ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನದ ಕಾಣಿಕೆ ; ಬರೋಬ್ಬರಿ 206 ಕೋಟಿ ರೂ. ಮೌಲ್ಯದ ಆಭರಣ ಸಮರ್ಪಿಸಿದ ಉದ್ಯಮಿ, ಪೊಲೀಸ್‌ ಭದ್ರತೆಯ ಲಾರಿಯಲ್ಲಿ ಆಗಮಿಸಿದ ಆಭರಣ

26-11-26 08:34 pm       HK News Staffer   ಕರ್ನಾಟಕ

ಕಲಿಯುಗದ ಪ್ರತ್ಯಕ್ಷ ದೈವವೆಂದೇ ಭಕ್ತರು ಆರಾಧಿಸುವ ತಿರುಮಲ ತಿಮ್ಮಪ್ಪನಿಗೆ ಭಕ್ತರೊಬ್ಬರು ನೀಡಿರುವ ಕಾಣಿಕೆ ಇದೀಗ ದೇಶದ ಗಮನ ಸೆಳೆದಿದೆ. ಚೆನ್ನೈ ಮೂಲದ ಉದ್ಯಮಿ ವರ್ಧಮಾನ್ ಜೈನ್ ಅವರು ಶ್ರೀ ವೆಂಕಟೇಶ್ವರ ಸ್ವಾಮಿಗೆ ಬರೋಬ್ಬರಿ 121 ಕೆಜಿ ತೂಕದ ಚಿನ್ನಾಭರಣಗಳನ್ನು ಸಮರ್ಪಿಸಿದ್ದಾರೆ. ಸುಮಾರು 161ರಿಂದ 206 ಕೋಟಿ ರೂ. ವರೆಗಿನ ಮೌಲ್ಯ ಹೊಂದಿರುವ ಈ ಬೃಹತ್ ಕಾಣಿಕೆ ತಿರುಮಲ ತಿರುಪತಿ ದೇವಸ್ಥಾನದ ಇತಿಹಾಸದಲ್ಲಿ ಮಹತ್ವದ ದಾಖಲೆಯಾಗಿದೆ.

ತಿರುಪತಿ, ನ.26 : ಕಲಿಯುಗದ ಪ್ರತ್ಯಕ್ಷ ದೈವವೆಂದೇ ಭಕ್ತರು ಆರಾಧಿಸುವ ತಿರುಮಲ ತಿಮ್ಮಪ್ಪನಿಗೆ ಭಕ್ತರೊಬ್ಬರು ನೀಡಿರುವ ಕಾಣಿಕೆ ಇದೀಗ ದೇಶದ ಗಮನ ಸೆಳೆದಿದೆ. ಚೆನ್ನೈ ಮೂಲದ ಉದ್ಯಮಿ ವರ್ಧಮಾನ್ ಜೈನ್ ಅವರು ಶ್ರೀ ವೆಂಕಟೇಶ್ವರ ಸ್ವಾಮಿಗೆ ಬರೋಬ್ಬರಿ 121 ಕೆಜಿ ತೂಕದ ಚಿನ್ನಾಭರಣಗಳನ್ನು ಸಮರ್ಪಿಸಿದ್ದಾರೆ. ಸುಮಾರು 161ರಿಂದ 206 ಕೋಟಿ ರೂ. ವರೆಗಿನ ಮೌಲ್ಯ ಹೊಂದಿರುವ ಈ ಬೃಹತ್ ಕಾಣಿಕೆ ತಿರುಮಲ ತಿರುಪತಿ ದೇವಸ್ಥಾನದ ಇತಿಹಾಸದಲ್ಲಿ ಮಹತ್ವದ ದಾಖಲೆಯಾಗಿದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ವರ್ಧಮಾನ್ ಜೈನ್ ಈ ಚಿನ್ನಾಭರಣಗಳನ್ನು ದೇವಸ್ಥಾನದ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಬಿಗಿ ಪೊಲೀಸ್ ಭದ್ರತೆಯಲ್ಲಿ ತಿರುಮಲಕ್ಕೆ ತರಲಾದ ಆಭರಣಗಳನ್ನು ರಂಗನಾಯಕುಲ ಮಂಟಪದಲ್ಲಿ ವಿಶೇಷವಾಗಿ ನಿರ್ಮಿಸಲಾದ ಮರದ ಸ್ಟ್ಯಾಂಡ್‌ಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.

ಬೆಳಗ್ಗೆ 10 ಗಂಟೆಗೆ ತಿರುಪತಿಗೆ ಆಗಮಿಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಮೂಲಕ ಶ್ರೀವಾರಿ ದರ್ಶನ ಪಡೆದರು. ಬಳಿಕ ಬೆಳಗ್ಗೆ 11.30ರ ಸುಮಾರಿಗೆ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ವರ್ಧಮಾನ್ ಜೈನ್ ಅವರು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆಭರಣಗಳನ್ನು ಹಸ್ತಾಂತರಿಸಿದರು. ಶುಕ್ರವಾರ ನಡೆಯಲಿರುವ ಅಭಿಷೇಕದ ಬಳಿಕ ಅರ್ಚಕರು ಈ ಹೊಸ ಆಭರಣಗಳಿಂದ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಿದ್ದಾರೆ.

