ಬ್ರೇಕಿಂಗ್ ನ್ಯೂಸ್
24-07-26 01:36 pm ರೇಖಾ ಶೆಟ್ಟಿ, ವಕೀಲರು, ಬೆಂಗಳೂರು ಅಂಕಣಗಳು
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಇತ್ತೀಚಿನ ವಿಚಾರಣೆ ಹಾಗೂ ಮರು ತನಿಖೆಯ ಸಾಧ್ಯತೆಯ ಬೆಳವಣಿಗೆ, ಕೇವಲ ಒಂದು ಹಳೆಯ ಕ್ರಿಮಿನಲ್ ಪ್ರಕರಣವನ್ನು ಮತ್ತೆ ತೆರೆದು ನೋಡುವ ಪ್ರಶ್ನೆಯಲ್ಲ. ಇದು ಭಾರತದ ತನಿಖಾ ವ್ಯವಸ್ಥೆಯ ವಿಶ್ವಾಸಾರ್ಹತೆ, ಪೊಲೀಸ್ ಹೊಣೆಗಾರಿಕೆ, ಅಧಿಕಾರಿಗಳ ಕರ್ತವ್ಯನಿಷ್ಠೆ ಮತ್ತು ಸಂವಿಧಾನದ ಮುಂದೆ ರಾಜ್ಯದ ಜವಾಬ್ದಾರಿಯನ್ನು ಪ್ರಶ್ನಿಸುವ ಅತ್ಯಂತ ಗಂಭೀರ ಘಟ್ಟವಾಗಿದೆ. ಸುಪ್ರೀಂ ಕೋರ್ಟ್ ಸಿಬಿಐ ತನಿಖೆಯ ರೀತಿಯ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎತ್ತಿದ್ದು, ಪ್ರಕರಣದ ಕುರಿತು ಹೊಸ ತನಿಖೆಯ ಸಾಧ್ಯತೆ ಎದುರಾಗಿದೆ.
ಅಧಿಕಾರಿಯ ತನಿಖಾ ಲೋಪ ತನಿಖೆ ಮಾಡೋದ್ಯಾರು?
ಒಬ್ಬ ಸಾಮಾನ್ಯ ನಾಗರಿಕನಿಗೆ ತನಿಖೆಯಲ್ಲಿ ತಪ್ಪಾದರೆ ಕಾನೂನು ಕ್ರಮ. ಆದರೆ ಲಕ್ಷಾಂತರ ರೂಪಾಯಿ ಸಂಬಳ, ಭತ್ಯೆ, ಸರ್ಕಾರಿ ಸೌಲಭ್ಯ ಮತ್ತು ಅಧಿಕಾರವನ್ನು ಹೊಂದಿರುವ ತನಿಖಾಧಿಕಾರಿಯ ತನಿಖೆಯಲ್ಲೇ ಗಂಭೀರ ಲೋಪ ಕಂಡುಬಂದರೆ—ಆ ಅಧಿಕಾರಿಯ ಕರ್ತವ್ಯ ಲೋಪವನ್ನು ಯಾರು ತನಿಖೆ ಮಾಡಬೇಕು? ಸೌಜನ್ಯ ಪ್ರಕರಣದಲ್ಲಿ ಮರುತನಿಖೆ ನಡೆಯಬೇಕು ಎಂಬ ಬೇಡಿಕೆ ನ್ಯಾಯಸಮ್ಮತವಾದರೆ, ಅದೇ ಸಮಯದಲ್ಲಿ ಈ ಪ್ರಕರಣದಲ್ಲಿ ಹಿಂದಿನಿಂದ ತನಿಖೆ ನಡೆಸಿದ ವಿವಿಧ ಹಂತಗಳ ಅಧಿಕಾರಿಗಳ ಕರ್ತವ್ಯವನ್ನೂ ಪರಿಶೀಲಿಸಬೇಕು. ಮರುತನಿಖೆ ಎಂದರೆ ಕೇವಲ ಹೊಸ ಆರೋಪಿಯನ್ನು ಹುಡುಕುವುದು ಅಲ್ಲ; ಹಿಂದಿನ ತನಿಖೆ ಏಕೆ ವಿಫಲವಾಯಿತು ಎಂಬುದನ್ನು ಕಂಡುಹಿಡಿಯುವುದೂ ಆಗಿದೆ.
