ಬ್ರೇಕಿಂಗ್ ನ್ಯೂಸ್
23-07-26 12:38 pm ✍🏻 ರಾಜೀವ ಹೆಗಡೆ, ಹಿರಿಯ ಪತ್ರಕರ್ತ ಅಂಕಣಗಳು
ಪ್ರಸ್ತುತ ಜಿರಳೆ ಜನತಾ ಪಕ್ಷದ ಹೆಸರಲ್ಲಿ ನಡೆಯುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿ ನಡೆದಿರುವ ಅಹಿತಕರ ಘಟನೆಯನ್ನು ಆಧರಿಸಿ, ಹೋರಾಟದ ಮೂಲ ಉದ್ದೇಶಕ್ಕೆ ಬೆಂಕಿ ಹಾಕುವ ಕೆಲಸವನ್ನು ಬಿಜೆಪಿ ಹಾಗೂ ಅದರ ಬೆಂಬಲಿಗರು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಹೋರಾಟಕ್ಕೆ ಟೂಲ್ ಕಿಟ್, ವಿದೇಶಿ ಶಕ್ತಿ, ದೇಶದ್ರೋಹ ಸೇರಿ ಹತ್ತು ಹಲವು ವಿಚಾರಗಳನ್ನು ಎಳೆದು ತರುತ್ತಿದ್ದಾರೆ. ಆದರೆ ಈ ದೇಶದಲ್ಲಿ ಕಳೆದೊಂದು ದಶಕದಲ್ಲಿ ನಡೆದ ಇತರ ಹೋರಾಟ ಹಾಗೂ ಈ ಹೋರಾಟದ ಮೂಲ ಉದ್ದೇಶದ ಬಗ್ಗೆ ಬಿಜೆಪಿ ಜಾಣ ಕುರುಡು ತೋರುತ್ತಿದೆ.
ನೀಟ್, ಪ್ರಶ್ನೆ ಪತ್ರಿಕೆ ಸೋರಿಕೆ, ಶಿಕ್ಷಣ ಇಲಾಖೆಯಲ್ಲಿನ ಅರಾಜಕತೆ ಬಗ್ಗೆ ಮುಂದೆ ಮಾತನಾಡುವ ಮೊದಲೇ, ಒಂದು ವಿಷಯವನ್ನು ನಾವೆಲ್ಲ ಗಮನಿಸಬೇಕು. ಭಾಯಿಯೋ...ಓರ್ ಬೆಹನೋ... ಕ್ರೋನೋಲಜಿ ಸಮಜಿಯೇ...!

ಇಂದು ದೆಹಲಿ ಸೇರಿ ದೇಶದ ಹಲವೆಡೆ ನಡೆಯುತ್ತಿರುವ ಪ್ರತಿಭಟನೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯುವಕ ಜನತೆಯ ಆಕ್ರೋಶದ ಬಗ್ಗೆ ಕೊಂಕು ಮಾತನಾಡುತ್ತಿರುವರೆಲ್ಲ ಈ ಮೇಲಿನ ಘಟನಾವಳಿ ಹಾಗೂ ದಿನಾಂಕವನ್ನು ಬಾಯಿಪಾಠ ಆಗುವವರೆಗೆ ಓದಿಕೊಳ್ಳಿ. ಅಷ್ಟಕ್ಕೂ ನಾನಿಲ್ಲಿ ಸಿಬಿಎಸ್‌ಇ ಫಲಿತಾಂಶದಲ್ಲಿನ ಗೊಂದಲ, ವಿವಾದದ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಹೀಗಾಗಿಯೂ ನೀಟ್, ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಗಳಲ್ಲಿ ಸಾರ್ವಜನಿಕ ಆಕ್ರೋಶವು ಆರಂಭವಾದಾಗ, ಈ ದೇಶದಲ್ಲಿ ಜಿರಳೆ ಸೇರಿ ಯಾವುದೇ ಕೀಟ, ಕ್ರಿಮಿಗಳು ಇರಲಿಲ್ಲ ಎನ್ನುವುದನ್ನು ಅರಿತುಕೊಳ್ಳಿ.
ಮೇ ೩ರಂದು ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದ ೨೨ ಲಕ್ಷ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಸಾಮಾಜಿಕ ಜಾಲತಾಣ, ಮಾಧ್ಯಮ, ಒಂದಿಷ್ಟು ವೇದಿಕೆ ಹಾಗೂ ಮನೆಯಂಗಳದಲ್ಲಿ ಸರ್ಕಾರಕ್ಕೆ ಶಾಪ ಹಾಕುತ್ತಿದ್ದರು. ಒಮ್ಮೆ ಬರೆದಿದ್ದ ಪರೀಕ್ಷೆಯನ್ನು ಮತ್ತೊಮ್ಮೆ ಬರೆಯಿರಿ ಎನ್ನುವುದು ಅಷ್ಟು ಸುಲಭವಲ್ಲ. ಒಂದಿಷ್ಟು ಬೂತ್‌ಗಳಲ್ಲಿ ಮರು ಚುನಾವಣೆಯನ್ನು ಆದೇಶಿಸಿದಾಗ, ಜಗತ್ತೇ ತಲೆ ಮೇಲೆ ಬಿದ್ದಂತೆ ರಾಜಕೀಯ ಪಕ್ಷಗಳು ಆಡುತ್ತವೆ. ಆದರೆ ಇನ್ನೊಂದು ಪರೀಕ್ಷೆಗೆ ತಯಾರಾಗಿ ಎಂದು ಹೇಳುವುದು ಸುಲಭ. ಆದರೆ ಅದಕ್ಕಾಗಿ ಶ್ರಮ ಹಾಕುವ ವಿದ್ಯಾರ್ಥಿಗಳು ಹಾಗೂ ಪಾಲಕರ ಒತ್ತಡದ ಆಯಾಮದಿಂದ, ಇದನ್ನು ನೋಡಿದಾಗ ಮಾತ್ರ ಅದರ ನೋವು ಅರ್ಥವಾಗುತ್ತದೆ.

