NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲಿ ಪಾಲ್ಗೊಂಡಿದ್ದಾಗಿ ನಕಲಿ ಬಿಲ್ ಸೃಷ್ಟಿ ; ವಿಮಾನ, ರೈಲು, ಹೊಟೇಲ್ ಬುಕ್ಕಿಂಗ್ ಹೆಸರಲ್ಲಿ ಲಕ್ಷಾಂತರ ಪೀಕಿದ ಪ್ರೊಫೆಸರುಗಳು! ಎನ್ಐಟಿಕೆ ಪ್ರಾಧ್ಯಾಪಕರಿಬ್ಬರ ಆಟಾಟೋಪ ಬಯಲು

03-09-26 09:51 pm       HK News Staffer   ಕ್ರೈಂ

ಮಂಗಳೂರಿನ ಪ್ರತಿಷ್ಠಿತ ಸುರತ್ಕಲ್ ಎನ್ಐಟಿಕೆ ಇಂಜಿನಿಯರಿಂಗ್ ಕಾಲೇಜಿನ ಇಬ್ಬರು ಪ್ರೊಫೆಸರುಗಳು ದೇಶದ ವಿವಿಧ ಕಡೆಗಳಲ್ಲಿ ಎನ್ ಸಿಸಿ ಶಿಬಿರಗಳಿಗೆ ಹಾಜರಾಗಿದ್ದಾಗಿ ನಕಲಿ ಆರ್ಡರ್, ವಿಮಾನ, ರೈಲಿನ ಟಿಕೆಟ್ ಬುಕ್ಕಿಂಗ್ ತೋರಿಸಿ ಲಕ್ಷಾಂತರ ರೂಪಾಯಿ ಮೊತ್ತವನ್ನು ಸರ್ಕಾರದಿಂದ ಅಕ್ರಮವಾಗಿ ಪಡೆದಿರುವುದು ಬೆಳಕಿಗೆ ಬಂದಿದೆ.

ಮಂಗಳೂರು, ಸೆ.3: ಮಂಗಳೂರಿನ ಪ್ರತಿಷ್ಠಿತ ಸುರತ್ಕಲ್ ಎನ್ಐಟಿಕೆ ಇಂಜಿನಿಯರಿಂಗ್ ಕಾಲೇಜಿನ ಇಬ್ಬರು ಪ್ರೊಫೆಸರುಗಳು ದೇಶದ ವಿವಿಧ ಕಡೆಗಳಲ್ಲಿ ಎನ್ ಸಿಸಿ ಶಿಬಿರಗಳಿಗೆ ಹಾಜರಾಗಿದ್ದಾಗಿ ನಕಲಿ ಆರ್ಡರ್, ವಿಮಾನ, ರೈಲಿನ ಟಿಕೆಟ್ ಬುಕ್ಕಿಂಗ್ ತೋರಿಸಿ ಲಕ್ಷಾಂತರ ರೂಪಾಯಿ ಮೊತ್ತವನ್ನು ಸರ್ಕಾರದಿಂದ ಅಕ್ರಮವಾಗಿ ಪಡೆದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಎನ್ಐಟಿಕೆ ಡೈರೆಕ್ಟರ್ ಸುರತ್ಕಲ್ ಠಾಣೆಗೆ ದೂರು ನೀಡಿದ್ದು ಇಬ್ಬರು ಪ್ರಾಧ್ಯಾಪಕರಾದ ಡಾ.ಪಿ. ಸ್ಯಾಮ್ ಜಾನ್ಸನ್ ಮತ್ತು ಡಾ.ಎಚ್. ಶಿವಾನಂದ ನಾಯಕ್ ವಿರುದ್ಧ ಎಫ್ಐಆರ್ ದಾಖಲಾಗಿದೆ. 

ಆರೋಪಿಗಳಿಬ್ಬರು ಎನ್ಐಟಿಕೆ ಕಾಲೇಜಿನಲ್ಲಿ 2 Kar Engr Coy NCC ಘಟಕದಲ್ಲಿ ಅಧಿಕಾರಿಗಳಾಗಿದ್ದು 2023ರ ಮೇ 05 ರಿಂದ 2026ರ ಮೇ 16ರ ಅವಧಿಯಲ್ಲಿ ದೇಶದ ವಿವಿಧೆಡೆ NCC ಶಿಬಿರಗಳು/ಕರ್ತವ್ಯಗಳಿಗೆ ಹಾಜರಾಗಿರುವುದಾಗಿ ತೋರಿಸಲು ನಕಲಿ ಹಾಗೂ ಕೃತಕ Detailment Orders, Attendance Certificates ಮತ್ತು ಇತರೆ ದಾಖಲೆಗಳನ್ನು ಸಲ್ಲಿಸಿ, ಅವುಗಳ ಆಧಾರದ ಮೇಲೆ ಸಂಸ್ಥೆಯಿಂದ TA/DA, ವಸತಿ ಹಾಗೂ ಪ್ರಯಾಣ ವೆಚ್ಚಗಳ ಮರುಪಾವತಿಯನ್ನು ಪಡೆದು ಸಂಸ್ಥೆಗೆ ವಂಚಿಸಿದ್ದಾರೆ. 