15 ತಿಂಗಳ ಪರಿಶ್ರಮದಲ್ಲಿ ಸಿದ್ಧವಾದ ಚಿನ್ನಾಭರಣ

ಈ ಬೃಹತ್ ಕಾಣಿಕೆಯ ಹಿಂದೆ ಸುಮಾರು 15 ತಿಂಗಳ ಪರಿಶ್ರಮವಿದೆ. ಚೆನ್ನೈನ ಪ್ರಸಿದ್ಧ ಜಿಆರ್‌ಟಿ ಜ್ಯುವೆಲರ್ಸ್ ಸಂಸ್ಥೆಯ ನುರಿತ ಕುಶಲಕರ್ಮಿಗಳು ಹಗಲಿರುಳು ಶ್ರಮಿಸಿ ಈ ಆಭರಣಗಳನ್ನು ಸಿದ್ಧಪಡಿಸಿದ್ದಾರೆ. ಆಗಮ ಶಾಸ್ತ್ರದ ನಿಯಮಗಳು ಹಾಗೂ ಟಿಟಿಡಿಯ ಪೂಜಾ ವಿಧಿ ವಿಧಾನಗಳಿಗೆ ಅನುಗುಣವಾಗಿ ಆಭರಣಗಳನ್ನು ರೂಪಿಸಲಾಗಿದೆ. 

ಕಾಣಿಕೆಯಲ್ಲಿ ಏನೇನಿದೆ?

ಒಟ್ಟು ಒಂಬತ್ತು ಸೆಟ್‌ಗಳಲ್ಲಿ ಸುಮಾರು 40ರಿಂದ 45 ಬಗೆಯ ಸಾಂಪ್ರದಾಯಿಕ ಚಿನ್ನಾಭರಣಗಳನ್ನು ತಯಾರಿಸಲಾಗಿದೆ. ಶ್ರೀವಾರಿ ಕಿರೀಟ, ಪದ್ಮ ಪಾದಗಳು, ಡಾಬು (ವಡ್ಡಾಣಂ), ಭುಜಕೀರ್ತಿಗಳು, ಶಂಖು-ಚಕ್ರಗಳು, ನಾಗಾಭರಣ, ಅಭಯ ಹಸ್ತಗಳು, ಪೀತಾಂಬರ, ಕಂಠಹಾರಗಳು, ಕಾಲ್ಗೆಜ್ಜೆಗಳು ಹಾಗೂ ಪದ್ಮಪೀಠ ಸೇರಿದಂತೆ ಹಲವು ವಿಶೇಷ ಆಭರಣಗಳು ಈ ಕಾಣಿಕೆಯಲ್ಲಿವೆ. 

ಉದ್ಯಮಿಯ ದೇಣಿಗೆಗೆ ಸಿಎಂ ಮೆಚ್ಚುಗೆ 

ಇಷ್ಟೊಂದು ದೊಡ್ಡ ಪ್ರಮಾಣದ ಚಿನ್ನಾಭರಣಗಳನ್ನು ಕಾಣಿಕೆಯಾಗಿ ನೀಡಿದ ವರ್ಧಮಾನ್ ಜೈನ್ ಅವರನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದೇ ಸಂದರ್ಭದಲ್ಲಿ ಟಿಟಿಡಿಯ ಲೆಕ್ಕಪತ್ರಗಳು ಪಾರದರ್ಶಕವಾಗಿವೆ ಎಂದು ಅವರು ತಿಳಿಸಿದ್ದಾರೆ. ದೇವಸ್ಥಾನವು ಈಗಾಗಲೇ ಸುಮಾರು 10 ಟನ್‌ಗಳಷ್ಟು ಚಿನ್ನದ ಸಂಗ್ರಹ ಹೊಂದಿದೆ ಎಂದು ವರದಿಯಾಗಿದೆ.

ಕಂಪನಿಯ ಷೇರು ಮಾರಾಟದ ಬಳಿಕ ಕಾಣಿಕೆ ನಿರ್ಧಾರ

ವರ್ಧಮಾನ್ ಜೈನ್ ಇತ್ತೀಚೆಗೆ ತಮ್ಮ ಕಂಪನಿಯ ಶೇ. 60ರಷ್ಟು ಷೇರುಗಳನ್ನು ಮಾರಾಟ ಮಾಡಿದ್ದು, ಇದರಿಂದ ಸುಮಾರು 6,000 ಕೋಟಿ ರೂಪಾಯಿ ಗಳಿಸಿದ್ದರು ಎನ್ನಲಾಗಿದೆ. ಈ ಯಶಸ್ಸು ಮತ್ತು ಸಂಪತ್ತಿನ ಒಂದು ಭಾಗವನ್ನು ತಿಮ್ಮಪ್ಪನಿಗೆ ಚಿನ್ನಾಭರಣಗಳ ರೂಪದಲ್ಲಿ ಸಮರ್ಪಿಸಲು ಅವರು ನಿರ್ಧರಿಸಿದ್ದರು.

ಯಾರು ಈ ವರ್ಧಮಾನ್ ಜೈನ್?

ವರ್ಧಮಾನ್ ಜೈನ್ ಯಶಸ್ವಿ ಉದ್ಯಮಿಯಾಗಿರುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಚೆನ್ನೈನ ಕಂಚಿ ಕಾಮಕೋಟಿ ಚೈಲ್ಡ್ಸ್ ಟ್ರಸ್ಟ್ ಆಸ್ಪತ್ರೆಯ ವ್ಯವಸ್ಥಾಪಕ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ‘ಸರಿತಾ ಜೈನ್ ಫೌಂಡೇಶನ್’ ಮೂಲಕ ‘ವಿದ್ಯಾ ಸೇವಾ’ ಮತ್ತು ‘ವೈದ್ಯ ಸೇವಾ’ ಕಾರ್ಯಕ್ರಮಗಳ ಅಡಿಯಲ್ಲಿ ಬಡವರಿಗೆ ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಬಡ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕೌಶಲ್ಯ ತರಬೇತಿ ನೀಡಲು ‘ಆವಿಷ್ಕಾರ್’ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ.