ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏರ್ ಮಾರ್ಶಲ್ ಜಿತೇಂದ್ರ ಮಿಶ್ರಾ ನೇಮಕ ; ಆಪರೇಷನ್ ಸಿಂಧೂರ್ ಹೀರೋಗೆ ಒಲಿದ ಹುದ್ದೆ

02-09-26 08:31 pm       HK News Staffer   ದೇಶ - ವಿದೇಶ

ಅಯೋಧ್ಯೆ ರಾಮ ಮಂದಿರ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿ ನಿವೃತ್ತ ಏರ್​ ಮಾರ್ಷಲ್​ ಜಿತೇಂದ್ರ ಮಿಶ್ರಾ ಅವರನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ನೇಮಕ ಮಾಡಿದೆ. ಈ ಹುದ್ದೆಗಾಗಿ 5,585 ಅರ್ಜಿಗಳು ಬಂದಿದ್ದವು. ಅದರಲ್ಲಿ ಬೇರೆ ಬೇರೆ ಆದ್ಯತೆಗಳನ್ನು ಅನುಸರಿಸಿ ಅಭ್ಯರ್ಥಿಗಳ ಶಾರ್ಟ್​ಲಿಸ್ಟ್​ ಮಾಡಿದ ಟ್ರಸ್ಟ್​, ಇದೀಗ ಜಿತೇಂದ್ರ ಮಿಶ್ರಾ ಅವರನ್ನು ಸಿಇಒ ಹುದ್ದೆಗೆ ನೇಮಿಸಿದೆ.

ಲಕ್ನೋ, ಸೆ.2: ಅಯೋಧ್ಯೆ ರಾಮ ಮಂದಿರ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿ ನಿವೃತ್ತ ಏರ್​ ಮಾರ್ಷಲ್​ ಜಿತೇಂದ್ರ ಮಿಶ್ರಾ ಅವರನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ನೇಮಕ ಮಾಡಿದೆ. ಈ ಹುದ್ದೆಗಾಗಿ 5,585 ಅರ್ಜಿಗಳು ಬಂದಿದ್ದವು. ಅದರಲ್ಲಿ ಬೇರೆ ಬೇರೆ ಆದ್ಯತೆಗಳನ್ನು ಅನುಸರಿಸಿ ಅಭ್ಯರ್ಥಿಗಳ ಶಾರ್ಟ್​ಲಿಸ್ಟ್​ ಮಾಡಿದ ಟ್ರಸ್ಟ್​, ಇದೀಗ ಜಿತೇಂದ್ರ ಮಿಶ್ರಾ ಅವರನ್ನು ಸಿಇಒ ಹುದ್ದೆಗೆ ನೇಮಿಸಿದೆ.

ಅಯೋಧ್ಯೆ ದೇಣಿಗೆ ದುರುಪಯೋಗದ ಪ್ರಕರಣ ಹೊರಬಂದ ಬಳಿಕ ಪ್ರತ್ಯೇಕ ಸಿಇಒ ಹುದ್ದೆಯ ನೇಮಕ ವಿಚಾರ ಮುನ್ನೆಲೆಗೆ ಬಂದಿತ್ತು. ದೇಣಿಗೆ ಕಳವು ಪ್ರಕರಣದ ಹಿನ್ನೆಲೆಯಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚಂಪತ್​ ​ರಾಯ್​ ಮತ್ತು ಅವರ ಆಪ್ತರು ರಾಜೀನಾಮೆ ನೀಡಿದ್ದರು. ಪ್ರಕರಣ ಸಂಬಂಧ ಎಂಟು ಜನರನ್ನು ಉತ್ತರ ಪ್ರದೇಶ ಎಸ್ಐಟಿ ಪೊಲೀಸರು ಬಂಧಿಸಿದ್ದರು. 

ಟ್ರಸ್ಟ್‌ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ನೂತನ ಸಿಇಓ ನೇಮಕ ಅಂತಿಮಗೊಳಿಸಲಾಗಿದೆ. ಸಭೆಯಲ್ಲಿ ಟ್ರಸ್ಟ್ ಸದಸ್ಯರಾದ ಸ್ವಾಮಿ ಕಮಲನಯನ್ ದಾಸ್, ಹಂಗಾಮಿ ಪ್ರಧಾನ ಕಾರ್ಯದರ್ಶಿ ಡಾ. ಕೃಷ್ಣಮೋಹನ್, ಟ್ರಸ್ಟಿ ಮಹಾಂತ ದಿನೇಂದ್ರ ದಾಸ್ ಮತ್ತು ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ಸುಪ್ರೀಂ ಕೋರ್ಟ್​​ ನಿವೃತ್ತ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ವಿಷ್ಣುಕಾಂತ್ ಚತುರ್ವೇದಿ ಮತ್ತು ಪರಮಾಣು ವಿಜ್ಞಾನಿ ಸುರೇಶ್ ಹಾವ್ಡೆ ಅವರಿದ್ದ ಸಮಿತಿ ಸಿಇಒ ಆಯ್ಕೆಗೆ ಸಂಬಂಧಿಸಿ ಅಂತಿಮ ವರದಿ ನೀಡಿತ್ತು. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಎಐ ಆಧಾರಿತ ಪರಿಶೀಲನೆ ನಡೆಸಲಾಗಿತ್ತು. ಅರ್ಜಿಗಳನ್ನು ಪರಿಶೀಲಿಸಲು 600 ಅಂಕಗಳ ಚೌಕಟ್ಟನ್ನು ಬಳಸಲಾಗಿದ್ದು, ಆರಂಭಿಕ ಮೌಲ್ಯಮಾಪನದಲ್ಲಿ 3,577 ಅಭ್ಯರ್ಥಿಗಳು ಭಾಗವಹಿಸಿದ್ದರು. 470 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗಿತ್ತು. 108 ಅಭ್ಯರ್ಥಿಗಳನ್ನು ವರ್ಚುಯಲ್ ಸಂದರ್ಶನ ನಡೆಸಲಾಗಿತ್ತು. ಆಗಸ್ಟ್ 11 ಹಾಗೂ 12 ರಂದು 16 ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ಅಯೋಧ್ಯೆಯಲ್ಲೇ ಸಂದರ್ಶನ ನಡೆಸಲಾಗಿತ್ತು. 

ವಾಯುಪಡೆಯಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದ ಜಿತೇಂದ್ರ ಮಿಶ್ರಾ ಆಪರೇಶನ್ ಸಿಂಧೂರ್ ಸಂದರ್ಭದಲ್ಲಿ ವಾಯುಪಡೆಯ ವೆಸ್ಟರ್ನ್ ಕಮಾಂಡ್ ಚೀಫ್ ಆಗಿ ಕಾರ್ಯ ನಿರ್ವಹಿಸಿದ್ದರು.