ಸ್ಥಳೀಯ ಪೊಲೀಸ್ ತನಿಖೆ ನಡೆಸಿತು. ನಂತರ ರಾಜ್ಯ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಿದವು. ಕೊನೆಗೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಬಿಐ ತನಿಖೆ ನಡೆಸಿತು. ಈ ಮೂರು ಹಂತಗಳ ತನಿಖೆಯ ನಂತರವೂ ಸತ್ಯದ ಬಗ್ಗೆ ಸಮಾಜದಲ್ಲಿ ಅನುಮಾನ ಉಳಿದಿದ್ದರೆ, ಪ್ರಶ್ನೆ ಕೇವಲ ಆರೋಪಿಯ ಮೇಲಲ್ಲ—ತನಿಖಾ ವ್ಯವಸ್ಥೆಯ ಮೇಲೂ ಇರಬೇಕು.
ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ರಾಜ್ಯದ ತನಿಖಾ ಸಂಸ್ಥೆಗಳು ರಾಜ್ಯ ಸರ್ಕಾರದ ಅಧೀನದಲ್ಲಿವೆ. ಸ್ಥಳೀಯ ಪೊಲೀಸ್ ಜಿಲ್ಲಾ ಹಾಗೂ ರಾಜ್ಯ ಪೊಲೀಸ್ ವ್ಯವಸ್ಥೆಯ ಭಾಗವಾಗಿದೆ. ಅಧಿಕಾರದ ಸರಪಳಿ ಬೇರೆಯಾಗಿರಬಹುದು; ಆದರೆ ಸಂವಿಧಾನದ ಮುಂದೆ ಎಲ್ಲರ ಕರ್ತವ್ಯ ಒಂದೇ ; ಸತ್ಯವನ್ನು ಪತ್ತೆಹಚ್ಚುವುದು. ಸಾಕ್ಷ್ಯವನ್ನು ಸಂರಕ್ಷಿಸುವುದು. ನಿರಪರಾಧಿಯನ್ನು ಬಲಿಪಶುವನ್ನಾಗಿಸದಿರುವುದು. ನಿಜವಾದ ಅಪರಾಧಿಯನ್ನು ರಕ್ಷಿಸದಿರುವುದು.
ಈ ಕರ್ತವ್ಯದಲ್ಲಿ ವಿಫಲವಾದರೆ ಅದು ಕೇವಲ ಆಡಳಿತಾತ್ಮಕ ತಪ್ಪಲ್ಲ. ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ ಅದು ಕರ್ತವ್ಯಲೋಪ, ತನಿಖಾ ನಿರ್ಲಕ್ಷ್ಯ, ಸಾಕ್ಷ್ಯ ನಿರ್ವಹಣೆಯ ವೈಫಲ್ಯ ಅಥವಾ ಅಧಿಕಾರದ ದುರುಪಯೋಗದ ಪ್ರಶ್ನೆಯಾಗಬಹುದು. ಆದ್ದರಿಂದ ಹೊಸ SIT ರಚನೆಯಾದರೆ, ಅದರ ಮೊದಲ ಕರ್ತವ್ಯ ಕೇವಲ “ಯಾರು ಅಪರಾಧಿ?” ಎಂಬ ಪ್ರಶ್ನೆಗೆ ಉತ್ತರ ಹುಡುಕುವುದಾಗಿರಬಾರದು. ಅದಕ್ಕಿಂತ ಮೊದಲು, ಹಿಂದಿನ ತನಿಖೆಯಲ್ಲಿ ಯಾವ ಅಧಿಕಾರಿಗಳು ಯಾವ ಕರ್ತವ್ಯ ನಿರ್ವಹಿಸಿದರು? ಯಾವ ಸಾಕ್ಷ್ಯ ಸಂಗ್ರಹಿಸಲಾಯಿತು? ಯಾವ ಸಾಕ್ಷ್ಯ ಸಂಗ್ರಹಿಸಲಿಲ್ಲ? ಯಾವ ಸಾಕ್ಷ್ಯವನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಯಿತು? ಯಾವ ಸಾಕ್ಷ್ಯವನ್ನು ನಿರ್ಲಕ್ಷಿಸಲಾಯಿತು? ತನಿಖೆಯ ಯಾವ ಹಂತದಲ್ಲಿ ತಪ್ಪು ಸಂಭವಿಸಿತು? ಯಾವ ಅಧಿಕಾರಿಯ ನಿರ್ಧಾರದಿಂದ ತನಿಖೆ ತಪ್ಪು ದಿಕ್ಕಿಗೆ ಹೋಯಿತು?ಇವೆಲ್ಲವನ್ನೂ ಪರಿಶೀಲಿಸಬೇಕು.
