Sharjah NRI dream college: ಕಾನೂನು ಉಲ್ಲಂಘಿಸಿ ವಿದೇಶಿ ಫಂಡಿಂಗ್ ; ಕಾಸರಗೋಡಿನ ಎನ್‌ಆರ್‌ಐ ಉದ್ಯಮಿ ಒಡೆತನದ ಕಾಲೇಜಿಗೆ ನಾಲ್ಕು ವರ್ಷಗಳಲ್ಲಿ 220 ಕೋಟಿ ದೇಣಿಗೆ, ತನಿಖೆಗಿಳಿದ ಇಡಿ ಅಧಿಕಾರಿಗಳು 

06-08-25 06:00 pm       HK News Desk   ಕರಾವಳಿ

ದೇಶದಲ್ಲಿ ಜಾರಿಯಲ್ಲಿರುವ ವಿದೇಶಿ ವಿನಿಮಯ ಹಾಗೂ ವಿದೇಶಿ ಕೊಡುಗೆಗಳ ಕುರಿತ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಜಾರಿ ನಿರ್ದೇಶನಾಲಯವು ಕಾಸರಗೋಡಿನಲ್ಲಿರುವ ಎನ್‌ಐಆರ್‌ಗಳ ಒಡೆತನದ ಕಾಲೇಜಿನ ವಿರುದ್ಧ ತನಿಖೆ ಆರಂಭಿಸಿದೆ. 

ಕಾಸರಗೋಡು, ಆ.6 : ದೇಶದಲ್ಲಿ ಜಾರಿಯಲ್ಲಿರುವ ವಿದೇಶಿ ವಿನಿಮಯ ಹಾಗೂ ವಿದೇಶಿ ಕೊಡುಗೆಗಳ ಕುರಿತ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಜಾರಿ ನಿರ್ದೇಶನಾಲಯವು ಕಾಸರಗೋಡಿನಲ್ಲಿರುವ ಎನ್‌ಐಆರ್‌ಗಳ ಒಡೆತನದ ಕಾಲೇಜಿನ ವಿರುದ್ಧ ತನಿಖೆ ಆರಂಭಿಸಿದೆ. 

ಕಾಸರಗೋಡಿನ ಕುನಿಯಾ ಕಲಾ ಮತ್ತು ವಿಜ್ಞಾನ ಕಾಲೇಜಿನ ಒಡೆತನದ ಜವಾಬ್ದಾರಿ ಹೊತ್ತಿರುವ ಕುನ್ಞಹ್ಮದ್ ಮುಸ್ಲಿಯಾರ್ ಸ್ಮಾರಕ ಟ್ರಸ್ಟ್ 2021ರಿಂದ ಯುಎಇ ಮೂಲದ ಕೈಗಾರಿಕೋದ್ಯಮಿ ಇಬ್ರಾಹಿಂ ಅಹ್ಮದ್ ಅಲಿ ಅವರಿಂದ 220 ಕೋಟಿ ರೂ. ದೇಣಿಗೆ ಪಡೆದಿದೆ. ಆದರೆ ಈ ಟ್ರಸ್ಟ್ 2010ರ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಅಡಿಯಲ್ಲಿ ನೋಂದಾಯಿಸಲ್ಪಟ್ಟಿಲ್ಲ ಮತ್ತು ವಿದೇಶದಿಂದ ಹಣ ಸ್ವೀಕರಿಸಲು ಕೇಂದ್ರ ಗೃಹ ಸಚಿವಾಲಯದಿಂದ ಕಡ್ಡಾಯ ಅನುಮತಿಯನ್ನೂ ಹೊಂದಿಲ್ಲ ಮತ್ತು ವಿದೇಶಿ ಫಂಡಿಂಗ್‌ಗಾಗಿ ನಿಗದಿಪಡಿಸಿರುವ ಎಫ್‌ಸಿಆರ್‌ಎ ಬ್ಯಾಂಕ್ ಖಾತೆಯನ್ನೂ ನಿರ್ವಹಿಸಿಲ್ಲ ಎಂದು ಜಾರಿ ನಿರ್ದೇಶನಾಲಯವು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. 

