ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್ ; ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಆರು ವರ್ಷ ಪಕ್ಷದಿಂದ ಉಚ್ಚಾಟನೆ, ನೋಟಿಸಿಗೆ ಉತ್ತರಿಸದ ಕಾರಣ ಕೆಪಿಸಿಸಿ ಶಿಸ್ತು ಕ್ರಮ

30-10-26 11:01 pm       HK News Staffer   ಕ್ರೈಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಮಾಡಲಾಗಿದ್ದ 'ಸ್ಟಿಂಗ್ ಆಪರೇಷನ್' ಷಡ್ಯಂತ್ರದ ಆರೋಪ ಎದುರಿಸುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.

ಬೆಂಗಳೂರು, ಅ.30: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಮಾಡಲಾಗಿದ್ದ 'ಸ್ಟಿಂಗ್ ಆಪರೇಷನ್' ಷಡ್ಯಂತ್ರದ ಆರೋಪ ಎದುರಿಸುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. 

ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ನಡೆಸಲಾದ ನಕಲಿ ರಹಸ್ಯ ಕಾರ್ಯಾಚರಣೆ ಷಡ್ಯಂತ್ರದಲ್ಲಿ ಕೃಪಾ ಆಳ್ವ ಅವರ ಪಾತ್ರವಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಇದರಿಂದ ಪಕ್ಷಕ್ಕೆ ಭಾರಿ ಮುಜುಗರ ಉಂಟಾಗಿತ್ತಲ್ಲದೆ, ಆಡಳಿತ ಪಕ್ಷದ ನಾಯಕರು ಮುಜುಗರಕ್ಕೀಡಾಗಿದ್ದರು. 

ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಶಿಸ್ತು ಸಮಿತಿಯು ಕೃಪಾ ಆಳ್ವ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ಆದರೆ ಕೃಪಾ ಆಳ್ವ ಅವರು ಯಾವುದೇ ಸಮರ್ಪಕ ವಿವರಣೆ ಅಥವಾ ಉತ್ತರ ನೀಡದ ಕಾರಣ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ಈ ನಡುವೆ, ಸಿದ್ದರಾಮಯ್ಯ ಅವರು ನೀಡಿದ ಸೈಬರ್ ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಕೃಪಾ ಆಳ್ವ ಅವರು ಈಗಾಗಲೇ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಶಿಸ್ತು ಸಮಿತಿಯ ಸೂಚನೆ ಮೇರೆಗೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ 6 ವರ್ಷಗಳ ಕಾಲ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ. ಸಿಸಿಬಿ ಪೊಲೀಸರ ವಿಚಾರಣೆ ಬೆನ್ನಲ್ಲೇ ಕೃಪಾ ಆಳ್ವ ವಿದೇಶಕ್ಕೆ ತೆರಳಿದ್ದರು. 

ಸಿದ್ದರಾಮಯ್ಯಗೆ ಕ್ಲೀನ್ ಚಿಟ್ 

ಇದೇ ವೇಳೆ, ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಸಿಸಿಬಿ ಸೈಬರ್ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದು ಸಿದ್ದರಾಮಯ್ಯಗೆ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಸ್ಟಿಂಗ್ ಆಪರೇಷನ್​ನಲ್ಲಿ ಬರುವ ಅಷ್ಟೂ ವಿಚಾರ ಕಟ್ಟುಕಥೆ ಎಂದು ಪ್ರಕಟಣೆ ಹೊರಡಿಸಿದೆ.​​ ಪ್ರಕರಣದ‌ ಕುರಿತಾಗಿ ಸಿಸಿಬಿ ಪೊಲೀಸರಿಂದ ಸಮಗ್ರ ತನಿಖೆ ಕೈಗೊಳ್ಳಲಾಗಿದೆ. ವಿಡಿಯೋದಲ್ಲಿ ಬಿಂಬಿಸಿರುವಂತೆ ಲೈಂಗಿಕ ದೌರ್ಜನ್ಯದ ಆರೋಪ ಕಟ್ಟುಕಥೆ ಎಂದು ಸಿಸಿಬಿ ಸ್ಪಷ್ಟನೆ ನೀಡಿದೆ. ತನಿಖೆಯಲ್ಲಿ ಸಾಕ್ಷ್ಯಾಧಾರಗಳು ಮತ್ತು ದಾಖಲಿಸಲಾದ ಹೇಳಿಕೆ ಆಧಾರದಲ್ಲಿ ತನಿಖೆ ಮಾಡಲಾಗಿದ್ದು, ವಿಡಿಯೋವನ್ನು ಉದ್ದೇಶಪೂರ್ವಕ ಸೃಷ್ಟಿಸಿರೋದು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಸಿಸಿಬಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.