ಗೂಗಲ್‌ನಲ್ಲಿ ಹುಡುಕಾಡಿ ತುಂಗಾ ನದಿಗೆ ಸ್ನಾನಕ್ಕಿಳಿದಿದ್ದ ನಾಲ್ವರು ನೀರುಪಾಲು ; ಮದ್ವೆಗೆಂದು ಶಿವಮೊಗ್ಗಕ್ಕೆ ಬಂದಿದ್ದ ಸ್ನೇಹಿತರ ದುರಂತ ಅಂತ್ಯ

26-11-26 08:35 pm       HK News Staffer   ಕ್ರೈಂ

ಮದುವೆ ಸಂಭ್ರಮಕ್ಕೆಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದ ನಾಲ್ವರು ಯುವಕರ ಪ್ರವಾಸ ದುರಂತದಲ್ಲಿ ಅಂತ್ಯಗೊಂಡಿದೆ. ತೀರ್ಥಹಳ್ಳಿ ತಾಲೂಕಿನ ಮಹಿಷಿ ಗ್ರಾಮದ ಬಳಿ ತುಂಗಾ ನದಿಯಲ್ಲಿ ಮುಳುಗಿ ನಾಲ್ವರು ಮೃತಪಟ್ಟಿದ್ದಾರೆ. ನದಿಯಲ್ಲಿ ಆಟವಾಡುತ್ತಿದ್ದಾಗ ಒಬ್ಬ ಯುವಕ ನೀರಿನಲ್ಲಿ ಮುಳುಗಿದ್ದು, ಆತನನ್ನು ರಕ್ಷಿಸಲು ಹೋದ ಉಳಿದ ಮೂವರೂ ನೀರುಪಾಲಾಗಿದ್ದಾರೆ.

ಶಿವಮೊಗ್ಗ, ನ.26 : ಮದುವೆ ಸಂಭ್ರಮಕ್ಕೆಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದ ನಾಲ್ವರು ಯುವಕರ ಪ್ರವಾಸ ದುರಂತದಲ್ಲಿ ಅಂತ್ಯಗೊಂಡಿದೆ. ತೀರ್ಥಹಳ್ಳಿ ತಾಲೂಕಿನ ಮಹಿಷಿ ಗ್ರಾಮದ ಬಳಿ ತುಂಗಾ ನದಿಯಲ್ಲಿ ಮುಳುಗಿ ನಾಲ್ವರು ಮೃತಪಟ್ಟಿದ್ದಾರೆ. ನದಿಯಲ್ಲಿ ಆಟವಾಡುತ್ತಿದ್ದಾಗ ಒಬ್ಬ ಯುವಕ ನೀರಿನಲ್ಲಿ ಮುಳುಗಿದ್ದು, ಆತನನ್ನು ರಕ್ಷಿಸಲು ಹೋದ ಉಳಿದ ಮೂವರೂ ನೀರುಪಾಲಾಗಿದ್ದಾರೆ.

ಮೃತರನ್ನು ಬೆಂಗಳೂರಿನ ಕಾರ್ತಿಕ್ (31), ನಕುಲ್ (19), ಪವನ್ (30) ಮತ್ತು ಚೇತನ್ (19) ಎಂದು ಗುರುತಿಸಲಾಗಿದೆ. ನಾಲ್ವರೂ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದರು. ಮದುವೆ ಮುಗಿದ ಬಳಿಕ ಸ್ವಲ್ಪ ಸಮಯ ಸುತ್ತಾಡಿ ಎಂಜಾಯ್ ಮಾಡಲು ನಿರ್ಧರಿಸಿದ್ದರು.

ಗೂಗಲ್‌ನಲ್ಲಿ ನದಿ ಹುಡುಕಿದ ಯುವಕರು

ಸಮೀಪದಲ್ಲಿ ನದಿ ಇರುವ ಸ್ಥಳವನ್ನು ತಿಳಿದುಕೊಳ್ಳಲು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮಹಿಷಿ ಗ್ರಾಮದ ಸಮೀಪ ತುಂಗಾ ನದಿ ಇರುವ ಸ್ಥಳ ಮ್ಯಾಪ್‌ನಲ್ಲಿ ಕಾಣಿಸಿಕೊಂಡಿದೆ. ಅದರಂತೆ ಮ್ಯಾಪ್ ನೋಡಿಕೊಂಡು ನಾಲ್ವರೂ ನದಿ ತೀರಕ್ಕೆ ತೆರಳಿದ್ದಾರೆ. ಅಲ್ಲಿ ಆಟವಾಡುತ್ತಿದ್ದಾಗ ಒಬ್ಬ ಯುವಕ ನೀರಿನಲ್ಲಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ಮತ್ತೊಬ್ಬ ಯುವಕನೂ ನೀರಿಗೆ ಇಳಿದಿದ್ದಾನೆ. ಹೀಗೆ ಒಬ್ಬರನ್ನೊಬ್ಬರು ರಕ್ಷಿಸಲು ಪ್ರಯತ್ನಿಸಿದ ನಾಲ್ವರೂ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಕಾನೂನು ವಿದ್ಯಾರ್ಥಿಗಳಾಗಿದ್ದ ಮೂವರು 

ಮೃತರ ಪೈಕಿ ಬೆಂಗಳೂರಿನ ಇಟ್ಟಮಡುವಿನ ಪವನ್, ಕತ್ರಿಗುಪ್ಪೆಯ ಕಾರ್ತಿಕ್ ಮತ್ತು ತಲಘಟ್ಟಪುರದ ನಕುಲ್ ಕಾನೂನು ವ್ಯಾಸಂಗ ಮಾಡುತ್ತಿದ್ದರು. ಚೇತನ್ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ. ಘಟನೆ ನಡೆದ ಸ್ಥಳಕ್ಕೆ ಮಾಳೂರು ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ನಾಲ್ವರಲ್ಲಿ ಓರ್ವನ ಮೃತದೇಹ ಪತ್ತೆಯಾಗಿದ್ದು, ಉಳಿದ ಮೂವರಿಗಾಗಿ ಶೋಧ ಮುಂದುವರಿದಿದೆ. ಮದುವೆ ಸಂಭ್ರಮಕ್ಕೆ ಬಂದಿದ್ದ ಯುವಕರ ಕುಟುಂಬಗಳಿಗೆ ಈ ದುರಂತ ಬರಸಿಡಿಲಿನಂತೆ ಅಪ್ಪಳಿಸಿದೆ.