ಈಗ ಮತ್ತದೇ ಜಿರಳೆ ವಿಷಯಕ್ಕೆ ಬರೋಣ. ಈ ದೇಶದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಬಾಯಲ್ಲಿ ʼಜಿರಳೆʼ ಎನ್ನುವ ಶಬ್ದ ಪ್ರಯೋಗವಾಗಿ, ತಪ್ಪಾಗಿ ವ್ಯಾಖ್ಯಾನ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅದನ್ನು ನರೇಂದ್ರ ಮೋದಿ ಸರ್ಕಾರಕ್ಕೆ ಜೋಡಣೆ ಮಾಡುವಷ್ಟರಲ್ಲಿ ನೀಟ್ ರದ್ದಾಗಿ ಒಂದು ವಾರವಾಗಿತ್ತು. ಹಾಗೆಯೇ ನೀಟ್ ಅಕ್ರಮ ನಡೆದು ಎರಡು ವಾರಗಳಾಗಿದ್ದವು. ಈ ಕ್ಷಣದವರೆಗೂ ದೇಶದ ವಿದ್ಯಾರ್ಥಿಗಳಲ್ಲಿ ಧೈರ್ಯ ಮೂಡಿಸುವ ಒಂದೇ ಒಂದು ಮಾತು ಪ್ರಧಾನಿಯಿಂದ ಬಂದಿರಲಿಲ್ಲ. ಧರ್ಮೇಂದ್ರ ಪ್ರಧಾನ್ ಕೂಡ ಹತ್ತು ದಿನದ ಬಳಿಕ ನೆಪ ಮಾತ್ರದ ಹೇಳಿಕೆ ನೀಡಿದ್ದರು. ಆರಂಭದ ಒಂದು ವಾರದಲ್ಲಿ ಸೋರಿಕೆಯನ್ನೇ ಒಪ್ಪದ ಸರ್ಕಾರ, ನಂತರದ ದಿನಗಳಲ್ಲೂ ಜವಾಬ್ದಾರಿ ನಿಗದಿ ಮಾಡುವ ಕೆಲಸವನ್ನೇ ಮಾಡಲಿಲ್ಲ. ವಿಪರ್ಯಾಸವೆಂದರೆ, ನೀಟ್ ವಿಚಾರದಲ್ಲಿ ಜಿರಳೆ ಪಕ್ಷವು ದೆಹಲಿಯಲ್ಲಿ ಹೋರಾಟ ಆರಂಭಿಸಿದ್ದು, ಜೂನ್ ೬ಕ್ಕೆ ಹಾಗೂ ಜಂಥರ್ ಮಂಥರ್‌ನಲ್ಲಿ ಉಪವಾಸ ಸತ್ಯಾಗ್ರಹ ಶುರುವಾಗಿದ್ದು ಜೂನ್ ೨೦ಕ್ಕೆ. ಅಂದರೆ, ಈ ಪ್ರಶ್ನೆ ಪತ್ರಿಕೆ ವಿಚಾರದಲ್ಲಿ ದೇಶದ ಯುವ ಸಮುದಾಯದಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಲು ಬರೋಬ್ಬರಿ ಒಂದೂವರೆ ತಿಂಗಳುಗಳ ಸಮಯವು ಕೇಂದ್ರ ಸರ್ಕಾರ ಹಾಗೂ ಬಿಜೆಪಿಗಿತ್ತು. ಈ ಹಂತದಲ್ಲಿ ಒಣ ಪ್ರತಿಷ್ಠೆಯನ್ನು ಬಿಟ್ಟು, ನಮ್ಮ ಮಕ್ಕಳಿಗಾಗಿ ಸ್ಪಂದಿಸಿದ್ದರೆ ಯಾವ ಜಿರಳೆಗಳ ಕಾಟವೂ ಇರುತ್ತಿರಲಿಲ್ಲ. ಬಿಜೆಪಿ ಬೆಂಬಲಿಗರು ಹೇಳುವಂತೆ ವಿದೇಶಿ ಶಕ್ತಿ, ಟೂಲ್ ಕಿಟ್‌ಗಳಿಗೆ ಅವಕಾಶವೇ ಇರುತ್ತಿರಲಿಲ್ಲ.
