1990ರ ಕಾಶ್ಮೀರಿ ಪಂಡಿತರ ನರಮೇಧ ; ನರ್ಸ್ ಸರಳಾ ಭಟ್ ಅಮಾನುಷ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು, ಜೆಕೆಎಲ್ಎಫ್ ಉಗ್ರ ಯಾಸಿನ್ ಮಲಿಕ್ ಸಂಚುಕೋರ! 737 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

30-06-26 08:06 pm       HK News Staffer   ದೇಶ - ವಿದೇಶ

1990ರ ದಶಕದಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದಿದ್ದ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ದೇಶದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದು. ಹಿಂದುಗಳನ್ನು ಗುರಿಯಾಗಿಸಿ ನಡೆಸಿದ್ದ ಸರಣಿ ದಾಳಿ ಮತ್ತು ಹತ್ಯೆಗಳಿಂದಾಗಿ ಸಾವಿರಾರು ಪಂಡಿತ ಕುಟುಂಬಗಳು ಕಣಿವೆ ತೊರೆಯಬೇಕಾದ ಪರಿಸ್ಥಿತಿ ಬಂದಿತ್ತು. ಆ ಭೀಕರ ಘಟನೆಗಳಲ್ಲಿ ಒಂದಾಗಿದ್ದ 27 ವರ್ಷದ ನರ್ಸ್ ಸರಳಾ ಭಟ್ ಅಪಹರಣ, ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಇದೀಗ 36 ವರ್ಷಗಳ ಬಳಿಕ ಮಹತ್ವದ ತಿರುವು ಸಿಕ್ಕಿದೆ.

ಶ್ರೀನಗರ, ಜೂನ್ 30 : 1990ರ ದಶಕದಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದಿದ್ದ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ದೇಶದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದು. ಹಿಂದುಗಳನ್ನು ಗುರಿಯಾಗಿಸಿ ನಡೆಸಿದ್ದ ಸರಣಿ ದಾಳಿ ಮತ್ತು ಹತ್ಯೆಗಳಿಂದಾಗಿ ಸಾವಿರಾರು ಪಂಡಿತ ಕುಟುಂಬಗಳು ಕಣಿವೆ ತೊರೆಯಬೇಕಾದ ಪರಿಸ್ಥಿತಿ ಬಂದಿತ್ತು. ಆ ಭೀಕರ ಘಟನೆಗಳಲ್ಲಿ ಒಂದಾಗಿದ್ದ 27 ವರ್ಷದ ನರ್ಸ್ ಸರಳಾ ಭಟ್ ಅಪಹರಣ, ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಇದೀಗ 36 ವರ್ಷಗಳ ಬಳಿಕ ಮಹತ್ವದ ತಿರುವು ಸಿಕ್ಕಿದೆ. 

ಜಮ್ಮುಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ (SIA) ಪ್ರಕರಣದ ಮರು ತನಿಖೆ ಪೂರ್ಣಗೊಳಿಸಿದ್ದು ಶ್ರೀನಗರದ ಟಾಡಾ ವಿಶೇಷ ನ್ಯಾಯಾಲಯಕ್ಕೆ 737 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ. ಚಾರ್ಜ್‌ಶೀಟ್‌ನಲ್ಲಿ ಸದ್ಯ ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಜೆಕೆಎಲ್ಎಫ್ ನಾಯಕ ಯಾಸಿನ್ ಮಲಿಕ್ ಅವರನ್ನು ಪ್ರಕರಣದ ಪ್ರಮುಖ ಸಂಚುಕೋರ ಎಂದು ಉಲ್ಲೇಖಿಸಲಾಗಿದ್ದು, ಒಟ್ಟು ಐವರು ಆರೋಪಿಗಳ ವಿರುದ್ಧ ಆರೋಪ ದಾಖಲಿಸಲಾಗಿದೆ.

ಏನಿದು ಅಮಾನುಷ ಹತ್ಯೆ ಪ್ರಕರಣ?