ಈ ವಿಷಯದ ಬಗ್ಗೆ ಜಾರಿ ನಿರ್ದೇಶನಾಲಯವು ಟ್ರಸ್ಟ್‌ನ ನಿರ್ದೇಶಕರೊಬ್ಬರಲ್ಲಿ ಸ್ಪಷ್ಟನೆ ಕೇಳಿದ್ದು, ಕಾಲೇಜಿನ ನಿರ್ವಹಣೆಗೆ ಟ್ರಸ್ಟ್ ಸಾರ್ವಜನಿಕ ದೇಣಿಗೆಗಳನ್ನು ಕೇಳಿಲ್ಲವಾದ್ದರಿಂದ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ನೋಂದಣಿ ಅಗತ್ಯವಿಲ್ಲ ಎಂದು ಹೇಳಿದ್ದರು ಎಂದು ತಿಳಿದುಬಂದಿದೆ. ಉದ್ಯಮಿ ಇಬ್ರಾಹಿಂ ಅಹ್ಮದ್ ಅಲಿ ಅವರು ತನ್ನ ಹುಟ್ಟೂರು ಕಾಸರಗೋಡಿನ ಪೆರಿಯಾ ಬಳಿಯ ಕುಣಿಯಾ ಎಂಬಲ್ಲಿ ವಿಶ್ವದರ್ಜೆಯ ಶೈಕ್ಷಣಿಕ ಸಂಸ್ಥೆಯೊಂದನ್ನು ನಿರ್ಮಿಸಲು ಮುಂದಾಗಿದ್ದು ಅವರ ಗಳಿಕೆಯ ವೈಯಕ್ತಿಕ ನಿಧಿಯಿಂದ ಈ ಹಣ ನಮ್ಮ ಟ್ರಸ್ಟ್‌ಗೆ ಬಂದಿದೆ ಎಂದು ಕುನ್ಹಹ್ಮದ್ ಮುಸ್ಲಿಯಾರ್ ಸ್ಮಾರಕ ಟ್ರಸ್ಟ್‌ನ ಟ್ರಸ್ಟಿ ಮಾಹಿತಿ ನೀಡಿದ್ದಾರೆ ಎಂದು ಇಡಿ ಹೇಳಿದೆ. ಈ ವಿಷಯಕ್ಕೆ ಸಂಬಂಧಿಸಿ ಕಳೆದ ಗುರುವಾರ ಇಡಿಯ ಕೊಚ್ಚಿ ವಲಯ ಕಚೇರಿಯ ಅಧಿಕಾರಿಗಳು ಕಾಸರಗೋಡಿನಲ್ಲಿರುವ ಟ್ರಸ್ಟ್‌ಗೆ ಸಂಬಂಧಿಸಿದ ಎರಡು ಕಡೆ ಶೋಧ ನಡೆಸಿದ್ದಾರೆ. 

ಕಳೆದ ನಾಲ್ಕು ವರ್ಷಗಳಲ್ಲಿ ಟ್ರಸ್ಟ್‌ಗೆ ಇಬ್ರಾಹಿಂ ಅಹ್ಮದ್ ಅಲಿ ಅವರಿಂದ 220 ಕೋಟಿ ರೂ. ಬಂದಿದೆ. ಈ ಹಣ ಇಬ್ರಾಹಿಂ ಅಹ್ಮದ್ ಅಲಿ ಯುಎಇಯಲ್ಲಿ ನೋಂದಾಯಿಸಿದ ಯೂನಿವರ್ಸಲ್ ಲ್ಯೂಬ್ರಿಕ್ಯಾಂಟ್ಸ್ ಎಲ್ಎಲ್‌ಸಿಯಿಂದ ಟ್ರಸ್ಟ್‌ಗೆ ಜಮೆಯಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಈ ಹಣವನ್ನು ಪುಸ್ತಕಗಳಲ್ಲಿ "ಸಾಲಗಳು" ಎಂದು ದಾಖಲಿಸಲಾಗಿದೆ. ಆದರೆ ಈ ಕುರಿತು ಯಾವುದೇ ಒಪ್ಪಂದಗಳು, ಬಡ್ಡಿ, ನಿಯಮಗಳು ಅಥವಾ ಮರು ಪಾವತಿ ಕುರಿತು ಮಾಹಿತಿಯನ್ನು ಪುಸ್ತಕದಲ್ಲಿ ದಾಖಲಿಸಲಾಗಿಲ್ಲ ಎಂದು ಇಡಿ ವಾದಿಸಿದೆ. 

