Karkala Parashurama Theme Park: ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ವಿವಾದ ; ಚಾರ್ಜ್ ಶೀಟ್ ಹಾಕಿ ಕೈತೊಳೆದುಕೊಂಡ ಪೊಲೀಸರು, ನಕಲಿ ಮೂರ್ತಿ ಇನ್ನೂ ನಾಪತ್ತೆ, ಅವ್ಯವಹಾರದ ಬಗ್ಗೆ ತನಿಖೆ ಇಲ್ಲ! ಹೊಣೆಯನ್ನು ಶಿಲ್ಪಿ ತಲೆಗೆ ಕಟ್ಟಿ ಚಾಪ್ಟರ್ ಕ್ಲೋಸ್ ? 

15-07-25 02:28 pm       HK News Desk   ಕರಾವಳಿ

ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕಾರ್ಕಳದ ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ನಕಲಿ ಕಂಚಿನ ಮೂರ್ತಿ ನಿರ್ಮಿಸಿದ ಪ್ರಕರಣ ಸಂಬಂಧಿಸಿ ಶಿಲ್ಪಿ ಕೃಷ್ಣ ನಾಯ್ಕ್ ಸೇರಿ ಮೂವರು ಆರೋಪಿಗಳ ವಿರುದ್ಧ ಕಾರ್ಕಳ ನಗರ ಠಾಣೆ ಪೊಲೀಸರು 1231 ಪುಟಗಳ ಆರೋಪ ಪಟ್ಟಿಯನ್ನು ಕೋರ್ಟಿಗೆ ಸಲ್ಲಿಸಿದ್ದಾರೆ.

ಉಡುಪಿ, ಜುಲೈ 15 : ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕಾರ್ಕಳದ ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ನಕಲಿ ಕಂಚಿನ ಮೂರ್ತಿ ನಿರ್ಮಿಸಿದ ಪ್ರಕರಣ ಸಂಬಂಧಿಸಿ ಶಿಲ್ಪಿ ಕೃಷ್ಣ ನಾಯ್ಕ್ ಸೇರಿ ಮೂವರು ಆರೋಪಿಗಳ ವಿರುದ್ಧ ಕಾರ್ಕಳ ನಗರ ಠಾಣೆ ಪೊಲೀಸರು 1231 ಪುಟಗಳ ಆರೋಪ ಪಟ್ಟಿಯನ್ನು ಕೋರ್ಟಿಗೆ ಸಲ್ಲಿಸಿದ್ದಾರೆ.

ಆರೋಪಿಗಳಾದ ಶಿಲ್ಪಿ ಕೃಷ್ಣ ನಾಯ್ಕ, ಉಡುಪಿ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಡೈರೆಕ್ಟರ್ ಅರುಣ್ ಕುಮಾರ್ ಹಾಗೂ ಎಂಜಿನಿಯರ್ ಸಚಿನ್ ವೈ.ಕುಮಾರ್ ಅವರ ವಿರುದ್ಧ ಅಪರಾಧಿಕ ಒಳಸಂಚು ಮತ್ತು ನಂಬಿಕೆ ದ್ರೋಹ, ವಂಚನೆ ಎಸಗಿ ಸಾಕ್ಷ್ಯ ನಾಶ ಮಾಡಿದ್ದಾರೆಂದು ಆರೋಪಿಸಲಾಗಿದೆ. ಇವರ ವಿರುದ್ಧ ಕಲಂ 420, 409, 201, 120 (ಬಿ) ಜತೆಗೆ 34 ಐಪಿಸಿಯಂತೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ.

ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಕಂಚಿನ ಮೂರ್ತಿ ಸ್ಥಾಪಿಸಲು ರಾಜ್ಯ ಸರ್ಕಾರದಿಂದ ಯೋಜನೆ ರೂಪಿಸಿದ್ದು, ಉಡುಪಿ ನಿರ್ಮಿತಿ ಕೇಂದ್ರ ಕಾಮಗಾರಿ ಗುತ್ತಿಗೆ ಪಡೆದಿತ್ತು. ಮೂರ್ತಿ ನಿರ್ಮಾಣದ ಹೊಣೆಯನ್ನು ಕುಂದಾಪುರದ ಶಿಲ್ಪಿ ಕೃಷ್ಣ ನಾಯ್ಕ್ ಅವರಿಗೆ ವಹಿಸಲಾಗಿತ್ತು. ತರಾತುರಿಯಲ್ಲಿ ಮೂರ್ತಿ ಸ್ಥಾಪನೆ ಆದ ಬೆನ್ನಲ್ಲೇ ನಕಲಿ ಮೂರ್ತಿಯೆಂದು ಗುಲ್ಲು ಎದ್ದಿತ್ತು. ಈ ಬಗ್ಗೆ ಕೃಷ್ಣ ಶೆಟ್ಟಿ ಎಂಬವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ತನಿಖೆಯ ಸಂದರ್ಭದಲ್ಲಿ ಕಂಚಿನ ಬದಲು ಫೈಬರ್ ಮತ್ತು ಹಿತ್ತಾಳೆಯಿಂದ ಮೂರ್ತಿ ರಚಿಸಿರುವುದು ಪತ್ತೆಯಾಗಿತ್ತು. ಪ್ರಾಜೆಕ್ಟ್ ಡೈರೆಕ್ಟರ್ ಅರುಣ್ ಕುಮಾರ್ ಹಾಗೂ ಎಂಜಿನಿಯರ್ ಸಚಿನ್ ಕುಮಾರ್ ನೀಡಿದ್ದ ವರ್ಕ್ ಆರ್ಡರ್ ನಲ್ಲಿ ನೀಡಲಾದ ಷರತ್ತುಗಳನ್ನು ಪಾಲಿಸದೆ ಅಕ್ರಮ ಎಸಗಿದ್ದಾರೆಂದು ಆರೋಪಿಸಲಾಗಿತ್ತು. ಈ ಬಗ್ಗೆ ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಿದಾಗಲೂ ಗಂಭೀರ ಲೋಪ ಎಸಗಿದ್ದರಿಂದ ನ್ಯಾಯಾಧೀಶರು, ಕಂಚು ಮತ್ತು ಹಿತ್ತಾಳೆ ಒಂದೇ ಹೇಗಾಗೋದು. ಜನರ ದುಡ್ಡನ್ನು ದುರ್ಬಳಕೆ ಮಾಡಿದ್ದೀರಿ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿ ಜಿಲ್ಲಾಡಳಿತದ ಗಂಭೀರ ಲೋಪದ ಬಗ್ಗೆ ಪ್ರಶ್ನೆ ಎತ್ತಿದ್ದರು.‌

ಅಲ್ಲದೆ, ಪಾರ್ಕ್ ಉದ್ಘಾಟನೆಯ ಬಳಿಕ 2023ರ ಸೆ.12ರಂದು ಪರಶುರಾಮ ಮೂರ್ತಿಯ ಸೊಂಟದ ಭಾಗದಿಂದ ಮೇಲ್ಭಾಗವನ್ನು ಉಮ್ಮಿಕಲ್ ಬೆಟ್ಟದಿಂದ ತೆಗೆದುಕೊಂಡು ಹೋಗಿದ್ದು ಉಡುಪಿ ತಾಲೂಕಿನ ಅಲೆವೂರು ಗ್ರಾಮದ ನಿರ್ಮಿತಿ ಕೇಂದ್ರದ ಶೆಡ್ ನಲ್ಲಿ ಇರಿಸಲಾಗಿತ್ತು. ಆನಂತರ, ಇದನ್ನು ಸರಿಪಡಿಸಲು ಸೊಂಟದ ಮೇಲ್ಭಾಗವನ್ನು ಶಿಲ್ಪಿ ಕೃಷ್ಣ ನಾಯ್ಕಗೆ ನೀಡಿದ್ದು, ಅವರು ಅದನ್ನು ಕಾಮಗಾರಿ ಸಲುವಾಗಿ ಬೆಂಗಳೂರಿಗೆ ಸಾಗಿಸಿದ್ದರು ಎನ್ನಲಾಗಿತ್ತು. ಆದರೆ ಆ ಮೂರ್ತಿ ಈಗ ಎಲ್ಲಿದೆ, ಅದನ್ನು ಪೂರ್ತಿಗೊಳಿಸಿ ಮರು ಸ್ಥಾಪನೆ ಯಾಕೆ ಮಾಡಿಲ್ಲ. ಕಂಚಿನ ಹೆಸರಲ್ಲಿ ಹಣವನ್ನು ಯಾರೆಲ್ಲ ಕೊಳ್ಳೆ ಹೊಡೆದಿದ್ದಾರೆ ಎಂಬ ಬಗ್ಗೆ ತನಿಖೆಯೂ ಆಗಿಲ್ಲ. ಜಿಲ್ಲಾಡಳಿತವೂ ಇದರ ಬಗ್ಗೆ ಉತ್ತರಿಸುವ ಉತ್ತರದಾಯಿತ್ವ ತೋರಿಸಿಲ್ಲ. 

