DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ ; ಪಿತಾಮಹ ಯಾರು, ಹಣ ಕೊಟ್ಟವರು ಯಾರು ಗೊತ್ತು ಎಂದ ಡಿಕೆಶಿ !

08-10-26 08:00 pm       HK News Staffer   ಕರ್ನಾಟಕ

ರಾಜ್ಯ ರಾಜಕೀಯದಲ್ಲಿ ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸಲಾಗುತ್ತಿದೆ ಎಚ್ಚರವಾಗಿರಿ ಎಂದು ಸಿಎಂ ಡಿ ಕೆ ಶಿವಕುಮಾರ್ ಎಚ್ಚರ ನೀಡಿದ್ದಾರೆ ಎಂಬ ಚರ್ಚೆಗಳ ನಡುವೆ ಇಂದು ಗುರುವಾರ ಖುದ್ದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ

ನವದೆಹಲಿ, ಅ 08: ರಾಜ್ಯ ರಾಜಕೀಯದಲ್ಲಿ ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸಲಾಗುತ್ತಿದೆ ಎಚ್ಚರವಾಗಿರಿ ಎಂದು ಸಿಎಂ ಡಿ ಕೆ ಶಿವಕುಮಾರ್ ಎಚ್ಚರ ನೀಡಿದ್ದಾರೆ ಎಂಬ ಚರ್ಚೆಗಳ ನಡುವೆ ಇಂದು ಗುರುವಾರ ಖುದ್ದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ

ಮುಖ್ಯಮಂತ್ರಿ ಆದ ಬಳಿಕ ತಮ್ಮನ್ನೇ ಟ್ರ್ಯಾಪ್ ಮಾಡಲು ಕೆಲವರು ಪ್ರಯತ್ನಿಸಿದ್ದರು. ಸಚಿವರಿಗೆ ಸ್ಟಿಂಗ್ ಆಪರೇಷನ್ ಬಗ್ಗೆ ಸಚಿವ ಸಂಪುಟ ಸಭೆಯಲ್ಲೇ ಎಚ್ಚರಿಕೆ ನೀಡಿರುವ ವಿಚಾರದ ಕುರಿತು ಇಂದು ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ತಮ್ಮ ಬಳಿ ಈ ಬಗ್ಗೆ ಎಲ್ಲ ಮಾಹಿತಿಯೂ ಇದೆ ಎಂದಿದ್ದಾರೆ. ತಮ್ಮ ಬಳಿ ಕೆಲವರು ಬಂದಿದ್ದರು. ಫೋಟೋ ಬೇಕಿದ್ದರೆ ನೀಡುತ್ತೇನೆ ಎಂದಿರುವ ಡಿಕೆ ಶಿವಕುಮಾರ್, ಚರ್ಚೆಗೆಂದು ಬಂದು ಏನೇನು ಮಾಡಿದ್ದಾರೆ ಎಂಬುದು ತಮಗೆ ಗೊತ್ತಿದೆ. ಈ ವಿಚಾರದ ಹಿಂದಿನ ಪಿತಾಮಹ ಯಾರು ಎಂಬುದೂ ಗೊತ್ತಿದೆ. ಯಾರು ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂಬ ಮಾಹಿತಿಯೂ ಇದೆ ಎಂದು ಹೇಳಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ, ಸುಮ್ಮನೆ ಮಾತನಾಡಲ್ಲ

ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವುದರಿಂದ ಸುಮ್ಮನೆ ಮಾತನಾಡುವುದಿಲ್ಲ. ಎಲ್ಲ ಸಾಕ್ಷ್ಯಾಧಾರಗಳಿವೆ, ನನ್ನ ಬಳಿಗೂ ಕೆಲವರು ಜಿಎಸ್‌ಟಿ ಇತ್ಯಾದಿ ಬೇರೆ ಬೇರೆ ವಿಚಾರಗಳನ್ನು ಮಾತನಾಡಲು ಬಂದಿದ್ದರು. ನನ್ನಿಂದಲೇ ಈ ಸ್ಟಿಂಗ್ ಆಪರೇಷನ್ ಆರಂಭಿಸಲು ಯತ್ನಿಸಿದ್ದರು ಎಂದು ತಿಳಿಸಿದರು.

ನನಗೆ ಅವರ ಮೇಲೆ ಮುಂಚಿತವಾಗಿಯೇ ಅನುಮಾನ ಬಂದ ಹಿನ್ನೆಲೆಯಲ್ಲಿ, ಪೊಲೀಸರ ಮೂಲಕ ಸಂಪೂರ್ಣ ಮಾಹಿತಿ ಪಡೆದು ಎಲ್ಲಾ ದಾಖಲೆಗಳು ಹಾಗೂ ಫೋಟೋಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೇನೆ. ಅಗತ್ಯಬಿದ್ದರೆ ಫೋಟೋಗಳನ್ನು ಬಿಡುಗಡೆ ಮಾಡುತ್ತೇನೆ. ಈ ಷಡ್ಯಂತ್ರದ ಹಿಂದೆ ಯಾರ್ಯಾರಿದ್ದಾರೆ, ಯಾರು ಇದಕ್ಕೆ ಹಣಕಾಸು ಒದಗಿಸುತ್ತಿದ್ದಾರೆ ಇದರ ಪಿತಾಮಹ ಯಾರು ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿದೆ. ಕುಂಬಳಕಾಯಿ ಕಳ್ಳ ಅಂದರೆ ಕೆಲವರು ಹೆಗಲು ಮುಟ್ಟಿಕೊಳ್ತಿದ್ದಾರೆ ಎಂದು ಹೇಳಿದರು.

ಈ ಹಿಂದೆ 2000ರ ಆಸುಪಾಸಿನಲ್ಲೂ ನನ್ನ ವಿರುದ್ಧ ಇಂತಹ ಷಡ್ಯಂತ್ರಗಳು ನಡೆದಿದ್ದವು. ಸುಖಾಸುಮ್ಮನೆ ಟ್ರಾಪ್ ಮಾಡಲು ಜನರು ಬರುತ್ತಾರೆ, ಎಚ್ಚರಿಕೆಯಿಂದ ಇರಿ ಎಂದು ನಮ್ಮ ಅಧಿಕಾರಿಗಳಿಗೆ, ಸಚಿವರಿಗೆ ಸೂಚನೆ ನೀಡಿದ್ದೇನೆ.ಇದರಲ್ಲಿ ಕರ್ನಾಟಕದವರೇ ಇದ್ದಾರಾ ಅಥವಾ ಹೊರರಾಜ್ಯದವರಾ ಎಂಬ ವಿವರಗಳನ್ನು ಈಗಲೇ ಬಹಿರಂಗಪಡಿಸುವುದಿಲ್ಲ, ಕಾಲವೇ ಎಲ್ಲದಕ್ಕೂ ತಕ್ಕ ಉತ್ತರ ನೀಡಲಿದೆ ಎಂದು ತಿಳಿಸಿದರು.