ಬ್ರೇಕಿಂಗ್ ನ್ಯೂಸ್
16-09-26 11:35 am ರಂಗಸ್ವಾಮಿ ಮೂಕನಹಳ್ಳಿ, ಲೇಖಕರು ಅಂಕಣಗಳು
ಇತ್ತೀಚಿನ ವರ್ಷಗಳಲ್ಲಿ ಹಲವು ದೇಶಗಳು ಅಮೆರಿಕದ ಡಾಲರ್ ಮೇಲಿನ ಅವಲಂಬನೆಯನ್ನು ನಿಧಾನವಾಗಿ ಕಡಿಮೆ ಮಾಡುತ್ತಿರುವುದು ಜಾಗತಿಕ ಆರ್ಥಿಕ ವಲಯದಲ್ಲಿ ಬಹು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವು ದೇಶಗಳು ತಮ್ಮಲ್ಲಿರುವ ಅಮೆರಿಕದ ಸರ್ಕಾರಿ ಸಾಲಪತ್ರಗಳ ಪ್ರಮಾಣವನ್ನು ತಗ್ಗಿಸುತ್ತಿದ್ದರೆ, ಇನ್ನೂ ಕೆಲವು ದೇಶಗಳು ಚಿನ್ನದ ಸಂಗ್ರಹವನ್ನು ಹೆಚ್ಚಿಸುತ್ತಿವೆ. ಸ್ಥಳೀಯ ಕರೆನ್ಸಿಗಳಲ್ಲಿ ಪರಸ್ಪರ ವ್ಯಾಪಾರ ನಡೆಸುವ ಪ್ರಯತ್ನವೂ ಹೆಚ್ಚಾಗಿದೆ. ಇದನ್ನು ವಿತ್ತ ಜಗತ್ತಿನ ಪಂಡಿತರು “ಡಾಲರ್ ಯುಗಾಂತ್ಯ ” ಎಂದು ಕರೆಯುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಡಾಲರ್ ಮೌಲ್ಯ ಕುಸಿಯುತ್ತದೆ ಎಂದು ವಿಶ್ಲೇಷಣೆ ಮಾಡುತ್ತಿದ್ದಾರೆ. ಒಂದು ಡಾಲರ್ ಮೌಲ್ಯ ಭಾರತದ 10 ರುಪಾಯಿಗೆ ಕುಸಿಯುವ ಸಂಭಾವ್ಯತೆ ಇದೆ ಎನ್ನುತ್ತಿದ್ದಾರೆ. ವಾಸ್ತವದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ಡಾಲರ್ ವ್ಯವಸ್ಥೆ ತಕ್ಷಣದ ಕುಸಿತವನ್ನು ಕಾಣುತ್ತಿಲ್ಲ. ಈಗಾಗಲೇ ಹತ್ತಾರು ವರ್ಷದಿಂದ ಒಂದೇ ಕರೆನ್ಸಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವ ನಿಧಾನಗತಿಯ ಪ್ರಯತ್ನದ ಮುಂದುವರಿದ ಭಾಗವಾಗಿದೆ.
