Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ್ಣಾಮಲೈ ಸಿದ್ಧತೆ ; ಸ್ಥಳೀಯ ಸಂಸ್ಥೆಗಳ ಚುನಾವಣೆಗೆ 'ವೀ ದಿ ಲೀಡರ್ಸ್' ಸ್ಪರ್ಧೆ ಘೋಷಣೆ

14-10-26 04:59 pm       HK News Staffer   ದೇಶ - ವಿದೇಶ

ತಮಿಳುನಾಡಿನ ರಾಜಕೀಯದಲ್ಲಿ ಹೊಸ ಬದಲಾವಣೆಗಾಗಿ ಪಣ ತೊಟ್ಟಿರುವ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ತಮ್ಮ ‘ವೀ ದ ಲೀಡರ್ಸ್’ (WTL) ಸಂಘಟನೆಯನ್ನು ಚುನಾವಣಾ ಅಖಾಡಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ. ಮುಂದಿನ ವರ್ಷ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ಡಬ್ಲ್ಯುಟಿಎಲ್ ಸ್ಪರ್ಧಿಸಲಿದೆ ಎಂದು ಅವರು ಘೋಷಿಸಿದ್ದಾರೆ.

ಚೆನ್ನೈ, ಅ.14: ತಮಿಳುನಾಡಿನ ರಾಜಕೀಯದಲ್ಲಿ ಹೊಸ ಬದಲಾವಣೆಗಾಗಿ ಪಣ ತೊಟ್ಟಿರುವ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ತಮ್ಮ ‘ವೀ ದ ಲೀಡರ್ಸ್’ (WTL) ಸಂಘಟನೆಯನ್ನು ಚುನಾವಣಾ ಅಖಾಡಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ. ಮುಂದಿನ ವರ್ಷ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ಡಬ್ಲ್ಯುಟಿಎಲ್ ಸ್ಪರ್ಧಿಸಲಿದೆ ಎಂದು ಅವರು ಘೋಷಿಸಿದ್ದಾರೆ.

ನಮ್ಮ ನಾಯಕರು ಶ್ರಮಿಸಿ ಜನರ ಪ್ರೀತಿ ಗಳಿಸಲಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ವೀ ದ ಲೀಡರ್ಸ್ ಬದಲಾವಣೆಯ ಸಂಕೇತವಾಗಲಿದೆ’ ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೂನ್ 5ರಂದು ಬಿಜೆಪಿಗೆ ರಾಜೀನಾಮೆ ನೀಡಿದ ಅಣ್ಣಾಮಲೈ, ಅದೇ ದಿನ WTL ಸ್ಥಾಪಿಸಿದ್ದರು. ಆರಂಭದಲ್ಲಿ ತಳಮಟ್ಟದ ರಾಜಕೀಯ ಚಳವಳಿಯಾಗಿ ರೂಪುಗೊಂಡ ಈ ಸಂಘಟನೆಯನ್ನು ಮುಂದೆ ಪೂರ್ಣ ಪ್ರಮಾಣದ ರಾಜಕೀಯ ಪಕ್ಷವಾಗಿ ಬೆಳೆಸುವುದು ಅವರ ಉದ್ದೇಶವಾಗಿತ್ತು. 2031ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು, ಅದಕ್ಕೂ ಮುನ್ನ ರಾಜ್ಯದಾದ್ಯಂತ ಸಂಘಟನೆಯ ನೆಲೆಯನ್ನು ಬಲಪಡಿಸಲು ಅವರು ಮುಂದಾಗಿದ್ದಾರೆ.

ಈ ವರ್ಷದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ದಶಕಗಳಿಂದ ರಾಜ್ಯ ರಾಜಕೀಯವನ್ನು ನಿಯಂತ್ರಿಸುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳನ್ನು ಮೂಲೆಗುಂಪು ಮಾಡಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಅಣ್ಣಾಮಲೈ ಕೂಡ ಹೊಸ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವ ಪ್ರಯತ್ನಕ್ಕೆ ವೇಗ ನೀಡಿದ್ದಾರೆ. 

ತಮಿಳುನಾಡಿನ ವಿಚಾರದಲ್ಲಿ ಬಿಜೆಪಿಯ ಕೇಂದ್ರ ನಾಯಕತ್ವ ಅನುಸರಿಸುತ್ತಿದ್ದ ಧೋರಣೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ಅಣ್ಣಾಮಲೈ ಪಕ್ಷ ತೊರೆದಿದ್ದರು. ಆಗಸ್ಟ್‌ನಲ್ಲಿ ನಡೆದ ‘ಇಂಡಿಯಾ ಟುಡೇ ರೌಂಡ್‌ಟೇಬಲ್ ತಮಿಳುನಾಡು’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ತಮಿಳುನಾಡು ಬದಲಾವಣೆಗೆ ಸಿದ್ಧವಾಗಿದೆ. ಆದರೆ, ದಿಲ್ಲಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಯಾವಾಗಲೂ ರಾಜ್ಯದ ಜನರ ಆಕಾಂಕ್ಷೆಗಳಿಗೆ ಅನುಗುಣವಾಗಿರುವುದಿಲ್ಲ ಎಂದು ಹೇಳಿದ್ದರು.