Soujanya Case: ಸೌಜನ್ಯಾ ಪ್ರಕರಣದ ಮರುತನಿಖೆ ; ರುದ್ರಮುನಿ, ಯೋಗೀಶ್, ಭಾಸ್ಕರ ರೈ ಸೇರಿ ಹಿಂದೆ ತನಿಖೆ ನಡೆಸಿದ್ದ 15ಕ್ಕೂ ಹೆಚ್ಚು ಅಧಿಕಾರಿಗಳಿಗೆ ಎಸ್ಐಟಿ ನೋಟಿಸ್, ವಿಚಾರಣೆಗೆ ಹಾಜರಾಗಲು ಸೂಚನೆ

27-10-26 08:40 pm       HK News Staffer   ಕರಾವಳಿ

ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಯನ್ನು ಕೈಗೆತ್ತಿಕೊಂಡಿರುವ ವಿಶೇಷ ತನಿಖಾ ತಂಡ ತನಿಖೆಯನ್ನು ತೀವ್ರಗೊಳಿಸಿದೆ. ಮೊದಲ ಹಂತವಾಗಿ, ಪ್ರಕರಣದ ಆರಂಭದಲ್ಲಿ ತನಿಖೆ ನಡೆಸಿದ್ದ ಸ್ಥಳೀಯ ಪೊಲೀಸರು, ಸಿಐಡಿ ಮತ್ತು ಸಿಬಿಐ ತಂಡಗಳಲ್ಲಿ ಕಾರ್ಯನಿರ್ವಹಿಸಿದ್ದ 15ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದೆ.

ಮಂಗಳೂರು, ಅ.27: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಯನ್ನು ಕೈಗೆತ್ತಿಕೊಂಡಿರುವ ವಿಶೇಷ ತನಿಖಾ ತಂಡ ತನಿಖೆಯನ್ನು ತೀವ್ರಗೊಳಿಸಿದೆ. ಮೊದಲ ಹಂತವಾಗಿ, ಪ್ರಕರಣದ ಆರಂಭದಲ್ಲಿ ತನಿಖೆ ನಡೆಸಿದ್ದ ಸ್ಥಳೀಯ ಪೊಲೀಸರು, ಸಿಐಡಿ ಮತ್ತು ಸಿಬಿಐ ತಂಡಗಳಲ್ಲಿ ಕಾರ್ಯನಿರ್ವಹಿಸಿದ್ದ 15ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದೆ. 

2012ರಲ್ಲಿ ನಡೆದ ಪ್ರಕರಣದ ಆರಂಭಿಕ ತನಿಖೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಲು ಎಸ್‌ಐಟಿ ಮುಂದಾಗಿದೆ. ವರದಿಯ ಪ್ರಕಾರ, ಅಪರಾಧ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 160ರ ಅಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ನೋಟಿಸ್ ಪಡೆದವರಲ್ಲಿ ಪ್ರಮುಖ ಅಧಿಕಾರಿಗಳು

ನೋಟಿಸ್ ಪಡೆದವರ ಪಟ್ಟಿಯಲ್ಲಿ ಅಂದಿನ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಭಾಸ್ಕರ್ ರೈ, ಪಿಎಸ್‌ಐ ಯೋಗೀಶ್ ಹಾಗೂ ಸಿಐಡಿ ತನಿಖಾಧಿಕಾರಿ ಡಿವೈಎಸ್‌ಪಿ ರುದ್ರಮುನಿ ಅವರ ಹೆಸರುಗಳಿವೆ. ಅಂದಿನ ಬೆಳ್ತಂಗಡಿ ಠಾಣೆಯಲ್ಲಿ ಕಾರ್ಯ ನಿರ್ವಹಿಸಿದ್ದ ಎಎಸ್‌ಐ ಕಲೈಮಾರ್, ಮಹಿಳಾ ಹೆಡ್ ಕಾನ್ಸ್‌ಟೇಬಲ್ ಸವಿತಾ ಶೆಟ್ಟಿ ಹಾಗೂ ಸಿಬ್ಬಂದಿಗಳಾದ ಸುಂದರ್ ಶೆಟ್ಟಿ, ಕೃಷ್ಣ, ರಿಷಬ್, ನವೀನ್ ಮತ್ತು ಭಾಸ್ಕರ್ ಅವರಿಗೂ ನೋಟಿಸ್ ನೀಡಲಾಗಿದೆ.

ಪ್ರಕರಣದ ಆರಂಭಿಕ ಮಹಜರು, ಸಾಕ್ಷ್ಯಾಧಾರಗಳ ಸಂಗ್ರಹ ಮತ್ತು ತನಿಖೆಯ ವಿವಿಧ ಹಂತಗಳನ್ನು ಮರು ಪರಿಶೀಲಿಸುವ ಉದ್ದೇಶದಿಂದ ಎಸ್‌ಐಟಿ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ. ಸಿಐಡಿ ಮತ್ತು ಸಿಬಿಐ ತನಿಖೆಯಲ್ಲಿ ಭಾಗಿಯಾಗಿದ್ದ ಇತರ ಅಧಿಕಾರಿಗಳಿಗೂ ಮುಂದಿನ ದಿನಗಳಲ್ಲಿ ನೋಟಿಸ್ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಶುಕ್ರವಾರದ ವೇಳೆಗೆ ಹಿಂದಿನ ತನಿಖಾ ತಂಡದಲ್ಲಿದ್ದವರು ಮಂಗಳೂರಿನ ಎಸ್ಐಟಿ ಕಚೇರಿಗೆ ಹಾಜರಾಗುವ ಸಾಧ್ಯತೆಯಿದೆ. ಹಿಂದಿನ ತನಿಖೆಯಲ್ಲಿ ಆಗಿರುವ ಲೋಪಗಳು, ಉದ್ದೇಶಪೂರ್ವಕ ಎಸಗಿರುವ ತಪ್ಪುಗಳ ಬಗ್ಗೆ ಎಸ್ಐಟಿ ಮಾಹಿತಿ‌ ಸಂಗ್ರಹಿಸಲಿದೆ ಅಥವಾ ಪರಿಶೀಲನೆ ಕೈಗೊಳ್ಳುವ ಸಾಧ್ಯತೆಯಿದೆ. ‌