ಅನುದಾನ ಮಂಜೂರು ವಿಚಾರದಲ್ಲಿ ಮೊಂಡಾಟ! ಕೋಟೆಕಾರು ಪ.ಪಂ‌ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆಗೆ ಆಡಳಿತ ಪಕ್ಷ ಸದಸ್ಯರಿಂದಲೇ ಆಕ್ಷೇಪ, ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ 15 ಲಕ್ಷ ಪೋಲು! ಮುಖ್ಯಾಧಿಕಾರಿ ವಿರುದ್ಧ ತನಿಖೆಗೆ ಆಗ್ರಹ

30-09-26 09:44 pm       HK News Staffer   ಕರಾವಳಿ

ಪಕ್ಕದ ವಾರ್ಡಿನ ಸರಕಾರಿ ಶಾಲೆಯ ಅಭಿವೃದ್ಧಿಗಾಗಿ ಇಟ್ಟ ಅನುದಾನವನ್ನ ಮಂಜೂರುಗೊಳಿಸಲು ಮೊಂಡಾಟ ಮೆರೆದ ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯಾ ಶೆಟ್ಟಿ ವಿರುದ್ಧ ಆಡಳಿತ ಬಿಜೆಪಿ ಪಕ್ಷದ ಸದಸ್ಯರೇ ಕೆರಳಿ ಕೆಂಡವಾದ ಘಟನೆ ಕೋಟೆಕಾರು ಪ.ಪಂ‌ ನಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಉಳ್ಳಾಲ, ಸೆ.30: ಪಕ್ಕದ ವಾರ್ಡಿನ ಸರಕಾರಿ ಶಾಲೆಯ ಅಭಿವೃದ್ಧಿಗಾಗಿ ಇಟ್ಟ ಅನುದಾನವನ್ನ ಮಂಜೂರುಗೊಳಿಸಲು ಮೊಂಡಾಟ ಮೆರೆದ ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯಾ ಶೆಟ್ಟಿ ವಿರುದ್ಧ ಆಡಳಿತ ಬಿಜೆಪಿ ಪಕ್ಷದ ಸದಸ್ಯರೇ ಕೆರಳಿ ಕೆಂಡವಾದ ಘಟನೆ ಕೋಟೆಕಾರು ಪ.ಪಂ‌ ನಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಕೋಟೆಕಾರು ಪಟ್ಟಣದ ನಾಲ್ಕನೇ ವಾರ್ಡ್ ಸದಸ್ಯರಾದ ಕಿರಣ್ ಮಾತನಾಡಿ ತನ್ನ ವಾರ್ಡಿಗೆ ಮೀಸಲಿಟ್ಟ 5 ಲಕ್ಷ ರೂ. ಅನುದಾನವನ್ನು ಪಕ್ಕದ ಮೂರನೇ ವಾರ್ಡಿನ ಮಾಡೂರು ಸರಕಾರಿ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ನೀಡುವ ನಿರ್ಣಯಕ್ಕೆ ತನ್ನದೇ ವಾರ್ಡ್ ನ ಹದಿನೈದು ಜ‌ನರು ಆಕ್ಷೇಪ ವ್ಯಕ್ತಪಡಿಸಿರುವ ನೆಪವೊಡ್ಡಿ ಪಂಚಾಯತ್ ಅಧ್ಯಕ್ಷರು ಅನುದಾನವನ್ನ ತಡೆ ಹಿಡಿದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ಪಂಚಾಯತ್ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆಯಾಗಿದೆಯೆಂದರು. ಈ ವೇಳೆ ಉತ್ತರಿಸಿದ ಅಧ್ಯಕ್ಷೆ ದಿವ್ಯಾ ಅವರು ಅನುದಾನ ಬೇರೆ ವಾರ್ಡ್ ಗೆ ನೀಡುವ ನಿರ್ಣಯವನ್ನು ಆಕ್ಷೇಪಿಸಿದ ವಾರ್ಡ್ ನಿವಾಸಿಗಳನ್ನ ಕರೆಸಿ ಮಾತುಕತೆ ನಡೆಸುವ ನಿರ್ಣಯವನ್ನು ಕಳೆದ ಸಾಮಾನ್ಯ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು. ಆದರೆ ಮಾತುಕತೆ ನಡೆಸಲು ನಿಮ್ಮ‌ನ್ನ ಕರೆಯೋಣವೆಂದರೆ ನೀವು ನಮ್ಮ ಕರೆಯನ್ನೇ ಸ್ವೀಕರಿಸಿಲ್ಲವೆಂದರು. ಈಗ ಸಭೆಯಲ್ಲಿ ಮಾಡೂರು ಶಾಲೆ ಅಂತ ಹೇಳಿ ಗೊಂದಲ ಸೃಷ್ಟಿಸುತ್ತಿದ್ದೀರಿಯೆಂದರು.