ಪರಶುರಾಮ ಥೀಂ ಪಾರ್ಕನ್ನು 11.5 ಕೋಟಿ ವೆಚ್ಚದಲ್ಲಿ ಶಾಸಕ ಸುನಿಲ್ ಕುಮಾರ್ ಮುತುವರ್ಜಿಯಿಂದ ನಿರ್ಮಿಸಲಾಗಿತ್ತು. ಆದರೆ ಕಳೆದ ಬಾರಿ ಚುನಾವಣೆಗೂ ಮೊದಲೇ ಪಾರ್ಕ್ ಉದ್ಘಾಟಿಸಬೇಕೆಂಬ ತರಾತುರಿಯಿಂದಾಗಿ ಮೂರ್ತಿಯನ್ನು ಕಂಚಿನ ಬದಲು ಹಿತ್ತಾಳೆ ಮತ್ತು ಫೈಬರ್ ನಲ್ಲಿ ನಿರ್ಮಿಸಿ ಸ್ಥಾಪಿಸಲಾಗಿತ್ತು ಎಂಬ ಟೀಕೆ ಕೇಳಿಬಂದಿತ್ತು. ಆನಂತರ, ಸ್ಥಳೀಯರು ಮೂರ್ತಿಯನ್ನು ಒಡೆದು ಇದು ಕಂಚಿನದ್ದಲ್ಲ, ನಕಲಿ ಮೂರ್ತಿಯೆಂದು ವಿಡಿಯೋ ಮಾಡಿದ್ದು ಇಡೀ ರಾಜ್ಯದಲ್ಲಿ ಭಾರೀ ಸಂಚಲನ ಎಬ್ಬಿಸಿತ್ತು. ಶಾಸಕ ಸುನಿಲ್ ಕುಮಾರ್ ಭಾರೀ ಭ್ರಷ್ಟಾಚಾರ ಎಸಗಿದ್ದಾರೆಂದು ಆರೋಪವೂ ಕೇಳಿಬಂದಿತ್ತು. ಆದರೆ ಈ ಬಗ್ಗೆ ಎಫ್ಐಆರ್ ದಾಖಲಾಗಿ ಶಿಲ್ಪಿಯನ್ನು ಬಂಧಿಸಿದರೂ, ಈವರೆಗೂ ಕಂಚಿನ ಮೂರ್ತಿಯ ಮರು ಸ್ಥಾಪನೆ ಆಗಿಲ್ಲ. ಅಲ್ಲದೆ, ಒಟ್ಟು ಅವ್ಯವಹಾರದ ಹೊಣೆಯನ್ನು ಶಿಲ್ಪಿ ಮತ್ತು ನಿರ್ಮಿತಿ ಕೇಂದ್ರದವರ ತಲೆಗೆ ಕಟ್ಟಲಾಗಿದೆ. ಶಾಸಕರ ವಿರುದ್ಧ ಟೀಕೆ, ಆರೋಪ ಕೇಳಿಬಂದರೂ, ಪೊಲೀಸರು ಈ ಬಗ್ಗೆ ತನಿಖೆ ನಡೆಸಿಲ್ಲ. ನಕಲಿ ಮೂರ್ತಿ ಎನ್ನುವಷ್ಟರ ಮಟ್ಟಿಗೆ ಮಾತ್ರ ಪೊಲೀಸರು ತನಿಖೆ ಮುಗಿಸಿ ಕೈತೊಳೆದುಕೊಂಡಿದ್ದಾರೆ.

In the controversial case involving the installation of a fake bronze Parashurama statue at the Parashurama Theme Park in Karkala's Ummikal Betta, police have now filed a 1,231-page chargesheet against three accused — sculptor Krishna Naik, Udupi Nirmithi Kendra Project Director Arun Kumar, and engineer Sachin V. Kumar.