Mangalore Police News: ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿಗೆ ದೇಹದಾರ್ಢ್ಯ ಪರೀಕ್ಷೆ ; ಎಐನಲ್ಲಿ ನಕಲಿ ಹಾಲ್ ಟಿಕೇಟ್ ತಯಾರಿಸಿ ಬಂದಿದ್ದ ಕಡಬದ ಯುವಕ ಅರೆಸ್ಟ್, ಬರ್ಕೆ ಠಾಣೆಯಲ್ಲಿ ಎಫ್ಐಆರ್

01-10-26 11:10 am       HK News Staffer   ಕ್ರೈಂ

ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿಗಾಗಿ ನಗರದ ಮಂಗಳಾ ಸ್ಟೇಡಿಯಂನಲ್ಲಿ ಸಹಿಷ್ಣುತೆ ಮತ್ತು ದೇಹದಾರ್ಢ್ಯ ಪರೀಕ್ಷೆ ಸೆ.28ರಂದು ನಡೆಸಲಾಗಿದ್ದು, ಈ ವೇಳೆ ಕಡಬ ಮೂಲದ ವ್ಯಕ್ತಿಯೊಬ್ಬ ನಕಲಿ ಆನ್ಸೈನ್ ಟಿಕೆಟ್ ತೋರಿಸಿ ವಂಚಿಸಲು ಯತ್ನಿಸಿದ ಘಟನೆ ನಡೆದಿದೆ.

Photo credits : AI PHOTO

ಮಂಗಳೂರು, ಅ.1: ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿಗಾಗಿ ನಗರದ ಮಂಗಳಾ ಸ್ಟೇಡಿಯಂನಲ್ಲಿ ಸಹಿಷ್ಣುತೆ ಮತ್ತು ದೇಹದಾರ್ಢ್ಯ ಪರೀಕ್ಷೆ ಸೆ.28ರಂದು ನಡೆಸಲಾಗಿದ್ದು, ಈ ವೇಳೆ ಕಡಬ ಮೂಲದ ವ್ಯಕ್ತಿಯೊಬ್ಬ ನಕಲಿ ಆನ್ಸೈನ್ ಟಿಕೆಟ್ ತೋರಿಸಿ ವಂಚಿಸಲು ಯತ್ನಿಸಿದ ಘಟನೆ ನಡೆದಿದೆ.

ಪ್ರಕರಣ ಸಂಬಂಧಿಸಿ ಮಂಗಳೂರಿನ ಬರ್ಕೆ ಠಾಣೆಯಲ್ಲಿ ಎಸ್ಪಿ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಪ್ರಕಾಶ್ ರುದ್ರಪ್ಪ ಹೂವಿನ ಅವರು ನೀಡಿದ ದೂರಿನಂತೆ ಎಫ್ಐಆರ್ ದಾಖಲಾಗಿದ್ದು, ಆರೋಪಿ ಕಡಬ ತಾಲೂಕಿನ ಕೋಡಿಂಬಾಳ ಬೆದ್ರಾಜೆ ನಿವಾಸಿ ಯಜ್ಞೇಶ್ ಬಿ.ಜೆ. ರೈ(23) ಎಂಬ ಯುವಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ದೇಹದಾರ್ಢ್ಯ ಪರೀಕ್ಷೆ ಸಂದರ್ಭದಲ್ಲಿ ಯಜ್ಞೇಶ್ ತನ್ನ ಮೊಬೈಲಿನಲ್ಲಿದ್ದ ಹಾಲ್ ಟಿಕೆಟ್ ತೋರಿಸಿದ್ದು, ಅದನ್ನು ಅಲ್ಲಿದ್ದ ಸಿಬಂದಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ತಂತ್ರಾಂಶದಲ್ಲಿ ಪರಿಶೀಲಿಸಿದಾಗ ಕಂಡುಬಂದಿರಲಿಲ್ಲ. ಸದರಿ ವ್ಯಕ್ತಿಯ ಹೆಸರಾಗಲೀ, ಕ್ರಮ ಸಂಖ್ಯೆಯಾಗಲೀ ಇರದೇ ಇರುವುದರಿಂದ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಿರಲಿಲ್ಲ. ಆರೋಪಿ ಯುವಕ ತೋರಿಸಿದ್ದ ಹಾಲ್ ಟಿಕೆಟ್ ನಕಲಿ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಸ್ಥಳೀಯ ಬರ್ಕೆ ಠಾಣೆಗೆ ದೂರು ನೀಡಲಾಗಿತ್ತು.

ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಆರೋಪಿತ ವ್ಯಕ್ತಿ ಲಿಖಿತ ಪರೀಕ್ಷೆಗೆ ಹಾಜರಾಗಿರಲಿಲ್ಲ ಮತ್ತು ಇನ್ನೊಬ್ಬ ವ್ಯಕ್ತಿಯ ಹಾಲ್ ಟಿಕೇಟ್ ಪಡೆದು ಅದನ್ನು ಎಐ ಮೂಲಕ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದು ಪತ್ತೆಯಾಗಿದೆ. ಲಿಖಿತ ಪರೀಕ್ಷೆ ಮುಗಿಸಿದ್ದು ತನಗೂ ಹಾಲ್ ಟಿಕೇಟ್ ಬಂದಿದೆ ಎಂದು ದೇಹದಾರ್ಢ್ಯ ಪರೀಕ್ಷೆಗಾಗಿ ಬಂದಿದ್ದ ವೇಳೆ ಯುವಕ ಸಿಬಂದಿಗೆ ತಿಳಿಸಿದ್ದ. ಆದರೆ ಆತನ ಮೊಬೈಲ್ ತಪಾಸಣೆ ಸಂದರ್ಭದಲ್ಲಿ ನಕಲಿ ಹಾಲ್ ಟಿಕೇಟ್ ತಯಾರಿಸಿದ್ದು ಪತ್ತೆಯಾಗಿದ್ದು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾಗಿ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

A 23-year-old man from Kadaba was arrested for allegedly attempting to appear for the physical fitness and endurance tests for police constable recruitment using a fake hall ticket at Mangaluru’s Mangala Stadium.