SIT ಎಂದರೆ ಕೇವಲ ಮತ್ತೊಂದು ತನಿಖಾ ಸಂಸ್ಥೆಯ ಹೆಸರು ಬದಲಾವಣೆ ಆಗಬಾರದು. ಅದು ಹಿಂದಿನ ತನಿಖೆಗಳ ಮೇಲೆಯೂ ಸ್ವತಂತ್ರವಾಗಿ ಬೆಳಕು ಚೆಲ್ಲುವ ಸಂಸ್ಥೆಯಾಗಬೇಕು. ಒಬ್ಬ ನಾಗರಿಕನು ಅಪರಾಧ ಮಾಡಿದರೆ, ಅವನನ್ನು ತನಿಖೆಗೊಳಪಡಿಸಲಾಗುತ್ತದೆ. ಆದರೆ ತನಿಖಾಧಿಕಾರಿಯೇ ತನಿಖೆಯಲ್ಲಿ ಕರ್ತವ್ಯಲೋಪ ಮಾಡಿದರೆ, ಆತನನ್ನು ತನಿಖೆಗೊಳಪಡಿಸುವ ವ್ಯವಸ್ಥೆ ಇರಬಾರದೆ? “ತನಿಖಾಧಿಕಾರಿ” ಎಂಬ ಹುದ್ದೆ ಕಾನೂನಿಗಿಂತ ಮೇಲಲ್ಲ. “ಸಿಬಿಐ” ಎಂಬ ಸಂಸ್ಥೆಯ ಹೆಸರು ಸಂವಿಧಾನಕ್ಕಿಂತ ಮೇಲಲ್ಲ. “ಪೊಲೀಸ್ ಅಧಿಕಾರ” ಎಂಬ ಅಧಿಕಾರ ಸತ್ಯಕ್ಕಿಂತ ಮೇಲಲ್ಲ.
ಭಾರತೀಯ ಸಂವಿಧಾನದ ಕಲಂ 14 ಎಲ್ಲರಿಗೂ ಕಾನೂನಿನ ಮುಂದೆ ಸಮಾನತೆಯನ್ನು ಖಾತರಿಪಡಿಸುತ್ತದೆ. ಕಲಂ 21 ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಯನ್ನು ಒದಗಿಸುತ್ತದೆ. ನ್ಯಾಯಯುತ ತನಿಖೆ ಮತ್ತು ನ್ಯಾಯಯುತ ಪ್ರಕ್ರಿಯೆ ಇವುಗಳ ಅಂತರಂಗ ಭಾಗಗಳಾಗಿವೆ. ತನಿಖೆಯೇ ಪಕ್ಷಪಾತಪೂರ್ಣವಾಗಿದ್ದರೆ ಅಥವಾ ಗಂಭೀರ ಲೋಪಗಳಿಂದ ಕೂಡಿದ್ದರೆ, ನ್ಯಾಯದ ಸಂಪೂರ್ಣ ವ್ಯವಸ್ಥೆಯೇ ದುರ್ಬಲವಾಗುತ್ತದೆ.



