Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹೋಗಿದ್ದ ವೇಳೆ ವಿದ್ಯುತ್ ತಂತಿ ತುಳಿದು ಇಬ್ಬರು ಯುವಕರು ಸಾವು, ಹಂದಿಗೆ ಇಟ್ಟಿದ್ದ ಬೇಲಿಯಿಂದ ದುರಂತ ! 

13-10-26 02:54 pm       HK News Staffer   ಕರಾವಳಿ

ಮೀನು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿಯನ್ನು ತುಳಿದು ಇಬ್ಬರು ಯುವಕರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಬೊಮ್ಮೆಟ್ಟಿ ಎಂಬಲ್ಲಿ ನಡೆದಿದೆ. 

ಪುತ್ತೂರು, ಅ.13 :  ಮೀನು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿಯನ್ನು ತುಳಿದು ಇಬ್ಬರು ಯುವಕರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಬೊಮ್ಮೆಟ್ಟಿ ಎಂಬಲ್ಲಿ ನಡೆದಿದೆ. 

ಬೊಮ್ಮೆಟ್ಟಿ ನಿವಾಸಿ ಭರತ್ (28) ಮತ್ತು ಅವರ ಭಾವ ಬೆಳ್ತಂಗಡಿ ಗುರುವಾಯನಕೆರೆ ನಿವಾಸಿ ರಮೇಶ್ (34)  ಮೃತಪಟ್ಟವರು. ಭರತ್ ಅವರ ಅಕ್ಕನ ಮಗ ಇನ್ನೊಬ್ಬ ಬಾಲಕ ಸಿಂಚನ್ ಕೂಡ ಗಾಯಗೊಂಡಿದ್ದಾನೆ. ಬಾಲಕನಿಗೆ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ರಾತ್ರಿ ಮನೆ ಪಕ್ಕದ ಹೊಳ್ಕೆರೆ ತೋಡಿಗೆ ಮೀನು ಹಿಡಿಯಲು ಹೋಗಿದ್ದರು.‌ ಈ ವೇಳೆ, ತೋಡಿನ ಬದಿಯ ತೋಟದಲ್ಲಿ ಹಂದಿಗೆ ಹಾಕಿದ್ದ ವಿದ್ಯುತ್ ತಂತಿಯನ್ನು ದಾಟುತ್ತಿದ್ದಾಗ ಇಬ್ಬರು ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಂಚನ್ ತಂತಿ ತಾಗಿ ಎಸೆಯಲ್ಪಟ್ಟಿದ್ದು ಕೈ ಕಾಲು ಎದೆಯ ಭಾಗಕ್ಕೆ ಗಾಯಗೊಂಡಿದ್ದಾನೆ. ವಿಷಯ ತಿಳಿದು ಸದ್ರಿ ತೋಟದ ಮನೆಯವರು ವಿದ್ಯುತ್ ಕಡಿತಗೊಳಿಸಿ, ಇಬ್ಬರನ್ನೂ ಸುಳ್ಯದ ಆಸ್ಪತ್ರೆಗೆ ತರುವಷ್ಟರಲ್ಲಿ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. 

ಬೆಳ್ಳಾರೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸಿದ್ದಾರೆ. ತಂತಿ ಬೇಲಿಗೆ ಅನಧಿಕೃತವಾಗಿ ವಿದ್ಯುತ್ ಕೊಟ್ಟಿರುವುದು ಅಪರಾಧವಾಗಿದ್ದು ಪೊಲೀಸರು ತೋಟದ ಮಾಲೀಕ ಮಧುಸೂದನ ಭಟ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.