ಡಾ. ಪಿ. ಸ್ಯಾಮ್ ಜಾನ್ಸನ್ ಅವರು OTA Chennai ಹಾಗೂ 1 Karnataka Signal Regiment NCC, Bengaluru ಇಲ್ಲಿ ನಡೆದಿವೆ ಎಂದು ತೋರಿಸಿರುವ ಹಲವು ಶಿಬಿರಗಳು ಮತ್ತು ಕರ್ತವ್ಯಗಳಿಗೆ ಸಂಬಂಧಿಸಿದಂತೆ ಕೃತಕ ದಾಖಲೆಗಳನ್ನು ಸಲ್ಲಿಸಿ, ಒಟ್ಟು 12,32,862 ಲಕ್ಷ ರೂ. ಮರುಪಾವತಿ ಪಡೆದಿರುತ್ತಾರೆ. ಇದಕ್ಕೆ ಸಂಬಂಧಿತ ರೈಲು/ವಿಮಾನ ಟಿಕೆಟ್ಗಳು ಮತ್ತು ಹೋಟೆಲ್ ಬುಕ್ಕಿಂಗ್ ಗಳನ್ನು ಪರಿಶೀಲಿಸಿದಾಗ ಕೆಲವು ಪ್ರಯಾಣ/ವಸತಿ ಬುಕ್ಕಿಂಗ್ ರದ್ದಾಗಿರುವುದು ಹಾಗೂ ಮರುಪಾವತಿ ಪಡೆದಿರುವುದು ಕಂಡುಬಂದಿದೆ. ಇದೇ ರೀತಿಯಾಗಿ, 28, ಜೂನ್ 2025 ರಿಂದ 07 ಜೂನ್ 2025ರ ವರೆಗೆ ಬೆಂಗಳೂರಿನಲ್ಲಿ ನಡೆದಿತ್ತೆಂದು ತೋರಿಸಲಾದ Pre-Thal Sainik Camp-IIಗೆ ಸಂಬಂಧಿಸಿದಂತೆ ಇಬ್ಬರೂ ಆಪಾದಿತರು ಒಂದೇ ಕೃತಕ Detailment Order ಹಾಗೂ Attendance Certificate ಆಧರಿಸಿ ತಲಾ ₹1,18,593 TA/DA ಮತ್ತು ವಸತಿ ವೆಚ್ಚವನ್ನು ಪಡೆದಿರುತ್ತಾರೆ. 

ಅಲ್ಲದೆ, ಆರೋಪಿತರಿಬ್ಬರು ಪರಸ್ಪರ ಸಹಕಾರ ಮತ್ತು ಸಂಚಿನ ಮೂಲಕ NITKಗೆ ಸೇರಿದ, Ministry of Education ಹಾಗೂ Board of Governors ಅನುಮೋದಿತ OH-31 General Head ಅಡಿಯಲ್ಲಿ NCC ಚಟುವಟಿಕೆಗಳಿಗೆ ಮೀಸಲಾದ ನಿಧಿಯನ್ನು ತಪ್ಪು ದಾಖಲೆಗಳ ಮೂಲಕ ಹಣ ಪಡೆದು ದುರುಪಯೋಗ ಪಡಿಸಿಕೊಂಡಿರುತ್ತಾರೆ. ಆರೋಪಿತರ ಪೈಕಿ ಡಾ.ಪಿ. ಸ್ಯಾಮ್ ಜಾನ್ಸನ್ ರೂ. 12,32,862 ಹಾಗೂ ಡಾ.ಎಚ್.ಶಿವಾನಂದ ನಾಯಕ್ ಅವರು ರೂ. 1,18,593 ಹೀಗೆ ಒಟ್ಟು ರೂ 13,51,455 ಮೊತ್ತವನ್ನು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸರಕಾರಿ ವಿದ್ಯಾಸಂಸ್ಥೆಗೆ ವಂಚನೆಯ ಮೂಲಕ ನಷ್ಟ ಉಂಟು ಮಾಡಿರುತ್ತಾರೆ ಎಂದು ಎನ್ಐಟಿಕೆ ಡೈರೆಕ್ಟರ್ ರವಿ ಅವರು ಸೆ.2ರಂದು ದೂರು ನೀಡಿದ್ದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರೋಪಿಗಳು NITK ಕಾಲೇಜಿನ ಖಾಯಂ ಪ್ರೊಫೆಸರ್ ಗಳಾಗಿದ್ದು ಲಕ್ಷಕ್ಕೂ ಹೆಚ್ಚು ವೇತನ ಇದ್ದರೂ, ಇನ್ನಷ್ಟು ಸರ್ಕಾರಿ ದುಡ್ಡನ್ನು ಕಬಳಿಸುವ ಉದ್ದೇಶದಿಂದ ಎನ್ ಸಿಸಿ ಕ್ಯಾಂಪ್ ಗಳಲ್ಲಿ ಪಾಲ್ಗೊಂಡಿದ್ದಾಗಿ ತೋರಿಸಿ 13.51 ಲಕ್ಷ ರೂ. ಪಡೆದು ಸರ್ಕಾರಕ್ಕೆ ವಂಚನೆ ಎಸಗಿದ್ದಾರೆ. ಕೃತ್ಯದ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು ಇನ್ನೂ ಬಂಧನ ಮಾಡಿಲ್ಲ ಎಂದು ತಿಳಿದುಬಂದಿದೆ. ‌