ಕೆಆರ್ ಐಡಿಎಲ್ ಕಮಿಷನ್‌ ಆರೋಪದಿಂದ ಮಾನಸಿಕ ಕಿರುಕುಳ, ನಿಯಮದಂತೆ ನಡೆದುಕೊಂಡಿದ್ದೇವೆ, ನಾವು ವೈಯಕ್ತಿಕ ಲಾಭ ಪಡೆದಿಲ್ಲ ; ಇಂಜಿನಿಯರುಗಳಿಂದ ಅಳಲು

04-09-26 04:44 pm       HK News Staffer   ಕರಾವಳಿ

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ತಮ್ಮ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್ ಐಡಿಎಲ್) ಕಾರ್ಯಪಾಲಕ ಎಂಜಿನಿಯರ್ ಎನ್. ವಿಜಯ್ ಮತ್ತು ಕಿರಿಯ ಎಂಜಿನಿಯರ್ ಪ್ರಜ್ವಲ್ ಆರ್. ನಿರಾಕರಿಸಿದ್ದು ತಮ್ಮನ್ನು ಬೇರೆಡೆಗೆ ವರ್ಗಾಯಿಸುವಂತೆ ಪತ್ರ ಬರೆದಿದ್ದಾರೆ.

ಮಂಗಳೂರು, ಸೆ.4: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ತಮ್ಮ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್ ಐಡಿಎಲ್) ಕಾರ್ಯಪಾಲಕ ಎಂಜಿನಿಯರ್ ಎನ್. ವಿಜಯ್ ಮತ್ತು ಕಿರಿಯ ಎಂಜಿನಿಯರ್ ಪ್ರಜ್ವಲ್ ಆರ್. ನಿರಾಕರಿಸಿದ್ದು ತಮ್ಮನ್ನು ಬೇರೆಡೆಗೆ ವರ್ಗಾಯಿಸುವಂತೆ ಪತ್ರ ಬರೆದಿದ್ದಾರೆ. 

ಶಾಸಕರ ಈ ಆರೋಪಗಳಿಂದ ತಮಗೂ ಹಾಗೂ ತಮ್ಮ ಕುಟುಂಬಕ್ಕೂ ತೀವ್ರ ಮಾನಸಿಕ ಆಘಾತವಾಗಿದೆ ಎಂದು ತಿಳಿಸಿರುವ ಇವರು, ತಮ್ಮನ್ನು ಬೇರೆಡೆಗೆ ವರ್ಗಾಯಿಸುವಂತೆ ಕೆಆರ್‌ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರತ್ಯೇಕ ಪತ್ರ ಬರೆದು ಮನವಿ ಮಾಡಿದ್ದಾರೆ. ಪ್ರಜ್ವಲ್ ಅವರು ಸೆ.1ರಂದು ಹಾಗೂ ವಿಜಯ್ ಅವರು ಸೆ. 2ರಂದು ಈ ಪತ್ರ ಬರೆದಿದ್ದು, ವಿಜಯ್ ಅವರು ತಮ್ಮನ್ನು ಮಂಗಳೂರು ವಿಭಾಗದಿಂದಲೇ ಬೇರೆಡೆಗೆ ವರ್ಗಾಯಿಸುವಂತೆ ಕೋರಿದ್ದಾರೆ. 

ಕೆಆರ್‌ಐಡಿಎಲ್‌ ಎಂಜಿನಿಯರ್‌ಗಳು ಗುತ್ತಿಗೆದಾರರಿಂದ ಮಾಸಿಕವಾಗಿ ಶೇ. 7ರಷ್ಟು ಹೆಚ್ಚುವರಿ ಕಮಿಷನ್ ಪಡೆದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಇಲಾಖಾ ಸಚಿವರಿಗೆ ನೀಡುತ್ತಿದ್ದಾರೆ ಎಂದು ಶಾಸಕ ಅಶೋಕ್ ರೈ ಆಗಸ್ಟ್ 25ರಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಪತ್ರದಲ್ಲಿ ಆರೋಪಿಸಿದ್ದರು. ಶಾಸಕರ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಎಂಜಿನಿಯರ್‌ಗಳು, “ಸಂಸ್ಥೆಯ ನಿಯಮಾವಳಿಯಂತೆ ಕಾಮಗಾರಿಯ ಅಂದಾಜು ವೆಚ್ಚದಲ್ಲಿ ಎಸ್‌ಆರ್ (SR) ದರಕ್ಕೆ ಶೇ. 3ರಷ್ಟು ಸೇವಾ ಶುಲ್ಕ ಸೇರಿಸಲಾಗುತ್ತದೆ. ಇದರಲ್ಲಿ ಕೆಪಿಡಬ್ಲ್ಯುಡಿ ಗುತ್ತಿಗೆದಾರರ ಶೇ. 10ರಷ್ಟು ಉಳಿತಾಯವೂ ಸೇರಿರುತ್ತದೆ. ಈ ಮೊತ್ತದಲ್ಲಿ ಶೇ. 7ರಷ್ಟನ್ನು ಕಡಿತಗೊಳಿಸಿ ‘ಜಾಬ್ ಸೇವಿಂಗ್ಸ್’ ರೂಪದಲ್ಲಿ ನಿಗಮದ ಅಧಿಕೃತ ಖಾತೆಗೆ ಜಮೆ ಮಾಡಲಾಗುತ್ತದೆ ಹೊರತು ಯಾವುದೇ ವೈಯಕ್ತಿಕ ಕಮಿಷನ್ ಪಡೆದಿಲ್ಲ” ಎಂದು ವಿವರಿಸಿದ್ದಾರೆ. 

ಅಲ್ಲದೆ, ಕೆಆರ್‌ಐಡಿಎಲ್‌ ನೇರವಾಗಿ ಕೂಲಿ ಕಾರ್ಮಿಕರು ಹಾಗೂ ಸಾಮಗ್ರಿ ಪೂರೈಸುವ ಗ್ರೂಪ್ ಲೀಡರ್‌ಗಳನ್ನು ಗುರುತಿಸಿ ಕಾಮಗಾರಿ ನಡೆಸುವುದರಿಂದ ಮಧ್ಯವರ್ತಿ ಗುತ್ತಿಗೆದಾರರ ಅಗತ್ಯವಿರುವುದಿಲ್ಲ. ಗುಣಮಟ್ಟ ಹಾಗೂ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದರೆ ಎಂಜಿನಿಯರ್‌ಗಳೇ ನೇರ ಹೊಣೆಯಾಗುತ್ತಾರೆ ಎಂದು ತಿಳಿಸಿದ್ದಾರೆ. ಪುತ್ತೂರು ಕ್ಷೇತ್ರದಲ್ಲಿ ಅನುಮೋದಿತ ಪಟ್ಟಿಯಂತೆಯೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ, ಕೆಲ ಗ್ರೂಪ್ ಲೀಡರ್‌ಗಳು ನೀಡಿದ ಸುಳ್ಳು ದೂರುಗಳನ್ನು ನಂಬಿ ಶಾಸಕರು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ, ನಿಗಮದ ವ್ಯವಸ್ಥಾಪಕ ನಿರ್ದೇಶಕರು ಖುದ್ದು ಸ್ಥಳಕ್ಕೆ ಆಗಮಿಸಿ ಕಾಮಗಾರಿಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ. ಮಾಧ್ಯಮಗಳಲ್ಲಿ ಬಂದ ಸುಳ್ಳು ವರದಿಗಳಿಂದ ತೀವ್ರ ಮಾನಸಿಕ ಖಿನ್ನತೆ ಉಂಟಾಗಿದ್ದು, ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.