Manish Karkada, MRPL: ಎಂಆರ್ ಪಿಎಲ್ ಅಗ್ನಿ ಅವಘಡ ; ಮೃತ ಮನೀಶ್ ಕರ್ಕಡ ಕುಟುಂಬಕ್ಕೆ 1.20 ಕೋಟಿ ಪರಿಹಾರ, ಕಾರ್ಮಿಕರ ಪ್ರತಿಭಟನೆ ಬೆನ್ನಲ್ಲೇ ಆದೇಶ ಪತ್ರ

01-10-26 06:19 pm       HK News Staffer   ಕರಾವಳಿ

ಎಂಆರ್ ಪಿಎಲ್ ಸ್ಥಾವರದಲ್ಲಿ ಸ್ಫೋಟ ಮತ್ತು ಅಗ್ನಿ ಅನಾಹುತದಲ್ಲಿ ದುರಂತ ಸಾವಿಗೀಡಾದ ಹಳೆಯಂಗಡಿ ನಿವಾಸಿ, ಗುತ್ತಿಗೆ ನೌಕರನಾಗಿದ್ದ ಮನೀಶ್ ಕರ್ಕಡ ಕುಟುಂಬಕ್ಕೆ 1.20 ಕೋಟಿ ರೂಪಾಯಿ ಪರಿಹಾರ ಮೊತ್ತ ನೀಡಲು ಒಪ್ಪಿಗೆ ನೀಡಿದೆ. ಈ ಬಗ್ಗೆ ಸಂಸ್ಥೆಯ ಎಂಡಿ ಶ್ಯಾಮಪ್ರಸಾದ್ ಕಾಮತ್ ಅಧಿಕೃತ ಆದೇಶ ಪತ್ರ ಬಿಡುಗಡೆ ಮಾಡಿದ್ದಾರೆ.

ಮಂಗಳೂರು, ಅ.1: ಎಂಆರ್ ಪಿಎಲ್ ಸ್ಥಾವರದಲ್ಲಿ ಸ್ಫೋಟ ಮತ್ತು ಅಗ್ನಿ ಅನಾಹುತದಲ್ಲಿ ದುರಂತ ಸಾವಿಗೀಡಾದ ಹಳೆಯಂಗಡಿ ನಿವಾಸಿ, ಗುತ್ತಿಗೆ ನೌಕರನಾಗಿದ್ದ ಮನೀಶ್ ಕರ್ಕಡ ಕುಟುಂಬಕ್ಕೆ 1.20 ಕೋಟಿ ರೂಪಾಯಿ ಪರಿಹಾರ ಮೊತ್ತ ನೀಡಲು ಒಪ್ಪಿಗೆ ನೀಡಿದೆ. ಈ ಬಗ್ಗೆ ಸಂಸ್ಥೆಯ ಎಂಡಿ ಶ್ಯಾಮಪ್ರಸಾದ್ ಕಾಮತ್ ಅಧಿಕೃತ ಆದೇಶ ಪತ್ರ ಬಿಡುಗಡೆ ಮಾಡಿದ್ದಾರೆ.

ಸ್ಫೋಟ ಘಟನೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯೇ ವಿವಿಧ ಕಾರ್ಮಿಕ ಸಂಘಟನೆಗಳು ಮತ್ತು ಎಂಆರ್ ಪಿಎಲ್ ಸಂಸ್ಥೆಯ ಗುತ್ತಿಗೆ ಕಾರ್ಮಿಕರು ಸೇರಿ ಕಚೇರಿ ಗೇಟ್ ಮುಂದೆ ಪ್ರತಿಭಟನಾ ಧರಣಿ ನಡೆಸಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಅಧಿಕಾರಿಗಳು ಹಾಗು ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ತುರ್ತು ಸಭೆ ನಡೆಸಿದರು.

ಸಭೆಯಲ್ಲಿ ಒಂದು ಕೋಟಿ ಪರಿಹಾರ ಧನ ನೀಡುವುದು, ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ವೇತನ ಸಹಿತ ನೀಡುವುದು, ಸಂಸ್ಥೆಯಲ್ಲಿ ದುಡಿಯುತ್ತಿರುವ ಎಲ್ಲ ಕಾರ್ಮಿಕರಿಗೆ ಮೆಡಿಕಲ್ ವಿಮಾ ಸೌಲಭ್ಯವನ್ನು ನೀಡುವ ಬಗ್ಗೆ ನಿರ್ಧರಿಸಲಾಯಿತು. ಸಭೆಯಲ್ಲಿ ಎಂಆರ್ ಪಿಎಲ್ ಸಂಸ್ಥೆಯ ಎಚ್ಆರ್ ವಿಭಾಗದ ಜಿಜಿಎಂ ಪ್ರಶಾಂತ ಪದುವಾಳ್, ಜಿಎಂ ಮನೋಜ್ ಕುಮಾರ್, ಎಂಆರ್ ಪಿಎಲ್ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ಶರತ್ ಜೋಗಿ, ಉಪಾಧ್ಯಕ್ಷ ಸತೀಶ್ ಮಂಗಳಪೇಟೆ, ಪ್ರಥಾನ ಕಾರ್ಯದರ್ಶಿ ಸಾಯಿ ಪೃಥ್ವಿ, ಕರ್ಮಚಾರಿ ಸಂಘದ ಅಧ್ಯಕ್ಷ ಪ್ರಸಾದ್ ಅಂಚನ್, ಉಪಾಧ್ಯಕ್ಷ ಸುರೇಶ್ ಪುಸ್ರಾಲ್, ಸುರೇಂದ್ರ ಭಟ್ ಮತ್ತಿತರರು ಇದ್ದರು.

ಸಭೆಯ ಬೆನ್ನಲ್ಲೇ 90 ಲಕ್ಷ ಪರಿಹಾರ, 10 ಲಕ್ಷ ಜಿಟಿಎಲ್ಐ, 20 ಲಕ್ಷ ಡಬ್ಲ್ಯುಸಿಪಿ ಸೇರಿ ಒಟ್ಟು 1.20 ಕೋಟಿ ಪರಿಹಾರದ ಮೊತ್ತ ನೀಡುವುದಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ಯಾಮಪ್ರಸಾದ್ ಕಾಮತ್ ಪತ್ರ ಬಿಡುಗಡೆ ಮಾಡಿದ್ದಾರೆ.