ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿತ್ರ ಕ್ಷೇತ್ರದ ಬಗ್ಗೆ ಕಪ್ಪು ಚುಕ್ಕೆ ತರಬೇಡಿ ; ಸ್ಪೀಕರ್ ಯುಟಿ ಖಾದರ್

21-07-25 02:11 pm       Mangalore Correspondent   ಕರಾವಳಿ

ಕೆಲವು ಆರೋಪ ಬಂದಾಗ ಎಸ್ಐಟಿ ರಚಿಸಿ ತನಿಖೆ ನಡೆಸಲಾಗುತ್ತದೆ. ಆದರೆ ತನಿಖೆ ಆಗುವ ಸಂದರ್ಭದಲ್ಲಿ ನಾವೇ ಏನೋ ತೀರ್ಮಾನ ಮಾಡಿಕೊಳ್ಳುವುದು ಸರಿಯಲ್ಲ. ಇದರಿಂದ ಪವಿತ್ರ ಕ್ಷೇತ್ರಕ್ಕೆ ಅಪಚಾರ ಆಗೋದು, ಕಪ್ಪು ಚುಕ್ಕೆಯಾಗೋದು ಸರಿಯಲ್ಲ ಎಂದು ವಿಧಾನಸಭೆ ಅಧ್ಯಕ್ಷ ಯುಟಿ ಖಾದರ್ ಅಭಿಪ್ರಾಯ ಪಟ್ಟಿದ್ದಾರೆ.

ಮಂಗಳೂರು, ಜುಲೈ 21 : ಕೆಲವು ಆರೋಪ ಬಂದಾಗ ಎಸ್ಐಟಿ ರಚಿಸಿ ತನಿಖೆ ನಡೆಸಲಾಗುತ್ತದೆ. ಆದರೆ ತನಿಖೆ ಆಗುವ ಸಂದರ್ಭದಲ್ಲಿ ನಾವೇ ಏನೋ ತೀರ್ಮಾನ ಮಾಡಿಕೊಳ್ಳುವುದು ಸರಿಯಲ್ಲ. ಇದರಿಂದ ಪವಿತ್ರ ಕ್ಷೇತ್ರಕ್ಕೆ ಅಪಚಾರ ಆಗೋದು, ಕಪ್ಪು ಚುಕ್ಕೆಯಾಗೋದು ಸರಿಯಲ್ಲ ಎಂದು ವಿಧಾನಸಭೆ ಅಧ್ಯಕ್ಷ ಯುಟಿ ಖಾದರ್ ಅಭಿಪ್ರಾಯ ಪಟ್ಟಿದ್ದಾರೆ.

ಸುದ್ದಿಗೋಷ್ಟಿ ನಡುವೆ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾವಿನ ಘಟನೆಗಳ ಬಗ್ಗೆ ಎಸ್ಐಟಿ ರಚಿಸಿರುವ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಖಾದರ್ ಪ್ರತಿಕ್ರಿಯಿಸಿದ್ದು, ಎಸ್ಐಟಿ ರಚಿಸಿದ್ದಾರೆ. ತನಿಖೆಯಿಂದ ಸತ್ಯಾಸತ್ಯತೆ ಏನೆಂದು ಬಹಿರಂಗ ಆಗಲಿ. ಸತ್ಯ ಬಯಲಾದ ಬಳಿಕ ಕಾನೂನು ಕ್ರಮ ಏನು ಆಗಬೇಕೋ ಅದನ್ನು ಮಾಡುತ್ತಾರೆ. ಆದರೆ ತನಿಖೆ ಮೊದಲೇ ನಾವು ನಿರ್ಣಯಕ್ಕೆ ಬರೋದು, ಪವಿತ್ರ ಕ್ಷೇತ್ರದ ಬಗ್ಗೆ ಧಕ್ಕೆ ತರೋದು ಸರಿಯಲ್ಲ. ಅಲ್ಲಿನ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಅಲ್ಲಿನ ಸಂಸ್ಥೆಗಳಿಂದ ಎಷ್ಟೋ ಜನರಿಗೆ ಒಳಿತಾಗಿದೆ. ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಆಗುತ್ತದೆ. ಕ್ಷೇತ್ರದ ಬಗ್ಗೆ ಅಪಚಾರ ಮಾಡೋ ಮಂದಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಹೆಸರಿನಿಂದ ಅಭಿವೃದ್ಧಿ ಆಗಲ್ಲ..

ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಹೆಸರಿಡುವ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, ಅಭಿವೃದ್ಧಿ ವಿಚಾರದಲ್ಲಿ ಮಂಗಳೂರು ಆಗಬೇಕೆಂದು ಕೆಲವರ ಅಭಿಪ್ರಾಯ ಇರಬಹುದು. ಇದರ ಬಗ್ಗೆ ಎಲ್ಲರೂ ಕುಳಿತು ಚರ್ಚೆ ನಡೆಸೋದು, ಒಗ್ಗಟ್ಟಿನ ನಿರ್ಧಾರಕ್ಕೆ ಬರೋದು ಉತ್ತಮ. ಆದರೆ ಅಭಿವೃದ್ಧಿ ಆಗುವುದಕ್ಕೆ ಹೆಸರು ಮುಖ್ಯ ಅಲ್ಲ. ಇಲ್ಲಿ ಸೌಹಾರ್ದ ಭಾವನೆ, ಸಾಮರಸ್ಯ ಬೆಳೆಸುವುದು ಮುಖ್ಯ. ವಿಶ್ವಾಸಯುತ ಸಮಾಜ ಕಟ್ಟುವುದು ಮುಖ್ಯವಾಗುತ್ತದೆ. ಹೆಸರು ಬದಲಾವಣೆಯ ಮಾತ್ರಕ್ಕೆ ಏನೂ ಆಗೋದಿಲ್ಲ ಎಂದು ಹೇಳಿದರು.

ತಿಂಗಳಾಂತ್ಯದಲ್ಲಿ ಮತ್ತೆ ಅಮೆರಿಕಕ್ಕೆ

ಇದೇ ಜುಲೈ 27ರಂದು ಅಮೆರಿಕಕ್ಕೆ ತೆರಳಲಿದ್ದು, ಆಗಸ್ಟ್ 3ರಿಂದ 6ರ ವರೆಗೆ ಬೋಸ್ಟನ್ ನಗರದಲ್ಲಿ ವಿವಿಧ ದೇಶಗಳ ಶಾಸಕರ ಅಂತಾರಾಷ್ಟ್ರೀಯ ಕಾರ್ಯಕ್ರಮ ಇದೆ. ಅದರಲ್ಲಿ ನಮ್ಮ 12 ಶಾಸಕರು, ವಿಧಾನ ಪರಿಷತ್ತಿನ ಸಭಾಪತಿ, ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ. ಅಭಿವೃದ್ಧಿಗೊಂಡ ದೇಶಗಳಲ್ಲಿ ರಸ್ತೆ, ನೀರು ವಿಚಾರದಲ್ಲಿ ಚರ್ಚೆ ಇರುವುದಿಲ್ಲ. ಅಮೆರಿಕದಲ್ಲಿ ಮಕ್ಕಳಿಂದ ಹಿಡಿದು ಎಲ್ಲರೂ ಗನ್ ಹಿಡಿದುಕೊಂಡು ಹೋಗುತ್ತಾರೆ. ಗನ್ ಕಂಟ್ರೋಲ್ ಮಾಡುವುದಕ್ಕೆ ಕಾನೂನು ತರುತ್ತಿದ್ದಾರೆ. ಆಯಾ ದೇಶಗಳ ಕಾನೂನು, ನೀತಿಗಳ ಬಗ್ಗೆ ಚರ್ಚೆಯಾಗುತ್ತದೆ. ಮಾನವ ಹಕ್ಕು ಸೇರಿದಂತೆ ಹಲವು ವಿಷಯಗಳ ತಜ್ಞರು ಪಾಲ್ಗೊಳ್ಳುತ್ತಾರೆ ಎಂದು ಖಾದರ್ ಹೇಳಿದರು.

Karnataka Legislative Assembly Speaker U.T. Khader has appealed to the public and media not to draw premature conclusions in the ongoing Dharmasthala investigation, warning that it could unjustly damage the reputation of a sacred and respected place.