ಅಷ್ಟಕ್ಕೂ ಬಿಜೆಪಿಯ ಪ್ರತಿ ನಡೆಯನ್ನೂ ಕಣ್ಮುಚ್ಚಿಕೊಂಡು ಸಮರ್ಥಿಸುವವರು ಒಂದು ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈಗ ದೇಶದಲ್ಲಿ ನಡೆಯುತ್ತಿರುವ ಹೋರಾಟದ ಮೂಲ ಉದ್ದೇಶದಲ್ಲಿ ರಾಜಕೀಯ, ಸಿದ್ಧಾಂತ, ಧರ್ಮ, ಜಾತಿ ಅಥವಾ ಇನ್ಯಾವುದೇ ದೇಶ ವಿರೋಧಿ ಅಂಶಗಳಿಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆ ಆಗಬೇಕು ಎನ್ನುವುದು ಮಾತ್ರ ಯುವ ಸಮುದಾಯದ ಏಕಮೇವ ಬೇಡಿಕೆಯಾಗಿದೆ. ಈ ಹಿಂದೆ ಸಿಎಎ-ಎನ್‌ಆರ್‌ಸಿ ಪ್ರತಿಭಟನೆ, ಪಂಜಾಬ್ ರೈತರ ಹೋರಾಟದ ಆಯ್ದ ಭಾಗ ಸೇರಿ ಇನ್ನಿತರ ಕೆಲವು ಅಭಿಯಾನಗಳ ಹಿಂದೆ ದೇಶ ವಿರೋಧಿ ಶಕ್ತಿಗಳು ಆರಂಭದಿಂದಲೂ ಕೆಲಸ ಮಾಡಿವೆ ಹಾಗೂ ವಿವಾದವೇ ಅಲ್ಲಿಂದ ಹುಟ್ಟಿಕೊಂಡಿತ್ತು ಎಂದರೂ ಕ್ಷಣಮಾತ್ರಕ್ಕೆ ನಂಬಬಹುದು. ಆದರೆ ಈ ವಿಚಾರದಲ್ಲಿ ದೇಶದ್ರೋಹದ ಕೆಲಸ ಮಾಡಿದ್ದು, ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಎನ್‌ಟಿಎ ಎನ್ನುವುದನ್ನು ಯಾರೂ ಮರೆಯಬಾರದು. ಈ ಹೋರಾಟಕ್ಕೂ ವಿದೇಶಿ ಶಕ್ತಿ, ಟೂಲ್ ಕಿಟ್ ಇದೆ ಎನ್ನುವುದಾದರೆ, ಅದನ್ನು ಸಾಬೀತು ಮಾಡಿ ಕ್ರಮ ಕೈಗೊಳ್ಳುವ ಎಲ್ಲ ಶಕ್ತಿಯು ಕೇಂದ್ರಕ್ಕಿದೆ. ಆ ಕೆಲಸವನ್ನು ಮುಲಾಜಿಲ್ಲದೇ, ಮುಂದಿನ ದಿನಗಳಲ್ಲಿ ಮಾಡಲಿ. ಆದರೆ ಆರಂಭಿಕ ದಿನಗಳಲ್ಲೇ ತನ್ನದೇ ವಿದ್ಯಾರ್ಥಿ ಹಾಗೂ ಶೈಕ್ಷಣಿಕ ಸಂಘಟನೆಗಳ ಮೂಲಕ ಅಭಿಪ್ರಾಯ ಪಡೆದು, ಯುವ ಸಮುದಾಯದ ಅಹವಾಲು ಸ್ವೀಕರಿಸಿದ್ದರೆ ಮುಗಿಯುತ್ತಿತ್ತು. ಆಗ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತ ಹೋರಾಟವು, ಈ ಹಂತಕ್ಕೆ ಬರುತ್ತಿರಲಿಲ್ಲ. ವಿದೇಶಿ ಶಕ್ತಿ, ಟೂಲ್ ಕಿಟ್‌ನ ಪ್ರವೇಶಕ್ಕೆ ಯಾವುದೇ ಅರ್ಥ ಬರುತ್ತಿರಲಿಲ್ಲ. ಅಷ್ಟಕ್ಕೂ, ಬಿಜೆಪಿ, ಕೇಂದ್ರ ಸರ್ಕಾರಕ್ಕಿಂತ ಮೊದಲೇ ಈ ದೇಶದ ನಿಜವಾದ ದೇಶ ಭಕ್ತರು ಈ ಜಿರಳೆಗಳನ್ನು ಮೂಲೆಗೆ ಎಸೆಯುತ್ತಿದ್ದರು. ಹಿಂದಿನ ಹೋರಾಟಗಳಲ್ಲಿ, ಈ ಕೆಲಸವನ್ನು ಬಿಜೆಪಿಗಿಂತ ಅತ್ಯಂತ ನಾಜೂಕಾಗಿ, ಈ ದೇಶದ ಸಾಮಾನ್ಯ ಜನರು ಮಾಡಿದ್ದಾರೆ ಎನ್ನುವುದನ್ನು ಯಾರೂ ಮರೆಯಕೂಡದು. ಸಿಎಎ, ಕೃಷಿ ಕಾಯ್ದೆಯಲ್ಲಿ ಬಿಜೆಪಿಗಿಂತ ಹೆಚ್ಚಾಗಿ, ಸರ್ಕಾರದ ಪರ ನಿಂತಿದ್ದು ಈ ದೇಶದ ಜನ. ಅಂದ್ಹಾಗೆ ಕೃಷಿ ಕಾಯ್ದೆಯನ್ನು ಬೆಂಬಲಿಸಿದ ಅಸಂಖ್ಯಾತ ರೈತರಿಗೆ ಕೊನೆಗೆ ಕೈಕೊಟ್ಟಿದ್ದೇ ಬಿಜೆಪಿ. ದೇಶ ದ್ರೋಹದ ಕೆಲಸ ಯಾವುದು ಎನ್ನುವುದಕ್ಕೆ, ಒಂದು ಪಕ್ಷದ ಪ್ರಮಾಣಪತ್ರ ಬೇಕಿಲ್ಲ. ಸಾಮಾನ್ಯ ಜನರಿಗೆ ಸುಲಭವಾಗಿಯೇ ಅದೆಲ್ಲ ಅರ್ಥವಾಗುತ್ತದೆ.
