ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ; ಪ್ರವಾಸಿ ಬೋಟುಗಳ ನೋಂದಣಿ, ಕಡ್ಡಾಯ ಲೈಫ್ ಜಾಕೆಟ್ ಅಳವಡಿಸಲು 45 ದಿನಗಳ ಡೆಡ್‌ಲೈನ್ 

29-01-26 03:54 pm       Udupi Correspondent   ಕರಾವಳಿ

ಕೋಡಿಬೆಂಗ್ರೆ ಬಳಿ ಮೂವರನ್ನು ಬಲಿ ಪಡೆದ ಬೋಟ್ ದುರಂತ ಹಿನ್ನೆಲೆಯಲ್ಲಿ ಎಚ್ಚೆತ್ತ ಉಡುಪಿ ಜಿಲ್ಲಾಡಳಿತ, ಜಿಲ್ಲೆಯ ಎಲ್ಲ ಕಡಲತೀರಗಳಲ್ಲಿ ಪ್ರವಾಸಿಗರನ್ನು ಸಾಗಿಸುವ ಬೋಟುಗಳು ಕಡ್ಡಾಯವಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವುದಲ್ಲದೆ, ಲೈಫ್ ಜಾಕೆಟ್ ಧರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.

ಉಡುಪಿ, ಜ.29 : ಕೋಡಿಬೆಂಗ್ರೆ ಬಳಿ ಮೂವರನ್ನು ಬಲಿ ಪಡೆದ ಬೋಟ್ ದುರಂತ ಹಿನ್ನೆಲೆಯಲ್ಲಿ ಎಚ್ಚೆತ್ತ ಉಡುಪಿ ಜಿಲ್ಲಾಡಳಿತ, ಜಿಲ್ಲೆಯ ಎಲ್ಲ ಕಡಲತೀರಗಳಲ್ಲಿ ಪ್ರವಾಸಿಗರನ್ನು ಸಾಗಿಸುವ ಬೋಟುಗಳು ಕಡ್ಡಾಯವಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವುದಲ್ಲದೆ, ಲೈಫ್ ಜಾಕೆಟ್ ಧರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ. ಅಗತ್ಯ ಪರವಾನಿಗೆ ಇಲ್ಲದೆ ಯಾವುದೇ ಪ್ರವಾಸಿ ಬೋಟ್ ಕಾರ್ಯಾಚರಣೆಗೆ ಅವಕಾಶ ಇರುವಂತಿಲ್ಲ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. 

ಕೋಡಿಬೆಂಗ್ರೆಯಲ್ಲಿ ಸೋಮವಾರ ನಡೆದ ದೋಣಿ ದುರಂತದಲ್ಲಿ ಮೂವರು ಪ್ರವಾಸಿಗರು ಪ್ರಾಣ ಕಳೆದುಕೊಂಡ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಡಲತೀರ ಪ್ರವಾಸೋದ್ಯಮ ಸುರಕ್ಷತಾ ಸಭೆಯಲ್ಲಿ ಸೂಚನೆಗಳನ್ನು ನೀಡಿದ್ದಾರೆ. ಉಡುಪಿ ಜಿಲ್ಲೆ ಕಡಲತೀರಗಳ ನೈಸರ್ಗಿಕ ಸೌಂದರ್ಯದಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಈ ಹಿನ್ನೆಲೆ ಎಲ್ಲಾ ಪ್ರವಾಸಿ ಬೋಟುಗಳು ಬಂದರು ಇಲಾಖೆ, ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ, ಸ್ಥಳೀಯ ಸಂಸ್ಥೆಗಳು ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಬೋಟು ಮಾಲೀಕರು ಪ್ರತಿವರ್ಷ ಪರವಾನಿಗೆ ನವೀಕರಿಸಬೇಕು. ಸುರಕ್ಷತಾ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಬೇಕು. ಪ್ರತಿಯೊಬ್ಬ ಪ್ರವಾಸಿಗರೂ ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸಿದ ನಂತರವೇ ಬೋಟು ಸಮುದ್ರಕ್ಕೆ ತೆರಳಬೇಕು. ಈ ನಿಯಮ ಪಾಲನೆಗೆ “ಎಲ್ಲರೂ ಲೈಫ್ ಜಾಕೆಟ್ ಧರಿಸಿದ ಬಳಿಕವೇ ಬೋಟು ಮುಂದುವರಿಯಲಿದೆ” ಎಂಬ ಪ್ರೀ-ರೆಕಾರ್ಡೆಡ್ ಆಡಿಯೋ ಘೋಷಣೆಯನ್ನು ಬೋಟುಗಳಲ್ಲಿ ಕಡ್ಡಾಯಗೊಳಿಸಲು ಸೂಚಿಸಿದರು. ಶೀಘ್ರದಲ್ಲೇ ಎಲ್ಲಾ ಬೋಟು ಮಾಲೀಕರು ಹಾಗೂ ಚಾಲಕರ ಸಭೆ ಆಯೋಜಿಸಿ, ಪರವಾನಿಗೆ ಪ್ರಕ್ರಿಯೆ, ಸುರಕ್ಷತಾ ಕ್ರಮಗಳು, ವಿಮೆ ಹಾಗೂ ತುರ್ತು ನಿರ್ವಹಣೆ ಕುರಿತ ತರಬೇತಿ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. 

ಉಡುಪಿ ತಾಲೂಕಿನ ಕೋಡಿಬೆಂಗ್ರೆ ಅಳಿವೆ ಸಮೀಪ ಕಳೆದ ಸೋಮವಾರ ಸಂಭವಿಸಿದ್ದ ಭೀಕರ ದೋಣಿ ದುರಂತದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ 23 ವರ್ಷದ ದಿಶಾ ಚಿಕಿತ್ಸೆ ಫಲಿಸದೆ ಮಂಗಳವಾರ ಕೊನೆಯುಸಿರೆಳೆದಿದ್ದಳು. ಮೈಸೂರಿನ ಉದಯಗಿರಿ ನಿವಾಸಿ ದಿಶಾ ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದು ಇದೇ ವೇಳೆ ಮಲ್ಪೆ ಸಮೀಪದ ಡೆಲ್ಟಾ ಬೀಚ್‌ನಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದಾಗ ದುರಂತ ಸಂಭವಿಸಿತ್ತು. ದೋಣಿಯಲ್ಲಿ ದಿಶಾ ಸೇರಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ದುರ್ಘಟನೆಯಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಶಂಕರಪ್ಪ ಹಾಗೂ ಸಿಂಧೂ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಸುರಕ್ಷತಾ ನಿರ್ಲಕ್ಷ್ಯವೇ ಕಾರಣ?

ಪ್ರಾಥಮಿಕ ಮಾಹಿತಿ ಪ್ರಕಾರ ಪ್ರವಾಸಿಗರು ಲೈಫ್ ಜಾಕೆಟ್ ಧರಿಸದೇ ಪ್ರಯಾಣಿಸಿದ್ದೇ ದುರಂತಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಪ್ರಕರಣ ಸಂಬಂಧ ಮಲ್ಪೆ ಪೊಲೀಸ್ ಠಾಣೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

Following the Kodibengre boat accident that killed three tourists, the Udupi district administration has mandated registration of all tourist boats and compulsory use of life jackets. Boat owners have been given a 45-day deadline to comply, with strict action promised for violations.