ಅಧ್ಯಕ್ಷರಿಗೆ ತಿರುಗೇಟು ನೀಡಿದ ಬಿಜೆಪಿಯಿಂದ ಉಚ್ಚಾಟಿತಗೊಂಡ ಸದಸ್ಯ ಸುಜಿತ್ ಅವರು ಎಲ್ಲಾ ಗೊಂದಲಗಳಿಗೆ ನಿಮ್ಮ‌ ಈಗೋ ಕಾರಣ. ಶಾಲೆಗೆ ಅನುದಾನ ನೀಡಲು ಮೊದಲಿಗೆ ಆಕ್ಷೇಪ ವ್ಯಕ್ತಪಡಿಸಿದ ಮಂದಿ ಬಳಿಕ ಮಾಧ್ಯಮಗಳಲ್ಲಿ ಸರಕಾರಿ ಶಾಲೆಯ ಅಭಿವೃದ್ಧಿ ವಿಚಾರದಲ್ಲಿ ತಮ್ಮ ತಕರಾರು ಇಲ್ಲವೆಂದು ಹೇಳಿದ್ದಾರೆ. ಮಾಡೂರು ಶಾಲೆಗೆ ನಿಮ್ಮ‌ನ್ನ ಕರೆಸಿ ಶಾಲು ಹಾಕಿ ಸನ್ಮಾನ ಮಾಡಿದ್ದರೆ ನಿಮಗೆ ಬಹಳ ಖುಷಿ ಆಗುತ್ತಿತ್ತೆಂದರು. ಈ ವೇಳೆ ಅಧ್ಯಕ್ಷರು ಹಾಗೂ ಸುಜಿತ್ ಮಾಡೂರು ನಡುವೆ ವೈಯಕ್ತಿಕ ವಾಕ್ಸಮರ ನಡೆಯಿತು. ಸದಸ್ಯ ಕಿರಣ್ ಅವರು ನಮ್ಮ‌ ಕರೆ ಸ್ವೀಕರಿಸುವುದಿಲ್ಲ. ಆದರೆ ಬಳ್ಳಾರಿ ಚಲೋ ಯಾತ್ರೆಯಲ್ಲಿ ಭಾಗವಹಿಸುತ್ತಾರೆಂದು ಆಡಳಿತ ಪಕ್ಷದ ಉದಯ ಕುಮಾರ್ ಶೆಟ್ಟಿ ಧ್ವನಿಯೆತ್ತಿದಾಗ ಕೆರಳಿದ ಕಿರಣ್ ಅವರು ಉದಯ್ ವಿರುದ್ಧ ಹೌಹಾರಿದರು. ಬಳ್ಳಾರಿಗೆ ತೆರಳಿದ್ದು ನಮ್ಮ ಬಿಜೆಪಿ ಪಕ್ಷದ ಕಾರ್ಯಕ್ರಮಕ್ಕೆ ಅದಕ್ಕೆ ನಿಮಗೇನೆಂದು ಪ್ರಶ್ನಿಸಿದರು. 

ಆಡಳಿತ ಪಕ್ಷ ಸದಸ್ಯರೊಳಗಿನ ವಾಕ್ಸಮರವು ತಾರಕಕ್ಕೇರಿದಾಗ ಮಧ್ಯ ಪ್ರವೇಶಿಸಿದ ವಿಪಕ್ಷ ಹಿರಿಯ ನಾಯಕ ಅಹ್ಮದ್ ಬಾವ ಅವರು ಅಧ್ಯಕ್ಷರುನ್ನುದ್ದೇಶಿಸಿ ಮಾತನಾಡಿ ನೀವು ಹೊರಗಿನವರ ನಿರ್ದೇಶನ ಕೇಳಬೇಡಿ. ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚಿಸಿ ಕಿರಣ್ ಅವರಿಗೆ ಅನುದಾನ ಕೊಟ್ಟು ಇಲ್ಲೇ ಸಮಸ್ಯೆ ಬಗೆಹರಿಸುವಂತೆ‌ ಬುದ್ಧಿ ಮಾತು ಹೇಳಿದರು. ಪಟ್ಟು ಬಿಡದ ಅಧ್ಯಕ್ಷೆ ದಿವ್ಯ ಅವರು ಹಾಗಾದರೆ ಕಿರಣ್ ಅವರ ವಾರ್ಡಿಗೆ ಪಂಚಾಯತ್ ನಿಂದ ನಾನು ಐದು ಲಕ್ಷ ಅನುದಾನ ಇಡುವುದಾಗಿ ಹೇಳಿದರು. ಇದಕ್ಕೆ‌ ಆಕ್ಷೇಪ ವ್ಯಕ್ತಪಡಿಸಿದ ಸುಜಿತ್ ಅವರು ಪಂಚಾಯತ್ ಅನುದಾನವಲ್ಲ, ನಿಮ್ಮ ಅನುದಾನವನ್ನ ಇಡಿ. ಶಾಲೆಗೆ ಅನುದಾನ ಕೊಟ್ಟಾಗ ನಿಮಗೆ ಕಿರಣ್ ಅವರು ಪ್ರತಿನಿಧಿಸುವ ನಾಲ್ಕನೇ ವಾರ್ಡ್ ಮೇಲೆ‌ ಪ್ರೀತಿ ಉಕ್ಕಿ ಬಂತೇ ಎಂದು ಪ್ರಶ್ನಿಸಿದರು. 