ಹಾಗೆಯೇ ದೇಶದಲ್ಲಿ ನಡೆದ ಪ್ರತಿ ಘಟನೆಯ ಬಗೆಗೂ ಪ್ರಧಾನಿ ಮಾತನಾಡಬೇಕೆ ಎಂದು ಹಲವರು ಪ್ರಶ್ನಿಸುತ್ತಾರೆ. ಆದರೆ, ೨೨ ಲಕ್ಷ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಮೋದಿ ಮಾನಾಡದಿರುವುದು ಔಚಿತ್ಯ ಎನಿಸುವುದಿಲ್ಲ. ʼಪರೀಕ್ಷಾ ಪೇ ಚರ್ಚಾʼ ಮೂಲಕ ವಿದ್ಯಾರ್ಥಿಗಳಿಂದ ʼಮೋದಿಯಜ್ಜʼ ಎನಿಸಿಕೊಂಡವರಿಂದ, ಅಕ್ಕರೆಯಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಧೈರ್ಯ ಹೇಳುವ ಕೆಲಸವನ್ನು ಬಯಸುವುದು ತಪ್ಪಾಗುವುದಿಲ್ಲ. ಮನೆಯ ಯಜಮಾನರಿಂದ ಇಂತಹದ್ದನ್ನು ಬಯಸುವುದು ಖಂಡಿತ ಅಪರಾಧವಲ್ಲ.

ಸರ್ಕಾರದಿಂದ ಬಯಸಿದ್ದೇನು?
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದರೆ, ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದರೆ ಎಲ್ಲವೂ ಸರಿ ಹೋಗುತ್ತದೆಯೇ ಎನ್ನುವುದು ಹಲವರ ಮೂಲಭೂತ ಪ್ರಶ್ನೆಯಾಗಿದೆ. ಇದರೊಂದಿಗೆ ಪರೀಕ್ಷಾ ಅಕ್ರಮ ತಡೆ ಕಾಯ್ದೆ-೨೦೨೪ರನ್ನು ಜಾರಿಗೆ ತಂದ ಸರ್ಕಾರವನ್ನು ಟೀಕಿಸುವದರಲ್ಲಿ ಅರ್ಥವೇನಿದೆ ಹಾಗೂ ಪ್ರಶ್ನೆ ಪತ್ರಿಕೆ ಖರೀದಿಸುವ ಪಾಲಕರು ಈ ಬಗ್ಗೆ ಜವಾಬ್ದಾರಿ ಹೊಂದಬೇಕು ಎಂದು ಕೆಲವರು ಬುದ್ಧಿವಾದ ಹೇಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೂಡ ಮೊದಲ ಬಾರಿಗೆ ಮಾತನಾಡಿ, ʼರಾಷ್ಟ್ರೀಯ ಜವಾಬ್ದಾರಿʼ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಈ ಮಾತು ಕೂಡ ಎನ್‌ಡಿಎ ಸಂಸದರ ಸಭೆಯಲ್ಲಿ ಬಂದಿದೆ.
ಪರೀಕ್ಷೆ ಹಾಗೂ ಶಿಕ್ಷಣ ವಲಯದಲ್ಲಿನ ಸುಧಾರಣೆಗೆ ಹೇಳಿಕೆಯಿಂದ ಲಾಭವಾಗುವುದಿಲ್ಲ ಎನ್ನುವ ಸಾಮಾನ್ಯ ಜ್ಞಾನ ನಮಗೆಲ್ಲರಿಗಿದೆ. ʼಪರೀಕ್ಷಾ ಪೇ ಚರ್ಚಾʼಗೂ ಇದನ್ನೇ ಅನ್ವಯ ಮಾಡಿದರೆ, ಹೇಗಾಗಬಹುದು ಎಂದು ಒಮ್ಮೆ ಆಲೋಚಿಸಿ. ಆದರೆ ಈ ದೇಶದ ಪ್ರಧಾನಿಯ ಒಂದು ಕಾಳಜಿಯ ಮಾತು, ವಿದ್ಯಾರ್ಥಿ ಹಾಗೂ ಪಾಲಕರ ವಲಯದಲ್ಲಿ ಧೈರ್ಯ ಹುಟ್ಟಿಸುತ್ತದೆ. ಆರಂಭದಲ್ಲಿ ಬೇಕಿರುವುದೇ ಇದೇ ಮನೋಸ್ಥೈರ್ಯ ತುಂಬುವ ಕೆಲಸ. ಬದಲಾವಣೆಯನ್ನು ಒಂದು ರಾತ್ರಿಯಲ್ಲಿ ಮಾಡಲಾಗುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ. ಇನ್ನೂ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿಚಾರಕ್ಕೆ ಬರೋಣ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಎನ್ನುವುದು ೨೦೨೬ರ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸೀಮಿತವಾಗಿಲ್ಲ. ಇದೊಂದೇ ಕಾರಣದಿಂದ ಯುವ ಸಮುದಾಯವು ಪ್ರಧಾನ್ ವಿರುದ್ಧ ಬೀದಿಗಿಳಿದಿಲ್ಲ. ನೀಟ್‌ನ ಆಸುಪಾಸಿನಲ್ಲೇ ಯುಜಿಸಿ ನಿಯಮ, ಸಿಬಿಎಸ್‌ಇ ಫಲಿತಾಂಶ ಗೊಂದಲ, ಸಿಬಿಎಸ್‌ಇ ಪಠ್ಯಕ್ರಮ ವಿವಾದ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ವೈಫಲ್ಯವು ಯುವ ಸಮುದಾಯದಲ್ಲಿ ಬೇಸರ ಮೂಡಿಸಿತ್ತು. ಪ್ರಧಾನ್ ಅವರು ಶಿಕ್ಷಣ ಇಲಾಖೆಯನ್ನು ಮುನ್ನಡೆಸಿದ ವಿಚಾರಕ್ಕೆ ಸಂಬಂಧಿಸಿ, ಕಟ್ಟಾ ಬಿಜೆಪಿಗರಿಗೂ ಅಸಮಾಧಾನವಿತ್ತು. ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಇದಕ್ಕೂ ಮೊದಲೇ ಹಲವು ಅಭಿಯಾನಗಳು ಸಾಮಾಜಿಕ ಜಾಲಾಣದಲ್ಲಿ ನಡೆದಿದ್ದವು. ಇದರಲ್ಲಿ ಪಕ್ಕಾ ಬಲಪಂಥೀಯರ ಸಂಖ್ಯೆಯೇ ಹೆಚ್ಚಿತ್ತು. ಶಿಕ್ಷಣವು ಒಂದೆಡೆ ದುಬಾರಿಯಾಗಿದೆ, ಇನ್ನೊಂದೆಡೆ ಅಕ್ರಮಕ್ಕೆ ಲಗಾಮು ಹಾಕುವರಿಲ್ಲ ಎನ್ನುವ ಆಕ್ರೋಶವು ಸಾಮಾನ್ಯ ಜನರಲ್ಲಿ ಹೆಚ್ಚಾದಾಗ, ಅದನ್ನು ಸಿಜೆಪಿ ಚೆನ್ನಾಗಿ ಬಳಸಿಕೊಂಡಿತು. ಈ ಆಕ್ರೋಶವನ್ನು ಬಿಜೆಪಿಯೇ ಬಳಸಿಕೊಳ್ಳಲು ಅವಕಾಶವಿದ್ದಾಗ ಮೌನವಾಗಿದ್ದು, ನಿಜವಾದ ದೇಶದ್ರೋಹದ ಕೆಲಸ ಮಾಡಲಾಗಿದೆ.


ಅಷ್ಟಕ್ಕೂ ಪ್ರಶ್ನೆ ಪತ್ರಿಕೆ ಸೋರಿಕೆಯು ದೇಶದಲ್ಲಿ ಇದೇ ಮೊದಲಲ್ಲ. ನೀಟ್ ಸೇರಿ ಹಲವು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಇದನ್ನು ತಡೆಯಲು ಕೇಂದ್ರ ಸರ್ಕಾರ ಕಠಿಣ ಕಾನೂನು ತಂದು ಎರಡು ವರ್ಷವಾಗಿದೆ. ಆ ಕಾನೂನು ಬಂದ ಬಳಿಕವೂ ದೇಶದಲ್ಲಿ ಈ ಅಕ್ರಮ ಮುಂದುವರಿದಿದೆ. ಏಕೆಂದರೆ ಇತರ ಹೀನ ಅಪರಾಧಗಳಂತೆ, ಈ ಪ್ರಕರಣಗಳಲ್ಲಿ ತನಿಖೆಗೆ ಕಾಲಮಿತಿ ಹಾಕಲಾಗಿಲ್ಲ. ಅದಕ್ಕೂ ಮುಖ್ಯವಾಗಿ, ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಬಗ್ಗೆ ಈ ದೇಶದಲ್ಲಿ ಸ್ಪಷ್ಟ ಮಾರ್ಗಸೂಚಿ ಅಥವಾ ನೀತಿ ಸಂಹಿತೆಯೇ ಇಲ್ಲ. ʼದೇಶದಲ್ಲಿ ಕೇಂದ್ರ ಸರ್ಕಾರದಿಂದ ನಡೆಯುವ ಪ್ರತಿ ಪರೀಕ್ಷೆಯನ್ನೂ ಬಜೆಟ್ ಪ್ರತಿ ರಚಿಸಲು ಮಾಡುವ ಗೌಪ್ಯತೆ ಹಾಗೂ ಕಟ್ಟುನಿಟ್ಟಿನ ನಿಯಮವನ್ನು ಪಾಲಿಸುತ್ತೇವೆ ಹಾಗೂ ಅದಕ್ಕಾಗಿ ವಿಶೇಷ ಕಾನೂನು ತರುತ್ತೇವೆ. ಬಿಜೆಪಿ ಆಡಳಿತದಲ್ಲಿರುವ ಪ್ರತಿ ರಾಜ್ಯಕ್ಕೂ ಇದೇ ರೀತಿಯ ಸೂಚನೆ ನೀಡುತ್ತೇವೆʼ ಎನ್ನುವ ಒಂದು ಸಣ್ಣ ಮಾತು ಪ್ರಧಾನಿ ಹಾಗೂ ಸಚಿವರ ಬಾಯಿಯಿಂದ ಬಂದಿದ್ದರೆ ಯಾವ ಜಿರಳೆಗಳಿಗೂ ಬೆಲೆಯಿರುತ್ತಿರಲಿಲ್ಲ. ಅದಲ್ಲದೇ ಸಮಸ್ಯೆಯಲ್ಲೂ ಹೀರೋ ಆಗಿ ಹೊರಹೊಮ್ಮುವ ಅವಕಾಶವಿತ್ತು. ಇದೆಲ್ಲ ಅವಕಾಶವನ್ನು ಬಿಟ್ಟುಕೊಂಡು, ನೀವೇ ಹೇಳುವ ದೇಶದ್ರೋಹಿಗಳಿಗೆ ಕುಣಿದಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಇಂತಹ ಪ್ರಮಾದನ್ನು ಮಾಡಿಕೊಂಡು, ಪ್ರಾಮಾಣಿಕಾಗಿ ಪರಿಹಾರ ಕೇಳುತ್ತಿರುವವರನ್ನು ಅದೇ ಪಟ್ಟಿಗೆ ಸೇರಿಸುವ ಮಹಾಪರಾಧ ಮಾಡಲಾಗುತ್ತಿದೆ. ಅಲ್ಲಿಗೆ ಅದೆಷ್ಟು ಜನರು ನಿಮ್ಮಿಂದ ದೂರವಾಗುತ್ತಿದ್ದಾರೆ ಎನ್ನುವುದನ್ನು ನೋಡಿ. ನಾನೇ ನೋಡಿದಂತೆ, ಬಿಜೆಪಿಯನ್ನು ಹಗಲಿರುಳು ಬೆಂಬಲಿಸಿ ಪೋಸ್ಟ್ ಹಾಕುತ್ತಿದ್ದ ಯುವ ಸಮುದಾಯವಿಂದು, ರಾಜಕೀಯದ ಮುಖವಾಡವಿಲ್ಲದೇ ಆಕ್ರೋಶ ಹೊರಹಾಕುತ್ತಿದೆ. ಆ ಆಕ್ರೋಶವು ಕೇವಲ ವ್ಯವಸ್ಥೆಯ ಸುಧಾರಣೆಗೆ ಸೀಮಿತವಾಗಿದೆ. ಅವರ ಬಳಿಗೆ ಯಾವ ಟೂಲ್ ಕಿಟ್, ವಿದೇಶಿ ಶಕ್ತಿಯೂ ತಲೆಹಾಕಲು ಸಾಧ್ಯವಿಲ್ಲ.

ರಾಷ್ಟ್ರೀಯ ಜವಾಬ್ದಾರಿ
ಪ್ರಶ್ನೆ ಪತ್ರಿಕೆ ಸೋರಿಕೆಯಂಥ ವಿಷಯಗಳಲ್ಲಿ ʼರಾಷ್ಟ್ರೀಯ ಜವಾಬ್ದಾರಿʼ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದಾರಂತೆ. ಅವರ ಭಾಷಣವು ಸಾರ್ವಜನಿಕವಾಗಿ ಲಭ್ಯವಿಲ್ಲದ ಕಾರಣದಿಂದ, ಅದನ್ನು ವಿಮರ್ಶೆ ಮಾಡಲು ಸಾಧ್ಯವಿಲ್ಲ. ಆದರೆ ಒಂದಿಷ್ಟು ಜನರು ಮಾತ್ರ ಖರೀದಿ ಮಾಡಿದ ಪಾಲಕರು ಹಾಗೂ ವಿದ್ಯಾರ್ಥಿಗಳನ್ನು ತೋರಿಸಿ, ಇವರೇ ಅಕ್ರಮಕ್ಕೆ ಕಾರಣ ಎನ್ನುತ್ತಿದ್ದಾರೆ. ಖರೀದಿ ಮಾಡುವ ವಿದ್ಯಾರ್ಥಿ ಹಾಗೂ ಪಾಲಕ ಸಮುದಾಯವಿಲ್ಲದಿದ್ದರೆ ಅಕ್ರಮಕ್ಕೆ ತೆರೆ ಬೀಳಲಿದೆ ಎಂದಾಗ, ಹೌದಲ್ಲವೇ ಎಂದು ಸುಲಭವಾಗಿ ಅನಿಸುತ್ತದೆ. ರಾಮರಾಜ್ಯದಲ್ಲೂ ಇದನ್ನು ಬಯಸಲಾಗುವುದಿಲ್ಲ. ಸಮಾಜವೆಂದಾಗ ಒಂದಿಷ್ಟು ವಕ್ರಗಳಿರುತ್ತವೆ. ಅವರನ್ನು ವೈಯಕ್ತಿಕವಾಗಿ ಹಾಗೂ ಕೇವಲ ಕಠಿಣ ಕಾನೂನಿನಿಂದ ಕಟ್ಟಿಹಾಕಲಾಗದು. ಏಕೆಂದರೆ ಖರೀದಿ ಮಾಡುವ ಸಮುದಾಯವು ಯಾರ ಎಣಿಕೆಗೂ ಸಿಗದಷ್ಟು ದೊಡ್ಡದಿರುತ್ತದೆ. ಇದೇ ಮುಂದುವರಿದರೆ, ನಾಳೆ ಪೊಲೀಸರು ಕೂಡ ಕಳ್ಳರನ್ನು ಹಿಡಿಯುವ ಬದಲಿಗೆ, ಅವರಿಗೆ ಬುದ್ಧಿ ಹೇಳಬೇಕಾದ ಪಾಲಕರತ್ತ ಕೈತೋರಿಸಿ ಸುಮ್ಮನಾಗಬಹುದು. ಸಮಾಜವನ್ನು