ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರಳು ದಿಬ್ಬಕ್ಕೆ ಬಡಿದು ಎರಡು ಬೋಟ್ ಗಳ ಮುಳುಗಡೆ, 12 ಮಂದಿ ಮೀ‌ನುಗಾರರ ರಕ್ಷಣೆ

03-09-26 03:55 pm       HK News Staffer   ಕರಾವಳಿ

ನಗರದ ಅಳಿವೆ ಬಾಗಿಲಿನಲ್ಲಿ ಮರಳಿನ ದಿಬ್ಬಕ್ಕೆ ಬಡಿದು ಎರಡು ಮೀನುಗಾರಿಕಾ ಟ್ರಾಲ್ ಬೋಟ್‌ಗಳು ಮುಳುಗಡೆಯಾಗಿ, ಅವುಗಳಲ್ಲಿದ್ದ 12 ಮಂದಿ ಮೀನುಗಾರರು ಅಪಾಯಕ್ಕೆ ಸಿಲುಕಿದ ಘಟನೆ ನಡೆದಿದೆ.

ಮಂಗಳೂರು , ಸೆ.3: ನಗರದ ಅಳಿವೆ ಬಾಗಿಲಿನಲ್ಲಿ ಮರಳಿನ ದಿಬ್ಬಕ್ಕೆ ಬಡಿದು ಎರಡು ಮೀನುಗಾರಿಕಾ ಟ್ರಾಲ್ ಬೋಟ್‌ಗಳು ಮುಳುಗಡೆಯಾಗಿ, ಅವುಗಳಲ್ಲಿದ್ದ 12 ಮಂದಿ ಮೀನುಗಾರರು ಅಪಾಯಕ್ಕೆ ಸಿಲುಕಿದ ಘಟನೆ  ನಡೆದಿದೆ.

ಮರ್ಮೆಡ್ ಹಾಗೂ ಅನೀದ್ ಹೆಸರಿನ ಎರಡು ಟ್ರಾಲ್ ಬೋಟ್‌ಗಳು ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಮಂಗಳೂರಿನತ್ತ ವಾಪಸ್ ಬರುತ್ತಿದ್ದ ವೇಳೆ ಅಳಿವೆ ಬಾಗಿಲಿನಲ್ಲಿ ಮರಳಿನ ದಿಬ್ಬಕ್ಕೆ ಬಡಿದಿವೆ. ಮರಳಿನ ದಿಬ್ಬಕ್ಕೆ ಬಡಿದ ಪರಿಣಾಮ ಬೋಟ್‌ಗಳ ತಳಭಾಗ ಜಖಂಗೊಂಡಿದ್ದು, ಅದರ ಮೂಲಕ ನೀರು ಒಳನುಗ್ಗಿದೆ. ಕೆಲವೇ ಹೊತ್ತಿನಲ್ಲಿ ಬೋಟ್‌ಗಳಲ್ಲಿ ನೀರು ತುಂಬಿ ಮುಳುಗಡೆಯಾಗಿವೆ.

ಇತರ ಮೀನುಗಾರರಿಂದ 12 ಮಂದಿ ರಕ್ಷಣೆ ;

ಎರಡು ಬೋಟ್‌ಗಳಲ್ಲಿ ಒಟ್ಟು 12 ಮಂದಿ ಮೀನುಗಾರರು ಇದ್ದು, ಬೋಟ್‌ಗಳು ಮುಳುಗುತ್ತಿದ್ದಂತೆ ಅವರು ಅಪಾಯಕ್ಕೆ ಸಿಲುಕಿದ್ದರು. ಇದೇ ವೇಳೆ ಮೀನುಗಾರಿಕೆಯಿಂದ ವಾಪಸ್ ಬರುತ್ತಿದ್ದ ಇತರ ಬೋಟ್‌ಗಳಲ್ಲಿದ್ದ ಮೀನುಗಾರರು ತಕ್ಷಣ ನೆರವಿಗೆ ಧಾವಿಸಿ ಎಲ್ಲ 12 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ ಎರಡು ಟ್ರಾಲ್ ಬೋಟ್‌ಗಳು ಮುಳುಗಡೆಯಾಗಿರುವುದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಳಿವೆ ಬಾಗಿಲಿನಲ್ಲಿ ಹೂಳೆತ್ತುವ ಕಾರ್ಯ ಸಮರ್ಪಕವಾಗಿ ನಡೆಯದಿರುವುದೇ ಇಂತಹ ಘಟನೆಗಳಿಗೆ ಪ್ರಮುಖ ಕಾರಣವಾಗುತ್ತಿದೆ ಎಂಬ ಆತಂಕ ಮೀನುಗಾರರಲ್ಲಿ ವ್ಯಕ್ತವಾಗಿದೆ. ಕಳೆದ ಸುಮಾರು 30 ವರ್ಷಗಳಿಂದ ಅಳಿವೆ ಬಾಗಿಲಿನಲ್ಲಿ ಹೂಳೆತ್ತುವ ಕಾರ್ಯ ನಡೆದಿಲ್ಲ ಎನ್ನಲಾಗಿದ್ದು, ಪರಿಣಾಮವಾಗಿ ಇಲ್ಲಿ ಬೃಹತ್ ಪ್ರಮಾಣದ ಮರಳಿನ ದಿಬ್ಬಗಳು ನಿರ್ಮಾಣಗೊಂಡಿವೆ.

ಮೀನುಗಾರಿಕಾ ಬೋಟ್‌ಗಳು ಸಮುದ್ರಕ್ಕೆ ತೆರಳಲು ಹಾಗೂ ವಾಪಸ್ ಬರಲು ಬಳಸುವ ಪ್ರಮುಖ ಮಾರ್ಗದಲ್ಲೇ ಮರಳಿನ ದಿಬ್ಬಗಳು ನಿರ್ಮಾಣವಾಗಿರುವುದರಿಂದ ಅಳಿವೆ ಬಾಗಿಲು ಅಪಾಯಕಾರಿ ಮಾರ್ಗವಾಗಿ ಪರಿಣಮಿಸಿದೆ. ಪ್ರತಿ ಬಾರಿ ಮೀನುಗಾರಿಕೆ ಮುಗಿಸಿ ವಾಪಸ್ ಬರುವಾಗ ಬೋಟ್‌ಗಳು ಈ ಅಪಾಯಕಾರಿ ಮಾರ್ಗವನ್ನು ದಾಟಬೇಕಾಗಿದ್ದು, ಮರಳಿನ ದಿಬ್ಬಗಳಿಗೆ ಬಡಿದು ಬೋಟ್‌ಗಳು ಜಖಂಗೊಳ್ಳುವ ಘಟನೆಗಳು ನಡೆಯುತ್ತಿವೆ. ಹೀಗಾಗಿ ಅಳಿವೆ ಬಾಗಿಲಿನಲ್ಲಿ ಶಾಶ್ವತ ಪರಿಹಾರಕ್ಕಾಗಿ ತಕ್ಷಣ ಹೂಳೆತ್ತುವ ಕಾಮಗಾರಿ ಕೈಗೊಳ್ಳಬೇಕು ಎಂಬುದು ಮಂಗಳೂರಿನ ಮೀನುಗಾರರ ಆಗ್ರಹವಾಗಿದೆ.