ಸೌಜನ್ಯ ಪ್ರಕರಣವು ಮತ್ತೊಂದು ಗಂಭೀರ ಪ್ರಶ್ನೆಯನ್ನು ಎತ್ತುತ್ತದೆ:
ತನಿಖಾ ಸಂಸ್ಥೆಗಳು ಯಾರಿಗಾಗಿ? ಸರ್ಕಾರಕ್ಕಾಗಿ? ಅಧಿಕಾರಿಗಳಿಗಾಗಿ? ರಾಜಕೀಯ ಪಕ್ಷಗಳಿಗಾಗಿ? ಅಥವಾ ಜನರಿಗಾಗಿ? ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದೆ ಎಂದು ಹೇಳಿ ಕೇಂದ್ರದ ರಾಜಕೀಯವನ್ನು ಬೆಂಬಲಿಸುವವರು ತನಿಖಾ ಲೋಪಗಳನ್ನು ಸಮರ್ಥಿಸಬಾರದು. ರಾಜ್ಯದ ತನಿಖಾ ಸಂಸ್ಥೆ ರಾಜ್ಯ ಸರ್ಕಾರದ ಅಧೀನದಲ್ಲಿದೆ ಎಂದು ಹೇಳಿ ರಾಜ್ಯ ರಾಜಕೀಯವನ್ನು ಬೆಂಬಲಿಸುವವರು ಅದರ ವೈಫಲ್ಯವನ್ನು ಮುಚ್ಚಿಡಬಾರದು. ಸ್ಥಳೀಯ ಪೊಲೀಸ್ ವ್ಯವಸ್ಥೆಯ ತಪ್ಪುಗಳನ್ನು ಸ್ಥಳೀಯ ರಾಜಕೀಯದ ಹೆಸರಿನಲ್ಲಿ ರಕ್ಷಿಸಬಾರದು.
ಬಿಜೆಪಿ ಕಾರ್ಯಕರ್ತನಿಗೆ ನ್ಯಾಯ ಬೇಕು. ಕಾಂಗ್ರೆಸ್ ಕಾರ್ಯಕರ್ತನಿಗೂ ನ್ಯಾಯ ಬೇಕು. ಕಮ್ಯುನಿಸ್ಟ್ ಕಾರ್ಯಕರ್ತನಿಗೂ ನ್ಯಾಯ ಬೇಕು. ಜೆಡಿಎಸ್ ಕಾರ್ಯಕರ್ತನಿಗೂ ನ್ಯಾಯ ಬೇಕು. ಯಾವುದೇ ಪಕ್ಷಕ್ಕೆ ಸೇರಿದವರಲ್ಲದ ಸಾಮಾನ್ಯ ನಾಗರಿಕನಿಗೂ ಅದೇ ನ್ಯಾಯ ಬೇಕು. ಆದರೆ ಪಕ್ಷದ ಧ್ವಜ ಹಿಡಿದ ತಕ್ಷಣ ತನಿಖಾ ಸಂಸ್ಥೆಯ ತಪ್ಪನ್ನೂ ಸಮರ್ಥಿಸುವುದು ಪ್ರಜಾಪ್ರಭುತ್ವವಲ್ಲ. ಅದು ರಾಜಕೀಯ ಅಂಧಭಕ್ತಿ.