ನಿಯಂತ್ರಿಸಲು ಸರ್ಕಾರ ಬೇಕೆನ್ನುವುದಕ್ಕೆ ನಾವು ಇಂತಹ ವ್ಯವಸ್ಥೆ ಹೊಂದಿದ್ದೇವೆ. ಎಲ್ಲವೂ ಸ್ವಯಂ ನಿಗ್ರಹದಲ್ಲೇ ಆಗಬೇಕಾಗಿದ್ದಲ್ಲಿ, ಯಾರ ಅಗತ್ಯವೂ ಇರುತ್ತಿರಲಿಲ್ಲ. ಹೀಗಾಗಿ ಖರೀದಿ ಮಾಡುವರಿಗೆ ವ್ಯವಸ್ಥೆಯೊಳಗಿದ್ದುಕೊಂಡು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವರನ್ನು ಸರ್ಕಾರವೇ ನಿಯಂತ್ರಿಸಬೇಕು ಹಾಗೂ ಅದು ಪ್ರಾಯೋಗಿಕವಾಗಿ ಸಾಧ್ಯವೂ ಹೌದು. ಏಕೆಂದರೆ ಖರೀದಿಯಲ್ಲಿ ದೇಶಾದ್ಯಂತ ಲಕ್ಷಾಂತರ ಜನರಿದ್ದರೆ, ಪ್ರಶ್ನೆ ಪತ್ರಿಕೆ ತಯಾರಿ ಪ್ರಕ್ರಿಯೆಯಲ್ಲಿ ಬೆರಳೆಣಿಕೆಯ ವಿಷಯ ತಜ್ಞರು ಹಾಗೂ ಅಧಿಕಾರಿಗಳಿರುತ್ತಾರೆ. ಹೀಗಾಗಿ ಎಲ್ಲರ ಬೇಡಿಕೆ ತುಂಬಾ ಸರಳವಾಗಿದೆ. ಎನ್‌ಟಿಎ ಅಥವಾ ದೇಶದ ಯಾವುದೇ ಪರೀಕ್ಷಾ ಮಂಡಳಿಯಲ್ಲಿ ಇಂತಹ ಜವಾಬ್ದಾರಿಯನ್ನು ನಿಗದಿ ಮಾಡಿ ಎಂದು ಯುವ ಸಮುದಾಯ ಕೇಳುತ್ತಿದೆ. ಇವತ್ತಿನವರೆಗೆ ಈ ಬಗ್ಗೆ ಕೇಂದ್ರದಿಂದ ನಿರ್ದಿಷ್ಟ ಕ್ರಮವಾಗಿಲ್ಲ. ಹಾಗೆಯೇ ಹಾಲಿ ಅಕ್ರಮಕ್ಕೆ ಸಂಬಂಧಿಸಿ, ಎನ್‌ಟಿಎ ಅಥವಾ ಶಿಕ್ಷಣ ಇಲಾಖೆಯಲ್ಲಿನ ಯಾರೊಬ್ಬರ ಮೇಲೂ ಈ ರೀತಿ ಜವಾಬ್ದಾರಿ ನಿಗದಿ ಮಾಡಿ ಕ್ರಮ ಕೈಗೊಂಡಿಲ್ಲ. ಯಾರ ಮೇಲೂ ಕ್ರಮವಾಗದಿದ್ದಾಗ, ಎನ್‌ಟಿಎಗೆ ಅಧ್ಯಕ್ಷರು ಹಾಗೂ ಮಹಾ ನಿರ್ದೇಶಕರನ್ನು ನೇಮಿಸುವ ಶಿಕ್ಷಣ ಸಚಿವರ ಬಳಿಯೇ ಜವಾಬ್ದಾರಿ ಹೊತುತ ಜಾಗ ಖಾಲಿ ಮಾಡಿ ಎನ್ನುವುದು ನ್ಯಾಯಬದ್ಧ ಬೇಡಿಕೆಯಾಗುತ್ತದೆ. ಇಷ್ಟಾದ ಬಳಿಕವೂ, ಒಂದಿಷ್ಟು ಜಿರಳೆಗಳು ಕಿರುಚಾಡಬಹುದು. ಆದರೆ ಸುಧಾರಣೆ ಬಯಸುವ ಸಾಮಾನ್ಯ ಜನರು, ತಮ್ಮ ದೈನಂದಿನ ಜೀವನದಲ್ಲಿ ಕಳೆದುಹೋಗುತ್ತಾರೆ.



ಸರ್ಕಾರ ಮಾಡಬೇಕಿರುವುದು ಏನು?
ಶಿಕ್ಷಣದ ವಿಚಾರದಲ್ಲಿ ದೇಶದ್ರೋಹ, ಟೂಲ್‌ಕಿಟ್ ಬರಲು ಸಾಧ್ಯವಿಲ್ಲ. ಒಂದೊಮ್ಮೆ ಬಂದಿದ್ದರೂ ಅಲ್ಲಿಯವರೆಗೆ ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದೇ ಕೇಂದ್ರ ಸರ್ಕಾರದ ತಪ್ಪು. ಈ ಕ್ಷಣಕ್ಕೂ ಅಂಥವರ ಪ್ರವೇಶವಾಗಿದ್ದರೆ, ಅವರನ್ನು ಹೊರಹಾಕಿ ನೈಜ ವಿಷಯವನ್ನು ಸರ್ಕಾರ ಆಲಿಸಲೇಬೇಕು. ಹೀಗಾಗಿ ಸರ್ಕಾರ ಮಾಡಬೇಕಿರುವ ಕೆಲಸ ತುಂಬಾ ಸರಳವಾಗಿದೆ. ಇದರಲ್ಲಿ ಯಾವುದೇ ರಾಜಕೀಯ, ಸಿದ್ಧಾಂತ, ಧರ್ಮ ಹಾಗೂ ಇತರ ವಿರೋಧವೂ ಬರುವುದಿಲ್ಲ. ಇದು ಕೇವಲ ಒಂದು ಪರೀಕ್ಷೆಗೆ ಸೀಮಿತವಾಗದ, ಸರ್ವವ್ಯಾಪಿ ಆಗಬೇಕು.
