ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹15.82 ಲಕ್ಷದ ಚಿನ್ನ, ₹1.80 ಲಕ್ಷ ನಗದು ಕಳವು !

16-09-26 11:18 am       HK News Staffer   ಕ್ರೈಂ

ಮನೆಯವರು ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ₹15.82 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹1.80 ಲಕ್ಷ ನಗದು ಕಳವು ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಆಲಂದಿಲದಲ್ಲಿ ನಡೆದಿದೆ. ಈ ಸಂಬಂಧ ಮನೆ ಮಾಲೀಕ ನೌಫಾಲ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆಳ್ತಂಗಡಿ , ಸೆಪ್ಟೆಂಬರ್ 16: ಮನೆಯವರು ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ₹15.82 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹1.80 ಲಕ್ಷ ನಗದು ಕಳವು ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಆಲಂದಿಲದಲ್ಲಿ ನಡೆದಿದೆ. ಈ ಸಂಬಂಧ ಮನೆ ಮಾಲೀಕ ನೌಫಾಲ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಪ್ರಕಾರ, ಸೆ.13ರಂದು ಮಧ್ಯಾಹ್ನ ನೌಫಾಲ್ ಅವರು ಪತ್ನಿ, ಮಕ್ಕಳು ಹಾಗೂ ತಾಯಿಯನ್ನು ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಕಳುಹಿಸಿದ್ದರು. ಬಳಿಕ ನೌಫಾಲ್ ಕೂಡ ಮನೆಗೆ ಬೀಗ ಹಾಕಿ ತರಕಾರಿ ವ್ಯಾಪಾರದ ಕೆಲಸಕ್ಕಾಗಿ ಬೆಳ್ತಂಗಡಿಗೆ ತೆರಳಿದ್ದರು.

ವಯರಿಂಗ್ ಕೆಲಸಕ್ಕೆ ಕಾರ್ಮಿಕರು ಬಂದಿದ್ದ ದಿನವೇ ಕಳವು
ಸೆ.14ರಂದು ನೌಫಾಲ್ ಅವರು ವಯರಿಂಗ್ ಕೆಲಸಕ್ಕಾಗಿ ಕಾರ್ಮಿಕರನ್ನು ಮನೆಗೆ ಕರೆಸಿದ್ದರು. ಮದ್ದಡ್ಕದ ಫಾರೂಕ್ ಎಂಬವರು ಕುದ್ರಡ್ಕದ ಅಶ್ರಫ್ ಹಾಗೂ ಶಿರ್ಲಾಲಿನ ಸುಲೈಮಾನ್ ಅವರನ್ನು ಕರೆದುಕೊಂಡು ಬಂದು ಮನೆಯಲ್ಲಿ ಕೆಲಸ ಮಾಡಿದ್ದರು. ಈ ವೇಳೆ ನೌಫಾಲ್ ಅವರ ತಮ್ಮ ಮಹಮ್ಮದ್ ನೌಷಾದ್ ಮನೆಯಲ್ಲಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ಅದೇ ದಿನ ರಾತ್ರಿ ಸುಮಾರು 8.30ಕ್ಕೆ ನೌಫಾಲ್ ಕುಟುಂಬದೊಂದಿಗೆ ಮನೆಗೆ ವಾಪಸ್‌ ಬಂದಾಗ ಬೆಡ್‌ರೂಂನ ಗಾದ್ರೇಜ್‌ನಲ್ಲಿಟ್ಟಿದ್ದ ಚಿನ್ನದ ಬಾಕ್ಸ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.

113 ಗ್ರಾಂ ಚಿನ್ನಾಭರಣ, ₹1.80 ಲಕ್ಷ ನಗದು ನಾಪತ್ತೆ
ಗಾದ್ರೇಜ್ ಪರಿಶೀಲಿಸಿದಾಗ 32 ಗ್ರಾಂ ಹಾಗೂ 26 ಗ್ರಾಂ ತೂಕದ ಎರಡು ಚಿನ್ನದ ಸರಗಳು, ಮಗುವಿನ ಚಿನ್ನದ ಸರ, ಕಾಲುಚೈನು, ಬ್ರಾಸ್‌ಲೈಟ್ ಸೇರಿದಂತೆ ಒಟ್ಟು 113 ಗ್ರಾಂ ತೂಕದ ಚಿನ್ನಾಭರಣ ಕಳವಾಗಿರುವುದು ಪತ್ತೆಯಾಗಿದೆ. ಕಳವಾದ ಚಿನ್ನಾಭರಣದ ಒಟ್ಟು ಮೌಲ್ಯ ₹15.82 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದಲ್ಲದೆ, ನೌಫಾಲ್ ಅವರ ತಾಯಿಯ ಗಾದ್ರೇಜ್‌ನಲ್ಲಿದ್ದ ಒಟ್ಟು 7 ಗ್ರಾಂ ತೂಕದ ಮೂರು ಚಿನ್ನದ ಉಂಗುರಗಳೂ ಕಾಣೆಯಾಗಿವೆ. ಮನೆಯ ಗಾದ್ರೇಜ್‌ನ ಕೀ ಗಾದ್ರೇಜ್‌ನಲ್ಲಿಯೇ ಇತ್ತು ಎನ್ನಲಾಗಿದೆ. ಮನೆಯವರು ಹೊರಗಿದ್ದ ಅವಧಿಯಲ್ಲಿ ಯಾರೋ ಮನೆಗೆ ಪ್ರವೇಶಿಸಿ ಗಾದ್ರೇಜ್ ತೆರೆದು ಚಿನ್ನಾಭರಣ ಹಾಗೂ ₹1.80 ಲಕ್ಷ ನಗದು ಕಳವು ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

ವಯರಿಂಗ್ ಕೆಲಸಕ್ಕೆ ಬಂದವರ ಮೇಲೆ ಅನುಮಾನ
ವಯರಿಂಗ್ ಕೆಲಸಕ್ಕೆ ಮನೆಗೆ ಬಂದಿದ್ದ ಅಶ್ರಫ್, ಫಾರೂಕ್ ಹಾಗೂ ಸುಲೈಮಾನ್ ಅವರ ಮೇಲೆ ಅನುಮಾನವಿರುವುದಾಗಿ ನೌಫಾಲ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thieves allegedly broke into a house in Alandila village of Kuvettu in Belthangady taluk when the family had gone to attend a relative’s housewarming ceremony and stole gold jewellery worth ₹15.82 lakh and ₹1.80 lakh in cash. House owner Noufal has lodged a complaint at the Belthangady Police Station.