ಮೊದಲನೆಯದಾಗಿ, ಜಗತ್ತಿನ ಎಲ್ಲ ದೇಶಗಳೂ ಅಮೆರಿಕದ ಸಾಲಪತ್ರಗಳನ್ನು ಮಾರುತ್ತಿವೆ ಎನ್ನುವುದು ಸರಿಯಲ್ಲ. ಅನೇಕ ದೇಶಗಳು ಇನ್ನೂ ಅವುಗಳನ್ನು ತಮ್ಮ ವಿದೇಶಿ ವಿನಿಮಯ ಸಂಗ್ರಹದ ಪ್ರಮುಖ ಭಾಗವಾಗಿ ಹೊಂದಿವೆ. 2026ರ ಮೊದಲ ತ್ರೈಮಾಸಿಕದಲ್ಲಿ ಜಾಗತಿಕ ಅಧಿಕೃತ ವಿದೇಶಿ ವಿನಿಮಯ ಸಂಗ್ರಹದಲ್ಲಿ ಡಾಲರ್‌ನ ಪಾಲು ಸುಮಾರು ಶೇ.57ರಷ್ಟಿತ್ತು. ಹೀಗಾಗಿ ಡಾಲರ್‌ನ ಪ್ರಾಬಲ್ಯ ಇನ್ನೂ ಗಟ್ಟಿಯಾಗಿದೆ. ಆದರೆ ಜಾಗತಿಕ ವಿದೇಶಿ ವಿನಿಮಯ ಸಂಗ್ರಹದ ತೊಂಬತ್ತಕ್ಕೂ ಹೆಚ್ಚು ಪ್ರತಿಶತ ಒಂದು ಕಾಲದಲ್ಲಿ ಡಾಲರಿನಲ್ಲಿ ಇರುತ್ತಿತ್ತು ಎನ್ನುವ ಅಂಶವನ್ನು ಕೂಡ ನಾವು ಮರೆಯಬಾರದು. ಡಾಲರ್ ಸದ್ಯಕ್ಕೆ ಇನ್ನೂ ಜಾಗತಿಕ ವಿತ್ತ ವ್ಯವಸ್ಥೆಯ ಮೇಲೆ ಹಿಡಿತ ಹೊಂದಿದೆ ಎನ್ನುವುದು ಎಷ್ಟು ಸತ್ಯವೋ , ಮೊದಲಿನ ಹಿಡಿತ ಬಹಳಷ್ಟು ಸಡಿಲವಾಗಿದೆ ಎನ್ನುವುದು ಕೂಡ ಅಷ್ಟೇ ಸತ್ಯ.
ಅಮೆರಿಕದ ಸಾಲದ ಬಗ್ಗೆ ಹೆಚ್ಚುತ್ತಿರುವ ಆತಂಕ
ದೇಶಗಳು ತಮ್ಮ ಅಮೆರಿಕದ ಸಾಲಪತ್ರಗಳ ಪ್ರಮಾಣವನ್ನು ಕಡಿಮೆ ಮಾಡಲು ಮುಂದಾಗುತ್ತಿರುವ ಪ್ರಮುಖ ಕಾರಣಗಳಲ್ಲಿ ಅಮೆರಿಕದ ಹೆಚ್ಚುತ್ತಿರುವ ಸರ್ಕಾರಿ ಸಾಲವೂ ಒಂದು. ಸರ್ಕಾರದ ಆದಾಯಕ್ಕಿಂತ ವೆಚ್ಚ ಹೆಚ್ಚಾದಾಗ ಆ ಕೊರತೆಯನ್ನು ತುಂಬಲು ಹೆಚ್ಚಿನ ಸಾಲ ಪಡೆಯಬೇಕಾಗುತ್ತದೆ. ಇದಕ್ಕಾಗಿ ಹೊಸ ಸಾಲಪತ್ರಗಳನ್ನು ಹೊರಡಿಸಲಾಗುತ್ತದೆ.
ಸರ್ಕಾರದ ಸಾಲ ನಿರಂತರವಾಗಿ ಹೆಚ್ಚಿದಂತೆ ಭವಿಷ್ಯದ ಬಡ್ಡಿ ಪಾವತಿ ಮತ್ತು ಸಾಲ ನಿರ್ವಹಣೆಯ ಸಾಮರ್ಥ್ಯದ ಬಗ್ಗೆ ಆತಂಕ ಹೆಚ್ಚಾಗುವುದು ಸಹಜ. ಹೀಗಾಗಿ ಕೆಲವು ದೇಶಗಳು ತಮ್ಮ ಸಂಪತ್ತನ್ನು ಒಂದೇ ದೇಶದ ಸಾಲಪತ್ರಗಳಲ್ಲಿ ಕೇಂದ್ರೀಕರಿಸುವ ಬದಲು ಚಿನ್ನ, ಯೂರೋ ಮತ್ತು ಇತರ ಆಸ್ತಿಗಳಲ್ಲಿ ಹಂಚಿಕೊಳ್ಳಲು ಮುಂದಾಗುತ್ತಿವೆ.ಅಮೆರಿಕಾದ ಸಾಲದ ಮೊತ್ತವೂ ನಲವತ್ತುಸನ್ನಿವೇಶ ದಲ್ಲಿ ಟ್ರಿಲಿಯನ್ ಡಾಲರ್ ಮೀರುತ್ತಿದೆ. ವಾರ್ಷಿಕ ಈ ಸಾಲದ ಮೇಲೆ ಕಟ್ಟುವ ಬಡ್ಡಿಯ ಮೊತ್ತವೇ ಒಂದು ಟ್ರಿಲಿಯನ್ ಮೀರುತ್ತಿದೆ. ಬಡ್ಡಿ ಕಟ್ಟಲು ಹೊಸ ಸಾಲ ಮಾಡಬೇಕಾದ ಸನ್ನಿವೇಶದಲ್ಲಿ ಅಮೇರಿಕಾ ಸಿಲುಕಿದೆ. ಸಹಜವಾಗೇ ಇದು ಆತಂಕವನ್ನು ಸೃಷ್ಟಿಸಿದೆ.
