ಸೌಜನ್ಯಾ ಪ್ರಕರಣ ಅತ್ಯಂತ ಸೂಕ್ಷ್ಮ ; ವೈಜ್ಞಾನಿಕ ಆಧಾರದಲ್ಲೇ ತನಿಖೆ, ಯಾರಿಗೂ ಅನ್ಯಾಯ ಆಗಬಾರದು! ಯೂಟ್ಯೂಬ್ ಚಾನೆಲ್ಗಳು ಮಾತ್ರ ಮಸಾಲೆ ತೋರಿಸಿ ತೀರ್ಪು ಕೊಡ್ತಿವೆ, ಪ್ರಿಯಾಂಕ ಖರ್ಗೆ ಗರಂ

25-11-26 06:29 pm       HK News Staffer   ಕರಾವಳಿ

ಸೌಜನ್ಯಾ ಕೊಲೆ ಪ್ರಕರಣ ಸೂಕ್ಷ್ಮ ವಿಚಾರವಾಗಿದ್ದು ವೈಜ್ಞಾನಿಕ ದಾಖಲೆಗಳ ಆಧಾರದಲ್ಲೇ ತನಿಖೆ ನಡೆಯಬೇಕು. ಯಾರಿಗೂ ಅನ್ಯಾಯವಾಗಬಾರದು ಎಂಬುದು ಸರ್ಕಾರದ ಉದ್ದೇಶ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಮಂಗಳೂರು, ನ.25: ಸೌಜನ್ಯಾ ಕೊಲೆ ಪ್ರಕರಣ ಸೂಕ್ಷ್ಮ ವಿಚಾರವಾಗಿದ್ದು ವೈಜ್ಞಾನಿಕ ದಾಖಲೆಗಳ ಆಧಾರದಲ್ಲೇ ತನಿಖೆ ನಡೆಯಬೇಕು. ಯಾರಿಗೂ ಅನ್ಯಾಯವಾಗಬಾರದು ಎಂಬುದು ಸರ್ಕಾರದ ಉದ್ದೇಶ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. 

ಮಂಗಳೂರಿನಲ್ಲಿ ಸುದ್ದಿಗೋಷ್ಟಿ ಸಂದರ್ಭದಲ್ಲಿ ಸೌಜನ್ಯಾ ಪ್ರಕರಣದ ಮರುತನಿಖೆ ಬಗ್ಗೆ ಕೇಳಿದ ಪ್ರಶ್ನೆಗೆ, ಸೌಜನ್ಯಾ ಪ್ರಕರಣ ಅತ್ಯಂತ ಸೂಕ್ಷ್ಮವಾದ ಪ್ರಕರಣವಾಗಿದೆ. ಸಾರ್ವಜನಿಕರ ಭಾವನೆಗಳನ್ನು ಗಮನದಲ್ಲಿಟ್ಟು ಅಧಿಕಾರಿಗಳ ಬದಲಾವಣೆ ಮಾಡಲಾಗಿದೆ. ಪ್ರಕರಣದಲ್ಲಿ ಏನೇ ಕ್ರಮ ಕೈಗೊಳ್ಳಬೇಕಿದ್ದರೂ ವೈಜ್ಞಾನಿಕ ಆಧಾರದ ಮೇಲೆಯೇ ಮಾಡಬೇಕು. ಯಾರಿಗೂ ಅನ್ಯಾಯವಾಗಬಾರದು ಎಂಬುದು ಸರ್ಕಾರದ ಉದ್ದೇಶ. 

ಪ್ರಕರಣ ನಡೆದು ಸುಮಾರು 14 ವರ್ಷಗಳು ಆಗಿರುವುದರಿಂದ ಸತ್ಯ ತಿಳಿದುಕೊಳ್ಳಲು ವೈಜ್ಞಾನಿಕ ದಾಖಲೆಗಳ ಆಧಾರ ಅಗತ್ಯ. ಹಲವು ಜನರು ನನಗೆ ಪತ್ರ ಬರೆದು ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಅಂಶಗಳನ್ನು ತಿಳಿಸಿದ್ದಾರೆ. ಅದನ್ನು ತನಿಖೆಗೆ ನೀಡಲಾಗಿದೆ ಎಂದು ಖರ್ಗೆ ಮಾಹಿತಿ ನೀಡಿದರು. ಆದರೆ ಇಂದು ಕೆಲವು ಯೂಟ್ಯೂಬ್ ಚಾನೆಲ್‌ಗಳೇ ಪ್ರಕರಣದ ಎಲ್ಲಾ ತೀರ್ಮಾನಗಳನ್ನು ಮಾಡುತ್ತಿರುವಂತಿದೆ. ತಮ್ಮ ಯೂಟ್ಯೂಬ್ ಚಾನಲ್ ಗಳಲ್ಲಿ ಅವರೇ ತೀರ್ಮಾನ ಕೊಡುತ್ತಿದ್ದಾರೆ. ಅವರಿಗೆ ಮಾಹಿತಿ ಎಲ್ಲಿಂದ ಬರುತ್ತದೆ ಎಂಬುದು ಗೊತ್ತಿಲ್ಲ. ಸುಳ್ಳು ಸುದ್ದಿಗಳಿಗೆ, ನೆರೇಟಿವ್ ಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಕೆಲವು ಯೂಟ್ಯೂಬ್ ಚಾನೆಲ್‌ಗಳು ಮಿರ್ಚಿ ಮಸಾಲೆ ಸೇರಿಸಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಯೂಟ್ಯೂಬ್‌ನಲ್ಲಿ ಅಧಿಕೃತ ಪತ್ರಕರ್ತರು ಬಹಳ ಕಡಿಮೆ ಇದ್ದಾರೆ.‌ ಕೆಲವು ಹಿರಿಯ ಪ್ರಭುದ್ಧ ಪತ್ರಕರ್ತರು ಇದ್ದಾರೆ. 

ಬೇಕಾಬಿಟ್ಟಿ ಸುದ್ದಿ ಮಾಡುವ ಯೂಟ್ಯೂಬ್ ಗಳನ್ನು ನಿಯಂತ್ರಿಸಲು ಪಾಲಿಸಿ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಐಟಿ ಸಚಿವಾಲಯದೊಂದಿಗೆ ಚರ್ಚಿಸುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. 

ಕರ್ನಾಟಕದ ಮೀನುಗಾರರ ಮೇಲೆ ನೆರೆಯ ರಾಜ್ಯಗಳಿಂದ ದೌರ್ಜನ್ಯ ಆಗುತ್ತಿರುವ ಆರೋಪದ ಬಗ್ಗೆ, ಬೇರೆಯವರ ಸಂಪನ್ಮೂಲಗಳನ್ನು ಯಾರೂ ಬಳಸಿಕೊಳ್ಳುವ ಹಕ್ಕಿಲ್ಲ.‌ 12 ನಾಟಿಕಲ್ ಮೈಲುಗಳ ಸಮುದ್ರ ವ್ಯಾಪ್ತಿ ನಮ್ಮ ನಿಗಾದಲ್ಲಿದೆ. ನೆರೆಯ ಕೇರಳ ಮತ್ತು ಗೋವಾ ಸರ್ಕಾರಗಳಿಂದ ಶೋಷಣೆಯಾಗುತ್ತಿದ್ರೆ ಪರಿಶೀಲಿಸುತ್ತೇವೆ.‌ ಕೇರಳ, ಗೋವಾ ವಿರುದ್ಧ ಪರಿಶೀಲನೆಗೆ ಸರ್ಕಾರ ಸಿದ್ಧವಿದೆ ಎಂದು ಹೇಳಿದರು.