CT Ravi, Mangalore, SIR: ನೇಪಾಳ ಮಾದರಿ ಅರಾಜಕತೆ ಯತ್ನ, ಎಸ್ಐಆರ್ ಬಗ್ಗೆ ಅಪಪ್ರಚಾರ ; ಬಿಎಲ್ಓಗಳು, ತಮ್ಮ ಪಕ್ಷದ ಏಜಂಟರನ್ನೇ ಕಾಂಗ್ರೆಸ್ ಅನುಮಾನಿಸುತ್ತಿದೆಯೇ? ನ.1ರಿಂದ ದೇಶಾದ್ಯಂತ ಜನಜಾಗೃತಿ ; ಸಿಟಿ ರವಿ

27-10-26 10:52 pm       Mangaluru Staffer   ಕರಾವಳಿ

ಯುರೋಪ್, ಶ್ರೀಲಂಕಾ, ನೇಪಾಳ ಮಾದರಿಯಲ್ಲಿ ದೇಶದಲ್ಲಿ ಅರಾಜಕತೆ ಮೂಡಿಸಲು, ಜನರ ನಂಬಿಕೆ ಬುಡಮೇಲು ಮಾಡಲು ಕೆಲವು ಹಿತಾಸಕ್ತಿಗಳು ಯತ್ನಿಸುತ್ತಿವೆ.

ಮಂಗಳೂರು, ಅ.27: ಯುರೋಪ್, ಶ್ರೀಲಂಕಾ, ನೇಪಾಳ ಮಾದರಿಯಲ್ಲಿ ದೇಶದಲ್ಲಿ ಅರಾಜಕತೆ ಮೂಡಿಸಲು, ಜನರ ನಂಬಿಕೆ ಬುಡಮೇಲು ಮಾಡಲು ಕೆಲವು ಹಿತಾಸಕ್ತಿಗಳು ಯತ್ನಿಸುತ್ತಿವೆ. ಇದರ ಬಗ್ಗೆ ದೇಶಾದ್ಯಂತ ಜನಜಾಗೃತಿ ಮೂಡಿಸಲಿದ್ದು ನ.1ರಿಂದ 30ರ ವರೆಗೆ ಅಭಿಯಾನ ನಡೆಸಲಾಗುವುದು. ಎಸ್ಐಆರ್ ವಿಚಾರದಲ್ಲಿ ನಡೆಸುತ್ತಿರುವ ಅಪಪ್ರಚಾರವನ್ನು ಸೋಲಿಸಲು, ಸಜ್ಜನ ಶಕ್ತಿಯನ್ನು ಜಾಗೃತಿಗೊಳಿಸಲು ಅಭಿಯಾನ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಶಾಸಕ, ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಮೊದಲಿಗೆ ಭಾರತ ಸರ್ಕಾರದ ವಿರುದ್ಧ ಅಸಹಿಷ್ಣುತೆ ಪದ ಪ್ರಯೋಗ ಮಾಡಲಾಯಿತು. ಆನಂತರ ಅವಾರ್ಡ್ ವಾಪ್ತಿ ನಡೆಯಿತು. ಬಳಿಕ ಸಿಎಎ ಮುಂದಿಟ್ಟು ಅಲ್ಪಸಂಖ್ಯಾತರಲ್ಲಿ ಭೀತಿ ಸೃಷ್ಟಿಸಿ ಸರ್ಕಾರದ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ನಡೆಯಿತು. ನಂತರ, ರೈತರ ಪರ ಕಾಯ್ದೆಯನ್ನು ರೈತ ವಿರೋಧಿಯೆಂದು ಬಿಂಬಿಸಿ ಪಾರ್ಲಿಮೆಂಟ್ ಮುತ್ತಿಗೆ ಆಯ್ತು. ಚುನಾವಣೆ ಸೋತಾಗ ಇವಿಎಂ ಷಡ್ಯಂತ್ರ ಎಂದು ಹೇಳಿ ಪ್ರಚಾರ ನಡೆಸಿದ್ರು. ನ್ಯಾಯಾಲಯ ಆಧಾರ ಕೇಳಿದಾಗ ಓಡಿ ಹೋದ್ರು. ಈಗ ಎಸ್ಐಆರ್ ವಿಚಾರದಲ್ಲಿ ಅಪಪ್ರಚಾರ ನಡೆಸುತ್ತಿದ್ದು ಅಲ್ಪಸಂಖ್ಯಾತರನ್ನು ಬುಡಕಟ್ಟು ಜನರನ್ನು ಎತ್ತಿಕಟ್ಟುವ ಪ್ರಯತ್ನ ನಡೆಸುತ್ತಿದ್ದು ಅದರಲ್ಲೂ ಸೋಲು ಕಾಣುತ್ತಿದ್ದಾರೆ.