ಬಡ್ಡಿದರಗಳ ಬದಲಾವಣೆಯ ಪರಿಣಾಮ
ಅಮೆರಿಕದ ಸರ್ಕಾರಿ ಸಾಲಪತ್ರಗಳು ಸುರಕ್ಷಿತವಾಗಿದ್ದರೂ ಅವುಗಳ ಮಾರುಕಟ್ಟೆ ಬೆಲೆ ಸ್ಥಿರವಾಗಿರುವುದಿಲ್ಲ. ವಿಶೇಷವಾಗಿ ದೀರ್ಘಾವಧಿಯ ಸಾಲಪತ್ರಗಳ ಬೆಲೆ ಬಡ್ಡಿದರಗಳ ಬದಲಾವಣೆಯಿಂದ ಪ್ರಭಾವಿತವಾಗುತ್ತದೆ.ಬಡ್ಡಿದರಗಳು ಏರಿದಾಗ ಹೊಸ ಸಾಲಪತ್ರಗಳು ಹೆಚ್ಚಿನ ಬಡ್ಡಿ ನೀಡುತ್ತವೆ. ಹೀಗಾಗಿ ಹಳೆಯ ಸಾಲಪತ್ರಗಳ ಮಾರುಕಟ್ಟೆ ಬೆಲೆ ಇಳಿಯುತ್ತದೆ. ಆದ್ದರಿಂದ ಕೇಂದ್ರ ಬ್ಯಾಂಕುಗಳು ತಮ್ಮ ಸಂಗ್ರಹವನ್ನು ನಿರ್ವಹಿಸುವಾಗ ಸುರಕ್ಷತೆ ಮಾತ್ರವಲ್ಲದೆ ಬಡ್ಡಿದರದ ಅಪಾಯ ಮತ್ತು ಹೂಡಿಕೆಯ ಅವಧಿಯನ್ನೂ ಪರಿಗಣಿಸುತ್ತವೆ. ಇವತ್ತಿನ ದಿನದಲ್ಲಿ ಜಾಗತಿಕ ಅಸ್ಥಿರತೆ ಎಷ್ಟಿದೆ ಎಂದರೆ ಬಡ್ಡಿ ದರ ನಿರ್ಧರಿಸುವುದು ಕೂಡ ಕಷ್ಟವಾಗುತ್ತಿದೆ.

