ಡ್ರಗ್ಸ್ ಕಳ್ಳಸಾಗಣೆ ಆರೋಪ, ಸೌದಿಯಲ್ಲಿ ಕೇರಳದ ಯುವಕನಿಗೆ ಮರಣದಂಡನೆ ಜಾರಿ ! ಒಮಾನ್ ವ್ಯಕ್ತಿ ಕಳಿಸಿಕೊಟ್ಟಿದ್ದ ಪಾರ್ಸೆಲ್ ತನಗೆ ತಿಳಿದಿರಲಿಲ್ಲ ಎಂದು ಗೋಗರೆದರೂ ಕರಗದ ಕೋರ್ಟ್

29-09-26 08:11 pm       HK News Staffer   ದೇಶ - ವಿದೇಶ

ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಕೇರಳದ ಕಣ್ಣೂರು ಮೂಲದ 41 ವರ್ಷದ ಅಬೂಟಿ ವಲ್ಲಿಯಿಲ್ ಎಂಬವರನ್ನು ಮಾದಕವಸ್ತು ಪತ್ತೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಪಡಿಸಲಾಗಿದೆ. ಎರಡು ವರ್ಷಗಳ ಹಿಂದೆ ಮರಣದಂಡನೆ ಶಿಕ್ಷೆ ಘೋಷಿಸಲ್ಪಟ್ಟಿದ್ದು ಇದೇ ಸೆ.27ರಂದು ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ ಎಂದು ಗಲ್ಫ್ ಮಾಧ್ಯಮಗಳು ವರದಿ ಮಾಡಿವೆ. ಡ್ರಗ್ಸ್ ಪ್ರಕರಣದಲ್ಲಿ ಭಾರತೀಯ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಿರುವುದು ಅಪರೂಪದ ಪ್ರಕರಣವಾಗಿದೆ.

ರಿಯಾದ್/ಕಣ್ಣೂರು, ಸೆ.29: ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಕೇರಳದ ಕಣ್ಣೂರು ಮೂಲದ 41 ವರ್ಷದ ಅಬೂಟಿ ವಲ್ಲಿಯಿಲ್ ಎಂಬವರನ್ನು ಮಾದಕವಸ್ತು ಪತ್ತೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಪಡಿಸಲಾಗಿದೆ. ಎರಡು ವರ್ಷಗಳ ಹಿಂದೆ ಮರಣದಂಡನೆ ಶಿಕ್ಷೆ ಘೋಷಿಸಲ್ಪಟ್ಟಿದ್ದು ಇದೇ ಸೆ.27ರಂದು ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ ಎಂದು ಗಲ್ಫ್ ಮಾಧ್ಯಮಗಳು ವರದಿ ಮಾಡಿವೆ. ಡ್ರಗ್ಸ್ ಪ್ರಕರಣದಲ್ಲಿ ಭಾರತೀಯ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಿರುವುದು ಅಪರೂಪದ ಪ್ರಕರಣವಾಗಿದೆ. 

2023ರ ಡಿಸೆಂಬರ್ 2ರಂದು ಅಬೂಟಿ ಸೌದಿಯಿಂದ ಭಾರತಕ್ಕೆ ಮರಳಬೇಕಿತ್ತು. ರಾತ್ರಿ 11.45ಕ್ಕೆ ರಿಯಾದ್‌ನಿಂದ ಏರ್ ಇಂಡಿಯಾ ವಿಮಾನ ಹತ್ತಿ, ಮರುದಿನ ಬೆಳಗ್ಗೆ 7 ಗಂಟೆಗೆ ಕೇರಳದ ಕರಿಪುರ ವಿಮಾನ ನಿಲ್ದಾಣ ತಲುಪುವುದಾಗಿ ಕುಟುಂಬಕ್ಕೆ ಸಂದೇಶ ಕಳುಹಿಸಿದ್ದರು. ಆದರೆ, ಕರಿಪುರ ವಿಮಾನ ನಿಲ್ದಾಣದಲ್ಲಿ ಕುಟುಂಬಸ್ಥರು ಕಾಯುತ್ತಿದ್ದರೂ ಅಬೂಟಿ ಕಾಣಿಸಿಕೊಳ್ಳಲಿಲ್ಲ. ಕುಟುಂಬದ ಆತಂಕದ ಹಿನ್ನೆಲೆಯಲ್ಲಿ ರಿಯಾದ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಹಾಗೂ ಇತರ ಸ್ನೇಹಿತರು ಹುಡುಕಾಟ ನಡೆಸಿದರು. ವಿಮಾನ ದಾಖಲೆ ಪರಿಶೀಲಿಸಿದಾಗ ಅಬೂಟಿ ವಿಮಾನವನ್ನೇ ಹತ್ತಿರಲಿಲ್ಲ ಎಂಬುದು ತಿಳಿದುಬಂದಿತ್ತು. 