ಕಾಸರಗೋಡಿನ ಕುಣಿಯಾ ಗ್ರಾಮದ ನಿವಾಸಿ ಇಬ್ರಾಹಿಂ ಅಹ್ಮದ್ ಅಲಿ, ಗಲ್ಫ್ ಪೆಟ್ರೋಲಿಯಂ ಮತ್ತು ಲ್ಯೂಬ್ರಿಕ್ಯಾಂಟ್ಸ್‌ ವಲಯದಲ್ಲಿ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ.  ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸಿ ಅವರು ಕುನ್ಞಹ್ಮದ್ ಮುಸ್ಲಿಯಾರ್ ಸ್ಮಾರಕ ಟ್ರಸ್ಟ್ ಸ್ಥಾಪಿಸಿದ್ದು, 2023ರಲ್ಲಿ ತಮ್ಮ ಊರಿನಲ್ಲಿ 100 ಎಕರೆ ಕ್ಯಾಂಪಸ್‌ನಲ್ಲಿ ಕುನ್ಞಹ್ಮದ್ ಮುಸ್ಲಿಯಾರ್ ಸ್ಮಾರಕ ಟ್ರಸ್ಟ್ ಪ್ರಾರಂಭಿಸಿದ್ದರು. ಇದು ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಸಂಯೋಜಿತಗೊಂಡಿದೆ. 

ಇಂಗ್ಲಿಷ್, ಅರೇಬಿಕ್ ಮತ್ತು ಇಸ್ಲಾಮಿಕ್ ಇತಿಹಾಸ, ಅರ್ಥಶಾಸ್ತ್ರ, ಸಮಾಜಕಾರ್ಯ, ವಾಣಿಜ್ಯ, ಮನೋವಿಜ್ಞಾನ ಮತ್ತು ವ್ಯವಹಾರ ಆಡಳಿತದಲ್ಲಿ ವಾಯುಯಾನ ಮತ್ತು ಆತಿಥ್ಯದ ವಿಶೇಷತೆಯೊಂದಿಗೆ ಕೋರ್ಸ್‌ಗಳನ್ನು ಸೇರಿಸಲಾಗಿದೆ. ಪದವಿ ನೀಡುವ ಸಂಸ್ಥೆ ಮತ್ತು ಐಎಎಸ್ ತರಬೇತಿ ಕೇಂದ್ರವಾಗಿಯೂ ಇರಿಸಲಾಗಿದೆ.
ಶೈಕ್ಷಣಿಕ ಉದ್ದೇಶ ಹೊಂದಿದ್ದರೂ ಈ ದೇಣಿಗೆಯು 1999ರ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಮತ್ತು 2010ರ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಈ ಎರಡರ ನಿಬಂಧನೆಗಳನ್ನೂ ಉಲ್ಲಂಘಿಸುತ್ತದೆ. ವಿದೇಶಿ ನಿಧಿಯ ಒಂದು ಭಾಗವನ್ನು ಭಾರತದಲ್ಲಿ ಕೃಷಿ ಭೂಮಿ ಖರೀದಿಸಲು ಬಳಸಲಾಗಿದೆ ಎಂದು ಆರೋಪಿಸಲಾಗಿದ್ದು, ಇದು ಫೆಮಾ ನಿಯಮಗಳಿಗೆ ವಿರುದ್ಧವಾದುದು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.   
ಪರಿಶೋಧನೆ ವೇಳೆ ಅಸುರಕ್ಷಿತ ಸಾಲಗಳನ್ನು ಪ್ರತಿಬಿಂಬಿಸುವ ಲೆಡ್ಜರ್ ಖಾತೆಗಳು, ನಗದು ಪುಸ್ತಕ ಮತ್ತು ಹಣಕಾಸಿನ ದಾಖಲೆಗಳನ್ನು ಹೊಂದಿರುವ ಹಾರ್ಡ್ ಡ್ರೈವ್ ಅನ್ನು ಜಾರಿ ನಿರ್ದೇಶನಾಲಯವು ವಶಪಡಿಸಿಕೊಂಡಿದೆ.

The Directorate of Enforcement has launched an investigation into an NRI's educational trust in Kasaragod for allegedly breaching the country's foreign exchange and foreign contribution laws.