ಸಂಘರ್ಷದಲ್ಲಿ ರಷ್ಯಾ ಮೇಲಿನ ನಿರ್ಬಂಧಗಳ ಪರಿಣಾಮ
ರಷ್ಯಾ ವಿರುದ್ಧ ವಿಧಿಸಲಾದ ಆರ್ಥಿಕ ನಿರ್ಬಂಧಗಳು ಮತ್ತೊಂದು ಮಹತ್ವದ ಸಂದೇಶವನ್ನು ಜಗತ್ತಿಗೆ ನೀಡಿದೆ. ರಾಜಕೀಯ ಸಂಘರ್ಷದ ಸಂದರ್ಭದಲ್ಲಿ ಒಂದು ದೇಶದ ವಿದೇಶಿ ವಿನಿಮಯ ಸಂಗ್ರಹವನ್ನು ಮತ್ತೊಂದು ದೇಶದ ಹಣಕಾಸು ವ್ಯವಸ್ಥೆಯಲ್ಲಿ ಇಡುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಹಲವು ರಾಷ್ಟ್ರಗಳಲ್ಲಿ ಮೂಡಿತು.ಗಮನಿಸಿ ಅಮೇರಿಕಾ ನಿರ್ಬಂಧ ಹೇರುತ್ತಾ ರಷ್ಯಾದ ವಿದೇಶಿ ವಿನಿಮಯವನ್ನು ವಶಪಡಿಸಿಕೊಂಡರೆ (ಸೀಸ್ ) ಆಗ ರಷ್ಯಾದ ಆರ್ಥಿಕತೆ ಕುಸಿತವನ್ನು ಕಾಣುತ್ತದೆ. ಅಮೇರಿಕಾ ಡಾಲರಿನಲ್ಲಿ ವಿದೇಶಿ ವಿನಿಮಯ ಸಂಗ್ರಹ ಮಾಡುವುದು ದೇಶದ ಆರ್ಥಿಕತೆಯ ಮೂಗುದಾರವನ್ನು ಅಮೆರಿಕಾ ಕೈಗೆ ಕೊಟ್ಟಂತೆ ಆಗುತ್ತದೆ. ಬಹುತೇಕ ದೇಶಗಳಿಗೆ ಈಗ ಈ ಸತ್ಯದ ಅರಿವಾಗುತ್ತಿದೆ.
ಇದರಿಂದ ಚಿನ್ನದ ಮಹತ್ವ ಹೆಚ್ಚಾಯಿತು. ಚಿನ್ನ ಯಾವುದೇ ಸರ್ಕಾರದ ಸಾಲವಲ್ಲ ಮತ್ತು ಯಾವುದೇ ಒಂದು ದೇಶದ ಹಣಕಾಸು ವ್ಯವಸ್ಥೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿಲ್ಲ. ಹೀಗಾಗಿ ಕೆಲವು ಕೇಂದ್ರ ಬ್ಯಾಂಕುಗಳು ಚಿನ್ನವನ್ನು ಆರ್ಥಿಕ ಹಾಗೂ ಭೌಗೋಳಿಕ ರಾಜಕೀಯ ರಕ್ಷಣಾ ಆಸ್ತಿಯಾಗಿ ನೋಡಲು ಆರಂಭಿಸಿವೆ.ಜಾಗತಿಕ ರಾಜಕೀಯದಲ್ಲಿ ಅನಿಶ್ಚಿತತೆ ಹೆಚ್ಚಾದಾಗ ಚಿನ್ನವನ್ನು ಸುರಕ್ಷಿತ ಆಸ್ತಿಯಾಗಿ ನೋಡಲಾಗುತ್ತದೆ. ಹೀಗಾಗಿ ಕೆಲವು ದೇಶಗಳು ತಮ್ಮ ವಿದೇಶಿ ವಿನಿಮಯ ಸಂಗ್ರಹದಲ್ಲಿ ಚಿನ್ನದ ಪ್ರಮಾಣವನ್ನು ಹೆಚ್ಚಿಸುತ್ತಿವೆ.