ಜೈಲಿನಲ್ಲಿ ಪತ್ತೆಯಾದ ಅಬೂಟಿ

ರಾಯಭಾರ ಕಚೇರಿ ಪ್ರತಿನಿಧಿಗಳು ಅಲ್-ಅಹ್ಸಾ ಜೈಲಿಗೆ ಭೇಟಿ ನೀಡಿದಾಗ, ಅಲ್ಲಿ ಬಂಧಿತರಾಗಿದ್ದ ಅಬೂಟಿ ಪತ್ತೆಯಾಗಿದ್ದರು. ಸ್ನೇಹಿತನೊಬ್ಬ ಓಮನ್‌ನಿಂದ ಸೌದಿ ಅರೇಬಿಯಾಕ್ಕೆ ಲ್ಯಾಂಡ್ ಕ್ರೂಸರ್ ವಾಹನವನ್ನು ಚಲಾಯಿಸಿಕೊಂಡು ಹೋಗುವಂತೆ ಕೇಳಿಕೊಂಡಿದ್ದ. ವಾಹನವನ್ನು ಸೌದಿಯಲ್ಲಿರುವ ಸ್ನೇಹಿತನಿಗೆ ತಲುಪಿಸಿ, ಅಲ್ಲಿಂದ ರಿಯಾದ್ ವಿಮಾನ ನಿಲ್ದಾಣಕ್ಕೆ ತೆರಳಿ ಭಾರತಕ್ಕೆ ಮರಳುವುದು ಅಬೂಟಿ ಯೋಜನೆಯಾಗಿತ್ತು.

ಇಂಧನ ಟ್ಯಾಂಕ್‌ನಲ್ಲಿತ್ತು 43 ಕೆಜಿ ಮೆಥಾಂಫೆಟಮೈನ್ 

ಓಮನ್- ಸೌದಿ ಗಡಿ ಪ್ರದೇಶದಲ್ಲಿ ಸೌದಿ ಮಾದಕವಸ್ತು ಜಾರಿ ಅಧಿಕಾರಿಗಳು ವಾಹನವನ್ನು ತಪಾಸಣೆ ನಡೆಸಿದಾಗ ಡ್ರಗ್ಸ್ ಪತ್ತೆಯಾಗಿತ್ತು. ವಾಹನದ ಎರಡು ಇಂಧನ ಟ್ಯಾಂಕ್‌ಗಳ ಪೈಕಿ ಒಂದರಲ್ಲಿ ಸುಮಾರು 43 ಕೆಜಿ ಮೆಥಾಂಫೆಟಮೈನ್, ಸ್ಥಳೀಯ ಭಾಷೆಯಲ್ಲಿ ‘ಶಾಬು’ ಎಂದೂ ಕರೆಯಲ್ಪಡುವ ಮಾದಕವಸ್ತು ಅಡಗಿಸಿಟ್ಟಿದ್ದು ಪತ್ತೆಯಾಗಿತ್ತು. ಆದರೆ ಕಾರಿನಲ್ಲಿ ಡ್ರಗ್ಸ್ ಇರುವ ಬಗ್ಗೆ ತನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಅಬೂಟಿ ಹೇಳಿಕೊಂಡಿದ್ದರು. ತಾನು ಸಂಪೂರ್ಣ ನಿರಪರಾಧಿ ಎಂದು ವಾದಿಸಿದರೂ ಪ್ರಕರಣದಲ್ಲಿ ಗಲ್ಫ್ ಕಾನೂನು ಕುಣಿಕೆಯಿಂದ ಪಾರಾಗಲು ಸಾಧ್ಯವಾಗಲಿಲ್ಲ.

