ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ್ಟು ನಡೆಯಿರಿ, ಇಲ್ಲದಿದ್ದರೆ ಹೆಣದ ಚೀಲ ನಿಮ್ಮ ಮನೆಗೆ ಬರುತ್ತದೆ! ಲಷ್ಕರ್ ಪ್ರೇರಿತ ಉಗ್ರರಿಂದ ಎಚ್ಚರಿಕೆ, ಪ್ರಧಾನಿ ಪ್ಯಾಕೇಜ್ ನಲ್ಲಿ ನೌಕರಿ ಪಡೆದವರಿಗೆ ಆತಂಕ

10-09-26 01:23 pm       HK News Staffer   ದೇಶ - ವಿದೇಶ

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಪಂಡಿತ ಸಮುದಾಯವನ್ನು ಟಾರ್ಗೆಟ್ ಮಾಡಿ ಬೆದರಿಕೆ ಒಡ್ಡಲಾಗಿದೆ. ಕಾಶ್ಮೀರಿ ಪಂಡಿತರ ವಿರುದ್ಧ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಇ-ತೊಯ್ಬಾ ಉಗ್ರರು ಜೀವ ಬೆದರಿಕೆ ನೀಡಿದ್ದು ಉದ್ಯೋಗಕ್ಕೆ ತಕ್ಷಣ ರಾಜೀನಾಮೆ ಕೊಟ್ಟು ನಡೆಯಿರಿ, ಇಲ್ಲದಿದ್ದರೆ ಹೆಣದ ಚೀಲಗಳನ್ನು ನಿಮ್ಮ ಊರುಗಳಿಗೆ ಕಳುಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶ್ರೀನಗರ, ಸೆ.10: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಪಂಡಿತ ಸಮುದಾಯವನ್ನು ಟಾರ್ಗೆಟ್ ಮಾಡಿ ಬೆದರಿಕೆ ಒಡ್ಡಲಾಗಿದೆ. ಕಾಶ್ಮೀರಿ ಪಂಡಿತರ  ವಿರುದ್ಧ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಇ-ತೊಯ್ಬಾ ಉಗ್ರರು ಜೀವ ಬೆದರಿಕೆ ನೀಡಿದ್ದು ಉದ್ಯೋಗಕ್ಕೆ ತಕ್ಷಣ ರಾಜೀನಾಮೆ ಕೊಟ್ಟು ನಡೆಯಿರಿ, ಇಲ್ಲದಿದ್ದರೆ ಹೆಣದ ಚೀಲಗಳನ್ನು ನಿಮ್ಮ ಊರುಗಳಿಗೆ ಕಳುಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಉಗ್ರರ ಬೆದರಿಕೆಯಿಂದ ಪ್ರಧಾನಮಂತ್ರಿ ಪುನರ್ವಸತಿ ಪ್ಯಾಕೇಜ್ (PMRP) ಅಡಿಯಲ್ಲಿ ಕಾಶ್ಮೀರ ಕಣಿವೆಗೆ ಬಂದು ಉದ್ಯೋಗ ಮಾಡುತ್ತಿರುವ 7,000ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತ ನೌಕರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಇದರ ಬೆನ್ನಲ್ಲೇ ಉದ್ಯೋಗಿಗಳ ವೈಯಕ್ತಿಕ ಮಾಹಿತಿಯೂ ಅಂತರ್ಜಾಲದಲ್ಲಿ ಸೋರಿಕೆಯಾಗಿದೆ ಎನ್ನಲಾಗಿದ್ದು, ಕೆಲವರ ಹೆಸರನ್ನು ಉಗ್ರರು ತಮ್ಮ ವೆಬ್ ಸೈಟ್ ನಲ್ಲಿ ಹಾಕಿದ್ದಾರೆ. 

ಲಷ್ಕರ್-ಇ-ತೊಯ್ಬಾ (LeT) ಜೊತೆ ಸಂಪರ್ಕ ಹೊಂದಿದೆ ಎನ್ನಲಾದ ಯುನೈಟೆಡ್ ಲಿಬರೇಶನ್ ಕೌನ್ಸಿಲ್ (ULC/ULF) ಹೆಸರಿನಲ್ಲಿ ಬಂದಿರುವ ಹೊಸ ಬೆದರಿಕೆ ಪತ್ರಗಳು ಕಾಶ್ಮೀರ ಕಣಿವೆಯಲ್ಲಿರುವ ಸುಮಾರು 7 ಸಾವಿರ ಕಾಶ್ಮೀರಿ ಪಂಡಿತ ನೌಕರರಲ್ಲಿ ಆತಂಕ ಮೂಡಿಸಿವೆ. ಇವರ ಖಾಸಗಿ ದೂರವಾಣಿ ಸಂಖ್ಯೆಗಳು, ಮನೆ ವಿಳಾಸಗಳು ಹಾಗೂ ವಾಹನ ನೋಂದಣಿ ವಿವರಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಲಾಗಿದೆ ಎನ್ನಲಾಗಿದ್ದು, ಉದ್ಯೋಗ ತೊರೆಯಬೇಕು, ಇಲ್ಲವಾದರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಈ ಕುರಿತು ಮುಂಬೈ ಮೂಲದ, ಶ್ರೀನಗರದಲ್ಲಿ ಕುಟುಂಬ ಹೊಂದಿರುವ ಕಾಶ್ಮೀರಿ ಪಂಡಿತರೊಬ್ಬರು ಮಾತನಾಡಿ, 1990ರ ದಶಕದಲ್ಲೂ ಇದೇ ರೀತಿಯ ವಿಧಾನವನ್ನು ಅವರು ಅನುಸರಿಸುತ್ತಿದ್ದರು. ಆಗ ಇಂಟರ್ನೆಟ್ ಇರಲಿಲ್ಲ. ಹೆಸರುಗಳ ಪಟ್ಟಿಯನ್ನು ಟೈಪ್ ಮಾಡಿ ಗೋಡೆಗಳ ಮೇಲೆ ಅಂಟಿಸುತ್ತಿದ್ದರು ಎಂದು ಹೇಳಿದ್ದಾರೆ. ಸೆಪ್ಟೆಂಬರ್ 1ರಂದು ಬಂದಿರುವ ಬೆದರಿಕೆಗಳ ಹಿನ್ನೆಲೆಯಲ್ಲಿ ಕಾಶ್ಮೀರಿ ಪಂಡಿತರ ಭದ್ರತಾ ಪರಿಸ್ಥಿತಿ ಆತಂಕ ವ್ಯಕ್ತವಾಗಿದೆ. ಕಾಶ್ಮೀರಿ ಪಂಡಿತರ ಸಂಘಟನೆಗಳು ಹಾಗೂ ಕಣಿವೆಯಲ್ಲಿ ಕುಟುಂಬಗಳನ್ನು ಹೊಂದಿರುವ ಸಮುದಾಯದ ಸದಸ್ಯರು ಆತಂಕ ಹೇಳಿಕೊಂಡಿದ್ದಾರೆ. 

ದೆಹಲಿಯಲ್ಲಿ ನೆಲೆಸಿರುವ, ಜಮ್ಮುವಿನಲ್ಲಿ ಕುಟುಂಬ ಹೊಂದಿರುವ ಕಾಶ್ಮೀರಿ ಪಂಡಿತ ವಕೀಲರೊಬ್ಬರು ಮಾತನಾಡಿ, ನನ್ನ ಕುಟುಂಬ ಸರ್ಕಾರಿ ಉದ್ಯೋಗದಲ್ಲಿಲ್ಲ. ನಮ್ಮದು ವ್ಯಾಪಾರಸ್ಥ ಕುಟುಂಬ. ಈ ಬಾರಿ ಬೆದರಿಕೆ ಸರ್ಕಾರಿ ಉದ್ಯೋಗಿಗಳ ವಿರುದ್ಧವಾಗಿದೆ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರಿಗೆ ಸುರಕ್ಷತೆ ಇಲ್ಲ ಎಂಬುದನ್ನು ಇದು ಬದಲಿಸುವುದಿಲ್ಲ. ಕಣಿವೆಯಲ್ಲಿ ಇಂತಹ ಬೆದರಿಕೆಗಳು ಸಾಮಾನ್ಯವಾಗಿವೆ” ಎಂದು ತಿಳಿಸಿದ್ದಾರೆ. ಸೆಪ್ಟೆಂಬರ್ 7ರಂದು ಸಮುದಾಯದ ಧ್ವನಿಯಾಗಿ ಗುರುತಿಸಿಕೊಂಡಿರುವ ಸಬಾ ಕೌಲ್ ಅವರು ಎಕ್ಸ್‌ನಲ್ಲಿ ಈ ಬೆಳವಣಿಗೆಯನ್ನು “ಭಾರೀ ಮತ್ತು ಆತಂಕಕಾರಿ ಭದ್ರತಾ ಬಿಕ್ಕಟ್ಟು” ಎಂದು ಬಣ್ಣಿಸಿದ್ದಾರೆ. ಈ ಕುರಿತು ತನಿಖೆ ನಡೆಸಿ, ಕಣಿವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಭದ್ರತೆ ಒದಗಿಸುವಂತೆ ಕೇಂದ್ರ ಗೃಹ ಸಚಿವಾಲಯ ಮತ್ತು ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಕಚೇರಿಗೆ ಅವರು ಮನವಿ ಮಾಡಿದ್ದಾರೆ.