ಚೀನಾ ಮತ್ತು ಬ್ರಿಕ್ಸ್‌ನ ಪಾತ್ರ
ಅಮೆರಿಕ ಮತ್ತು ಚೀನಾದ ನಡುವಿನ ವ್ಯಾಪಾರ ಹಾಗೂ ತಂತ್ರಜ್ಞಾನ ಸಂಘರ್ಷವೂ ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡುವ ಚೀನಾದ ಪ್ರಯತ್ನಕ್ಕೆ ಕಾರಣವಾಗಿದೆ. ಚೀನಾ ಚಿನ್ನದ ಸಂಗ್ರಹ ಹೆಚ್ಚಿಸುವುದರ ಜೊತೆಗೆ ತನ್ನ ಕರೆನ್ಸಿಯಾದ ಯುವಾನ್‌ನ ಅಂತರರಾಷ್ಟ್ರೀಯ ಬಳಕೆಯನ್ನು ಉತ್ತೇಜಿಸುತ್ತಿದೆ. ಕೆಲವು ದೇಶಗಳೊಂದಿಗೆ ಸ್ಥಳೀಯ ಕರೆನ್ಸಿಗಳಲ್ಲಿಯೇ ವ್ಯಾಪಾರ ನಡೆಸುವ ಪ್ರಯತ್ನವೂ ನಡೆಯುತ್ತಿದೆ.ಬ್ರಿಕ್ಸ್ ರಾಷ್ಟ್ರಗಳಲ್ಲಿಯೂ ಸ್ಥಳೀಯ ಕರೆನ್ಸಿಗಳ ಬಳಕೆ ಮತ್ತು ಪರ್ಯಾಯ ಹಣ ಪಾವತಿ ವ್ಯವಸ್ಥೆಗಳ ಕುರಿತು ಚರ್ಚೆ ಹೆಚ್ಚಾಗಿದೆ. ಆದರೆ ಬ್ರಿಕ್ಸ್ ಒಕ್ಕೊಟ ಪ್ರಸ್ತುತ ನಡೆಯುತ್ತಿರುವುದು ಡಾಲರ್ ಅವಲಂಬನೆಯನ್ನು ಹಂತ ಹಂತವಾಗಿ ಕಡಿಮೆ ಮಾಡುವ ಪ್ರಯತ್ನಕ್ಕೆ ಆನೆ ಬಲವನ್ನು ತುಂಬುವ ಪ್ರಯತ್ನವನ್ನು ಮಾಡುತ್ತದೆ.

ಅಮೆರಿಕಕ್ಕೆ ಆಗಬಹುದಾದ ಪರಿಣಾಮ
ಅನ್ಯ ದೇಶಗಳು ದೊಡ್ಡ ಪ್ರಮಾಣದಲ್ಲಿ ಅಮೆರಿಕದ ಸರ್ಕಾರಿ ಸಾಲಪತ್ರಗಳನ್ನು ಮಾರಾಟ ಮಾಡಿದರೆ ಅವುಗಳ ಬೆಲೆ ಇಳಿದು ಬಡ್ಡಿದರ ಏರಿಕೆಯಾಗಬಹುದು. ಇದರಿಂದ ಅಮೆರಿಕ ಸರ್ಕಾರಕ್ಕೆ ಹೊಸ ಸಾಲ ಪಡೆಯುವ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಸಾಲ ಹುಟ್ಟದೆ ಕೂಡ ಹೋಗಬಹುದು , ಸಾಲ ಪತ್ರವನ್ನು ಎಲ್ಲಾ ದೇಶಗಳೂ ಒಮ್ಮೆಲೇ ಮಾರಲು ಶುರು ಮಾಡಿದರೆ ಕೊಳ್ಳುವರಾರು ? ಅಮೆರಿಕದ ದೇಶೀಯ ಹೂಡಿಕೆದಾರರು ಮತ್ತು ದೊಡ್ಡ ಹಣಕಾಸು ಸಂಸ್ಥೆಗಳು ಮುಂದೆ ಬಂದು ಈ ಬಾಂಡುಗಳನ್ನು ಕೊಳ್ಳಬೇಕಾಗುತ್ತದೆ. ನಿಮಗೆಲ್ಲಾ ಗೊತ್ತಿರಲಿ ಅಮೇರಿಕಾ ಯಾವುದೇ ಅಡೆತಡೆಯಿಲ್ಲದೆ ಮನಸ್ಸಿಗೆ ಬಂದಂತೆ ಡಾಲರ್ ಮುದ್ರಣದಲ್ಲಿ ತೊಡಗಿದೆ. ಇದು ಅಲ್ಲಿನ ಹಣದುಬ್ಬರಕ್ಕೂ ಕಾರಣವಾಗುತ್ತದೆ. ಅಮೆರಿಕ ಈಗಾಗಲೇ ದೊಡ್ಡ ಪ್ರಮಾಣದ ಸರ್ಕಾರಿ ಸಾಲ ಹೊಂದಿರುವುದರಿಂದ ಹೆಚ್ಚಿನ ಬಡ್ಡಿ ವೆಚ್ಚ ದೀರ್ಘಾವಧಿಯಲ್ಲಿ ದೊಡ್ಡ ಸವಾಲಾಗುತ್ತದೆ. ದೇಶಗಳು ಸಾಲಪತ್ರಗಳನ್ನು ಮಾರಾಟ ಮಾಡಿ ಡಾಲರ್ ಬದಲಿಗೆ ಚಿನ್ನ, ಯೂರೋ ಅಥವಾ ಇತರ ಕರೆನ್ಸಿಗಳಲ್ಲಿ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಡಾಲರ್‌ನ ಬೇಡಿಕೆ ಮತ್ತು ಅದರ ಜಾಗತಿಕ ಮೀಸಲು ಕರೆನ್ಸಿ ಸ್ಥಾನ ಇನ್ನಷ್ಟು ಕುಸಿತವನ್ನು ಕಾಣುತ್ತದೆ.
