World Cup Final, India, Australia, Cricket: ಅತಿ ವಿಶ್ವಾಸಕ್ಕೇ ಭಾರತ ಸೋಲು, ಟೀಮ್ ಸ್ಪಿರಿಟ್ ತೋರಿದ ಆಸ್ಟ್ರೇಲಿಯನ್ನರಿಗೆ ವಿಶ್ವ ಕಿರೀಟ, ದುಬಾರಿಯೆನಿಸಿದ ಬ್ಯಾಟಿಂಗ್ ವೈಫಲ್ಯ, ಕಾಂಗರೂ ಆಪತ್ತಿನಲ್ಲಿ ಮಿಂಚಿದ ಟ್ರೇವಿಸ್ ಹೆಡ್ ! 

19-11-23 10:47 pm       HK News Desk   ಕ್ರೀಡೆ

ಭಾರತೀಯರ ಅತಿಯಾದ ಆತ್ಮವಿಶ್ವಾಸ, ಗೆದ್ದೇ ಗೆಲ್ತೀವಿ ಎಂಬ ಹುಂಬತನವೇ ಮುಳುವಾಯ್ತು. ವಿಶ್ವಕಪ್ ಕ್ರಿಕೆಟ್ ಫೈನಲ್ ಅನ್ನುವ ಗಂಭೀರತೆಯಿಂದ ಭಾರತೀಯರು ಆಡಲೇ ಇಲ್ಲ. ಬದಲಿಗೆ, ಆಸ್ಟ್ರೇಲಿಯನ್ನರ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲದರಲ್ಲೂ ಕರಾರುವಾಕ್ ಆಟ ತಂಡವನ್ನು ವಿಶ್ವಕಪ್ ಗೆಲ್ಲುವಂತೆ ಮಾಡಿತು.

ಅಹ್ಮದಾಬಾದ್, ನ.19: ಭಾರತೀಯರ ಅತಿಯಾದ ಆತ್ಮವಿಶ್ವಾಸ, ಗೆದ್ದೇ ಗೆಲ್ತೀವಿ ಎಂಬ ಹುಂಬತನವೇ ಮುಳುವಾಯ್ತು. ವಿಶ್ವಕಪ್ ಕ್ರಿಕೆಟ್ ಫೈನಲ್ ಅನ್ನುವ ಗಂಭೀರತೆಯಿಂದ ಭಾರತೀಯರು ಆಡಲೇ ಇಲ್ಲ. ಬದಲಿಗೆ, ಆಸ್ಟ್ರೇಲಿಯನ್ನರ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲದರಲ್ಲೂ ಕರಾರುವಾಕ್ ಆಟ ತಂಡವನ್ನು ವಿಶ್ವಕಪ್ ಗೆಲ್ಲುವಂತೆ ಮಾಡಿತು. ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಆಸ್ಟ್ರೇಲಿಯನ್ನರು ಆರನೇ ಬಾರಿಗೆ ಟ್ರೋಫಿ ಗೆದ್ದುಕೊಂಡು ಮತ್ತೊಮ್ಮೆ ಕ್ರಿಕೆಟ್ ಸಾಮ್ರಾಟರಾಗಿ ಮೂಡಿಬಂದಿದ್ದಾರೆ.

