ಇಸ್ರೇಲ್ ನಲ್ಲಿ ಮಂಗಳೂರಿನ ಯುವಕ ನಿಗೂಢ ಸಾವು ; ಕೊಲೆ ಶಂಕೆ, ತಿಂಗಳ ಬಳಿಕ ಮೃತದೇಹ ತಾಯ್ನಾಡಿಗೆ ರವಾನೆ

25-11-26 11:53 am       HK News Staffer   ದೇಶ - ವಿದೇಶ

ಇಸ್ರೇಲ್ ನಲ್ಲಿ ನಾಪತ್ತೆಯಾಗಿದ್ದ ಮಂಗಳೂರು ಮೂಲದ ಯುವಕ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ. ಯುವಕನ ಮೃತದೇಹವನ್ನು ಸಾವು ಸಂಭವಿಸಿದ ಒಂದು ತಿಂಗಳ ಬಳಿಕ ಭಾರತಕ್ಕೆ ರವಾನಿಲಾಗಿದೆ.

ಮಂಗಳೂರು, ನ.25: ಇಸ್ರೇಲ್ ನಲ್ಲಿ ನಾಪತ್ತೆಯಾಗಿದ್ದ ಮಂಗಳೂರು ಮೂಲದ ಯುವಕ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ. ಯುವಕನ ಮೃತದೇಹವನ್ನು ಸಾವು ಸಂಭವಿಸಿದ ಒಂದು ತಿಂಗಳ ಬಳಿಕ ಭಾರತಕ್ಕೆ ರವಾನಿಲಾಗಿದೆ. 

ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡಕ್ಕಲ್ ನಿವಾಸಿ ಶಡ್ರಕ್ ಇಮ್ಯಾ ನುವೆಲ್ (41) ಕಳೆದ ಒಂದೂವರೆ ವರ್ಷದಿಂದ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದು ಅಕ್ಟೋಬರ್ 16ರ ಬಳಿಕ ಮನೆಯವರ ಜೊತೆಗೆ ಮಾತನಾಡುತ್ತಿದ್ದಾಗಲೇ ಸಂಪರ್ಕ ಕಟ್ ಆಗಿ ನಾಪತ್ತೆಯಾಗಿದ್ದರು.‌ ಒಂದು ವಾರದ ಬಳಿಕ ಶಡ್ರಕ್ ಮೃತಪಟ್ಟ ಬಗ್ಗೆ ಕುಟುಂಬಕ್ಕೆ ಮಾಹಿತಿ ಲಭಿಸಿತ್ತು. ಮಂಗಳವಾರ ರಾತ್ರಿ ಶಡ್ರಕ್ ಅವರ ಮೃತದೇಹ  ತಾಯ್ನಾಡಿಗೆ ಕಳಿಸಿಕೊಡಲಾಗಿದೆ. 

ಮೊದಲು ಇಸ್ರೇಲ್‌ ರಾಜಧಾನಿ ಟೆಲ್ ಅವೀವ್‌ನಲ್ಲಿ ಅಲ್ಲಿನ ಕಂಪೆನಿ ಒಂದರಲ್ಲಿ ಕೆಲಸಕ್ಕಿದ್ದ ಶೆಡ್ರಕ್, ಬಳಿಕ ನಝರೆತ್‌ ನಗರದ ನೊಫ್ ಹಗಲಿಲ್‌ನಲ್ಲಿ ಯುಸಿಟಿ ಲಿಕ್ವಿಡ್ ಸೊಲ್ಯೂಶನ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಅ.16 ರಂದು ರಾತ್ರಿ 8.49ಕ್ಕೆ ಪತ್ನಿಗೆ ಮೆಸೇಜ್ ಕಳುಹಿಸಿದ್ದರು. ಅದಕ್ಕೂ ಮೊದಲು ಮನೆಯವರೊಂದಿಗೆ ವೀಡಿಯೋ ಕರೆ ಮೂಲಕ ಮಾತನಾಡಿದ್ದರು. ಕರೆಯಲ್ಲಿದ್ದಾಗಲೇ ಸಂಪರ್ಕ ಕಡಿದು ಹೋಗಿತ್ತು. ಆನಂತರ, ಎಷ್ಟು ಕರೆ ಮಾಡಿದರೂ ಆ ಕಡೆಯಿಂದ ಪ್ರತಿಕ್ರಿಯೆ ಬಂದಿರಲಿಲ್ಲ. 

ಮನೆಯವರು ಆತಂಕಗೊಂಡು ಅ.21ರಂದು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಈ-ಮೇಲ್ ಮೂಲಕ ದೂರು ನೀಡಿದ್ದರು. ಇಸ್ರೇಲ್ ನಲ್ಲಿ ಶಡ್ರಕ್ ನಾಪತ್ತೆಯಾಗಿದ್ದರಿಂದ ಮಂಗಳೂರಿನ ಪೊಲೀಸ್‌ ಆಯುಕ್ತರಿಗೂ ದೂರು ನೀಡಲಾಗಿತ್ತು. ಸಂಸದ ಕ್ಯಾ , ಬ್ರಿಜೇಶ್ ಚೌಟ ಗಮನಕ್ಕೆ ತಂದು ಅಲ್ಲಿನ ರಾಯಭಾರಿ ಕಚೇರಿಗೆ ಮಾಹಿತಿ ನೀಡಲಾಗಿತ್ತು. ‌ಕೊಲೆ ಮಾಡಿರುವ ಶಂಕೆಯಿದ್ದು ಅಲ್ಲಿನ ಪೊಲೀಸರ ತನಿಖೆ ಬಗ್ಗೆ ಮಾಹಿತಿ ಲಭಿಸಿಲ್ಲ.