ಆದರೆ ಡಾಲರ್‌ಗೆ ತಕ್ಷಣದ ಪರ್ಯಾಯವಿಲ್ಲ. ಯೂರೋ, ಯುವಾನ್ ಮತ್ತು ಚಿನ್ನ ಎಲ್ಲವೂ ತಮ್ಮದೇ ಮಿತಿಗಳನ್ನು ಹೊಂದಿವೆ. ಇದೇ ಕಾರಣದಿಂದ ಡಾಲರ್ ಮುಂದಿನ ಹಲವು ವರ್ಷಗಳಲ್ಲಿಯೂ ಪ್ರಮುಖ ಸ್ಥಾನದಲ್ಲೇ ಉಳಿಯುವ ಸಾಧ್ಯತೆ ಇದೆ. ಕನಿಷ್ಠ ಇನ್ನೊಂದು ಐದು ವರ್ಷವಾದರೂ ಡಾಲರಿನ ಮೇಲಿನ ಅವಲಂಬನೆ ತಗ್ಗುವುದು ಕಷ್ಟ. ಆದರೆ ವರ್ಷದಿಂದ ವರ್ಷಕ್ಕೆ ಡಾಲರಿನ ಪ್ರಾಬಲ್ಯ ಕುಸಿತವಾಗುವುದು ಗ್ಯಾರಂಟಿ. ಹೀಗಾಗಿ ಇವತ್ತಿನ ಕಾಲಘಟ್ಟವನ್ನು ಡಾಲರಿನ ಯುಗಾಂತ್ಯದ ಶುರು ಎನ್ನಲು ಅಡ್ಡಿಯಿಲ್ಲ.

ಭಾರತಕ್ಕೂ ಈ ಬದಲಾವಣೆ ಮಹತ್ವದ್ದಾಗಿದೆ. ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ಹೆಚ್ಚಾದರೆ ಭಾರತಕ್ಕೆ ಕೆಲವು ದೇಶಗಳೊಂದಿಗೆ ಡಾಲರ್ ಹೊರತಾದ ಮಾರ್ಗಗಳಲ್ಲಿ ವ್ಯವಹರಿಸುವ ಅವಕಾಶ ಹೆಚ್ಚಬಹುದು. ಆದರೆ ಕಚ್ಚಾ ತೈಲದಂತಹ ಪ್ರಮುಖ ಆಮದುಗಳಿಗೆ ಡಾಲರ್ ಇನ್ನೂ ಬಹಳ ಮುಖ್ಯವಾಗಿರುವುದರಿಂದ ಭಾರತವೂ ಡಾಲರ್ ಅನ್ನು ಸಂಪೂರ್ಣವಾಗಿ ತ್ಯಜಿಸುವ ಬದಲು ತನ್ನ ವಿದೇಶಿ ವಿನಿಮಯ ಸಂಗ್ರಹವನ್ನು ವಿವಿಧ ಆಸ್ತಿಗಳಲ್ಲಿ ಹಂಚಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತದೆ.ಹೀಗಾಗಿ ಈ ಬಾರಿಯ ಬ್ರಿಕ್ಸ್ ಶೃಂಗಸಭೆ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.