ಈ ಬಾರಿಯ ಕೂಟದಲ್ಲಿ ಅಜೇಯರಾಗಿಯೇ ಫೈನಲಿಗೆ ಬಂದಿದ್ದ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಅಹ್ಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನೀರಸ ಆಟವಾಡಿ ಆರು ವಿಕೆಟ್ ಅಂತರದಲ್ಲಿ ಸೋಲೊಪ್ಪಿಕೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಕೈಗೆತ್ತಿಕೊಂಡ ರೋಹಿತ್ ಪಡೆ ಆರಂಭದಲ್ಲಿ ಉತ್ತಮವಾಗಿಯೇ ಆಟ ಆರಂಭಿಸಿತ್ತು. ಹತ್ತು ಓವರಿನಲ್ಲಿ 80 ರನ್ ಪೂರೈಸಿದ್ದರು. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಚೆನ್ನಾಗಿಯೇ ಆಡಿದ್ದರು. ಆದರೆ, ಎರಡು ವಿಕೆಟ್ ಹೋಗುತ್ತಲೇ ಯಾವಾಗಲೂ ವಿರಾಟ ರೂಪ ತೋರಿಸುತ್ತಿದ್ದ ಕೊಹ್ಲಿ, ಅಯ್ಯರ್, ಕೆಎಲ್ ರಾಹುಲ್ ಮುಗ್ಗರಿಸಿದ್ದಾರೆ. ಕೊನೆಗೆ, ನೀರಸ ಆಟವಾಡುತ್ತಲೇ 240 ರನ್ನಿಗೆ ಆಲೌಟ್ ಆಗಿದ್ದಾರೆ. ರಾಹುಲ್ ಕೊನೆಯ ವರೆಗೂ ಕುಂಟುತ್ತ ಆಡುತ್ತಿದ್ದರೂ, 66ರನ್ ಮಾಡಲಷ್ಟೇ ಶಕ್ತವಾದರು. ಕೊಹ್ಲಿ 56 ರನ್ ತನ್ನ ಖಾತೆಗೆ ಸೇರಿಸಿದ್ದರು. ಹತ್ತು ಓವರ್ ನಂತರದ ಹತ್ತು ಓವರ್ ನಲ್ಲಿ ತುಂಬ ನೀರಸವಾಗಿ ಬ್ಯಾಟ್ ಬೀಸಿದ್ದು ಭಾರತೀಯರಿಗೆ ದುಬಾರಿಯಾಗಿ ಪರಿಣಮಿಸಿತು.

241 ರನ್ ಗುರಿ ಬೆನ್ನತ್ತಿ ಹೊರಟ ಆಸ್ಟ್ರೇಲಿಯನ್ನರು ಆರಂಭದಲ್ಲಿಯೇ ಮುಗ್ಗರಿಸಿದ್ದರು. ಹೊಸ ಬಾಲ್ ಎತ್ತಿಕೊಂಡ ಮೊಹಮ್ಮದ್ ಶಮಿ ಮೊದಲ ಓವರಿನ ಎರಡನೇ ಎಸೆತಕ್ಕೆ ಡೇವಿಡ್ ವಾರ್ನರ್ ಔಟಾಗಿದ್ದರು. ಆನಂತರ ಜಸ್ ಪ್ರೀತ್ ಬುಮ್ರಾ ಎಸೆತಕ್ಕೆ ಮಿಷೆಲ್ ಮಾರ್ಶ್ ವಿಕೆಟ್ ಒಪ್ಪಿಸಿದ್ದರು. ಇವರಿಬ್ಬರೂ ಆಸ್ಟ್ರೇಲಿಯಾ ಪರ ಪ್ರಬಲ ಬ್ಯಾಟ್ಸ್ ಮನ್ ಗಳಾಗಿದ್ದರು. ಇವರು ಬೇಗ ಪೆವಿಲಿಯನ್ ತೆರಳುತ್ತಲೇ ಭಾರತೀಯರಲ್ಲಿ ಉತ್ಸಾಹ ಹೆಚ್ಚಿಸಿತ್ತು. ಕಾಂಗರೂವನ್ನು ಕಡಿಮೆ ಮೊತ್ತಕ್ಕೆ ಹಿಡಿದಿಡಬಹುದು ಅನ್ನುವ ಕುತೂಹಲ ಉಂಟಾಗಿತ್ತು. ಏಳು ಓವರ್ ಗಳಲ್ಲಿ 47 ರನ್ನಿಗೆ ಮೂರು ವಿಕೆಟ್ ಕಳಕೊಂಡ ಆಸ್ಟ್ರೇಲಿಯಾ ಬುಡ ಅಲ್ಲಾಡಿತ್ತು.

