Fraudster Roshan Saldanha, Fraud: ಬಹುಕೋಟಿ ವಂಚಕ ರೋಷನ್ ಸಲ್ದಾನ ವಿರುದ್ಧ ಮತ್ತೆರಡು ಎಫ್ಐಆರ್ ; ಎರಡು ದಿನ ಹಿಂದಷ್ಟೇ 5 ಕೋಟಿ ನೀಡಿದ್ದ ಮಹಾರಾಷ್ಟ್ರ ಉದ್ಯಮಿ! ಅಸ್ಸಾಂ ವ್ಯಕ್ತಿಗೂ ಮೋಸ, ಹಿಂದೊಮ್ಮೆ ಸಿನಿಮಾ ಮಾಡಿ ಕೈಸುಟ್ಟಿದ್ದ ಕಂತ್ರಿ ! 

19-07-25 09:25 pm       Mangalore Correspondent   ಕ್ರೈಂ

200 ಕೋಟಿಗೂ ಹೆಚ್ಚು ವಂಚನೆ ಎಸಗಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ರೋಷನ್ ಸಲ್ದಾನ ಕುರಿತ ಸುದ್ದಿ ದೇಶದ ಗಮನ ಸೆಳೆಯುತ್ತಿದ್ದಂತೆ ಹಣ ಕಳಕೊಂಡ ಮತ್ತಿಬ್ಬರು ಉದ್ಯಮಿಗಳು ಮಂಗಳೂರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಮಂಗಳೂರು, ಜುಲೈ 19 : 200 ಕೋಟಿಗೂ ಹೆಚ್ಚು ವಂಚನೆ ಎಸಗಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ರೋಷನ್ ಸಲ್ದಾನ ಕುರಿತ ಸುದ್ದಿ ದೇಶದ ಗಮನ ಸೆಳೆಯುತ್ತಿದ್ದಂತೆ ಹಣ ಕಳಕೊಂಡ ಮತ್ತಿಬ್ಬರು ಉದ್ಯಮಿಗಳು ಮಂಗಳೂರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಮಹಾರಾಷ್ಟ್ರದ ಉದ್ಯಮಿಯೊಬ್ಬರು 5 ಕೋಟಿ ಮತ್ತು ಅಸ್ಸಾಂ ರಾಜ್ಯದ ವ್ಯಕ್ತಿಯೊಬ್ಬರು 20 ಲಕ್ಷ ಹಣ ಕಳಕೊಂಡಿದ್ದಾಗಿ ಮಂಗಳೂರಿನ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. 

ಮಹಾರಾಷ್ಟ್ರದ ಉದ್ಯಮಿ 5 ಕೋಟಿ ಹಣವನ್ನು ಜುಲೈ 16ರಂದು ರೋಷನ್ ಸಲ್ದಾನ್ಹ ಖಾತೆಗೆ ವರ್ಗಾಯಿಸಿದ್ದರೆ, ಅಸ್ಸಾಂ ಮೂಲದ ವ್ಯಕ್ತಿ 20 ಲಕ್ಷ ಹಣವನ್ನು ಜುಲೈ 17ರಂದು ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ಈ ಕುರಿತು ಮಂಗಳೂರು ಪೊಲೀಸರು ತುರ್ತಾಗಿ ಸ್ಪಂದಿಸಿದ್ದು ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿ ಮಹಾರಾಷ್ಟ್ರ ಉದ್ಯಮಿಗೆ ಸಂಬಂಧಿಸಿದ 3.5 ಕೋಟಿ ಮತ್ತು ಅಸ್ಸಾಂ ವ್ಯಕ್ತಿಗೆ ಸಂಬಂಧಿಸಿದ 20 ಲಕ್ಷ ಹಣವನ್ನು ಫ್ರೀಜ್ ಮಾಡಿದ್ದಾರೆ. ಆರೋಪಿಯನ್ನು ಪೊಲೀಸರು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ. 

ಸಿನಿಮಾ ನಿರ್ಮಾಣಕ್ಕೂ ಕೈಹಾಕಿದ್ದ..! 