ಮಧ್ಯಾಹ್ನದ ಬಳಿಕವೂ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶಕ್ಕೆ ಮಣಿದ ಅಧ್ಯಕ್ಷೆ ದಿವ್ಯಾ ಅವರು ತಮ್ಮ ಪಟ್ಟು ಸಡಿಲಿಸಿ ನಾಲ್ಕನೇ ವಾರ್ಡ್ ಸದಸ್ಯ ಕಿರಣ್ ಅವರು ಪಕ್ಕದ ವಾರ್ಡಿನ ಮಾಡೂರು ಶಾಲೆಗೆ 5 ಲಕ್ಷ ಅನುದಾನ ನೀಡಲು ತೆಗೆದಿರುವ ನಿರ್ಣಯವನ್ನ ಸ್ಥಿರೀಕರಣಗೊಳಿಸಿರುವುದಾಗಿ ತಿಳಿದು ಬಂದಿದೆ.
 
ಇಂದಿರಾ ಕ್ಯಾಂಟೀನ್ಗೆ 15 ಲಕ್ಷ ಪೋಲು ! 

ಕೋಟೆಕಾರಿನ ಹೆದ್ದಾರಿ ಅಂಚಿನಲ್ಲಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟಿನ್ಗೆ ತಡೆಗೋಡೆ ಮತ್ತು ಶೌಚಾಲಯ ನಿರ್ಮಾಣಕ್ಕೆ ಕೋಟೆಕಾರು ಪಟ್ಟಣ ಪಂಚಾಯತ್ ಹದಿನೈದು ಲಕ್ಷ ಅನುದಾನ ಕೊಟ್ಟಿದೆ. ಇದೀಗ ಸರ್ವಿಸ್ ರಸ್ತೆ ನಿರ್ಮಾಣಕ್ಕಾಗಿ ಕ್ಯಾಂಟಿನನ್ನು ತೆರವು ಮಾಡಲಾಗುತ್ತಿದ್ದು, ಸಮರ್ಪಕ ದಾಖಲೆ ಪರಿಶೀಲನೆ ನಡೆಸದೆ ಸಾರ್ವಜನಿಕರ ತೆರಿಗೆಯ 15 ಲಕ್ಷ ರೂ. ಹಣ ಪೋಲಾಗಲು ಕಾರಣರಾದ ಪಂಚಾಯತ್ ಮುಖ್ಯಾಧಿಕಾರಿ ವಿರುದ್ಧ ಲೋಕಾಯುಕ್ತ ತನಿಖೆಗೆ ನಿರ್ಣಯ ಕೈಗೊಳ್ಳಬೇಕೆಂದು ಸದಸ್ಯರಾದ ಸುಜಿತ್ ಮಾಡೂರು ಆಗ್ರಹಿಸಿದರು. 

ಕ್ಯಾಂಟೀನ್ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ ಎನ್ ಓಸಿ ನೀಡಿತ್ತೇ, ಕ್ಯಾಂಟೀನ್ಗೆ ಆವರಣ ಗೋಡೆ, ಶೌಚಾಲಯ ನಿರ್ಮಿಸಲು ಪ್ರಾಧಿಕಾರವು ಪಟ್ಟಣ ಪಂಚಾಯತ್ಗೆ ಲಿಖಿತ ಮನವಿ ನೀಡಿತ್ತೇ ಎಂಬುದರ ಬಗ್ಗೆ ಮುಖ್ಯಾಧಿಕಾರಿಗಳು ನಮಗೆ ದಾಖಲೆ ನೀಡಿ. ಸುಖಾಸುಮ್ಮನೆ‌ ಪೋಲಾದ 15 ಲಕ್ಷ ರೂಪಾಯಿಗಳನ್ನ ಮುಖ್ಯಾಧಿಕಾರಿಗಳೆ ಭರಿಸಬೇಕು. ಮಾತೆತ್ತಿದರೆ ಮುಖ್ಯಾಧಿಕಾರಿಗಳು ನನಗೆ 23 ವರ್ಷ ಸರ್ವಿಸ್ ಅಂತ ಕಾನೂನು ಮಾತನಾಡುತ್ತೀರಿ. ನಿಮ್ಮ ಸ್ವಂತ ಹಣವಾದರೆ ಈ ರೀತಿ ಪೋಲು ಮಾಡುತ್ತಿದ್ರಾ ಎಂದು ಸುಜಿತ್ ಮುಖ್ಯಾಧಿಕಾರಿ ಮಾಲಿನಿಯವರನ್ನ ಪ್ರಶ್ನಿಸಿದರು.

A heated confrontation erupted among ruling BJP members during the general meeting of Kotekar Town Panchayat on Wednesday over the release of ₹5 lakh earmarked for the development of a government school in an adjoining ward.