ದೇಶದಲ್ಲಿ ಇದು ಒಂಬತ್ತನೇ ಬಾರಿ ಮತಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು ಹಿಂದೆ ನೆಹರು, ಇಂದಿರಾ ಕಾಲದಲ್ಲೂ ನಡೆದಿತ್ತು. ರಾಜೀವ ಗಾಂಧಿ, ವಾಜಪೇಯಿ ಕಾಲದಲ್ಲೂ ನಡೆದಿತ್ತು. ಪ್ರಜಾಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 21(3) ಪ್ರಕಾರ ಇದನ್ನು ಸಂವಿಧಾನ ಪ್ರಕಾರವೇ ನಡೆಸಲಾಗುತ್ತಿದೆ. ನಿಧನ, ಸ್ಥಳಾಂತರ, ಡುಪ್ಲಿಕೇಟ್ ಮತಗಳನ್ನು ಗುರುತಿಸಲು ಕಾಲ ಕಾಲಕ್ಕೆ ನಡೆಸುತ್ತಿದ್ದರೂ ಕಾಂಗ್ರೆಸ್ 13 ಕೋಟಿ ಮತದಾರರನ್ನು ಕೈಬಿಟ್ಟಿದ್ದಾರೆಂದು ಆರೋಪಿಸಿ ಜ್ಞಾನೇಶ್ ಕುಮಾರ್ ರಾಜಿನಾಮೆ ಕೇಳುತ್ತಿದ್ದಾರೆ. ದೇಶದಲ್ಲಿ 11 ಲಕ್ಷ ಬಿಎಲ್ಓಗಳು, ಅದಕ್ಕಿಂತ ಎರಡು ಪಟ್ಟು ಬಿಎಲ್ಎಗಳು ಇದಕ್ಕಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಮತಗಳವು ಆಗಿದ್ದರೆ ಅದನ್ನು ಇವರೇ ಮಾಡಬೇಕಲ್ಲವೇ.. ಕಾಂಗ್ರೆಸ್ ಬಿಎಲ್ಓಗಳಾಗಿದ್ದ ಶಿಕ್ಷರರನ್ನು, ಬಿಎಲ್ಎಗಳಾಗಿದ್ದ ತಮ್ಮದು ಸೇರಿ ರಾಜಕೀಯ ಪಕ್ಷಗಳ ಏಜಂಟರನ್ನು ಅನುಮಾನಿಸುತ್ತಿದ್ದಾರೆಯೇ ಎಂದು ಸಿಟಿ ರವಿ ಪ್ರಶ್ನಿಸಿದರು.