ಹೀಗಾಗಿ ಡಾಲರ್ ಯುಗ ಮುಗಿದು ಹೋಯ್ತು ಎನ್ನವುದರ ಬದಲು ಸದ್ಯದ ಮಟ್ಟಿಗೆ ಅದರ ಏಕಪಕ್ಷೀಯ ಪ್ರಾಬಲ್ಯಕ್ಕೆ ನಿಧಾನವಾಗಿ ಸವಾಲು ಹೆಚ್ಚಾಗುತ್ತಿದೆ ಎನ್ನಬಹುದು. ಚಿನ್ನದ ಸಂಗ್ರಹ ಹೆಚ್ಚಿಸುವುದು, ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ನಡೆಸುವುದು, ಬ್ರಿಕ್ಸ್ ರಾಷ್ಟ್ರಗಳ ಪರ್ಯಾಯ ಹಣಕಾಸು ವ್ಯವಸ್ಥೆಗಳ ಪ್ರಯತ್ನ ಮತ್ತು ಅಮೆರಿಕದ ಹೆಚ್ಚುತ್ತಿರುವ ಸಾಲದ ಬಗ್ಗೆ ಆತಂಕ, ಇವೆಲ್ಲವೂ ಸೇರಿ ಜಾಗತಿಕ ಹಣಕಾಸು ವ್ಯವಸ್ಥೆಯನ್ನು ಬದಲಾಯಿಸುತ್ತಿವೆ.
ಮುಂದಿನ ದಶಕದಲ್ಲಿ ಡಾಲರ್‌ನ ಸ್ಥಾನವನ್ನು ಒಂದೇ ಕರೆನ್ಸಿ ಸಂಪೂರ್ಣವಾಗಿ ಪಡೆದುಕೊಳ್ಳುವುದಕ್ಕಿಂತ ಡಾಲರ್, ಯೂರೋ, ಯುವಾನ್, ಚಿನ್ನ ಮತ್ತು ವಿವಿಧ ಪ್ರಾದೇಶಿಕ ಕರೆನ್ಸಿಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಬಹುಕೇಂದ್ರಿತ ಹಣಕಾಸು ವ್ಯವಸ್ಥೆ ರೂಪುಗೊಳ್ಳುವ ಸಾಧ್ಯತೆ ಹೆಚ್ಚು.ಇಂದು ಜಗತ್ತು ತನ್ನ ಆರ್ಥಿಕ ಭದ್ರತೆಯನ್ನು ಒಂದೇ ದೇಶ ಮತ್ತು ಒಂದೇ ಕರೆನ್ಸಿಯ ಮೇಲೆ ಅವಲಂಬಿಸದೆ, ಹಲವು ಆಸ್ತಿಗಳು ಮತ್ತು ಹಲವು ಕರೆನ್ಸಿಗಳ ನಡುವೆ ಹಂಚಿಕೊಳ್ಳಲು ಆರಂಭಿಸಿರುವುದರ ಸಂಕೇತ ಎಂದು ನೋಡುವುದು ಹೆಚ್ಚು ಸಮಂಜಸ. ಹೀಗಾಗಿ ಡಾಲರ್ ಕುಸಿತ ಖಚಿತ. ಹೊಸ ಗ್ಲೋಬಲ್ ಕರೆನ್ಸಿ ಒಂದೇ ದೇಶಕ್ಕೆ ಸಂಬಂಧ ಪಟ್ಟಿರುವುದಿಲ್ಲ. ಐದಾರು ಪ್ರಬಲ ಕರೆನ್ಸಿ ಒಕ್ಕೊಟ ಆ ಜಾಗವನ್ನು ಪಡೆದುಕೊಳ್ಳಲಿದೆ. ಡಾಲರ್ ಬಳಕೆ ಸೀಮಿತವಾಗಲಿದೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 11:28 am
HK News Staffer
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm