ಜಾಮೀನು ಪಡೆಯಲು ನಕಲಿ ಆಧಾರ್‌ ಕಾರ್ಡ್‌ ಹಾಜರು ; ಉಡುಪಿಯಲ್ಲಿ ಇಬ್ಬರು ಅರೆಸ್ಟ್‌, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್‌ !

11-09-26 01:09 pm       HK News Staffer   ಕ್ರೈಂ

ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಗೆ ಜಾಮೀನು ನೀಡುವ ವೇಳೆ ನಕಲಿ ಆಧಾರ್‌ ಕಾರ್ಡ್‌ ಹಾಜರುಪಡಿಸಿದ ಆರೋಪದ ಮೇಲೆ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಉಡುಪಿ , ಸೆಪ್ಟೆಂಬರ್ 11: ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಗೆ ಜಾಮೀನು ನೀಡುವ ವೇಳೆ ನಕಲಿ ಆಧಾರ್‌ ಕಾರ್ಡ್‌ ಹಾಜರುಪಡಿಸಿದ ಆರೋಪದ ಮೇಲೆ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಂಟ್ವಾಳದ ಉಮ್ಮರ್ ಫಾರೂಕ್ (32) ಹಾಗೂ ಮಂಗಳೂರಿನ ನಿಶಾಂತ್ ಕುಮಾರ್ (24) ಬಂಧಿತ ಆರೋಪಿಗಳು.

ನಕಲಿ ಆಧಾರ್‌ ಸೃಷ್ಟಿಸಿ ಕೋರ್ಟ್‌ಗೆ ಹಾಜರು:

ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆ ನಡೆಯುತ್ತಿತ್ತು. ಈ ಪ್ರಕರಣದ ಆರೋಪಿ ನೋಮಾನ್ ಎಂಬಾತನಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಫಾರೂಕ್ ಮತ್ತು ಪ್ರಶಾಂತ್ ಎಂಬವರ ಆಧಾರ್‌ ಕಾರ್ಡ್‌ಗಳನ್ನು ಬಳಸಲಾಗಿದೆ. ಆಧಾರ್‌ ಕಾರ್ಡ್‌ನಲ್ಲಿದ್ದ ಮೂಲ ಹೆಸರು ಮತ್ತು ವಿಳಾಸದ ಬದಲಿಗೆ ಕೆ.ಟಿ. ಮೊಹಮ್ಮದ್ ಎಂಬವರ ಹೆಸರು ಹಾಗೂ ವಿಳಾಸವನ್ನು ನಕಲಿಯಾಗಿ ಸೃಷ್ಟಿಸಿ, ಇನ್ನೊಬ್ಬ ವ್ಯಕ್ತಿಯಂತೆ ನಟಿಸಿ ಆಧಾರ್‌ ಕಾರ್ಡ್‌ನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ವಂತ ಲಾಭಕ್ಕಾಗಿ ಗುರುತಿನ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ ನ್ಯಾಯಾಲಯಕ್ಕೆ ಸಲ್ಲಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಉಡುಪಿ ನಗರ ಪೊಲೀಸರು ನಕಲಿ ಆಧಾರ್‌ ಕಾರ್ಡ್‌ ಹಾಜರುಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮ್ಮರ್ ಫಾರೂಕ್ ಹಾಗೂ ನಿಶಾಂತ್ ಕುಮಾರ್ ಅವರನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ನಕಲಿ ದಾಖಲೆ ಸೃಷ್ಟಿ ಹಾಗೂ ನ್ಯಾಯಾಲಯಕ್ಕೆ ಅದನ್ನು ಹಾಜರುಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.