ನಟ ದುನಿಯಾ ವಿಜಯ್ - ನಾಗರತ್ನ ದಾಂಪತ್ಯ ಬದುಕಿಗೆ ಅಂತ್ಯ ; ಎರಡು ಕೋಟಿ ಜೀವನಾಂಶ ನೀಡಲು ಹೈಕೋರ್ಟ್ ಆದೇಶ

03-09-26 02:44 pm       HK News Staffer   ಸಿನಿಮಾ

ದುನಿಯಾ ವಿಜಯ್ - ನಾಗರತ್ನ ದಾಂಪತ್ಯ ಬದುಕಿಗೆ ಅಧಿಕೃತ ಅಂತ್ಯ ಬಿದ್ದಿದೆ. ಹೈಕೋರ್ಟ್‌ ವಿಭಾಗೀಯ ಪೀಠವು ದಂಪತಿಗೆ ವಿಚ್ಛೇದನ ಮಂಜೂರು ಮಾಡಿದ್ದು ಪತ್ನಿ ಮಕ್ಕಳಿಗೆ ದೊಡ್ಡ ಮೊತ್ತದ ಜೀವನಾಂಶ ನೀಡುವುದಕ್ಕೂ ಆದೇಶ ಮಾಡಿದೆ.

ಬೆಂಗಳೂರು, ಸೆ.3: ದುನಿಯಾ ವಿಜಯ್ - ನಾಗರತ್ನ ದಾಂಪತ್ಯ ಬದುಕಿಗೆ ಅಧಿಕೃತ ಅಂತ್ಯ ಬಿದ್ದಿದೆ. ಹೈಕೋರ್ಟ್‌ ವಿಭಾಗೀಯ ಪೀಠವು ದಂಪತಿಗೆ ವಿಚ್ಛೇದನ ಮಂಜೂರು ಮಾಡಿದ್ದು ಪತ್ನಿ ಮಕ್ಕಳಿಗೆ ದೊಡ್ಡ ಮೊತ್ತದ ಜೀವನಾಂಶ ನೀಡುವುದಕ್ಕೂ ಆದೇಶ ಮಾಡಿದೆ. 

ನ್ಯಾಯಮೂರ್ತಿ ಡಿಕೆ ಸಿಂಗ್, ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರಿದ್ಧ ಪೀಠ ವಿಚ್ಛೇದನ ಆದೇಶ ನೀಡಿದ್ದು ಒಂದೇ ಬಾರಿಗೆ ಎರಡು ಕೋಟಿ ರೂಪಾಯಿ ಜೀವನಾಂಶ ನೀಡಲು ಆದೇಶಿಸಿದೆ. ವಿಜಯ್ ಹಾಗೂ ನಾಗರತ್ನ ದಂಪತಿಗೆ ಮೊನಿಷಾ, ಮೋನಿಕಾ ಹಾಗೂ ಸಾಮ್ರಾಟ್‌ ಎಂಬ ಮೂವರು ಮಕ್ಕಳಿದ್ದಾರೆ. ಪತ್ನಿ ಹಾಗೂ ಮೂವರು ಮಕ್ಕಳ ಜೀವನದ ಪ್ರಶ್ನೆ ಇರುವುದರಿಂದ ಮತ್ತು ಮೂವರೂ ಮಕ್ಕಳು ಅವಿವಾಹಿತರಾಗಿರುವುದರಿಂದ, ದುನಿಯಾ ವಿಜಯ್ ಸ್ಥಾನಮಾನ ಮತ್ತು ಹಣಕಾಸಿನ ಸ್ಥಿತಿ ಪರಿಗಣಿಸಿ ನಾಗರತ್ನಗೆ 2 ಕೋಟಿ ರೂಪಾಯಿ ಖಾಯಂ ಜೀವನಾಂಶ (ಏಕಮೊತ್ತದ ಇಡುಗಂಟು) ನೀಡುವಂತೆ ಹೈಕೋರ್ಟ್ ಆದೇಶಿಸಿದೆ. 

2013 ರಲ್ಲಿ ದುನಿಯಾ ವಿಜಯ್ - ನಾಗರತ್ನ ದಾಂಪತ್ಯದಲ್ಲಿ ಬಿರುಕು ಎದುರಾಗಿ ಕೋರ್ಟ್‌ ಮೆಟ್ಟಿಲೇರಿತ್ತು. 2014ರಲ್ಲಿ ಸಂಧಾನ ಯಶಸ್ವಿಯಾಗಿ ಇಬ್ಬರೂ ಸಹಬಾಳ್ವೆಗೆ ಮುಂದಾಗಿದ್ದರು. ಆದರೆ, ಕೆಲವು ವರ್ಷಗಳ ಬಳಿಕ ಮತ್ತೆ ಕಾನೂನು ಹೋರಾಟ ಶುರುವಾಗಿತ್ತು. ಇದೀಗ ಹೈಕೋರ್ಟ್‌ನಲ್ಲಿ ಇಬ್ಬರಿಗೂ ವಿಚ್ಛೇದನ ಭಾಗ್ಯ ಲಭಿಸಿದೆ. 

ಮೊದಲ ಪತ್ನಿಗೆ ವಿಚ್ಛೇದನ ನೀಡುವ ಮುನ್ನವೇ ದುನಿಯಾ ವಿಜಯ್ ಎರಡನೇ ಮದುವೆಯಾಗಿದ್ದಾರೆ ಎಂಬ ವದಂತಿ 2016ರಲ್ಲಿ ಕೇಳಿಬಂದಿತ್ತು. ಅದರ ಬಳಿಕ ಇವರ ನಡುವಿನ ಮನಸ್ತಾಪ ಇನ್ನಷ್ಟು ಜೋರಾಗಿತ್ತು. ತಮಗೆ ಹಾಗೂ ತಮ್ಮ ಪೋಷಕರಿಗೆ ನಾಗರತ್ನ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ದುನಿಯಾ ವಿಜಯ್ 2018ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಕೌಟುಂಬಿಕ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದರೂ, ನಾಗರತ್ನ ವಿರುದ್ಧ ಮಾಡಿದ್ದ ಆರೋಪಗಳನ್ನ ಸಾಬೀತು ಪಡಿಸುವಲ್ಲಿ ವಿಜಯ್ ವಿಫಲರಾಗಿದ್ದರು. 

ನನಗೆ ವಿಚ್ಛೇದನ ಬೇಡ, ಪತಿಯೊಂದಿಗೆ ಬಾಳುತ್ತೇನೆ’’ ಎಂದು ಕೋರ್ಟ್‌ನಲ್ಲಿ ನಾಗರತ್ನ ವಾದಿಸಿದ್ದರು. ಆದರೆ, ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ದುನಿಯಾ ವಿಜಯ್ ಹೈಕೋರ್ಟ್ ಮೊರೆ ಹೋಗಿದ್ದರು. ವಿಚ್ಛೇದನ ನೀಡುವಂತೆ ಹೈಕೋರ್ಟ್‌ಗೆ ದುನಿಯಾ ವಿಜಯ್ ಮೇಲ್ಮನವಿ ಸಲ್ಲಿಸಿದ್ದರು.