ಸರ್ಕಾರ ಎಂದರೆ ಒಂದು ಪಕ್ಷವಲ್ಲ. ಸರ್ಕಾರ ಎಂದರೆ ಸಂವಿಧಾನದಿಂದ ಸ್ಥಾಪಿತವಾದ ಸಾರ್ವಜನಿಕ ವ್ಯವಸ್ಥೆ. ಪೊಲೀಸ್ ಅಧಿಕಾರಿ ಎಂದರೆ ಯಾವುದೇ ಪಕ್ಷದ ಕಾರ್ಯಕರ್ತನಲ್ಲ. ತನಿಖಾ ಸಂಸ್ಥೆ ಎಂದರೆ ಸರ್ಕಾರದ ರಾಜಕೀಯ ರಕ್ಷಣಾ ಕವಚವಲ್ಲ. ಸರ್ಕಾರ ಬದಲಾಗುತ್ತದೆ. ಪಕ್ಷಗಳು ಬದಲಾಗುತ್ತವೆ. ಅಧಿಕಾರಿಗಳು ಬದಲಾಗುತ್ತಾರೆ. ಆದರೆ ನ್ಯಾಯದ ಅಗತ್ಯ ಬದಲಾಗುವುದಿಲ್ಲ.
ಲಕ್ಷಾಂತರ ರೂಪಾಯಿ ಸಂಬಳ, ಸರ್ಕಾರಿ ವಾಹನ, ಭದ್ರತೆ, ಕಚೇರಿ, ಸಿಬ್ಬಂದಿ ಮತ್ತು ಅಧಿಕಾರವನ್ನು ಪಡೆಯುವ ತನಿಖಾಧಿಕಾರಿಗಳಿಗೆ ಒಂದು ಸಾಮಾನ್ಯ ನಾಗರಿಕನಿಗಿಂತ ಹೆಚ್ಚಿನ ಸಂವಿಧಾನಿಕ ಜವಾಬ್ದಾರಿ ಇದೆ. ಅವರು ತಪ್ಪು ಮಾಡಿದರೆ, “ಮಾನವೀಯ ತಪ್ಪು” ಎಂದು ಹೇಳಿ ಮುಗಿಸುವ ಪ್ರಶ್ನೆಯಲ್ಲ. ಆ ತಪ್ಪಿನಿಂದ ಒಬ್ಬ ನಿರಪರಾಧಿ ಜೈಲಿಗೆ ಹೋಗಬಹುದು. ಒಬ್ಬ ನಿಜವಾದ ಅಪರಾಧಿ ತಪ್ಪಿಸಿಕೊಳ್ಳಬಹುದು. ಒಂದು ಕುಟುಂಬ ಜೀವನಪೂರ್ತಿ ನ್ಯಾಯಕ್ಕಾಗಿ ಅಲೆದಾಡಬಹುದು.
ಆದ್ದರಿಂದ ಸೌಜನ್ಯ ಪ್ರಕರಣದ ಮರುತನಿಖೆಯೊಂದಿಗೆ ಒಂದು ಸ್ವತಂತ್ರ “Investigation Accountability Inquiry” ಕೂಡ ಅಗತ್ಯವಾಗಿದೆ. ಅಂದರೆ, ಅಪರಾಧದ ತನಿಖೆ ಒಂದು ಕಡೆ. ಹಿಂದಿನ ತನಿಖೆಯ ವೈಫಲ್ಯದ ತನಿಖೆ ಇನ್ನೊಂದು ಕಡೆ. ಇದು ಪ್ರತೀಕಾರಕ್ಕಾಗಿ ಅಲ್ಲ. ಯಾವುದೇ ಅಧಿಕಾರಿಯನ್ನು ಮುಂಚಿತವಾಗಿ ಅಪರಾಧಿ ಎಂದು ಘೋಷಿಸಲು ಅಲ್ಲ. ಆದರೆ ಕಾನೂನಿನ ಮುಂದೆ “ಯಾರೇ ಆಗಿರಲಿ—ತನಿಖೆಯ ಹೆಸರಿನಲ್ಲಿ ಕರ್ತವ್ಯಲೋಪ ಮಾಡಿದರೆ ಉತ್ತರಿಸಲೇಬೇಕು” ಎಂಬ ತತ್ವವನ್ನು ಸ್ಥಾಪಿಸಲು.
ಸೌಜನ್ಯಗೆ ನ್ಯಾಯ ಸಿಗಬೇಕಾದರೆ ನಿಜವಾದ ಅಪರಾಧಿ ಯಾರು ಎಂಬುದು ಪತ್ತೆಯಾಗಬೇಕು. ಆದರೆ ಅದರ ಜೊತೆಗೆ, ನ್ಯಾಯವನ್ನು ಹುಡುಕುವ ವ್ಯವಸ್ಥೆಯೇ ಏಕೆ ವಿಫಲವಾಯಿತು ಎಂಬ ಸತ್ಯವೂ ಹೊರಬರಬೇಕು. ಇಲ್ಲದಿದ್ದರೆ, ಇಂದು ಸೌಜನ್ಯ ಪ್ರಕರಣ. ನಾಳೆ ಮತ್ತೊಬ್ಬ ಬಡವನ ಪ್ರಕರಣ. ಮತ್ತೊಂದು ಕುಟುಂಬ. ಮತ್ತೊಂದು ತಾಯಿ. ಮತ್ತೊಂದು ಮಗಳು. ಮತ್ತೆ ಅದೇ ತನಿಖೆ. ಮತ್ತೆ ಅದೇ ಅಧಿಕಾರಿಗಳು. ಮತ್ತೆ ಅದೇ ಕಡತಗಳು. ಮತ್ತೆ ಅದೇ “ಸಾಕ್ಷ್ಯ ಇಲ್ಲ” ಎಂಬ ಉತ್ತರ.
ಇದು ನ್ಯಾಯವ್ಯವಸ್ಥೆಯ ಅಂತ್ಯವಾಗಬಾರದು!
ಸುಪ್ರೀಂ ಕೋರ್ಟ್ ಮಧ್ಯಪ್ರವೇಶವು ಒಂದು ಐತಿಹಾಸಿಕ ಅವಕಾಶವಾಗಿದೆ. ಈ ಅವಕಾಶವನ್ನು ಕೇವಲ ಸೌಜನ್ಯ ಪ್ರಕರಣದ ಮರು ತನಿಖೆಗೆ ಸೀಮಿತಗೊಳಿಸದೆ, ಭಾರತದಲ್ಲಿ ತನಿಖಾ ಸಂಸ್ಥೆಗಳ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವದ ಹೊಸ ಸಂವಿಧಾನಿಕ ಮಾನದಂಡವನ್ನು ಸ್ಥಾಪಿಸಲು ಬಳಸಬೇಕು.
ಸೌಜನ್ಯಗೆ ನ್ಯಾಯ ಬೇಕು. ಸತ್ಯಕ್ಕೆ ನ್ಯಾಯ ಬೇಕು. ತನಿಖಾ ವೈಫಲ್ಯಕ್ಕೂ ಉತ್ತರ ಬೇಕು. ಸಂವಿಧಾನಕ್ಕಿಂತ ಮೇಲಿರುವ ಯಾವುದೇ ತನಿಖಾ ಸಂಸ್ಥೆ ಇಲ್ಲ. ನ್ಯಾಯದ ಹೆಸರಿನಲ್ಲಿ ತನಿಖೆ ಮಾಡುವವರನ್ನೂ ಅಗತ್ಯವಿದ್ದರೆ ನ್ಯಾಯದ ಮುಂದೆ ತನಿಖೆಗೊಳಪಡಿಸಬೇಕು.
28-07-26 08:12 pm
HK News Staffer
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
28-07-26 08:11 pm
HK News Staffer
Lavanya Murder Case, News: ಲಾವಣ್ಯ ಹತ್ಯೆ ಪ್ರಕರ...
28-07-26 07:07 pm
ವಿಚ್ಛೇದಿತ ಮಹಿಳೆಗೆ ಫೇಸ್ಬುಕ್ನಲ್ಲಿ ಪ್ರೀತಿಯ ನಾಟ...
28-07-26 12:28 pm
12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣ ;...
27-07-26 11:07 pm
ಕಾಪುವಿನಲ್ಲಿ ಎಕ್ಸ್ಪ್ರೆಸ್ ಬಸ್ಗಳ ದರ್ಪ! ಟೈಮಿಂಗ್...
27-07-26 10:21 pm