ಹಿಂಡಲಗಾ ಜೈಲಿನ ಕೈದಿಯೊಂದಿಗೆ ಸರಸ-ಸಲ್ಲಾಪದ ವಿಡಿಯೋ ವೈರಲ್ ! ಪಿಎಸ್ಐ ಜಯಶ್ರೀ ಸಸ್ಪೆಂಡ್

03-09-26 05:21 pm       HK News Staffer   ಕ್ರೈಂ

ಇತ್ತೀಚೆಗೆ ಬೆಳಗಾವಿಯ ಹಿಂಡಲಗಾ ಜೈಲಿನ ಕೈದಿಯೊಂದಿಗೆ ಸರಸ-ಸಲ್ಲಾಪದ ವಿಡಿಯೋ ಮೂಲಕ ರಾಜ್ಯಾದ್ಯಂತ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ಪಿಎಸ್ ಐ ಜಯಶ್ರೀ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಬೆಂಗಳೂರು, ಸೆ.3: ಇತ್ತೀಚೆಗೆ ಬೆಳಗಾವಿಯ ಹಿಂಡಲಗಾ ಜೈಲಿನ ಕೈದಿಯೊಂದಿಗೆ ಸರಸ-ಸಲ್ಲಾಪದ ವಿಡಿಯೋ ಮೂಲಕ ರಾಜ್ಯಾದ್ಯಂತ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ಪಿಎಸ್ ಐ ಜಯಶ್ರೀ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಹಿಂಡಲಗಾ ಜೈಲಿನಲ್ಲಿದ್ದ ರೌಡಿಶೀಟರ್ ಜೊತೆಗೆ ಅಕ್ರಮ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜಯಶ್ರೀ ಅವರನ್ನು ಇಲಾಖಾ ವಿಚಾರಣೆ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಆಂತರಿಕ ಭದ್ರತಾ ವಿಭಾಗದ ಐಜಿಪಿ ಕೆ. ತ್ಯಾಗರಾಜನ್ ಅಮಾನತು ಆದೇಶ ಹೊರಡಿಸಿದ್ದಾರೆ

ತುಮಕೂರಿನ ಕುಣಿಗಲ್ ಮೂಲದ, ಬೆಳಗಾವಿ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಸಾಯಿಕುಮಾರ್ ಅಲಿಯಾಸ್ ಸುರೇಶ್ ಎಂಬಾತನೊಂದಿಗೆ ಪಿಎಸ್ಐ ಜಯಶ್ರೀ ಅವರು ವೀಡಿಯೋ ಕಾಲ್ ಹಾಗೂ ಅಕ್ರಮ ಸಂಪರ್ಕ ಹೊಂದಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಜೈಲಿನಲ್ಲಿದ್ದ ಕೈದಿಗೆ ಮೊಬೈಲ್ ಒದಗಿಸಿ, ಆತನೊಂದಿಗೆ ವೀಡಿಯೋ ಕಾಲ್ ಮೂಲಕ ಅಶ್ಲೀಲವಾಗಿ ವರ್ತಿಸಿರುವ ವೀಡಿಯೋಗಳು ಮತ್ತು ಆಡಿಯೋ ಕ್ಲಿಪ್‌ಗಳು ಇತ್ತೀಚೆಗೆ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಕೈದಿಯ ಬ್ಯಾಂಕ್ ಖಾತೆ ಹಾಗೂ ಆತನ ತಾಯಿಯ ಮೂಲಕ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ಮತ್ತು ಕೈದಿಗೆ ಸೇರಿದ ಸ್ಕೂಟರ್ ಹಾಗೂ ಸ್ವಿಫ್ಟ್ ಕಾರನ್ನು ಜಯಶ್ರೀ ತನ್ನ ಹೆಸರಿಗೆ ಮಾಡಿಸಿಕೊಂಡಿರುವ ಚಾಟ್‌ಗಳು ಪತ್ತೆಯಾಗಿದ್ದವು. ಸಚಿವ ಪ್ರಿಯಾಂಕ್ ಖರ್ಗೆ ಅವರ ಸೂಚನೆ ಮೇರೆಗೆ ಇಲಾಖೆಯಿಂದ ಆಂತರಿಕ ತನಿಖೆ ನಡೆಸಿದ್ದು ಮೇಲ್ನೋಟಕ್ಕೆ ಕರ್ತವ್ಯ ಲೋಪ, ಅಶಿಸ್ತು ಮತ್ತು ಅಧಿಕಾರ ದುರುಪಯೋಗ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತು ಕ್ರಮ ಕೈಗೊಳ್ಳಲಾಗಿದೆ.