1989-90ರ ಅವಧಿಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಉಗ್ರರ ಚಟುವಟಿಕೆಗಳು ತೀವ್ರಗೊಂಡಿದ್ದವು. ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಬೆದರಿಕೆ, ಹತ್ಯೆ ಹಾಗೂ ಅಪಹರಣದ ಪ್ರಕರಣಗಳು ಹೆಚ್ಚಾಗಿದ್ದವು. ಹಲವೆಡೆ ಮಸೀದಿಗಳ ಲೌಡ್‌ಸ್ಪೀಕರ್‌ಗಳ ಮೂಲಕ ಪಂಡಿತರು ಕಾಶ್ಮೀರ ತೊರೆಯಬೇಕು ಅಥವಾ ಮುಸ್ಲಿಂ ಆಗಿ ಮತಾಂತರವಾಗಬೇಕು ಎಂಬ ಬೆದರಿಕೆಗಳು ಕೇಳಿಬಂದಿದ್ದವು. ನಿರಂತರ ದಾಳಿ, ಬೆದರಿಕೆ, ಹತ್ಯೆಗಳು ಹೆಚ್ಚುತ್ತಿದ್ದಂತೆ ಕಾಶ್ಮೀರದ ಮೂಲ ನಿವಾಸಿಗಳಾಗಿದ್ದ ಸಾವಿರಾರು ಪಂಡಿತ ಕುಟುಂಬಗಳು ಕಣಿವೆಯಲ್ಲಿದ್ದ ನೆಲೆಗಳನ್ನು ಬಿಟ್ಟು ಬೇರೆಡೆ ವಲಸೆ ಹೋಗತೊಡಗಿದ್ದವು. 

ಸರಣಿ ಹತ್ಯೆಗೆ ಬೆದರದ್ದಕ್ಕೆ ಅಮಾನುಷ ಹತ್ಯೆ 

1990ರ ಜನವರಿಯಲ್ಲಿ ಪಂಡಿತ ಕುಟುಂಬದ ಹೈಕೋರ್ಟ್ ವಕೀಲ ನೀಲಕಂಟ್ ಗಾಂಜೂ, ವಕೀಲ ಮತ್ತು ಪಂಡಿತ ಸಮುದಾಯದ ಮುಖಂಡ ಟಿಕ್ಕಾ ಲಾಲ್ ಟಪ್ಲೂ, ಕವಿ ಸರ್ಬಾನಂದ ಕೌಲ್ ಪ್ರೇಮಿ, ಪತ್ರಿಕಾ ಮಾಲೀಕ ಲಾಸ್ಸಾ ಕೌಲ್ ಅವರನ್ನು ಬೆನ್ನು ಬೆನ್ನಿಗೆ ಹತ್ಯೆ ಮಾಡಿದ್ದರಿಂದ ಪಂಡಿತ ಕುಟುಂಬಗಳು ಬೆದರಿ ಹೋಗಿದ್ದವು. ಶ್ರೀನಗರದ SKIMS ಆಸ್ಪತ್ರೆಯಲ್ಲಿದ್ದ ಬಹುತೇಕ ಪಂಡಿತ ಸಮುದಾಯದ ನರ್ಸ್ ಗಳು ಕೆಲಸ ಬಿಟ್ಟು ಬೇರೆಡೆ ತೆರಳಿದ್ದರು.‌ ಆದರೆ ನರ್ಸ್ ಸರಳಾ ಭಟ್ ತನ್ನ ಕೆಲಸ ಬಿಟ್ಟರೆ ಬೇರೇನು ಮಾಡೋದು ಅಂತ ಸೇವೆಯನ್ನು ಮುಂದುವರಿಸಿದ್ದರು. ಭದ್ರತಾ ಪಡೆಗಳ ಎನ್ಕೌಂಟರ್, ಗುಂಡಿನ ದಾಳಿಗೆ ಗುರಿಯಾಗಿ ಗಾಯಗೊಳ್ಳುತ್ತಿದ್ದ ಉಗ್ರರನ್ನು ಹೆಚ್ಚಾಗಿ ಇದೇ ಆಸ್ಪತ್ರೆಗೆ ತರಲಾಗುತ್ತಿತ್ತು. ಅಲ್ಲಿ ಹಿಂದು ನರ್ಸ್ ಇರುವುದು ಮತ್ತು ತಮ್ಮ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಕೊಡುತ್ತಿದ್ದಾಳೆಂಬ ಶಂಕೆಯಲ್ಲಿ ಉಗ್ರರು ಈಕೆಯ ಹತ್ಯೆಗೆ ಸಂಚು ರೂಪಿಸಿದ್ದರು. ‌ಆಸ್ಪತ್ರೆ ಇದ್ದ ಪ್ರದೇಶದಲ್ಲಿ ಜೆಕೆಎಲ್ ಎಫ್ ಉಗ್ರರು ಹೆಚ್ಚಿದ್ದರಿಂದ ಹಲವು ಬಾರಿ ಬೆದರಿಕೆಗಳನ್ನೂ ಒಡ್ಡಿದ್ದರು.  1990ರ ಏಪ್ರಿಲ್ 18ರಂದು ಆಸ್ಪತ್ರೆಯೊಳಗೆ ನುಗ್ಗಿದ ಶಸ್ತ್ರಸಜ್ಜಿತ ಉಗ್ರರು ಆಕೆಯನ್ನು ಗನ್‌ ಪಾಯಿಂಟ್‌ ಮುಂದಿಟ್ಟು ಅಪಹರಿಸಿದ್ದರು. ಮರುದಿನ, ಏಪ್ರಿಲ್ 19ರಂದು, ಶ್ರೀನಗರದ ಮಲ್ಲಾಬಾಗ್ ಉಮರ್ ಕಾಲೋನಿ ರಸ್ತೆ ಬದಿಯಲ್ಲಿ ಸರಳಾ ಭಟ್ ಳನ್ನು ಅಮಾನುಷವಾಗಿ ಹಿಂಸಿಸಿ ಶವವನ್ನು ನಡುಬೀದಿಯಲ್ಲಿ ಎಸೆಯಲಾಗಿತ್ತು. ತನಿಖೆಯಲ್ಲಿ, 27 ವರ್ಷದ ನರ್ಸ್ ಮೇಲೆ ತೀವ್ರ ದೌರ್ಜನ್ಯ ಎಸಗಿ ಹತ್ಯೆ ಮಾಡಿದ್ದು ಪತ್ತೆಯಾಗಿತ್ತು. ಈ ಘಟನೆ ಕಾಶ್ಮೀರಿ ಪಂಡಿತರಲ್ಲಿ ಮತ್ತಷ್ಟು ಭೀತಿಯನ್ನು ಉಂಟುಮಾಡಿ, ಕಣಿವೆಯಿಂದ ಸಾಮೂಹಿಕ ವಲಸೆಗೆ ಕಾರಣವಾಗಿತ್ತು. 

