ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅಲ್ಲ, ಶಿಕ್ಷಣ ಸಂಸ್ಥೆಗಳ ಸಮವಸ್ತ್ರ ನಿಯಮವನ್ನು ಬದಲಿಸುವ ಹಕ್ಕು ವಿದ್ಯಾರ್ಥಿಗಳಿಗಿಲ್ಲ ! ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

26-08-26 02:05 pm       HK News Staffer   ದೇಶ - ವಿದೇಶ

ಶಾಲೆಯಲ್ಲಿ ನಿಗದಿತ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ನೀಡಬೇಕೆಂದು ಕೋರಿ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಅಲಹಾಬಾದ್ ಹೈಕೋರ್ಟ್, ''ಇಸ್ಲಾಂ ಧರ್ಮದಲ್ಲಿ ಹಿಜಾಬ್ ಧರಿಸುವುದು ಧಾರ್ಮಿಕ ಆಚರಣೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಪೂರಕ ಆಧಾರಗಳಿಲ್ಲ ಎಂದು ಸ್ಪಷ್ಟಪಡಿಸಿದೆ.

ಲಕ್ನೋ, ಆ.26: ಶಾಲೆಯಲ್ಲಿ ನಿಗದಿತ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ನೀಡಬೇಕೆಂದು ಕೋರಿ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಅಲಹಾಬಾದ್ ಹೈಕೋರ್ಟ್, ''ಇಸ್ಲಾಂ ಧರ್ಮದಲ್ಲಿ ಹಿಜಾಬ್ ಧರಿಸುವುದು ಧಾರ್ಮಿಕ ಆಚರಣೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಪೂರಕ ಆಧಾರಗಳಿಲ್ಲ ಎಂದು ಸ್ಪಷ್ಟಪಡಿಸಿದೆ. 

ಪ್ರಯಾಗ್‌ ರಾಜ್‌ನ 'ಟ್ಯಾಗೋರ್ ಪಬ್ಲಿಕ್ ಸ್ಕೂಲ್ 'ನಲ್ಲಿ 6ನೇ ತರಗತಿಯಿಂದ 10ನೇ ತರಗತಿ ವರೆಗೆ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿನಿ 11ನೇ ತರಗತಿಯ ಪ್ರವೇಶಾತಿ ಸಂದರ್ಭದಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಕೋರಿದ್ದಳು. ಇದಕ್ಕೆ ಶಾಲಾ ಆಡಳಿತ ಮಂಡಳಿ ಒಪ್ಪದ ಕಾರಣ ವಿದ್ಯಾರ್ಥಿನಿಯು ತಾಯಿ ಮೂಲಕ ಹೈಕೋರ್ಟ್ ಮೊರೆ ಹೋಗಿದ್ದಳು. 

ಶಾಲೆ ಸಮವಸ್ತ್ರದ ಜತೆಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಶಾಲಾ ಆಡಳಿತ ಮಂಡಳಿಗೆ ನಿರ್ದೇಶನ ನೀಡುವಂತೆ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಜೆ.ಜೆ. ಮುನೀರ್ ಹಾಗೂ ಇಂದ್ರಜಿತ್ ಶುಕ್ಲಾ ಅವರಿದ್ದ ನ್ಯಾಯಪೀಠವು, 'ಶಿಕ್ಷಣ ಸಂಸ್ಥೆಗಳು ನಿಗದಿಪಡಿಸಿದ ಸಮವಸ್ತ್ರ ನಿಯಮಗಳನ್ನು ತಮ್ಮ ವೈಯಕ್ತಿಕ ಇಚ್ಛೆಗೆ ತಕ್ಕಂತೆ ಬದಲಾಯಿಸುವ ಹಕ್ಕು ಯಾವ ವಿದ್ಯಾರ್ಥಿಗಳಿಗೂ ಇಲ್ಲ' ಎಂದು ಹೇಳಿದೆ.

'ಹಿಜಾಬ್ ಧರಿಸುವುದನ್ನು ಸಂವಿಧಾನದ ವಿಧಿ 25ರ ಅಡಿಯಲ್ಲಿ ರಕ್ಷಿಸಲ್ಪಟ್ಟ ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠವು, "ಈ ಸಮಸ್ಯೆ ಎಲ್ಲೆಲ್ಲಿ ತಲೆದೋರಿದೆಯೋ ಅಲ್ಲೆಲ್ಲಾ ಹೈಕೋರ್ಟ್ ಗಳು ಒಮ್ಮತದ ಅಭಿಪ್ರಾಯವನ್ನೇ ವ್ಯಕ್ತಪಡಿಸಿವೆ. ಮುಸ್ಲಿಂ ಮಹಿಳೆ ಹಿಜಾಬ್ ಧರಿಸದಿದ್ದರೆ ಧಾರ್ಮಿಕ ನಂಬಿಕೆಯೇ ಅಪಾಯಕ್ಕೆ ಸಿಲುಕುತ್ತದೆ ಎನ್ನುವಷ್ಟರ ಮಟ್ಟಿಗೆ ಅದು ಇಸ್ಲಾಂನ ಅನಿವಾರ್ಯ ಭಾಗವೇನೂ ಅಲ್ಲ" ಎಂದು ಹೇಳಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರದ ನಿಯಮದ ಅಗತ್ಯದ ಪ್ರಾಮುಖ್ಯತೆಯನ್ನೂ ಕೋರ್ಟ್ ಇದೇ ವೇಳೆ ಎತ್ತಿಹಿಡಿದಿದೆ. ದೇಶದ ಹಲವು ಕಡೆಗಳಲ್ಲಿ ಹಿಜಾಬ್ ಬಗ್ಗೆ ವಿವಾದ ಎದ್ದಿರುವ ನಡುವೆಯೇ ಅಲಹಾಬಾದ್ ಹೈಕೋರ್ಟ್, ಹಿಜಾಬ್ ಇಸ್ಲಾಂ ಧರ್ಮದ ಅನಿವಾರ್ಯ ಭಾಗ ಅಲ್ಲ ಎಂದು ಹೇಳಿರುವುದು ಮಹತ್ವದ್ದಾಗಿದೆ.