ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ್ಟಿಯಾಗಿ ಧ್ವನಿ ಎತ್ತಲಿ, ಸ್ಟೇ ಯಾಕೆ ತಗೋಬೇಕು? ಡಿಕೆಶಿ ಅವರೇ ನಿವೃತ್ತ ಅಧಿಕಾರಿಗಳನ್ನು ಬಳಸಿ ಸ್ಟಿಂಗ್ ಮಾಡುತ್ತಿದ್ದಾರೆ, ಎಚ್‌ಡಿಕೆ ಗಂಭೀರ ಆರೋಪ

13-10-26 03:38 pm       HK News Staffer   ಕರ್ನಾಟಕ

ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೊಸ ಆರೋಪಗಳನ್ನು ಮಾಡಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಗಳ ತಂಡವನ್ನು ಬಳಸಿಕೊಂಡು ಸಚಿವರ ಚಲನವಲನ ಮತ್ತು ಆಂತರಿಕ ಚರ್ಚೆಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ವಿಚಾರದಲ್ಲಿ ಸ್ಪಷ್ಟವಾಗಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರು, ಅ‌.13 : ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೊಸ ಆರೋಪಗಳನ್ನು ಮಾಡಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಗಳ ತಂಡವನ್ನು ಬಳಸಿಕೊಂಡು ಸಚಿವರ ಚಲನವಲನ ಮತ್ತು ಆಂತರಿಕ ಚರ್ಚೆಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ವಿಚಾರದಲ್ಲಿ ಸ್ಪಷ್ಟವಾಗಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದ್ದಾರೆ. 

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಆರಂಭದಲ್ಲಿ ಮಾಧ್ಯಮಗಳ ಮೂಲಕ ಮಾಹಿತಿ ಸಂಗ್ರಹಿಸಲು ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಾನು ಭಾವಿಸಿದ್ದೆ. ಆದರೆ, ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಸಂಪುಟ ಸಹೋದ್ಯೋಗಿಗಳು ಏನು ಚರ್ಚಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಈ ಕುರಿತು ಪೊಲೀಸ್ ಇಲಾಖೆಯವರೇ ಮಾತನಾಡಿದ್ದಾರೆ ಎಂದು ಕುಮಾರಸ್ವಾಮಿ  ಹೇಳಿದ್ದಾರೆ.

ಶಿವಕುಮಾರ್ ಅವರೇ ಸ್ಟಿಂಗ್ ಆಪರೇಷನ್‌ಗೆ ನೀರೆರೆದು ಬೆಳೆಸಿದ್ರಿ, ಆ ಸಸಿ ಈಗ ಹೆಮ್ಮರವಾಗಿದೆ. ಅದರ ಫಲ ನೀವು ಉಣ್ಣಲೇಬೇಕು ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. ರಮೇಶ್ ಜಾರಕಿಹೊಳಿ ಮೇಲೆ ಏನ್ ನಡೆಸಿದ್ರಿ. ರಾಜಣ್ಣ 48 ಜನರದ್ದು ಇದೆ ಎಂದು ಸದನದಲ್ಲಿ ಹೇಳಿದ್ರು. ಈಗ ಮಾಜಿ ಸಿಎಂ ಸ್ಟೇ ತಕೊಂಡಿದ್ದಾರೆ. 8 ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ‌ ಅವರನ್ನು‌ ಈ ಗತಿಗೆ ತಂದಿದ್ದೀರಿ ಅಲ್ವಾ. ಇನ್ನು ನೀವು ದೇಶದಲ್ಲಿ ಏನ್ ಸಂದೇಶ ಕೊಡ್ತೀರಿ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಸ್ಟಿಂಗ್ ಆಪರೇಷನ್ ವಿವಾದವನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಈ ಹಿಂದೆ ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ನಡೆದ ಬೆಳವಣಿಗೆಗಳನ್ನು ಉಲ್ಲೇಖಿಸಿದ್ದಾರೆ. ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು 48 ಜನರಿಗೆ ಸಂಬಂಧಿಸಿದ ಮಾಹಿತಿ ಇದೆ ಎಂದು ಸದನದಲ್ಲಿ ಹೇಳಿದ್ದ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ.

ಸ್ಟಿಂಗ್ ಆಪರೇಷನ್ ಹಿಂದೆ ಯಾರು ಇದ್ದಾರೆ, ಯಾರನ್ನು ಗುರಿಯಾಗಿಸಲಾಗಿದೆ ಮತ್ತು ಯಾವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆದಿದೆ ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕು. ರಾಜ್ಯದಲ್ಲಿ ನಡೆಯುತ್ತಿರೋ ಈ ಸ್ಟಿಂಗ್ ಆಪರೇಷನ್ ಬಗ್ಗೆ ಸಿಬಿಐ ತನಿಖೆ‌ ಆಗ್ಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಗಟ್ಟಿಯಾಗಿ ಧ್ವನಿ ಎತ್ತಬೇಕು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ‌ ಅವರೇ ನಿಮ್ಮನ್ನ ಯಾವ ಪರಿಸ್ಥಿತಿಗೆ ತಂದಿದ್ದಾರೆ ನೋಡಿ. ನಮ್ಮ ಕುಟುಂಬ ಹಾಗೂ ನಾವು ಏನ್ ಅನುಭವಿಸಿದ್ದೇವೆ ಅಂತ ನಮಗೆ ಗೊತ್ತಿದೆ. ನಿಮ್ಮ ನೋವು ಸಹ ನಮಗೆ ಗೊತ್ತಾಗುತ್ತೆ. ನೀವು ಕೂಡ ತನಿಖೆ ಆಗ್ಬೇಕು‌ ಎಂದಿದ್ದೀರಿ. ಸ್ಟಿಂಗ್ ಆಪರೇಷನ್ ನಿಲ್ಲಬೇಕು ಅಂದ್ರೆ ನೀವು ಧ್ವನಿ ಎತ್ತಬೇಕು. ಹೆದರಬೇಕಿಲ್ಲ, ಯಾಕೆ ಸ್ಟೇ ತರಬೇಕು. ಹೋರಾಟ ಮಾಡುವ ಶಕ್ತಿ ಇಲ್ಲವಾ? ಕೆಟ್ಟ ಪ್ರವೃತ್ತಿ ನಿಲ್ಲಿಸಬೇಕು ಅಂದ್ರೆ ನೀವು ಗಟ್ಟಿಯಾಗಿ ಧ್ವನಿ ಎತ್ತಬೇಕು ಎಂದು ಹೆಚ್‌ಡಿಕೆ ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್ ಅವರು ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಪ್ರಯತ್ನಿಸಲಾಗಿತ್ತು ಎಂದು ಈ ಹಿಂದೆ ಹೇಳಿದ್ದರು. ತಮ್ಮ ಬಳಿ ಸಂಬಂಧಪಟ್ಟವರ ಬಗ್ಗೆ ಮಾಹಿತಿ ಮತ್ತು ದಾಖಲೆಗಳಿವೆ ಎಂದಿದ್ದ ಅವರು, ಅವುಗಳನ್ನು ಸೂಕ್ತ ವ್ಯಕ್ತಿಗಳಿಗೆ ನೀಡುವುದಾಗಿ ತಿಳಿಸಿದ್ದರು. ಸಿದ್ದರಾಮಯ್ಯ ಕೂಡ ಈ ವಿವಾದದ ಕುರಿತು ಸತ್ಯ ಹೊರಬರಲು ತನಿಖೆ ಅಗತ್ಯ ಎಂಬ ನಿಲುವು ವ್ಯಕ್ತಪಡಿಸಿದ್ದಾರೆ.