ಹಲವು ಯುವಕರು ಸೇರಿ ವಿದ್ಯಾರ್ಥಿನಿಯನ್ನು ಕಾಲೇಜು ಆವರಣದಿಂದಲೇ ಬಲವಂತವಾಗಿ ಕಾರಿನಲ್ಲಿ ತುಂಬಿಸಿ ಕರೆದೊಯ್ದಿದ್ದಾರೆ. ವಿದ್ಯಾರ್ಥಿನಿಯನ್ನು ಎಳೆದೊಯ್ದು ವಾಹನಕ್ಕೆ ಹತ್ತಿಸುವ ದೃಶ್ಯ ಸೆರೆಯಾಗಿದ್ದು ಯಾರೋ ಅದನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಪ್ರತಿಕ್ರಿಯಿಸಿದ್ದು ಯಾರೇ ಆದರೂ ಪ್ರಾಯ ಪ್ರಬುದ್ಧರಾದ ಬಳಿಕ ಅವರಿಚ್ಛೆಯಂತೆ ಮುಂದುವರಿಯಲು ಹಕ್ಕಿದೆ, ಆಕೆಯೂ ತನ್ನ ಇಚ್ಛೆಯಂತೆ ಮುಂದುವರಿಯಬಹುದು. ಇಚ್ಛೆಗೆ ವಿರುದ್ಧವಾಗಿ ಮನೆಯವರೇ ಆಗಲಿ ಕಿಡ್ನಾಪ್ ಮಾಡಿದ್ದರೆ ಅವರ ವಿರುದ್ಧ ಕೇಸು ದಾಖಲಿಸಿ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.


 
'ಯುವತಿಯನ್ನು ಆಕೆಯ ಕುಟುಂಬಸ್ಥರೇ ಬಲವಂತವಾಗಿ ಕರೆದೊಯ್ದಿರುವ ಆರೋಪವಿದೆ.‌ ಇದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಯುವತಿ ವಯಸ್ಕಳಾಗಿದ್ದು ತಾನು ಎಲ್ಲಿ, ಹೇಗೆ ವಾಸಿಸಬೇಕು ಎಂದು ನಿರ್ಧರಿಸುವ ಸಂಪೂರ್ಣ  ಹಕ್ಕು ಆಕೆಗಿದೆ. ಘಟನೆ ನಡೆದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರೆ ತಡೆಯಬಹುದಿತ್ತು. ಘಟನೆಗೆ ಸಂಬಂಧಿಸಿದಂತೆ  ಪ್ರಕರಣ ದಾಖಲಿಸಿ, ತನಿಖೆ ನಡೆಸಿ ಯುವತಿಯನ್ನು ಪತ್ತೆ ಹಚ್ಚಲಾಗುವುದು ಎಂದು ಸುಧೀರ್ ರೆಡ್ಡಿ ತಿಳಿಸಿದ್ದಾರೆ.