ಚಾಲಾಕಿ ವಂಚಕ ರೋಷನ್ ಸಲ್ದಾನ್ಹ ಹಿಂದೊಮ್ಮೆ ಸಿನಿಮಾ ನಿರ್ಮಾಣಕ್ಕೂ ಕೈಹಾಕಿದ್ದ. 2018ರಲ್ಲಿ ತನ್ನ ಪತ್ನಿ ಡ್ಯಾಫ್ನಿ ನೀತು ಡಿಸೋಜ ಹೆಸರಲ್ಲಿ ದುಬಾಯ್ಸ್ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ಕನ್ನಡ ಸಿನಿಮಾ ಒಂದನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಚಿತ್ರತಂಡಕ್ಕೆ ಸರಿಯಾಗಿ ಹಣ ಕೊಡದೆ 'ವಿರುಪಾ' ಎನ್ನುವ ಹೆಸರಿನ ಮಕ್ಕಳ ಚಲನಚಿತ್ರವನ್ನು ಪೂರ್ತಿಗೊಳಿಸುವುದಕ್ಕಾಗದೇ ವಿರೂಪ ಆಗುವಂತೆ ಮಾಡಿದ್ದನಂತೆ. ಆನಂತರ ಸಿನಿಮಾವನ್ನು ರಿಲೀಸ್ ಮಾಡಲು ಚಿತ್ರತಂಡ ಪರದಾಡಿದ್ದಲ್ಲದೆ, ಥಿಯೇಟರ್ ಹಿಡಿಯುವುದಕ್ಕೂ ಪರದಾಡಿತ್ತು. 

ಕೋವಿಡ್ ನಂತರ ತೀವ್ರ ಹಣಕಾಸು ಬಿಕ್ಕಟ್ಟು ಎದುರಿಸಿದ್ದ ರೋಶನ್ ಸಲ್ಡಾನಾ 2024ರ ವೇಳೆಗೆ ಝೀರೋ ಆಗಿದ್ದ ಎಂದು ಆತನ ಬಗ್ಗೆ ತಿಳಿದವರು ಹೇಳುತ್ತಾರೆ. ಆದರೆ ಮರಳಿ ವಂಚನೆಯ ಹಾದಿಯಲ್ಲಿ ತೊಡಗಿದ್ದು ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಪಾಲಾಗಿದ್ದಾನೆ. 2025ರಲ್ಲಿ ಮರಳಿ ವಂಚನೆಯ ಸಾಮ್ರಾಜ್ಯ ಕಟ್ಟಲು ಶುರು ಮಾಡಿದ್ದು ಇದಕ್ಕಾಗಿ ಕಮಿಷನ್ ಮೇಲೆ ಏಜಂಟರನ್ನು ನೇಮಿಸಿದ್ದ. ಈ ನಡುವೆ, ಆಂಧ್ರಪ್ರದೇಶದ ಉದ್ಯಮಿಯೊಬ್ಬರಿಗೆ 40 ಲಕ್ಷ ಮೋಸ ಎಸಗಿದ ಬಗ್ಗೆ ಚಿತ್ರದುರ್ಗದಲ್ಲಿ ಪ್ರಕರಣ ದಾಖಲಾಗಿದ್ದರೆ, ಮಂಗಳೂರಿನಲ್ಲಿ 12 ಕೋಟಿ, ಮತ್ತೊಂದು ಎರಡು ಕೋಟಿ ವಂಚನೆ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ ಪೊಲೀಸರು ಪ್ರತಿ ಬಾರಿ ಬಲೆ ಬೀಸಿದಾಗಲೂ ಆತ ತಪ್ಪಿಸಿಕೊಂಡು ಎಸ್ಕೇಪ್ ಆಗುತ್ತಿದ್ದ. 