ಆದರೆ ಆರಂಭಿಕನಾಗಿ ಬಂದಿದ್ದ ಟ್ರೇವಿಸ್ ಹೆಡ್ ಒಂದು ಕಡೆಯಲ್ಲಿ ಕುಂಟುತ್ತಲೇ ಕ್ರೀಸಿನಲ್ಲಿ ಉಳಿದುಬಿಟ್ಟರು. ಮಾರ್ನಸ್ ಲ್ಯಾಬ್ ಶೇನ್ ಮತ್ತೊಂದು ಕಡೆ ಬಂಡೆಯಂತೆ ಕದಲದೆ ನಿಂತಿದ್ದು ಭಾರತೀಯರನ್ನು ದಂಗುಬಡಿಸಿತ್ತು. ನಿಧಾನಕ್ಕೆ ರನ್ ಮಳೆಯನ್ನು ಹೆಚ್ಚಿಸುತ್ತಲೇ ಹೋದ ಟ್ರೇವಿಸ್ ಹೆಡ್, ಸ್ಲಾಗ್ ಎಸೆತ ಸಿಗುತ್ತಿದ್ದಂತೆ ಸಿಕ್ಸರ್, ಬೌಂಡರಿ ಅಟ್ಟತೊಡಗಿದ್ದರು. ಲ್ಯಾಬ್ ಶೇನ್ ವಿಕೆಟ್ ಉಳಿಸಿ ಸಿಂಗಲ್ ತೆಗೆದು ಟ್ರೇವಿಸ್ ಗೆ ಆಟಕ್ಕೆ ಅನುವು ಮಾಡುತ್ತಿದ್ದರು. ಟ್ರೇವಿಸ್ ಹೆಡ್ ನೇರವಾಗಿ ಆಕ್ರಮಣಕಾರಿ ಆಟವಾಡುತ್ತಲೇ ತಂಡವನ್ನು ಸುಲಭದಲ್ಲಿ ಗುರಿ ಮುಟ್ಟುವಂತೆ ಮಾಡಿದರು. ಭಾರತೀಯ ವೇಗದ ಬೌಲಿಂಗ್, ಸ್ಪಿನ್ ಎಲ್ಲದಕ್ಕೂ ಮನಬಂದಂತೆ ದಂಡಿಸಿದರು. ಯಾರ ಎಸೆತಕ್ಕೂ ಇವರಿಬ್ಬರು ಬಗ್ಗಲಿಲ್ಲ, ಜಗ್ಗಲೂ ಇಲ್ಲ.

 

ಕೊನೆಗೆ ಗೆಲ್ಲಲು ಇನ್ನೆರಡೇ ರನ್ ಇರುವಾಗ ನೇರವಾಗಿ ಬಾರಿಸಿದ ಚೆಂಡು ಫೀಲ್ಡರ್ ಕೈಗೆ ಹೋಗಿತ್ತು. ಆಮೂಲಕ ಟ್ರೇವಿಸ್ ಹೆಡ್ ವಿಕೆಟ್ ಒಪ್ಪಿಸಿದರೆ, ಇತ್ತ ಆಸ್ಟ್ರೇಲಿಯನ್ನರು ಗೆಲುವಿನ ಕೇಕೆ ಆರಂಭಿಸಿದ್ದರು. 43 ಓವರಿನಲ್ಲಿ 242 ರನ್ ಪೇರಿಸಿ ಆರು ವಿಕೆಟ್ ಅಂತರದಲ್ಲಿ ಭಾರತವನ್ನು ಸೋಲಿಸಿದ್ದರು. ಸೂಪರ್ ಸ್ಟಾರ್ ಆಗಿ ಆಟವಾಡಿದ ಟ್ರೇವಿಸ್ ಹೆಡ್ (120 ಎಸೆತಕ್ಕೆ 137) ಸಹಜವಾಗಿಯೇ ಮ್ಯಾನ್ ಆಫ್ ದಿ ಮ್ಯಾಚ್ ಆದರು. ನಾಲ್ಕನೇ ವಿಕೆಟ್ ಗೆ 192 ರನ್ ಗಳ ಪಾಲುದಾರಿಕೆ ಒದಗಿಸಿದ್ದು ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ದಾಖಲೆಯ ಆಟವಾಗಿದೆ.

ದೇಶಾದ್ಯಂತ ಭಾರತ ಈ ಬಾರಿಯ ಫೇವರಿಟ್ ಎಂದುಕೊಂಡು ಕ್ರೀಡಾ ಪ್ರಿಯರು ದೊಡ್ಡ ಸ್ಕ್ರೀನಲ್ಲಿ ಕ್ರಿಕೆಟ್ ಆಟದ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದರು. ಭಾರತದ ಬ್ಯಾಟಿಂಗ್ ವೈಫಲ್ಯ ಕಾಣುತ್ತಲೇ ನಿರಾಸೆ ಅನುಭವಿಸಿದರು. ತಂದಿಟ್ಟ ಪಟಾಕಿಯೆಲ್ಲ ಠುಸ್ ಎನ್ನುವಂತಾಯ್ತು.

Australia's Travis Head hit a hundred in the World Cup final against India in Ahmedabad on Sunday as his team closed in on a record-extending sixth title. Victory for Australia is a crowning moment in what has been a phenomenal year for Pat Cummins’ side across formats, adding to their win over India in the World Test Championship final in June and their subsequent retention of the Ashes.