25 ವರ್ಷ ಜೈಲು ಶಿಕ್ಷೆಯಿಂದ ಮರಣದಂಡನೆ ವರೆಗೆ.. 

ಅಲ್-ಅಹ್ಸಾ ವಿಚಾರಣಾ ನ್ಯಾಯಾಲಯ ಆರಂಭದಲ್ಲಿ ಅಬೂಟಿಗೆ 25 ವರ್ಷಗಳ ಜೈಲು ಶಿಕ್ಷೆ ಹಾಗೂ 10 ಲಕ್ಷ ಸೌದಿ ರಿಯಾಲ್ (ಅಂದಾಜು ₹2.2 ಕೋಟಿ) ದಂಡ ವಿಧಿಸಿತ್ತು. ಆದರೆ, ಪಬ್ಲಿಕ್ ಪ್ರಾಸಿಕ್ಯೂಷನ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ಮತ್ತಷ್ಟು ಕಠಿಣ ಶಿಕ್ಷೆಗೆ ಆಗ್ರಹಿಸಿದ್ದರಿಂದ ಮೇಲ್ಮನವಿ ನ್ಯಾಯಾಲಯವು ಅಬೂಟಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಕುಟುಂಬಸ್ಥರ ಮನವಿಯ ಹೊರತಾಗಿಯೂ ಶಿಕ್ಷೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. 

ಅಬೂಟಿ ತಲಶ್ಳೇರಿಯ ಪೆರಿಯಂಗಾಡಿ ನಿವಾಸಿಯಾಗಿದ್ದು ಬೇರೆಯವರು ಕಳಿಸಿಕೊಟ್ಟಿದ್ದ ಕಾರನ್ನು ತಂದಿದ್ದೆ. ಅದರಲ್ಲಿದ್ದ ಪಾರ್ಸೆಲ್ ಬಗ್ಗೆ ತಿಳಿದಿರಲಿಲ್ಲ ಎಂದು ಗೋಗರೆದರೂ, ಅಲ್ಲಿನ ಕೋರ್ಟ್ ಅದನ್ನು ಮಾನ್ಯ ಮಾಡಿರಲಿಲ್ಲ. ನಾರ್ಕೋಟಿಕ್ ಡ್ರಗ್ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಶಿಕ್ಷೆ ವಿಧಿಸಿದ್ದು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದರೂ ಶಿಕ್ಷೆ ಸಡಿಲಿಸಲು ನ್ಯಾಯಾಲಯ ನಿರಾಕರಿಸಿದೆ. ಭಾನುವಾರ ದಮ್ಮಾಮ್ ಜೈಲು ಆವರಣದಲ್ಲಿ ಮರಣದಂಡನೆ ಶಿಕ್ಷೆ ಜಾರಿಗೊಳಿಸಲಾಗಿದೆ. ಡ್ರಗ್ಸ್ ಪತ್ತೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಜಾರಿಗೊಳಿಸಿದ್ದು ಭಾರತೀಯ ವಲಸಿಗರನ್ನು ತೀವ್ರ ಆತಂಕಕ್ಕೆ ದೂಡಿದೆ. ಮೃತದೇಹವನ್ನು ಕಳಿಸಿಕೊಡುವುದಕ್ಕೂ ಸೌದಿ ಅರೇಬಿಯಾ ನಿರಾಕರಣೆ ಮಾಡಿದೆ. ಅಬೂಟಿ ಅವರಿಗೆ ಇಬ್ಬರು ಸಣ್ಣ ಮಕ್ಕಳು, ಪತ್ನಿ, ಮೂವರು ಸೋದರಿಯರು ಇದ್ದಾರೆ.

Saudi Arabia has carried out the death sentence against Abooty Valliyil, 41, a native of Peringadi in Mahe near Kannur, in a drug trafficking case involving approximately 43 kg of methamphetamine. The execution was carried out in Dammam on September 27, according to Saudi Arabia’s Interior Ministry.