ಬೆಂಗಳೂರಿನಲ್ಲಿ ಫೈನಾನ್ಸ್ ಕನ್ಸಲ್ಟನ್ಸಿ ಹೊಂದಿರುವ ವ್ಯಕ್ತಿಯೊಬ್ಬರು ಆಂಧ್ರ ಮೂಲದ ಉದ್ಯಮಿಯನ್ನು ರೋಶನ್ ಸಲ್ದಾನಾಗೆ ಸಂಪರ್ಕಿಸಿದ್ದರು. ರೋಶನ್ ಚಿತ್ರದುರ್ಗದಲ್ಲಿ ಫೈನಾನ್ಸ್ ಸಂಸ್ಥೆಯನ್ನೂ ಇಟ್ಟುಕೊಂಡಿದ್ದಾನೆ ಎನ್ನಲಾಗುತ್ತಿದ್ದು, ಅಲ್ಲಿ ಗಣಿ ಧಣಿಗಳ ಜೊತೆಗೆ ಫೋಟೋ ತೆಗೆಸಿಕೊಂಡು ಅವರ ಖಾಸಾ ದೋಸ್ತ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ. ಅದೇ ಪೋಸಿನಲ್ಲಿ ಆಂಧ್ರ ಮೂಲದ ದೊಡ್ಡ ಬಿಸಿನೆಸ್ ಮ್ಯಾನ್ ಗಳನ್ನು ಬಲೆಗೆ ಹಾಕ್ಕೊಂಡು ಅವರಿಗೆ ಸಾಲ ಕೊಡುವ ವಿಚಾರದಲ್ಲಿ ಡೀಲ್ ಕುದುರಿಸುತ್ತಿದ್ದ. ಇಲ್ಲಿನ ಗಣಿ ಧಣಿಗಳೇ ನನ್ನ ಮೂಲಕ ಹಣದ ವಹಿವಾಟು ಮಾಡುತ್ತಾರೆ, ನಿಮಗೆ ನಾನೇ ಸಾಲ ತೆಗೆಸಿಕೊಡುತ್ತೇನೆ ಎಂದು ಹೇಳಿ ಉದ್ಯಮಿಗಳನ್ನು ಯಾಮಾರಿಸುತ್ತಿದ್ದ. ಅದೇ ನೆಪದಲ್ಲಿ ದೊಡ್ಡ ಮೊತ್ತದ ಸಾಲಕ್ಕೆ ಸ್ಟಾಂಪ್ ಡ್ಯೂಟಿ ನೀಡಬೇಕೆಂದು ಹೇಳಿ ನಗದು ರೂಪದಲ್ಲಿ ಹಣ ಪಡೆದು ತಲೆಮರೆಸಿಕೊಳ್ತಿದ್ದ ಎನ್ನೋದು ತನಿಖೆಯಲ್ಲಿ ಪತ್ತೆಯಾಗಿದೆ. 

ಸ್ಥಳೀಯರ ಜೊತೆಗೆ ಯಾವುದೇ ವ್ಯವಹಾರ, ಒಡನಾಟ ಇರಿಸಿಕೊಂಡಿಲ್ಲದ ರೋಷನ್ ಬಗ್ಗೆ ಯಾರಿಗೂ ಉತ್ತಮ ಅಭಿಪ್ರಾಯ ಇಲ್ಲ. ಆತನ ಮನೆಗೆ ದೊಡ್ಡ ದೊಡ್ಡ ಕಾರುಗಳಲ್ಲಿ ಜನ ಬರುತ್ತಿದ್ದರು, ಏನು ವಹಿವಾಟು ಮಾಡಿಕೊಂಡಿದ್ದ ಎನ್ನುವುದು ತಿಳಿದಿಲ್ಲ ಎನ್ನುತ್ತಾರೆ. ಕೆಲವರ ಮಾಹಿತಿ ಪ್ರಕಾರ, 15 ವರ್ಷಗಳಿಂದಲೂ ಇದೇ ರೀತಿಯ ವಂಚನೆ ಮಾಡೋದನ್ನೇ ಕಾಯಕ ಮಾಡಿಕೊಂಡಿದ್ದ. ಈತನದ್ದು ಬಡ ಕುಟುಂಬದ ಹಿನ್ನೆಲೆಯದ್ದಾಗಿದ್ದರೂ ದಿಢೀರ್ ಸಿರಿವಂತನಾಗಿದ್ದು ಹೇಗೆ ಎನ್ನುವುದು ಸ್ಥಳೀಯರಿಗೆ ತಿಳಿದಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ವಂಚನೆಯಿಂದಲೇ ನೂರಾರು ಕೋಟಿಯ ಆಸ್ತಿ ಮಾಡಿದ್ದಾನೆ ಎನ್ನೋದು ಈಗ ಕರಾವಳಿಯಲ್ಲಿ ತೀವ್ರ ಚರ್ಚೆಯ ವಿಷಯವಾಗಿದೆ.

As nationwide attention turns toward Mangalore Roshan Saldanha, the alleged mastermind behind a ₹200+ crore fraud racket, two more victims have stepped forward with fresh complaints to Mangaluru police. A businessman from Maharashtra and another from Assam have filed FIRs at the CEN Crime Station, claiming losses of ₹5 crore and ₹20 lakh respectively.