36 ವರ್ಷಗಳ ಬಳಿಕ ಮರು ತನಿಖೆ 

ಈ ಪ್ರಕರಣ ಹಲವು ವರ್ಷಗಳ ಕಾಲ ಮುಚ್ಚಿ ಹೋಗಿದ್ದರೂ, 2024ರ ಮಾರ್ಚ್ 18ರಂದು ಜಮ್ಮು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕರು (DGP) ಮರು ತನಿಖೆಗಾಗಿ ವಿಶೇಷ ತ‌ನಿಖಾ ತಂಡಕ್ಕೆ ಆದೇಶ ನೀಡಿದ್ದರು. ಎರಡು ವರ್ಷ ತನಿಖೆ ನಡೆಸಿದ ಅಧಿಕಾರಿಗಳು ಹಳೆಯ ಮೆಡಿಕಲ್ ದಾಖಲೆಗಳು, ಪ್ರತ್ಯಕ್ಷದರ್ಶಿ ಸಾಕ್ಷಿಗಳ ಹೇಳಿಕೆಗಳು, ಡಿಜಿಟಲ್ ಮಾಹಿತಿ ಹಾಗೂ ಗಾಯದ ಗುರುತುಗಳ ಮಾದರಿಗಳನ್ನು ಮರು ಪರಿಶೀಲಿಸಿ ಚಾರ್ಜ್‌ಶೀಟ್ ಸಿದ್ಧಪಡಿಸಿದ್ದಾರೆ. ಜೆಕೆಎಲ್ಎಫ್ ಉಗ್ರರು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಅವರನ್ನು ಬೆದರಿಸುವ ಸಲುವಾಗಿ ಟಾರ್ಗೆಟ್ ಹತ್ಯೆಗಳನ್ನು ನಡೆಸಿದ್ದು ಅದರಲ್ಲೊಂದು ಸರಳಾ ಭಟ್ ಹತ್ಯೆ. ಇದನ್ನು ಯಾಸಿನ್ ಮಲಿಕ್ ಸೂಚನೆಯಂತೆ ಮಾಡಲಾಗಿತ್ತು ಎಂದು ಚಾರ್ಜ್ ಶೀಟ್ ನಲ್ಲಿ ತಿಳಿಸಿದ್ದಾರೆ. 

ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾದ ಆರೋಪಿಗಳು

SIA ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಸದ್ಯ ಬೇರೊಂದು ಪ್ರಕರಣದಲ್ಲಿ ಜೈಲಿನಲ್ಲಿರುವ ಯಾಸಿನ್ ಮಲಿಕ್ ಪ್ರಮುಖ ಸಂಚುಕೋರ ಎಂದು ತೋರಿಸಲಾಗಿದೆ. ಖುರ್ಷಿದ್ ಅಹ್ಮದ್ ಚಾಕೂ ಎರಡನೇ ಆರೋಪಿಯಾಗಿ ಗುರುತಿಸಿದ್ದು ಈತ ಸರಳಾ ಭಟ್ ಮೇಲೆ ಗುಂಡು ಹಾರಿಸಿ ಕೊಂದ ಆರೋಪ ಹೊಂದಿದ್ದು ಸದ್ಯ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಚಾರ್ಜ್‌ಶೀಟ್ ನಲ್ಲಿ ಹೇಳಲಾಗಿದೆ. ಇತರ ಮೂವರು ಆರೋಪಿಗಳಾದ ಅಬ್ದುಲ್ ಹಮೀದ್ ಶೇಖ್, ಮೊಹಮ್ಮದ್ ಯೂಸುಫ್ ಸೋಫಿ ಅಲಿಯಾಸ್ ಇದ್ರೀಸ್, ಗುಲಾಮ್ ಮೊಹಮ್ಮದ್ ತಪ್ಲೂ ಮೃತಪಟ್ಟಿದ್ದಾರೆಂದು ತೋರಿಸಲಾಗಿದೆ. 36 ವರ್ಷಗಳ ಹಿಂದಿನ ಕರಾಳ ಪ್ರಕರಣದ ವಿಚಾರಣೆ ಶ್ರೀನಗರದ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದ್ದು ದೇಶದ ಗಮನ ಸೆಳೆದಿದೆ. 

1989ರ ಬಳಿಕ ಕಾಶ್ಮೀರ ಪಂಡಿತರನ್ನು ಗುರಿಯಾಗಿಸಿದ ನರಮೇಧ ಕುರಿತಾಗಿ ಜಮ್ಮು ಕಾಶ್ಮೀರ ಪೊಲೀಸರು 2008ರಲ್ಲಿ ವರದಿಯೊಂದನ್ನು ಸರ್ಕಾರಕ್ಕೆ ನೀಡಿದ್ದು ಅದರಲ್ಲಿ 209 ಕಾಶ್ಮೀರಿ ಪಂಡಿತರನ್ನು ಕೊಲ್ಲಲಾಗಿದೆ, ಆ ಪೈಕಿ 1990ರ ಒಂದೇ ವರ್ಷದಲ್ಲಿ 109 ಮಂದಿಯ ಹತ್ಯೆಯಾಗಿತ್ತು ಎಂದು ತಿಳಿಸಿತ್ತು. ಕಾಶ್ಮೀರ ಪಂಡಿತರ ಪ್ರಕಾರ ಈ ಹತ್ಯೆಯ ಸಂಖ್ಯೆ ಇದಕ್ಕೂ ಹೆಚ್ಚಿದೆ ಎಂದು ವರದಿಗಳು ತಿಳಿಸುತ್ತವೆ. 2019ರಲ್ಲಿ ಜಮ್ಮು ಕಾಶ್ಮೀರದ ವಿಶೇಷ ಪ್ರಾತಿನಿಧ್ಯ ಕಾಯ್ದೆ 370ನೇ ವಿಧಿ ರದ್ದತಿ ಮತ್ತು ಕೇಂದ್ರ ಸರ್ಕಾರ ರಾಷ್ಟ್ರಪತಿ ಆಡಳಿತ ಹೇರಿದ ಬಳಿಕ ಅಲ್ಲಿನ ಸ್ಥಿತಿ ಬದಲಾಗಿತ್ತು. ಪ್ರತ್ಯೇಕವಾದಿ ಉಗ್ರರ ಉಪಟಳ, ಉಗ್ರವಾದಿ ಕೃತ್ಯಗಳಿಗೆ ಬ್ರೇಕ್ ಬಿದ್ದಿತ್ತು.