ಹೋರಾಟ ಮಾಡುವವರು ಯಾರಾದರೂ ಆಗಲಿ. ಈ ಮೇಲ್ಕಂಡ ವಿಷಯಗಳು ನಮ್ಮ-ನಿಮ್ಮೆಲ್ಲರ ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದ್ದಾಗಿದೆ. ಈ ಸುಧಾರಣೆಯನ್ನು ಯಾರೇ ಮಾಡಿದರೂ ರಾಜಕೀಯವಾಗಿ ಹೀರೋಗಳಾಗುತ್ತಾರೆ. ಆದರೆ ಒಣ ಪ್ರತಿಷ್ಠೆಯಿಂದ, ಪ್ರಶ್ನೆ ಹತ್ತಿಕ್ಕುವ ಕೆಲಸಕ್ಕೆ ಆದ್ಯತೆ ನೀಡಿದರೆ ವಿಲನ್‌ಗಳಾಗುವುದರಲ್ಲಿ ಸಂದೇಹವೇ ಬೇಡ.
ಕೊನೆಯದಾಗಿ: ಅಂದು ಕೃಷಿ ಕಾಯ್ದೆ, ಇಂದು ನೀಟ್ ವಿಚಾರದಲ್ಲಿ ದಾಂಧಲೆ ನಡೆಸುವರೆಗೂ ಮಾತುಕತೆಗೆ ಮುಂದಾಗದೇ ತಪ್ಪು ಸಂದೇಶವನ್ನು ನೀಡಲಾಗಿದೆ. ಇದೇ ರೀತಿ ಪ್ರತಿ ಬಾರಿಯೂ ಪ್ರತಿಷ್ಠೆಗೆ ಮುಂದಾದರೆ, ಜನರು ಜೊತೆಗೆ ನಿಲ್ಲುವುದಿಲ್ಲ. ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿರುವರನ್ನು ಬದಗಿಟ್ಟು, ನೈಜ ಧ್ವನಿಗಳಿಗೆ ಸ್ಪಂದಿಸಿ. ಬೂತ್ ಮಟ್ಟದ ಅಭಿಪ್ರಾಯ ಸಂಗ್ರಹಿಸಿ ಚುನಾವಣೆ ನಡೆಸುವವರು, ಈ ವಿಚಾರದಲ್ಲಿಯೂ ಜನಾಭಿಪ್ರಾಯ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ಕಣ್ತೆರೆದು ನೋಡಿ. ಹೊಗಳುಭಟರ ಮಾತು ಕೇಳಿಸಿಕೊಂಡು ಪ್ರತಿಷ್ಠೆ, ಅಹಂಕಾರದಿಂದಲೇ ಅದೆಷ್ಟೋ ಸರ್ಕಾರ, ಮಹಾ ನಾಯಕರು ಮೂಲೆ ಸೇರಿದ್ದಾರೆ, ನೆನಪಿರಲಿ.
As protests continue under the banner of the Jirale Janata Party, critics have alleged that the Bharatiya Janata Party (BJP) and its supporters are attempting to divert attention from the movement's core demands by focusing on isolated untoward incidents that occurred during the demonstrations.
23-07-26 08:05 pm
HK News Desk
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
23-07-26 06:26 pm
HK News Desk
ಮೋದಿ ಮೌನ ಹೊಸದೇನಲ್ಲ, 'ನಾವು ತಪ್ಪು ಮಾಡಿದ್ದೇವೆ' ಎ...
23-07-26 05:57 pm
ರಾಜಧಾನಿ ದೆಹಲಿಯಲ್ಲಿ ಹೆಚ್ಚಿದ ಪ್ರತಿಭಟನೆ ಕಿಚ್ಚು ;...
23-07-26 05:48 pm
ಅಯೋಧ್ಯೆ ದೇಣಿಗೆ ಕಳವು ದೇಶದ ಆತ್ಮಸಾಕ್ಷಿಗೆ ಬಿದ್ದ ಪ...
23-07-26 01:51 pm
CJP ಪ್ರತಿಭಟನೆಯಲ್ಲಿ ಪೊಲೀಸ್ ದೌರ್ಜನ್ಯ; ತುರ್ತು ವ...
22-07-26 02:32 pm
23-07-26 10:27 pm
Mangaluru Staffer
ವಿದ್ಯಾರ್ಥಿಗಳಿಗೆ ಲಾಠಿಚಾರ್ಜ್ ದೇಶದ ಭವಿಷ್ಯದ ಮೇಲಿನ...
22-07-26 09:18 pm
2,000 ರೂ. ಆಸೆಗೆ ಬಿದ್ದು ಬ್ಯಾಂಕ್ ಅಕೌಂಟ್ ಹಸ್ತಾಂತ...
21-07-26 11:02 pm
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
22-07-26 10:24 pm
HK News Desk
ಎಸ್ಐಆರ್ ಪರಿಷ್ಕರಣೆ ನೆಪದಲ್ಲಿ ಎಪಿಕೆ ಫೈಲ್ ಕಳುಹಿಸಿ...
22-07-26 09:03 pm
ಬಂಟ್ವಾಳ ; ಮಳೆ-ಗಾಳಿಗೆ ಶಾಲಾ ಬಸ್ಸಿಗೆ ಉರುಳಿ ಬಿದ್ದ...
22-07-26 07:37 pm
Mysuru Murder, Suicide: ನಾನಿಲ್ಲದೆ ನನ್ನ ಹೆಂಡತಿ...
22-07-26 04:21 pm
ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ವ್ಯಕ್ತಿಯಿಂದ ಕಳ್ಳತ...
22-07-26 10:55 am