ರಾಜ್ಯದಲ್ಲಿ 5.54 ಕೋಟಿಯಿದ್ದ ಮತದಾರರಲ್ಲಿ ಈಗ 1.7 ಕೋಟಿ ಮತಗಳು ಕಡಿಮೆಯಾಗಿವೆ. ಅದರಲ್ಲಿ 65 ಲಕ್ಷ ಸ್ಥಳಾಂತರ, 16 ಲಕ್ಷ ನಿಧನ, 3.83 ಲಕ್ಷ ಡುಪ್ಲಿಕೇಟ್ ಅಂತ ತೋರಿಸಲಾಗಿದೆ. ಇದನ್ನು ಮಾಡಿದ್ದು ರಾಜ್ಯ ಸರ್ಕಾರದ ಅಧಿಕಾರಿಗಳೇ ವಿನಾ ಜ್ಞಾನೇಶ್ ಕುಮಾರ್ ಮಾಡಿದ್ದಲ್ಲ. ಅವರು ಕೇವಲ ಅಧ್ಯಾದೇಶ ಹೊರಡಿಸಿದ್ದಾರೆ ಅಷ್ಟೇ. ಇಲ್ಲಿ ಇವರಿಂದಲೇ ಮತಗಳವು ಆಗಿದೆ ಎನ್ನುವುದಕ್ಕೆ ಏನಿದೆ ದಾಖಲೆ ಎಂದು ರವಿ ಪ್ರಶ್ನಿಸಿದರು. ಇದಲ್ಲದೆ, ಬಿಎಲ್ಓಗಳು ಮಾಡಿರುವ ಕೆಲಸಕ್ಕೆ ಆಯಾ ಭಾಗದಲ್ಲಿ ಪಕ್ಷದ ಏಜಂಟರೇ ಸಹಿ ಹಾಕಿದ್ದಾರೆ. ಇದೇ ವಿಧಾನದಲ್ಲಿ ಮತಪಟ್ಟಿ ಪರಿಷ್ಕರಣೆ ಆದಬಳಿಕ ಕೇರಳ, ತೆಲಂಗಾಣ, ತಮಿಳುನಾಡಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇವಿಎಂ ಆಧರಿಸಿಯೇ ಆರು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಇವಿಎಂ ಸರಿ ಇಲ್ಲ ಎಂದರೆ, ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಚುನಾವಣೆ ಎಧುರಿಸಲು ಸಿದ್ಧರಿದ್ದಾರೆಯೇ ಎಂದು ಕೇಳಿದರು.

ಕೇರಳದಲ್ಲಿ ರಮೇಶ್ ಚೆನ್ನಿತ್ತಲ, ಈಗಿನ ಸಿಎಂ ಸತೀಶನ್ ಎಸ್ಐಆರ್ ಕಾರಣದಿಂದಲೇ ತಮ್ಮ ಸರ್ಕಾರ ಬಂತು ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ಇದೇ ಕಾರಣದಿಂದ ಪಾರದರ್ಶಕ ಚುನಾವಣೆಯಾಗಿ ಅಧಿಕಾರಕ್ಕೆ ಬಂದೆವು ಎಂದು ವಿಜಯ್ ಪಕ್ಷ ಹೇಳಿತ್ತು. ಆದರೆ ಕಾಂಗ್ರೆಸ್ ಮಾತ್ರ ಎಸ್ಐಆರ್ ಅನ್ನು ದೂರುತ್ತಿದ್ದು, ನಿರಂತರ ಅಪಪ್ರಚಾರ ನಡೆಸುತ್ತಿದೆ. ಇಷ್ಟಕ್ಕೂ ನಾವು ಸತ್ತಿಲ್ಲ, ಬದುಕಿದ್ದೇವೆಂದು ಯಾರು ಕೂಡ ತಮ್ಮ ಮತ ಡಿಲೀಟ್ ಆಗಿರುವುದಕ್ಕೆ ದೂರು ಕೊಟ್ಟ ಉದಾಹರಣೆ ಇಲ್ಲ. ಬರೀ ಸುಳ್ಳಿನ ಕತೆ ಕಟ್ಟುತ್ತಿದ್ದು ಇದನ್ನು ನಿವಾರಿಸಲು ದೇಶಾದ್ಯಂತ ಜಾಗೃತಿ ಅಭಿಯಾನ ಕೈಗೊಂಡಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಸಂಸದ ಬ್ರಿಜೇಶ್ ಚೌಟ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಎಂಎಲ್ಸಿ ಕಿಶೋರ್ ಕುಮಾರ್, ಶಾಸಕ ಭರತ್ ಶೆಟ್ಟಿ ಮತ್ತಿತರರು ಇದ್ದರು.